ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗು ಮತ್ತು ಏನೆಲ್ಲ...

Last Updated 1 ಜುಲೈ 2016, 10:28 IST
ಅಕ್ಷರ ಗಾತ್ರ

ಚಿತ್ರ: ‘ಜೂಮ್’
ನಿರ್ಮಾಪಕ: ನವೀನ್
ನಿರ್ದೇಶಕ: ಪ್ರಶಾಂತ್ ರಾಜ್
ತಾರಾಗಣ: ಗಣೇಶ್, ರಾಧಿಕಾ ಪಂಡಿತ್, ಸಾಧು ಕೋಕಿಲ, ಕಾಶೀನಾಥ್

* ಭಾರತದ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವೇನು?

‘ಧೂಮಕೇತು’ ಎಂಬ ವಿಜ್ಞಾನಿ ಸಂಶೋಧಿಸಿದ್ದ ಮಾತ್ರೆ.

* ಅದು ಹೇಗೆ?
ವಿರಸದಿಂದ ದೂರವಾಗುವ ದಂಪತಿಗಳನ್ನು ಒಂದುಗೂಡಿಸಲು ಧೂಮಕೇತು ಮಾತ್ರೆಯೊಂದನ್ನು ಸಂಶೋಧಿಸುತ್ತಾನೆ. ಅದನ್ನು ಯದ್ವಾತದ್ವಾ ಸೇವಿಸಿದ್ದರ (ಅಡ್ಡ) ಪರಿಣಾಮವಾಗಿ ಜನಸಂಖ್ಯೆ ದಿಢೀರ್ ಹೆಚ್ಚಾಗುತ್ತದೆ.

* ಅದರ ಮುಂದಿನ ಪರಿಣಾಮ..?
ಧೂಮಕೇತುವನನ್ನೂ ಆತನ ಮಾತ್ರೆಗಳನ್ನೂ ಸರ್ಕಾರ ನಿಷೇಧಿಸುತ್ತದೆ.

* ಮುಂದೆ..?
ಆತ ಇಟಲಿಗೆ ಹೋಗುತ್ತಾನೆ. ಅಲ್ಲಿ ಸಂಶೋಧನೆ ಮುಂದುವರಿಸುತ್ತಾನೆ.

ಆತನನ್ನು ಹುಡುಕಿಕೊಂಡು ನಾಯಕ ಸಂತೋಷ್ ಭಾರತದಿಂದ ಇಟಲಿಗೆ ಹೋಗುತ್ತಾನೆ. ನಾಯಕಿ ನಯನಾ ಕೂಡ ಅಲ್ಲಿಗೆ ಬರುತ್ತಾಳೆ. ಅವರು ಯಾಕೆ ಹೋಗುತ್ತಾರೆ ಹಾಗೂ ಏನೇನೆಲ್ಲ ಮಾಡುತ್ತಾರೆ? ಈ ಪ್ರಶ್ನೆಗಳಿಗೆ ‘ಜೂಮ್’ ಹಾಕಿಕೊಂಡು ಸಿನಿಮಾ ನೋಡಬೇಕು.

‘ಜೂಮ್’ನಲ್ಲಿ ಗಟ್ಟಿಯಾದ ಕಥೆ ಕಾಣದು. ಇರುವ ಅಲ್ಪಸ್ವಲ್ಪ ಕಥೆಯನ್ನು ಹೇಳಲು ನಿರ್ದೇಶಕ ಪ್ರಶಾಂತ್ ರಾಜ್ ಕಾಮಿಡಿ ಶೈಲಿ ಆಯ್ದುಕೊಂಡಿದ್ದಾರೆ. ಇದರಲ್ಲಿ ಹಲವು ದ್ವಂದ್ವಾರ್ಥದ ಸಂಭಾಷಣೆಗಳಿವೆ; ಅದಕ್ಕೂ ಹೆಚ್ಚು ‘ಏಕಾರ್ಥ’ದ ಮಾತುಗಳಿವೆ. ಹೀಗಾಗಿ ನಿಮಿಷಕ್ಕೊಮ್ಮೆ ಪಡ್ಡೆಹುಡುಗರ ಶಿಳ್ಳೆ, ಕೇಕೆ, ನಗು ಕೇಳಿಸುತ್ತಲೇ ಇರುತ್ತದೆ.

ಜಾಹೀರಾತು ಕಂಪೆನಿಗಳ ಪ್ರತಿನಿಧಿಗಳಾದ ಸಂತೋಷ್ (ಗಣೇಶ್) ಹಾಗೂ ನಯನಾ (ರಾಧಿಕಾ ಪಂಡಿತ್) ಮಧ್ಯೆ ಜಾಹೀರಾತು ನಿರ್ಮಾಣ ಅವಕಾಶ ಗಿಟ್ಟಿಸಲು ನಡೆಯುವ ಸನ್ನಿವೇಶಗಳೇ ಚಿತ್ರದ ಹೂರಣ. ಸುಳ್ಳುಸುಳ್ಳೇ ಉತ್ಪನ್ನದ ಜಾಹೀರಾತು ಚಿತ್ರೀಕರಿಸುವ ಸಂತೋಷ್, ಅದರಿಂದ ಅವಾಂತರ ಸೃಷ್ಟಿಸಿಕೊಳ್ಳುತ್ತಾನೆ.

ಇಟಲಿಗೆ ತೆರಳಿ ಧೂಮಕೇತುವನ್ನು ಭೇಟಿ ಮಾಡಿ ಆತನಿಂದ ಆ ಉತ್ಪನ್ನವನ್ನು ತಯಾರಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಾನೆ. ಅಲ್ಲಿಗೂ ಬರುವ ನಯನಾಳಿಗೆ ನಿಜರೂಪ ಮರೆಮಾಚಿ, ತನ್ನ ಕಾರ್ಯದಲ್ಲಿ ಸಂತೋಷ್ ಸಫಲನಾಗುತ್ತಾನೆ. ಅದೆಲ್ಲದರ ಪರಿಣಾಮ ಆತನಿಗೆ ಬಂಪರ್ ಪ್ರೈಜ್ ಸಿಗುತ್ತದೆ!

ಸಿನಿಮಾವನ್ನು ಹಾಸ್ಯದ ಹೊನಲಿನಲ್ಲಿ ಮುಳುಗಿಸಬೇಕು ಎಂಬ ನಿರ್ದೇಶಕರ ನಿಲುವು ತಪ್ಪೇನಲ್ಲ. ಆದರೆ ಅವರು ಅದಕ್ಕಾಗಿ ಆಯ್ದುಕೊಂಡ ದಾರಿ ಕೆಲವರಿಗೆ ಅಸಹನೀಯ ಅನಿಸಬಹುದೇನೋ? ತುಂಟತನ ಹಾಗೂ ಪೋಲಿತನ – ಇವೆರಡಕ್ಕೂ ಇಲ್ಲಿ ಯಥೇಚ್ಛ ಅವಕಾಶ ಸಿಕ್ಕಿದೆ.

ಸಾಧು ಕೋಕಿಲಾ ಮಾತಾಡಿದರೆ ಅದಕ್ಕೆ ಸಾಮಾನ್ಯ ಅರ್ಥ ಇರುವುದೇ ಕಡಿಮೆ! ನಾಯಕ ನಟ ಗಣೇಶ್ ಅವರದು ಲವಲವಿಕೆ ಅಭಿನಯ. ಅವರಿಗೆ ಸರಿಸಾಟಿಯಾಗಿ ನಟಿಸಿರುವ ರಾಧಿಕಾ ಪಂಡಿತ್ ಗ್ಲಾಮರ್‌ನಿಂದಲೂ ಕಂಗೊಳಿಸಿದ್ದಾರೆ. ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕಾಶೀನಾಥ್, ತಮಗೆ ಸಿಕ್ಕ ಅವಧಿಯನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಇಟಲಿಯ ನಗರಗಳ ಸೊಬಗನ್ನು ಸಂತೋಷ್ ರೈ ಪಾತಾಜೆ ಕ್ಯಾಮೆರಾ ಮತ್ತಷ್ಟು ಚೆಂದವಾಗಿ ಸೆರೆ ಹಿಡಿದಿದೆ. ಎಸ್.ಎಸ್. ತಮನ್ ಸಂಗೀತದಲ್ಲಿ ವಿಶೇಷವೇನಿಲ್ಲ.

ಜಾಹೀರಾತು ಕಂಪೆನಿಗಳೂ ಅದರ ‘ಕ್ರಿಯೇಟಿವ್ ಹೆಡ್’ಗಳೂ ನಡೆಸುವ ಹುನ್ನಾರಗಳನ್ನು ಮೇಲ್ಪದರದಲ್ಲಿ ಸೋಕಿ, ‘ಜೂಮ್’ ಇನ್ನಾವುದೋ ಗುರಿಯತ್ತ ಸಾಗುತ್ತದೆ. ಭಾವನೆಗಳ ಚೆಲ್ಲಾಟ,  ಪೈಪೋಟಿಯೊಂದಿಗೆ ಬದುಕು ಹುಡುಕುವ ಯುವಪೀಳಿಗೆ, ಪ್ರೇಮ–ಕಾಮ... ಹೀಗೆ ಏನೇನೆಲ್ಲ ಸರಕನ್ನು ‘ಜೂಮ್‌’ನಲ್ಲಿ ಸುರಿಯಲಾಗಿದೆ. ಹಾಸ್ಯವೇ ಪ್ರಧಾನವಾಗಿದ್ದರೂ, ಒಂದರ್ಥದಲ್ಲಿ ಇದು ಹಲವು ಚಿತ್ರಗಳನ್ನು ಒಂದೇ ಚೌಕಟ್ಟಿನೊಳಗೆ ಬಂಧಿಸುವ ಯತ್ನದಂತೆ ಭಾಸವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT