ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಜಪಾನಿ ಕಂಪು

Last Updated 26 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಒಂದು ಭಾಷೆಯ ಕಲಿಕೆ ಓದು ಮತ್ತು ಬರಹಕ್ಕೆ ಮಾತ್ರ ಸೀಮಿತವಾದರೆ ಆ ಭಾಷೆ ಬೆಳವಣಿಗೆಯಾಗದು. ಭಾಷೆಯ ಆನ್ವಯಿಕ ಜ್ಞಾನ ಹಾಗೂ ಆಚರಣೆಯಲ್ಲಿ ಆ ಭಾಷೆಯ ಬಳಕೆಯಿಂದಾಗಿ ಕಲಿಕೆ ಪೂರ್ಣಗೊಳ್ಳುತ್ತದೆ. ಭಾಷೆಯ ಬೆಳವಣಿಗೆಗೆ ಇದೇ ಅತಿ ಮುಖ್ಯವಾದುದು ಎನ್ನುತ್ತಾರೆ ಬೆಂಗಳೂರಿನ ನಿಯಾಂಗೊ ಕ್ಯೋಷಿ ಕ್ಯ (ಜಪಾನಿ ಶಿಕ್ಷಕರ ಕೇಂದ್ರ) ಕೇಂದ್ರದ ಅಧ್ಯಕ್ಷೆ ಶ್ರೀವಿದ್ಯಾ.

ಜಪಾನಿಗರಲ್ಲದವರಿಗಾಗಿ ಜಪಾನ್‌ ಭಾಷೆಯ ಕಲಿಕೆ, ಕಲಿಕೆಯ ಮೌಲ್ಯಮಾಪನ ಎರಡನ್ನೂ ಜಪಾನ್‌ ಪ್ರತಿಷ್ಠಾನವು 1979ರಿಂದಲೇ ಮಾಡುತ್ತ ಬಂದಿದೆ. ವಿಶ್ವದಾದ್ಯಂತ ಜಪಾನಿಗರಲ್ಲದವರು ಜಪಾನಿ ಭಾಷೆಯ ಕಲಿಕೆಗೆ ಉತ್ಸಾಹ ತೋರಿದಲ್ಲಿ, ಅದರ ಮೌಲ್ಯಮಾಪನ ಮತ್ತು ಭಾಷೆಯೊಂದಿಗೆ ವೃತ್ತಿ ಅವಕಾಶಗಳನ್ನು ಸೃಷ್ಟಿಸುವ ಕಾರ್ಯವನ್ನು ಜಪಾನ್‌ ಪ್ರತಿಷ್ಠಾನ ಮಾಡುತ್ತಿದೆ. ಬೆಂಗಳೂರಿನಲ್ಲಿರುವ ಜಪಾನಿ ಶಿಕ್ಷಕರ ಕೇಂದ್ರದಲ್ಲಿ ಕಳೆದ ವರ್ಷ 1000 ಜನ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ದಕ್ಷಿಣ ಭಾರತದ ಏಕೈಕ ಪರೀಕ್ಷಾ ಕೇಂದ್ರ ಇದಾಗಿದೆ. ಗಮನಾರ್ಹ ಅಂಶವೆಂದರೆ ಪರೀಕ್ಷಾರ್ಥಿಗಳಲ್ಲಿ 700 ಜನ ಬೆಂಗಳೂರಿಗರು ಆಗಿದ್ದರು.

ವರ್ಷದಿಂದ ವರ್ಷಕ್ಕೆ ಪರೀಕ್ಷೆಗೆ ಹಾಜರಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಜಪಾನಿ ಭಾಷೆಯ ಸೆಳೆತವಲ್ಲ. ಬಹುಶಃ ಜಪಾನ್‌ನಲ್ಲಿಯ ಉದ್ಯೋಗಾವಕಾಶಗಳ ಆಮಿಷವೂ ಇರಬಹುದು. ಭಾಷಾ ಪರಿಣತಿಯ ಅರ್ಹತಾ ಪತ್ರವಿದ್ದಲ್ಲಿ ಜಪಾನ್‌ನಲ್ಲಿ ಉದ್ಯೋಗಾವಕಾಶಗಳ ಮಹಾಪೂರವೇ ಹರಿದು ಬರಲಿದೆ ಎಂಬುದು ಮುಚ್ಚಿಟ್ಟ ಅಂಶವೇನಲ್ಲ.

ಜಪಾನಿ ಲಿಪಿ ಮತ್ತು ಓದು ಕಲಿಯುವುದಷ್ಟೇ ಅಲ್ಲ. ಜಪಾನಿ ಭಾಷೆಯ ಕಲಿಕೆಯೆಂದರೆ ಕೇವಲ ಶಬ್ದ ಸಂಪತ್ತಿನ ಸಂಗ್ರಹವೂ ಅಲ್ಲ. ಪಾಂಡಿತ್ಯವೂ ಅಲ್ಲ. ದಿನನಿತ್ಯದ ವ್ಯವಹಾರದಲ್ಲಿ ಜಪಾನಿ ಭಾಷೆ ಜೊತೆಗೆ ಸಂಸ್ಕೃತಿಯನ್ನು ಪರಿಣಾಮಕಾರಿಯಾಗಿ ಬಳಸುತ್ತಾರೆಯೇ ಎಂಬುದನ್ನು ಮೌಲ್ಯಮಾಪನ ಮಾಡುವುದೇ ಈ ಪರೀಕ್ಷೆಯ ಉದ್ದೇಶವಾಗಿದೆ.

ಭಾಷೆ ಸಂವಹನ ಮಾಧ್ಯಮವಾಗಿರುವಾಗ ಕೇವಲ ಅದು ಮೌಖಿಕವಾಗಿರಕೂಡದು. ಆಂಗಿಕವೂ ಆಗಿರಬೇಕು. ಆಗಲೇ ಭಾಷೆಯ ಸೊಗಡು ಮತ್ತು ಸೌಂದರ್ಯ ಉಳಿಯುತ್ತದೆ. ಇದೇ ಕಾರಣಕ್ಕಾಗಿ ಜಪಾನಿ ಭಾಷೆಯ ಕಲಿಕೆ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿದೆ.

ಈ ಪ್ರಾವೀಣ್ಯವನ್ನು ಅಳೆಯಲು ಪರೀಕ್ಷೆಯನ್ನು ನಾಲ್ಕು ಹಂತದಲ್ಲಿ ಮಾಡಲಾಗುತ್ತದೆ.
ಭಾಷೆಯ ಮೇಲಿನ ಹಿಡಿತ ಮತ್ತು ಪಾಂಡಿತ್ಯಕ್ಕಾಗಿ, ಓದು, ಬರಹಕ್ಕಾಗಿ, ಆಚರಣೆ ಹಾಗೂ ಆನ್ವಯಿಕ ಜ್ಞಾನಕ್ಕಾಗಿ ಐದು ಹಂತಗಳಲ್ಲಿ ಈ ಪರೀಕ್ಷೆಯನ್ನು ಏರ್ಪಡಿಸಲಾಗುತ್ತದೆ.

ಹೊಸ ಬಗೆಯ ಪರೀಕ್ಷೆಯಲ್ಲಿ ಐದು ಹಂತಗಳನ್ನು ಪರಿಚಯಿಸಲಾಗಿದೆ. ಇವನ್ನು ಎನ್೧, ಎನ್೨, ಎನ್೩, ಎನ್೪ ಮತ್ತು ಎನ್೫ ಎಂದು ಹೆಸರಿಸಲಾಗಿದೆ. ಈ ಹಂತಗಳಲ್ಲಿ ಎನ್೧, ಎನ್೪ ಹಾಗೂ ಎನ್೫ ಕಠಿಣತಮ ಹಂತಗಳಾಗಿವೆ. ಈ ಹಂತಗಳಲ್ಲಿ ಜಪಾನಿ ಭಾಷೆಯ ಮೂಲ ತತ್ವಗಳನ್ನು ಅರ್ಥ ಮಾಡಿಕೊಂಡ ಬಗೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಎನ್೧ ಮತ್ತು ಎನ್೨ ಹಂತದಲ್ಲಿ ಕಲಿತಿರುವ ಜಪಾನಿ ಭಾಷೆಯನ್ನು ದಿನನಿತ್ಯದ ಬದುಕಿನಲ್ಲಿ ವಿಸ್ತೃತ ರೂಪದಲ್ಲಿ ಹೇಗೆ ಬಳಸಬಹುದು ಎಂಬುದನ್ನು ಪರಿಶೀಲಿಸಲಾಗುತ್ತದೆ. ಎನ್೩ ಹಂತವು ಎನ್೧ ಮತ್ತು ೨ ಹಾಗೂ ಎನ್೪ ಮತ್ತು ೫ರ ನಡುವಿನ ಸಂಪರ್ಕ ಸೇತುವಿನಂಥ ಹಂತವಾಗಿದೆ. 

ಈ ಎಲ್ಲ ಹಂತಗಳಲ್ಲಿಯೂ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಜಪಾನ್‌ನಲ್ಲಿ ಕೆಲಸ ಒದಗಿಸುವ, ಕೆಲಸವಿದ್ದರೆ ವೇತನ ನಿರ್ಣಯಿಸುವ, ಬಡ್ತಿ ನೀಡುವ ಮಾನದಂಡವಾಗಿಯೂ ಪರೀಕ್ಷೆಯನ್ನು ಪರಿಗಣಿಸಲಾಗುತ್ತದೆ.

ಪ್ರತಿ ವರ್ಷವೂ ವಿಶ್ವದಾದ್ಯಂತ ಡಿ.1ರಂದು ಈ ಪರೀಕ್ಷೆಯನ್ನು ಏಕಕಾಲದಲ್ಲಿ ಏರ್ಪಡಿಸಲಾಗುತ್ತದೆ. ಕಳೆದೆರಡು ದಶಕಗಳಲ್ಲಿ ಜಪಾನಿ ಭಾಷೆ ಕಲಿಯುವವರ ಸಂಖ್ಯೆ ಗಣನೀಯವಾಗಿ ಏರಿರುವುದು ಇದೇ ಕಾರಣಕ್ಕಾಗಿ.

ಬೆಂಗಳೂರಿನಲ್ಲಿ ಕನ್ನಡಿಗರು ಕನ್ನಡಕ್ಕಾಗಿ ಹೋರಾಟವನ್ನು, ಕೆಲವು ಸಂಘಟನೆಗಳ ಜನ ಬಡಿದಾಟವನ್ನು ಮಾಡುತ್ತಾರೆ. ಬೆಂಗಳೂರಿಗಿಂತ ಸ್ವಲ್ಪವಷ್ಟೇ ದೊಡ್ಡದಾಗಿರುವ ದೇಶವೊಂದು ತನ್ನ ಭಾಷೆ ಮತ್ತು ಸಂಸ್ಕೃತಿಯ ಜಾಲವನ್ನು ಪ್ರತಿವರ್ಷವೂ ವಿಸ್ತರಿಸುತ್ತಲೇ ಹೋಗುತ್ತಿದೆ.

ನಿಯಾಂಗೊ ಕ್ಯೊಷಿ ಕ್ಯ ಕೇಂದ್ರವು ಲಾಲ್‌ಬಾಗ್ ರಸ್ತೆಯ ಮೇಖ್ರಿ ಬಿಲ್ಡಿಂಗ್‌ನ ಎರಡನೆಯ ಅಂತಸ್ತಿನಲ್ಲಿದೆ.  ಮಾಹಿತಿಗೆ: ೦೮೦-–೨೨೧೧೩೨೮೪ z

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT