ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನೂರ ನೆನಪಿನ ಬುತ್ತಿ

ನಾ ಕಂಡ ಬೆಂಗಳೂರು
Last Updated 29 ನವೆಂಬರ್ 2015, 19:47 IST
ಅಕ್ಷರ ಗಾತ್ರ

ಬೆಂಗಳೂರು ಎಂದರೆ ಎಷ್ಟೊಂದು ನೆನಪುಗಳು... ಒಂದೊಂದೇ ನೆನಪನ್ನು ಎಳೆದು ಮೆಲ್ಲುತ್ತ ಹೋದಂತೆ ಹೆಜ್ಜೇನಿನ ಸವಿ. ಬೆಂಗಳೂರು ಎನ್ನುವುದು ನನ್ನ ಪಾಲಿನ ಜಗತ್ತು. ಅದರಲ್ಲೂ ರಾಜಾಜಿನಗರ ನನ್ನ ಬಾಲ್ಯದ ಸವಿ ಸವಿ ಕ್ಷಣಗಳನ್ನು ಹಿಡಿದಿಟ್ಟ ಅದ್ಭುತ ಲೋಕ. ಪ್ರತಿ ಹೆಜ್ಜೆಗೂ, ಅಡಿಗಡಿಗೂ ಒಂದೊಂದು ನೆನಪುಗಳು ಹರಡಿಕೊಂಡಿವೆ ಇಲ್ಲಿ.

ರಾಜಾಜಿನಗರ, ಬಾಷ್ಯಂ ವೃತ್ತದ ಮೈದಾನದಿಂದ ಆರಂಭವಾಗಿ, ರಾಮಮಂದಿರ ಮೈದಾನ, ರವೀಂದ್ರ ಕಲಾಕ್ಷೇತ್ರ, ಗಾಂಧಿ ನಗರ, ಚಿಕ್ಕಪೇಟೆ, ಕನಿಷ್ಕ ಹೋಟೆಲ್‌... ಹೀಗೆ ನೆನಪಿನ ತೆಕ್ಕೆಯಲ್ಲಿ ಬೆಚ್ಚಗೆ ಅವಿತು ಕುಳಿತ ಆ ರಮ್ಯ ಲೋಕದ ಅನುಭವಗಳ ಖಜಾನೆ ಬಹಳ ದೊಡ್ಡದು.

ನಾನು ಏನಾಗಬೇಕು, ಏನಾಗಬಹುದು ಎನ್ನುವುದಿನ್ನೂ ಅಸ್ಪಷ್ಟವಾಗಿದ್ದ ದಿನಗಳವು. ಗೆಳೆಯರೊಡಗೂಡಿ ಬಾಷ್ಯಂ ವೃತ್ತದ ಮೈದಾನಕ್ಕೆ ಕ್ರಿಕೆಟ್‌ ಆಡಲು ಓಡುತ್ತಿದ್ದೆ. ಶನಿವಾರ, ಭಾನುವಾರ ಬಂದರೆ ಸಾಕು; ಸೂರ್ಯ ಕಂಡು ಮತ್ತೆ ಆತ ಕಣ್ಮರೆಯಾಗುವವರೆಗೆ ಮೈದಾನವೇ ನಮ್ಮ ಜಗತ್ತು.

ಆಂ... ಈಗ ಆ ಮೈದಾನ ಉಳಿದುಕೊಂಡಿಲ್ಲ. ಆದರೆ ನೆನಪುಗಳಿನ್ನೂ ನಿನ್ನೆ ಮೊನ್ನೆ ನಡೆದಷ್ಟೇ ಹಸಿರಾಗಿವೆ. ಅಂದು ಕೂಡಿ ಆಡಿದ ಗೆಳೆಯರೆಲ್ಲ ಈಗ ತಂತಮ್ಮ ಕೆಲಸಗಳಲ್ಲಿ ಕಳೆದುಹೋಗಿದ್ದಾರೆ. ಇದರ ನಡುವೆಯೂ ಯಾವಾಗಲೊ ಒಮ್ಮೆ ಎಲ್ಲರೂ ಸೇರಿದರೆ ಮತ್ತೆ ಆ ನೆನಪುಗಳನ್ನು ಜೀವಿಸಿ ಬಿಡುತ್ತೇವೆ.

ರಾಜಾಜಿನಗರ ನನ್ನ ಬದುಕಿನ ಮಹತ್ವದ ಭಾಗ. ಈಗಲೂ ನನ್ನ ಎಲ್ಲಾ ವ್ಯವಹಾರಗಳು ಅಲ್ಲಿಯೇ ಇವೆ. ನನ್ನ ಬ್ಯಾಂಕ್‌ ಅಕೌಂಟ್ ಅಲ್ಲಿದೆ, ಬಟ್ಟೆ–ಬರೆ, ಶೂ ಖರೀದಿಸಲು, ತಿಂಗಳ ದಿನಸಿ ಕೊಳ್ಳಲು ನನಗೆ ರಾಜಾಜಿನಗರವೇ ಆಗಬೇಕು. ಈಗ ಬಂದಿರುವ ಯಾವ ಮಾಲ್‌ಗಳೂ ನನಗೆ ಹಿಡಿಸುವುದಿಲ್ಲ.

ಶನಿವಾರದ ಉದ್ದಿನ ವಡೆ, ಮಸಾಲೆ ದೋಸೆ
ನಮ್ಮ ತಾತ ಮಾಮೂಲುಪೇಟೆಯ ಅಂಗಡಿಯೊಂದರಲ್ಲಿ ಲೆಕ್ಕಪತ್ರ ನೋಡಿಕೊಳ್ಳುತ್ತಿದ್ದರು. ಶನಿವಾರಕ್ಕೊಮ್ಮೆ ತಾತನ ಜೊತೆ ಪೇಟೆಗೆ ಹೋಗುತ್ತಿದ್ದೆ. ಅವರ ಕೆಲಸ ಮುಗಿಯುವವರೆಗೂ ಪೇಟೆಯಲ್ಲೆಲ್ಲ ಓಡಾಡಿಕೊಂಡು, ಅವರ ಕೆಲಸ ಮುಗಿದ ಮೇಲೆ ಚಿಕ್ಕಪೇಟೆಯ ರಾಘವೇಂದ್ರ ವಿಲಾಸ ಹೋಟೆಲ್‌ನಲ್ಲಿ ಒಂದು ಉದ್ದಿನ ವಡೆ ಅಥವಾ ಮಸಾಲೆ ದೋಸೆ ಸವಿಯುವುದು ರೂಢಿ. ಅದೆಂಥ ಸಂಭ್ರಮ ಗೊತ್ತೆ? ಆ ದೋಸೆಯ ರುಚಿ ಈಗಲೂ ನಾಲಿಗೆಯ ಮೇಲಿದೆ.

ಕಾಲೇಜು ದಿನಗಳಿಂದಲೂ ನಟನಾ ಹಸಿವು ಹತ್ತಿಕೊಂಡಿತ್ತು. ಕಾಲೇಜಿನಲ್ಲಿ ಕೆಲವು ನಾಟಕಗಳನ್ನು ಮಾಡಿದ್ದು ಬಿಟ್ಟರೆ ಬೇರೆ ಅನುಭವಗಳೇನೂ ಇರಲಿಲ್ಲಿ. ರವೀಂದ್ರ ಕಲಾಕ್ಷೇತ್ರದ ಒಡನಾಟ ಬೆಳೆದದ್ದು ಆನಂತರವೇ. ರಮೇಶ್ ಅರವಿಂದ್, ಪ್ರಕಾಶ್‌ ರೈ, ಕಲಾಗಂಗೋತ್ರಿ ಮಂಜು ಹಾಗೂ ಇತರ ಸ್ನೇಹಿತರೆಲ್ಲ ಅಲ್ಲಿಯೇ ಸೇರುತ್ತಿದ್ದೆವು.

ಹಲವು ರೀತಿಯ ಹಸಿವುಗಳು ನಮ್ಮನ್ನಾವರಿಸಿಕೊಂಡಿದ್ದ ದಿನಗಳವು. ಹೊಟ್ಟೆಯ ಹಸಿವು, ಕೆಲಸದ ಹಸಿವು, ನಟನೆಯ ಹಸಿವು, ಹೆಸರಿನ ಹಸಿವು, ಹಣದ ಹಸಿವು... ಈ ಎಲ್ಲಾ ಹಸಿವು ಗಳಿಗೂ ರವೀಂದ್ರ ಕಲಾಕ್ಷೇತ್ರ ಕಾಯಕಲ್ಪದಂತಿತ್ತು. ಅಲ್ಲೊಂದು ಪುಟ್ಟ ಟೀ ಅಂಗಡಿ ಇತ್ತು. ಕಾರಂತ ಅಂತೊಬ್ಬರು ಕಾಫಿ ಕೊಡುತ್ತಿದ್ದರು. ನನಗಂತೂ ಅಲ್ಲಿ ನಾವ್ಯಾರೂ ಒಂದು ಪೂರ್ತಿ ಕಾಫಿ ಕುಡಿದ ನೆನಪೇ ಇಲ್ಲ. ಬೈಟು ಕಾಫಿ ಒಂದು ಬನ್‌... ಆಹಾ! ಅದೆಂಥ ಸ್ವಾದ, ಅದೇನು ತೃಪ್ತಿ!

ರವೀಂದ್ರ ಕಲಾಕ್ಷೇತ್ರದ ನಂಟಿಗೆ ನಟನೆಯ ಹಸಿವಿನ ಜೊತೆಗೆ ಹೊಟ್ಟೆಯ ಹಸಿವೂ ಮುಖ್ಯ ಕಾರಣ ಎಂದು ಹೇಳಬಹುದು. ರಾಜಾಜಿನಗರದಿಂದ ರವೀಂದ್ರ ಕಲಾಕ್ಷೇತ್ರದವರೆಗೂ ನಡೆದುಕೊಂಡೇ ಪಯಣ. ಅಲ್ಲಿ ನಾಟಕ ಮಾಡಿಸುವವರು  ಮಧ್ಯಾಹ್ನದ ಹೊತ್ತಿಗೆ ಇಡ್ಲಿ ಅಥವಾ ಖಾಲಿ ದೋಸೆ ಕೊಡಿಸುತ್ತಿದ್ದರು. ಬದುಕನ್ನು ನಿಜವಾದ ನೆಲೆಯಲ್ಲಿ ಅರ್ಥಮಾಡಿಸಿದ್ದು ರವೀಂದ್ರ ಕಲಾಕ್ಷೇತ್ರ. ಜೀವನದ ಅತ್ಯುತ್ತಮ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಮೊದಲ ಪಾಠಗಳನ್ನು ಕಲಿಸಿಕೊಟ್ಟಿದ್ದು, ನನ್ನೊಳಗೆ ಒಬ್ಬ ನಟನನ್ನು ಹುಟ್ಟು ಹಾಕಿದ್ದು ರವೀಂದ್ರ ಕಲಾಕ್ಷೇತ್ರ. ಬಹುತೇಕ ನನ್ನ ಎರಡನೇ ಮನೆಯೇ ಆಗಿತ್ತದು. ಈಗಲೂ ಅಲ್ಲಿ ಹೋದರೆ ಎಂಥದೊ ಪುಳಕ ಮೈ–ಮನ ತುಂಬುತ್ತದೆ.

ಕಾನಿಷ್ಕ ಹೋಟೆಲ್‌ ಮುಂದೆ ಕೈ ಚಾಚಿದ್ದು
ನಾಟಕದ ಪರಿಧಿ ದಾಟಿ ಒಂದು ಹೆಜ್ಜೆ ಮುಂದಿಡಬೇಕು ಎನ್ನುವ ಹಂಬಲ ಹುಟ್ಟಿಕೊಂಡಾಗ. ಕಾನಿಷ್ಕ ಹೋಟೆಲ್‌ನತ್ತ ಹೆಜ್ಜೆ ಹಾಕಿದ್ದಿದೆ. ಅನೇಕ ಹಿರಿಯ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಅಲ್ಲಿ ಬರುತ್ತಿದ್ದರು. ಜಗ್ಗೇಶ್‌, ಪ್ರಕಾಶ್‌ರೈ, ನಾನು ಸೇರಿದಂತೆ ಹಲವು ಸ್ನೇಹಿತರಿಗೆಲ್ಲ ಅದೇ ಠಿಕಾಣಿ. ನಾವು ಯಾರ ಕಣ್ಣಿಗಾದರೂ ಬಿದ್ದು, ಎಲ್ಲೋ ಒಂದು ಅವಕಾಶ ಸಿಗಬಹುದೇ ಎನ್ನುವ ಕಾತರ ಕಣ್ಣ ತುಂಬ.

ಈಗಲೂ ಸಮಯ ಸಿಕ್ಕಾಗ ಸ್ನೇಹಿತರು ಕೂಡಿ ಅಲ್ಲಿಗೆ ಹೋಗುವುದುಂಟು. ಅಂದು ನಮ್ಮೊಂದಿಗೆ ಅವಕಾಶಕ್ಕಾಗಿ ಕಾದು ನಿಂತಿರುತ್ತಿದ್ದ ಎಷ್ಟೋ ಜನ ಈಗಲೂ ಹಾಗೆಯೇ ಇದ್ದಾರೆ. ಅವರನ್ನು ನೋಡಿದರೆ ಬೇಸರವಾಗುತ್ತದೆ.

ಸಿಹಿ ಕಹಿ ಜೊತೆಯಾದದ್ದು
ಈ ನಡುವೆ ನಾನು ಮೆಡಿಕಲ್‌ ರೆಪ್‌ ಆಗಿ ಕೆಲಸ ಮಾಡುತ್ತಿದ್ದೆ. ಆದರೆ ತೃಪ್ತಿ ಇರಲಿಲ್ಲ. ಇದು ನನ್ನ ಕ್ಷೇತ್ರ ಅಲ್ಲ, ನಾನು ಇದಕ್ಕಾಗಿ ಸಲ್ಲ ಎನ್ನುವ ತುಡಿತ ಕಾಡುತ್ತಿತ್ತು. ಅದಾಗಲೇ ನಾನು ಮೈಮ್‌ನಲ್ಲಿ ಒಂದಷ್ಟು ಹೆಸರು ಮಾಡಿದ್ದೆ. ಮೈಮ್‌ ಷೋ ಕೊಡುತ್ತ ಊರೂರು ಸುತ್ತುವುದು ಒಳ್ಳೆಯದು ಎನ್ನುವ ಆಲೋಚನೆ ಬಂತು. ಸರಿ, ಕೆಲಸಕ್ಕೆ ವಿದಾಯ ಹೇಳಿ ಮೈಮ್‌ ತಯಾರಿ ನಡೆಸಿದ್ದೆ.

ಅದೇ ದಿನ ಶ್ಯಾಮ್‌ಪ್ರಸಾದ್‌ ಮುದುಗಲ್‌ ಎನ್ನುವವರು ನನಗೆ ಫೋನ್‌ ಮಾಡಿದರು. ಎಚ್‌.ಎಂ.ಕೆ. ಮೂರ್ತಿ ಅವರು ‘ಸಿಹಿ–ಕಹಿ’ ಧಾರಾವಾಹಿ ಮಾಡುತ್ತಿದ್ದಾರೆ. ಆಡಿಷನ್‌ಗೆ ಬರ್ತಿರಾ? ಎಂದು ಕೇಳಿದರು. ಆಗ ನಾನು ಕೇಳಿದ ಮೊದಲ ಪ್ರಶ್ನೆ ಎಂದರೆ ‘ದುಡ್ಡು ಕೊಡ್ರೀರಾ?’ ಎಂದು.

ಧಾರಾವಾಹಿಯೊಂದರ ಹೀರೊ ಪಾತ್ರಕ್ಕೆ ಸಿಕ್ಕ ಮೊದಲ ಅವಕಾಶ ಅದು. ಪರೀಕ್ಷೆ ಮಾಡಿದರು. ನಾಯಕನಾಗಿ ನಾನು ಆಯ್ಕೆಯಾದೆ. ನಾಯಕಿಯಾಗಿ ಗೀತಾ ಆಯ್ಕೆಯಾದಳು. ನನ್ನ ವೃತ್ತಿ ಬದುಕಿನ ಮೊದಲ ನಾಯಕಿ, ನನ್ನ ಜೀವನದಲ್ಲೂ ನಾಯಕಿಯಾಗಿ ಜೊತೆಯಾದಳು.
ಬೆಂಗಳೂರು ನನ್ನ ಜಗತ್ತು. ನನ್ನ ಕನಸು, ನನ್ನ ಬದುಕು ಎಲ್ಲವೂ. ಬೆಂಗಳೂರು ಬಿಟ್ಟು ಹೋಗಬೇಕು ಎಂದು ನನಗೆ ಎಂದೂ ಅನಿಸಲೇ ಇಲ್ಲ. ಬೆಂಗಳೂರಿನ ಬಗ್ಗೆ ನಮಗೀಗ ಸಾಕಷ್ಟು ದೂರುಗಳಿವೆ. ಟ್ರಾಫಿಕ್‌ ಸಹಿಸೋಕೆ ಆಗೊಲ್ಲ, ದೂಳು ತುಂಬಿದೆ, ರಸ್ತೆ ಸರಿ ಇಲ್ಲ... ಎಂದೆಲ್ಲ ಗೊಣಗುತ್ತೇವೆ. ಇದೆಲ್ಲದರ ನಡುವೆಯೂ ನನಗೆ ಬೆಂಗಳೂರೇ ಹಿತ. ಬೆಂಗಳೂರೇ ಆಪ್ತ.

***
ನಾ ನೋಡಿದ ಮೊದಲ ಶೂಟಿಂಗ್‌
ಯಾವ ವರ್ಷ ಎನ್ನುವುದು ಸರಿಯಾಗಿ ನೆನಪಿಲ್ಲ. ನಾನಿನ್ನೂ  ಚಿಕ್ಕವನು. ನನ್ನ ಸ್ನೇಹಿತ ಉಮೇಶ್‌ ಪ್ರಸಾದ್‌ ಅಂತ ಇದ್ದಾನೆ. ಅವನ ಮನೆಯ ಪಕ್ಕದಲ್ಲಿಯೇ ಸಿ.ವಿ.ಎಲ್‌. ಶಾಸ್ತ್ರಿ ಅವರ ಮನೆ ಇತ್ತು. ಅಲ್ಲಿ ಸಿನಿಮಾ ದಿಗ್ಗಜರೆಲ್ಲ ಬರುತ್ತಿದ್ದರು. ಅವರನ್ನೆಲ್ಲ ನೋಡುವುದೇ ಒಂದು ಸಂಭ್ರಮ. ಅದೊಂದು ದಿನ ಶಾಸ್ತ್ರಿ ಅವರ ಮನೆಗೆ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರು ಬಂದಿದ್ದಾರೆ, ‘ಕಳ್ಳ–ಕುಳ್ಳ’ ಶೂಟಿಂಗ್‌ ನಡೆಯುತ್ತಿದೆ ಎಂದು ತಿಳಿಯಿತು. ಹೇಗಾದರೂ ಶೂಟಿಂಗ್‌ ನೋಡಲೇಬೇಕೆನ್ನುವ ಹಂಬಲ. ಪ್ರಸಾದ್‌ ಮನೆಯ ಮಾಳಿಗೆ ಏರಿ, ಅಲ್ಲಿಂದ ಮತ್ತೊಬ್ಬರ ಮಾಳಿಗೆಗೆ ಇಳಿದು, ಶಾಸ್ತ್ರಿ ಅವರ ಮನೆಯಲ್ಲಿ ನಡೆಯುತ್ತಿರುವ ಶೂಟಿಂಗ್‌ ನೋಡಲು ಹರಸಾಹಸ ಮಾಡಿದ್ದುಂಟು. ಬಹುಶಃ ನನಗೇ ಅರಿವಿಲ್ಲದೆ ನನ್ನ ನಟನಾ ಬದುಕಿಗೊಂದು ಪುಟ್ಟ ಪ್ರೇರಣೆ ದೊರೆತಿದ್ದು ಅಲ್ಲಿಯೇ ಇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT