ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರವಾಸಿಗಳಿಗೆ ಸ್ಮಾರ್ಟ್ ಗಾರ್ಡನ್

Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

ಎಷ್ಟೋ ಮಂದಿಗೆ ಚೆಂದ ಚೆಂದದ ಗಿಡ ಬೆಳೆಸುವ, ತಾವೇ ತರಕಾರಿ ಬೆಳೆದು ತಾಜಾ ತಿನ್ನುವ ಆಸೆಯಿರುತ್ತದೆ. ಆದರೆ ಇಕ್ಕಟ್ಟಿನ ಜಾಗ, ನಿರ್ವಹಣೆ ಕೊರತೆ ಹಾಗೂ ಸಮಯದ ಅಭಾವದಿಂದ ಅದು ಕೈಗೂಡಿರುವುದಿಲ್ಲ. ಅದರಲ್ಲೂ ನಗರವಾಸಿಗಳಿಗೆ ಇದು ದೂರದ ಮಾತು. ಟೆರೇಸ್ ಇದ್ದರೂ ಕುಂಡಗಳಲ್ಲಿ ತರಕಾರಿ ಬೆಳೆಯುವುದು ಕಷ್ಟ. ಅಂಥವರ ಅವಶ್ಯಕತೆಯನ್ನು ಪೂರೈಸುವ ಸಲುವಾಗಿಯೇ ಹುಟ್ಟಿಕೊಂಡಿದ್ದು ‘ಸ್ಮಾರ್ಟ್ ಗಾರ್ಡನ್’ ಪರಿಕಲ್ಪನೆ.

ಯಾವುದೇ ತರಕಾರಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವಷ್ಟರಲ್ಲಿ ಎಷ್ಟೋ ದಿನಗಳು ಬೇಕಾಗುತ್ತದೆ. ಅಷ್ಟರಲ್ಲಿ ತರಕಾರಿಗಳ ತಾಜಾತನವೂ ಕುಗ್ಗಿರುತ್ತದೆ. ಜೊತೆಗೆ ಹಲವು ರೀತಿಯ ಮಾಲಿನ್ಯಕ್ಕೆ ಒಳಗಾಗಿ ಕೈ ಸೇರುವಷ್ಟರಲ್ಲಿ ಸಂಪೂರ್ಣ ಸತ್ವ ಕಳೆದುಕೊಂಡಿರುತ್ತದೆ. ಸಾಗಣೆಯಲ್ಲಿ ಇಂಧನದ ಖರ್ಚೂ ಹೆಚ್ಚು. ಈ ಅಂತರವನ್ನು ಕಡಿಮೆ ಮಾಡುವ ಹಾಗೂ ದಿನನಿತ್ಯದ ಒಂದಷ್ಟು ತರಕಾರಿಗಳನ್ನು ತಾವೇ ಬೆಳೆದು ನೈಸರ್ಗಿಕ ಆಹಾರ ಸೇವಿಸಲು ಜನರನ್ನು ಪ್ರೇರೇಪಿಸುವ ಕೆಲಸಕ್ಕೆ ಕೈ ಹಾಕಿದವರು ಅರಿಜಿತ್ ಮಿತ್ರಾ.

ಅರಿಜಿತ್ ಮಿತ್ರಾ ಅವರಿಗೆ ಪರಿಸರದ ಮೇಲೆ ತುಂಬಾ ಕಾಳಜಿ. ಮನುಷ್ಯರಿಂದ ದಿನನಿತ್ಯ ಹಾನಿಗೊಳಗಾಗುತ್ತಿರುವ ಪರಿಸರವನ್ನು ಕಾಪಾಡಬೇಕೆಂಬ ಅತೀವ ಆಸಕ್ತಿಯಿಂದ ಮನೆಯನ್ನೇ ಕಾರ್ಯಾಗಾರ ಮಾಡಿಕೊಂಡು ನಗರಕ್ಕೆ ಹೊಂದುವ ಸಿದ್ಧ ತೋಟ ತಯಾರಿಸುವ ಕೆಲಸ ಶುರುವಿಟ್ಟುಕೊಂಡರು.

ನಗರದಲ್ಲಿ ಗಿಡ ಬೆಳೆಸಲು ಇರುವ ಮುಖ್ಯ ಸಮಸ್ಯೆಯ ಮೂಲವನ್ನು ಹುಡುಕುತ್ತಾ ಹೊರಟ ಅರಿಜಿತ್ ಅವರಿಗೆ ಸಿಕ್ಕ ಮೊದಲ ಕಾರಣ ಜಾಗದ ಕೊರತೆ. ಇದಕ್ಕೆ ಪೂರಕವಾಗಿ ಟೆರೇಸ್ ಗಾರ್ಡನ್ ಕೆಲಸ ಮಾಡಬಹುದು, ಆದರೆ ಅದರ ನಿರ್ವಹಣೆ, ಸಮಯ ಉಳಿತಾಯ, ವೆಚ್ಚ ಎಲ್ಲ ಅಂಶಗಳೂ ಸವಾಲಾಗಿತ್ತು. ಇವೆಲ್ಲವನ್ನು ಗಮನಿಸಿ ‘ಗ್ರೀನ್ ಟೆಕ್ ಲೈಫ್’ ಎಂಬ ಸಂಸ್ಥೆ ಹೆಸರಲ್ಲಿ ‘ಸ್ಮಾರ್ಟ್‌ ಗಾರ್ಡನ್’ ಎಂಬ ಹೊಸ ಕೈತೋಟ ಮಾದರಿಯನ್ನು 2009ರಲ್ಲಿ ಪರಿಚಯಿಸಿದರು.

ನೈಸರ್ಗಿಕ ತರಕಾರಿ ತೋಟ
ಆಹಾರ ಸಾಮಗ್ರಿ, ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲ್ಲಾ ತರಕಾರಿಗಳನ್ನು ಬೆಳೆಯಲು ಸಾಧ್ಯವಿಲ್ಲ. ಆದರೆ ಮನೆಯಲ್ಲೇ ಸುಲಭವಾಗಿ ಬೆಳೆಯಬಹುದಾದ ಕೆಲವು ತರಕಾರಿಗಳನ್ನಾದರೂ ರಾಸಾಯನಿಕಮುಕ್ತವನ್ನಾಗಿ ಬೆಳೆದು ತಾಜಾ ತಿನ್ನಬಹುದಲ್ಲ ಎಂಬುದೂ ಇದರ ಹಿಂದಿನ ಮುಖ್ಯ ಉದ್ದೇಶ.

ಹೆಚ್ಚೇನೂ ನಿರ್ವಹಣೆ ಬೇಡದ ಈ ತೋಟಕ್ಕೆ ತಿಂಗಳಿಗೆ ಒಮ್ಮೆ ನೀರು ಹಾಕಿದರೆ ಸಾಕು. ವಾರಕ್ಕೆ ಮೂವತ್ತು ನಿಮಿಷ ಈ ಗಾರ್ಡನ್‌ ಶುಚಿಗೆ ನಿಮ್ಮ ಸಮಯ ಮೀಸಲಿಟ್ಟರೆ ಸಾಕು.

ಸ್ಮಾರ್ಟ್ ಗಾರ್ಡನ್ ವಿನ್ಯಾಸ
ಒಂದು ಹಾಗೂ ಎರಡು ಬೆಡ್ ಮಾದರಿಯಲ್ಲಿ ಈ ಸ್ಮಾರ್ಟ್‌ ಗಾರ್ಡನ್‌ ವಿನ್ಯಾಸಗೊಳಿಸಲಾಗಿದೆ. ಗರಿಷ್ಠ ಮೂವತ್ತು ಕೆ.ಜಿ ತೂಕವಿದ್ದು, ಸಾಗಣೆಗೂ ಸುಲಭ. ಸಿ ಪಿವಿಸಿ ಪೈಪ್‌ಗಳು, ಶೇರ್‌ನೆಟ್‌ ಬಳಸಿ ಫೈಬರ್‌ಗ್ಲಾಸ್‌ನಿಂದ ವಿನ್ಯಾಸಗೊಳಿಸಲಾಗಿದೆ. ಸಿಮೆಂಟ್‌ ಟೆರೇಸ್‌ನಲ್ಲಿ ಸಹಜವಾಗಿ ಉಷ್ಣತೆ ಹೆಚ್ಚಿರುವುದರಿಂದ ಅದಕ್ಕೆ ತಕ್ಕಂತೆ ಸ್ಮಾರ್ಟ್‌ ಗಾರ್ಡನ್ ತಯಾರಿಸಲಾಗಿದೆ. ಮೂವತ್ತರಿಂದ ನಲವತ್ತು ವರ್ಷ ಬಾಳಿಕೆ ಬರುವ ಈ ಗಾರ್ಡನ್‌ಗೆ ಮಣ್ಣಿನ ಬದಲು ತೆಂಗಿನ ತ್ಯಾಜ್ಯ ಮತ್ತು ಗೊಬ್ಬರ ಬಳಕೆ ಮಾಡಲಾಗುತ್ತದೆ.

ಅಡುಗೆ ಮನೆ ತ್ಯಾಜ್ಯವೇ ಗೊಬ್ಬರವಾಗಬಹುದು. ಸ್ವಚ್ಛಂದವಾಗಿ ಗಾಳಿಯಾಡಲು1/2 ಇಂಚು ಜಾಗ ಬಿಡಲಾಗಿದೆ. ಆರು ಅಡಿ ಉದ್ದ ಹಾಗೂ 4 ಅಡಿ ಅಗಲ ಅಥವಾ 8 ಅಡಿ ಅಗಲ, ಎಂಟು ಅಡಿ ಉದ್ದದಂತೆ ಟೆರೇಸ್‌ನ ವಿಸ್ತೀರ್ಣಕ್ಕೆ ತಕ್ಕಂತೆ ಇವು ಲಭ್ಯ. ಇದರ ಕೆಳಗೆ ನೀರು ಶೇಖರಣಾ ವ್ಯವಸ್ಥೆ ಇದೆ. ಇಲ್ಲಿ ನೀರನ್ನು ಒಮ್ಮೆ ಹಾಕಿದರೆ ತಿಂಗಳಿಡೀ ಗಿಡಕ್ಕೆ ನೀರು ಪೂರೈಕೆಯಾಗುತ್ತದೆ. ಬಾಲ್ಕನಿಗೆಂದೇ 2.5/6.5 ಅಡಿಯ ಚಿಕ್ಕ ಮಾದರಿಯೂ ಇದೆ.

ಗಿಡ ಬೆಳೆಸಲು ನೆರವು
ಊಹೆ ಮಾಡಿಕೊಂಡು ಗಿಡ ಹಾಕುವುದರ ಬದಲು ಸೂಕ್ತವಾಗಿ ಬೆಳೆಯಲು ತರಕಾರಿಗಳ ಪಟ್ಟಿಯೂ ಇವರ ಬಳಿಯಿದೆ. ಯಾವ ಕಾಲದಲ್ಲಿ ಯಾವ ಗಿಡ ಹಾಕಬಹುದು, ಯಾವ ಗಿಡಗಳೊಂದಿಗೆ ಇನ್ನಾವ ಗಿಡಗಳನ್ನು ಬೆಳೆದರೆ ಸರಿ ಎಂಬಿತ್ಯಾದಿ ಮಾಹಿತಿಯುಳ್ಳ ಪಟ್ಟಿಯನ್ನೂ ನೀಡುತ್ತಾರೆ. ಬೀಜವನ್ನು ಹಾಕಿ, ಮೊದಲು ಒಂದಷ್ಟು ಆರೈಕೆ ಮಾಡಿದರೆ ಸಾಕು, ಗಿಡ ತಂತಾನೇ ಬೆಳೆಯುತ್ತದೆ. ಗಿಡಗಳ ವಿಷಯದಲ್ಲಿ ಸಾಕಷ್ಟು ತಿಳಯದವರಿಗೆ, ಮೊದಲ ಬಾರಿ ಗಿಡ ಹಾಕುವವರು ಅನುಕೂಲವಾಗಲೆಂದು ತರಕಾರಿ, ಸೊಪ್ಪಿನ ಬೀಜವನ್ನೂ ಇವರಿಂದ ಪಡೆಯಬಹುದು. ಗಿಡ ನೆಡುವ, ಆರೈಕೆ ಮಾಡುವ ಮಾಹಿತಿಯನ್ನೂ ನೀಡುತ್ತದೆ.

ಗೊಬ್ಬರಕ್ಕಾಗಿ ಸ್ಮಾರ್ಟ್ ಬಿನ್
ಹಣ ಕೊಟ್ಟು ಗೊಬ್ಬರ ತರುವ ಬದಲು ಅಡುಗೆ ಮನೆಯ ತ್ಯಾಜ್ಯವನ್ನೇ ಗೊಬ್ಬರವಾಗಿ ಪರಿವರ್ತಿಸುವ ‘ಸ್ಮಾರ್ಟ್‌ಬಿನ್‌’ ಅನ್ನು ಇತ್ತೀಚೆಗೆ ಪರಿಚಯಿಸಿದ್ದಾರೆ. 20 ಲೀಟರ್ ಸಾಮರ್ಥ್ಯದ ಬಕೆಟ್ ಇದಾಗಿದ್ದು, ಆಹಾರ ತ್ಯಾಜ್ಯವನ್ನು ಇದಕ್ಕೆ ಹಾಕಿ ಒಂದು ಚಮಚ ಬಯೋ ಬ್ಲೂಮ್ ಹಾಕಿದರೆ ಮೂರರಿಂದ ಆರು ವಾರದ ಒಳಗೆ ಒಳ್ಳೆ ಗೊಬ್ಬರ ರೆಡಿಯಾಗುತ್ತದೆ. ನೈಸರ್ಗಿಕ ಗೊಬ್ಬರದೊಂದಿಗೆ ನೈಸರ್ಗಿಕವಾಗಿ ತರಕಾರಿ ಬೆಳೆದು ತಿನ್ನುವ ಸಾರ್ಥಕತೆಯೂ ಸಿಗುತ್ತದೆ. ಸದ್ಯಕ್ಕೆ ಆನ್‌ಲೈನ್‌ ಮೂಲಕ ಈ ಸ್ಮಾರ್ಟ್‌ ಗಾರ್ಡನ್‌ಗಳ ಮಾರಾಟ ನಡೆಯುತ್ತಿದ್ದು, ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಇದರ ಮಳಿಗೆ ತೆರೆಯುವ ಯೋಜನೆಯೂ ಮುಂದಿದೆ. ಹೆಚ್ಚಿನ ಮಾಹಿತಿಗೆ:
080 67710997 ಅಥವಾ www.greentechlife.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT