ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಸಂಸ್ಥೆಗಳೇಕೆ ಸೋಲುತ್ತಿವೆ?

Last Updated 16 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಸುಸ್ಥಿರ ಬದುಕನ್ನು ಕಟ್ಟುವಲ್ಲಿ ಎರಡು ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಒಂದು ರಾಜಕೀಯ ವ್ಯವಸ್ಥೆ, ಮತ್ತೊಂದು ಧಾರ್ಮಿಕ ವ್ಯವಸ್ಥೆ. ಮೊದಲಿನದು ಹೊರಗಿನಿಂದ ಪ್ರಯತ್ನ ಮಾಡಿದರೆ, ಎರಡನೆಯದು ಒಳಗಿನಿಂದ ಇದೇ ಪ್ರಯತ್ನ ಮಾಡುತ್ತದೆ. ಮೊದಲಿನದು ಕಾನೂನಿನ ಬಲವನ್ನು ಬಳಸಿದರೆ, ಎರಡನೆಯದು ನೈತಿಕ ಬಲವನ್ನು ಬಳಸುತ್ತದೆ. ಕಾನೂನು, ನೈತಿಕತೆ ಒಟ್ಟಾಗಿ ಪ್ರಯತ್ನಿಸಿದಾಗ ಮಾತ್ರ ಸುಸ್ಥಿರ ಸಮಾಜದ ನಿರ್ಮಾಣ ಸಾಧ್ಯ.

ದುರಂತವೆಂದರೆ, ಇಂದು ಎರಡೂ ಸಂಸ್ಥೆಗಳು ಸುಸ್ಥಿರ ಸಮಾಜವನ್ನು ರೂಪಿಸುವಲ್ಲಿ ಸೋತಿವೆ. ಮಾನವ ಸಭ್ಯತೆಯು ಸಭ್ಯವಾಗಿ ಉಳಿಯುವಂತೆ ಮಾಡುವುದು ಇತ್ತ ಧಾರ್ಮಿಕ ಸಂಸ್ಥೆಗಳಿಗೂ ಸಾಧ್ಯವಾಗುತ್ತಿಲ್ಲ, ಅತ್ತ ರಾಜಕೀಯ ಸಂಸ್ಥೆ, ಅರ್ಥಾತ್‌ ಸರ್ಕಾರಗಳಿಗೂ ಸಾಧ್ಯವಾಗುತ್ತಿಲ್ಲ. ಏಕೆ ಹೀಗಾಗಿದೆ?

ಇವೆರಡೂ ಸಂಸ್ಥೆಗಳು, ಇತ್ತೀಚಿನ ದಶಕಗಳಲ್ಲಿ, ಸ್ಥಾವರ ನಿರ್ಮಾಣದತ್ತಲೇ ಹೆಚ್ಚಿನ ಒಲವು ತೋರಿಸುತ್ತಿವೆ. ಎರಡೂ ಸಂಸ್ಥೆಗಳು ಸಂಪತ್ತಿನ ಸಂಗ್ರಹ ಮಾಡುತ್ತಿವೆ, ಶ್ರೀಮಂತರ ಸಂಗ ಮಾಡುತ್ತಿವೆ. ಜಂಗಮ ತತ್ವವನ್ನು ಕೇವಲ ಸಂಕೇತವನ್ನಾಗಿಸಿವೆ. ಇದು ಇವುಗಳ ಸೋಲಿನ ಪ್ರಮುಖ ಕಾರಣವಾಗಿದೆ.

ಇವೆರಡೂ ಸಂಸ್ಥೆಗಳು ಬಡವರನ್ನು ಸೋತವರೆಂದು ಪರಿಗಣಿಸುತ್ತವೆ. ಸೋತವರಿಗೆ ಸಲ್ಲುವಂತೆ, ಅವರ ಬಗ್ಗೆ ಅನುಕಂಪ ತೋರಿಸುವುದು, ಅವರಿಗೆ ಭಿಕ್ಷೆ  ನೀಡುವುದು ಮಾಡುತ್ತವೆ. ಕ್ರಿಸ್ತ ಹಾಗೆ ಮಾಡಲಿಲ್ಲ. ಪೈಗಂಬರ ಹಾಗೆ ಮಾಡಲಿಲ್ಲ. ರಾಮ ಹಾಗೆ ಮಾಡಲಿಲ್ಲ. ಬಸವ ಹಾಗೆ ಮಾಡಲಿಲ್ಲ. ಅವರೆಲ್ಲರೂ ಬಡವರನ್ನು  ಗೆದ್ದವರೆಂದು ಸ್ವೀಕರಿಸಿದರು, ಸ್ವರ್ಗಕ್ಕೆ ಅರ್ಹರಾದವರೆಂದು ಸ್ವೀಕರಿಸಿದರು, ಅವರೆಲ್ಲರೂ ಬಡವರೇ ಆದರು (ಶ್ರೀರಾಮಚಂದ್ರ ಚಕ್ರವರ್ತಿಯಾಗಿದ್ದುಕೊಂಡೇ ಸರಳ ಜೀವನ ನಡೆಸಿದ).

ಆದರೆ ಈಗಾಗುತ್ತಿರುವುದು ಬೇರೆಯದೇ ಇದೆ. ಹೆಚ್ಚಿನ ಧಾರ್ಮಿಕ ಸಂಸ್ಥೆಗಳ ಸ್ವರೂಪವೇ ಬದಲಾಗಿ ಹೋಗಿದೆ. ಬೃಹತ್‌ ಶ್ರೀಮಠಗಳನ್ನು ಕಟ್ಟುವುದು, ಯಂತ್ರ ಸ್ಥಾವರಗಳ ಉಪಯೋಗ ಪಡೆಯುವುದು, ಕ್ಯಾಪಿಟೇಶನ್‌ ಶುಲ್ಕ ಪಡೆಯುವ ಶ್ರೀಮಂತ ಕಾಲೇಜುಗಳನ್ನು ನಿರ್ಮಿಸುವುದು, ರಾಜಕಾರಣದಲ್ಲಿ ವಿನಾಕಾರಣ ಮೂಗು ತೂರಿಸುವುದು, ಜಾತಿ ಸಂಘಟನೆ ನಡೆಸುವುದು, ಅಡ್ಡಪಲ್ಲಕ್ಕಿ ಉತ್ಸವ, ಮೃಷ್ಟಾನ್ನ ಭೋಜನ, ಹವಾನಿಯಂತ್ರಿತ ಕಾರು ಹಾಗೂ ವಿಮಾನಗಳಲ್ಲಿ ಓಡಾಟ... ಇವುಗಳು ಸನ್ಯಾಸದ ಲಕ್ಷಣವೇ?

ರಾಜಕಾರಣಿಗಳು ದಾರಿ ತಪ್ಪಿದಾಗ ಅವರನ್ನು ಶಿಕ್ಷಿಸಲಿಕ್ಕೆ ಇಂದಿನ ಸಮಾಜದಲ್ಲೊಂದು ವ್ಯವಸ್ಥೆಯಿದೆ. ಆಗಾಗ ಅವರನ್ನು ಸೋಲಿಸಿ ಶಿಕ್ಷಿಸಲಾಗುತ್ತದೆ. ಆದರೆ ಧಾರ್ಮಿಕ ಸಂಸ್ಥೆಗಳನ್ನು ಪ್ರಶ್ನಿಸುವ ಮಾರ್ಗವೊಂದು ಜನಸಾಮಾನ್ಯರಿಗೆ ತಿಳಿಯದಾಗಿದೆ. ಧಾರ್ಮಿಕ ಸಂಸ್ಥೆಗಳು ದಾರಿ ತಪ್ಪಿದಾಗ ಅವುಗಳ ಕಿವಿ ಹಿಂಡುವುದಾದರೂ ಹೇಗೆ?

ಸಾಮಾನ್ಯರು ಶ್ರಮಸಹಿತವಾದ ಸರಳ ಜೀವನವನ್ನು ಅಳವಡಿಸಿಕೊಳ್ಳುವುದು ಅಂತಹದ್ದೊಂದು ಮಾರ್ಗ. ಧರ್ಮವನ್ನು ತಿರಸ್ಕರಿಸಬೇಕಿಲ್ಲ, ದೇವರನ್ನು ತಿರಸ್ಕರಿಸಬೇಕಿಲ್ಲ. ಧಾರ್ಮಿಕ ಸಂಸ್ಥೆಗಳನ್ನೂ ತಿರಸ್ಕರಿಸಬೇಕಿಲ್ಲ. ನಾವೇ ಶ್ರಮಸಹಿತ ಸರಳ ಜೀವನ ನಡೆಸುವ ಮೂಲಕ ದಾರಿ ತಪ್ಪಿದ ಧಾರ್ಮಿಕ ಸಂಸ್ಥೆಗಳ ವಿರುದ್ಧ ಅಹಿಂಸಾತ್ಮಕ ಸತ್ಯಾಗ್ರಹವೊಂದನ್ನು ಜನರು ನಡೆಸಬಹುದಾಗಿದೆ.

ನೈತಿಕ ನಿರ್ವಹಣೆ ಅವರ ಜವಾಬ್ದಾರಿ. ಅವರು ಜವಾಬ್ದಾರಿ ತಪ್ಪಿರುವಾಗ, ಅವರು ಶ್ರೀಮಂತರ ಗೆಳೆಯರಾಗಿರುವಾಗ, ಅವರ ಕೆಲಸವನ್ನು ನೀವೇ ನಿಮ್ಮ ಬದುಕಿನಲ್ಲಿ ಮಾಡಿ. ನೀವೇ ದೇವರ ದಾರಿಯಲ್ಲಿ ನಡೆಯಿರಿ. ಆಗ, ಐಷಾರಾಮಿ ಜೀವನ ನಡೆಸುವ ಸನ್ಯಾಸಿಗಳು, ಇಹದ ವ್ಯವಹಾರಗಳಲ್ಲಿ ಅನಗತ್ಯ ಮೂಗು ತೂರಿಸುವ ಸನ್ಯಾಸಿಗಳು, ಲೋಭ, ಮೋಹ, ಮದ, ಮತ್ಸರಗಳನ್ನು ಅಂಟಿಸಿಕೊಂಡಿರುವ ಸನ್ಯಾಸಿಗಳು ನಾಚಿಕೊಂಡಾರು.

ನಿಮ್ಮ ಕಾಲನ್ನೆ ನೀವು ದೇಗುಲದ ಕಂಬವಾಗಿಸಿ, ನಿಮ್ಮ ಶಿರವನ್ನೆ ನೀವು ದೇಗುಲದ ಕಳಶವಾಗಿಸಿಕೊಳ್ಳಿ. ಧೈರ್ಯದಿಂದ ನಿಜದಲ್ಲಿ ನಿಜವಾಗಿ ನಡೆದಾಡಿ. ಧರ್ಮವನ್ನು ಕೇವಲ ಸಂಕೇತವಾಗಿಸಿರುವವರನ್ನು ನಾಚಿಸುವ ಪರಿಯಿದು, ಧರ್ಮಕ್ಕೆ ಬೇಲಿ ಹಾಕುತ್ತಿರುವವರನ್ನು ನಾಚಿಸುವ ಪರಿಯಿದು, ಧರ್ಮ ರಾಜಕಾರಣ ಮಾಡುತ್ತಿರುವವರನ್ನು ನಾಚಿಸುವ ಪರಿಯಿದು. ಬರಿದೆ ಧಾರ್ಮಿಕ ಭಾಷಣ ಬಿಗಿಯುವವರನ್ನು ನಾಚಿಸುವ ಪರಿಯಿದು. ದೇವರು ಒಲಿದೇ ಒಲಿಯುತ್ತಾನೆ. ಧರ್ಮವು ಒಲಿದೇ ಒಲಿಯುತ್ತದೆ.

ಕುವೆಂಪು ಅವರು ನಿರಂಕುಶಮತಿಯನ್ನು ಪ್ರತಿಪಾದಿಸಿದರು. ನಿರಂಕುಶಮತಿಯೆಂದರೆ ಒಂಟಿಯಾಗಿ ನಡೆಯಬಲ್ಲ ಧೈರ್ಯ.  ತನಗೆ ಗೋಚರಿಸಿದ ಸತ್ಯವು ಇತರರಿಗೆ ಗೋಚರಿಸದೆ ಹೋದಾಗಲೂ ಅದನ್ನು ಅನುಸರಿಸಿ ನಡೆಯುವ  ಧೈರ್ಯ. ಕುವೆಂಪು ಅವರ  ಪ್ರತಿಪಾದನೆಯನ್ನು ನಾನು ಆಧ್ಯಾತ್ಮಿಕ ಪ್ರತಿಪಾದನೆ ಎಂದೇ ಪರಿಗಣಿಸುತ್ತೇನೆ. ನಿರಂಕುಶಮತಿಯು ಆಧುನಿಕ ಯುಗದ ಆಧ್ಯಾತ್ಮಿಕ ಪ್ರತಿಪಾದನೆಯಾಗಿದೆ. ಮನಸ್ಸನ್ನು  ನಿರಂಕುಶವಾಗಿಸು, ಜೀವನ ಶೈಲಿಗೆ ಅಂಕುಶ ಹಾಕು ಎಂಬುದು ಕುವೆಂಪು ಅವರ ಮಾತಿನ ಸಾರವಾಗಿದೆ.

ನಿರಂಕುಶಮತಿಯು ಭಕ್ತಿಯ  ಪ್ರತಿಪಾದನೆಗೆ ತದ್ವಿರುದ್ಧವಾದದ್ದೆಂದು ಮೇಲ್ನೋಟಕ್ಕೆ  ಅನ್ನಿಸುತ್ತದೆ. ಆದರೆ ಹಾಗೇನಿಲ್ಲ. ಭಕ್ತಿಯೆಂದರೆ ಜಡತೆಯಲ್ಲ. ಭಕ್ತಿಯೆಂದರೆ ಮೌಢ್ಯವಲ್ಲ. ಭಕ್ತಿಯೆಂದರೆ  ಬೇರೆಯವರು ಕಂಡ ಸತ್ಯವನ್ನು ಕುರುಡಾಗಿ ಪಾಲಿಸುವ ದಡ್ಡತನವಲ್ಲ. ಭಕ್ತನ ಭಕ್ತಿಯೆಂಬುದು ಸತ್ಯದ  ಬಗೆಗೆ ಇರಬೇಕಾದ ಗಾಢವಾದ ಅರಿವು ಹಾಗೂ ನಂಬಿಕೆಯಾಗಿದೆ. ಭಕ್ತನ ಭಕ್ತಿ ಇರುವುದು ಪರಮ ಸತ್ಯದ ಬಗೆಗೇ ಹೊರತು ಪೂಜಾರಿಗಳ ಬಗ್ಗೆಯಾಗಲೀ, ಮಠ ಮಾನ್ಯಗಳ ಬಗ್ಗೆಯಾಗಲೀ, ರಾಜರುಗಳ ಬಗ್ಗೆಯಾಗಲೀ ಅಲ್ಲ.

ಏಸುಕ್ರಿಸ್ತನು  ಜೆರೂಸಲೇಮಿಗೆ ತೆರಳಿ, ಬಡವರನ್ನು ವಂಚಿಸುತ್ತಿದ್ದ ಪೂಜಾರಿಗಳ ವಿರುದ್ಧ ದಂಗೆಯೆದ್ದ. ಕ್ರಿಸ್ತನ ಧಾರ್ಮಿಕತೆಯಿರುವುದು ಆತನ ಧಾರ್ಮಿಕ ಬಂಡಾಯದಲ್ಲಿ. ಬಸವಣ್ಣ ಜನಿವಾರ ಕಿತ್ತೊಗೆದು, ಬ್ರಾಹ್ಮಣ್ಯದ ವಿರುದ್ಧ ಬಂಡಾಯ ಎದ್ದ. ಬಸವಣ್ಣನ ಧಾರ್ಮಿಕತೆಯಿರುವುದು ಆತನ ಧಾರ್ಮಿಕ ಬಂಡಾಯದಲ್ಲಿ. ಬುದ್ಧನೂ ಬಂಡಾಯಗಾರನೇ ಸರಿ. ಪುರಂದರರು, ಕನಕರು, ಕಬೀರರು... ಇತ್ಯಾದಿ ದಾಸವರೇಣ್ಯರೂ ಬಂಡಾಯಗಾರರೇ ಸರಿ. ಅವರ ದಾಸ್ಯವಿದ್ದದ್ದು ಪರಮ ಸತ್ಯಕ್ಕೇ ಹೊರತು ಮಠಮಾನ್ಯಗಳಿಗಲ್ಲ. ಅಥವಾ ರಾಜಗದ್ದುಗೆಗೂ ಅಲ್ಲ.

ಇಂದಿನ ಆಧ್ಯಾತ್ಮಿಕತೆಯೆಂಬುದು ಮಠಮಾನ್ಯಗಳಲ್ಲಿ, ಗುಡಿಗುಂಡಾರಗಳಲ್ಲಿ, ವಿಧಾನಸೌಧದ ಮೊಗಸಾಲೆಗಳಲ್ಲಿ ಅಥವಾ ಬಂಡವಾಳಶಾಹಿಯ ಸಂಪತ್ತಿನ  ತಿಪ್ಪೆಯಡಿಯಲ್ಲಿ ಮುಚ್ಚಿಹೋಗಿದೆ. ಬಂಡಾಯವೇಳುವುದು ಇಂದಿನ ಅಗತ್ಯವಾಗಿದೆ. ಆದರೆ ಆಧ್ಯಾತ್ಮಿಕ ಬಂಡಾಯವೆಂಬುದು ಇತರರ ಮೇಲೆ ಮಾಡುವ ಹಿಂಸೆಯಲ್ಲ ಎಂಬುದನ್ನು  ನಾವು ಮರೆಯಬಾರದು. 

ಆಧ್ಯಾತ್ಮಿಕ ಬಂಡಾಯವೆಂಬುದು ತನ್ನ ಮೇಲೆ ತಾನೇ ಹೇರಿಕೊಳ್ಳುವ ನೋವು. ಕ್ರಿಸ್ತನ ಬಂಡಾಯವು ಕ್ರಿಸ್ತನನ್ನು  ಅಧ್ಯಾತ್ಮದ ಶಿಲುಬೆಗೇರಿಸಿತು. ಬುದ್ಧನ ಬಂಡಾಯವು ಆತನ  ರಾಜತ್ವವನ್ನು ಕಿತ್ತೊಗೆದು ಭಿಕ್ಷುಕನನ್ನಾಗಿಸಿತು. ನಾವೆಲ್ಲರೂ ಆಧ್ಯಾತ್ಮಿಕ ಬಂಡುಕೋರರಾಗೋಣ.

(ಲೇಖಕ ರಂಗಕರ್ಮಿ, ಸುಸ್ಥಿರ ಬದುಕಿನ ಹೋರಾಟಗಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT