ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಂದದ ಪುನರುತ್ಥಾನ...

Last Updated 20 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬಿಹಾರಕ್ಕೆ ಬರುವ ವಿದೇಶಿ ಮತ್ತು ನಮ್ಮ ದೇಶದ ಪ್ರವಾಸಿಗರು ಒಂದು ಸ್ಥಳಕ್ಕಂತೂ ಖಂಡಿತ ಭೇಟಿ ನೀಡುತ್ತಾರೆ. ಅದು ನಳಂದ. ಪುರಾತನ ನಳಂದ ವಿಶ್ವವಿದ್ಯಾಲಯದ ಅವಶೇಷಗಳಿರುವ ಜಾಗಕ್ಕೆ ಅವರು ಭೇಟಿ ನೀಡುತ್ತಾರೆ, ಈ ವಿ.ವಿ. ಬಗೆಗಿನ ಎಲ್ಲ ವಿವರಗಳನ್ನು ತಮ್ಮ ಮಾರ್ಗದರ್ಶಿಯಿಂದ ತಿಳಿದುಕೊಳ್ಳುತ್ತಾರೆ, ಅಲ್ಲಿನ ಕೆಲವು ಫೋಟೊ ಕ್ಲಿಕ್ಕಿಸಿಕೊಂಡು ನೆನಪುಗಳೊಂದಿಗೆ ತಮ್ಮ ಊರುಗಳಿಗೆ ಮರಳುತ್ತಾರೆ.

ಮುಂದಿನ ಬಾರಿ ಅವರು ಇಲ್ಲಿಗೆ ಬಂದಾಗ, ಭೇಟಿ ನೀಡಬೇಕಾದ ಇನ್ನೊಂದು ಸ್ಥಳ ಇದೆ. ಅದು, ಹೊಸ ನಳಂದ ವಿಶ್ವವಿದ್ಯಾಲಯ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಯತ್ನಗಳಿಂದಾಗಿ ಸೆಪ್ಟೆಂಬರ್‌ 1ರಿಂದ ವಿ.ವಿ ಆರಂಭಗೊಂಡಿದೆ. ಆಧುನಿಕ ನಳಂದ ವಿ.ವಿ.ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಆಗ್ನೇಯ ಏಷಿಯಾ ರಾಷ್ಟ್ರಗಳ ಕೆಲವು ಸಂಘಟನೆಗಳು ಹಣಕಾಸಿನ ನೆರವು ನೀಡಿವೆ.

ಈ ವಿ.ವಿ ಪುನರುತ್ಥಾನದ ಕತೆ ಆರಂಭವಾಗಿದ್ದು 2006ರ ಮಾರ್ಚ್‌ನಲ್ಲಿ. ಅಂದು ನಮ್ಮ ರಾಷ್ಟ್ರಪತಿ ಆಗಿದ್ದ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಬಿಹಾರದ ಶಾಸಕರನ್ನು ಉದ್ದೇಶಿಸಿ ಮಾತನಾಡುವಾಗ, ‘ಐದನೆಯ ಶತಮಾನಕ್ಕೆ ಸೇರಿದ, ಈ ವಿ.ವಿ.ಯ ಪುನರುತ್ಥಾನದ ಕೆಲಸ ಆಗಬೇಕು’ ಎಂದು ಹೇಳಿದ್ದರು. ಕಲಾಂ ಆಡಿದ ಮಾತು ಹೊಸ ಕೆಲಸಕ್ಕೆ ನಾಂದಿ ಹಾಡಿತು. ಬಿಹಾರದ ನಿತೀಶ್‌ ಕುಮಾರ್‌ ಸರ್ಕಾರ 2009ರಲ್ಲಿ ವಿಶೇಷ ಸಂಪುಟ ಸಭೆ ನಡೆಸಿ, ನಳಂದ ಮಸೂದೆಗೆ ಅಸ್ತು ಎಂದಿತು. ಯುಪಿಎ ಸರ್ಕಾರ 2010ರ ನವೆಂಬರ್‌ನಲ್ಲಿ ನಳಂದ ವಿಶ್ವವಿದ್ಯಾಲಯ ಕಾಯ್ದೆಗೆ ಅನುಮೋದನೆ ಪಡೆದುಕೊಂಡಿತು. ಆಗ್ನೇಯ ಏಷಿಯಾ ರಾಷ್ಟ್ರಗಳನ್ನು ಬೆಸೆಯುವ ಮಾದರಿಯಲ್ಲಿ ಈ ವಿಶ್ವವಿದ್ಯಾಲಯವನ್ನು ಕಟ್ಟುವ ಪ್ರಸ್ತಾವವನ್ನು ಸಿಂಗಪುರ ಸರ್ಕಾರ ಇದೇ ಸಮಯದಲ್ಲಿ ಮುಂದಿಟ್ಟಿತು. ಮೊನ್ನೆ, ಅಂದರೆ ಇದೇ 1ರಂದು ವಿಶ್ವವಿದ್ಯಾಲಯ ಆರಂಭಗೊಂಡಿದೆ, 11 ವಿದ್ಯಾರ್ಥಿಗಳು ಮತ್ತು ಏಳು ಅಧ್ಯಾಪಕರೊಂದಿಗೆ ತಾತ್ಕಾಲಿಕ ಕಟ್ಟಡವೊಂದರಲ್ಲಿ ತರಗತಿಗಳು ಆರಂಭವಾಗಿವೆ. 12ನೇ ಶತಮಾನದಲ್ಲಿ ಮಹಮ್ಮದ್‌ ಬಿನ್‌ ಬಕ್ತಿಯಾರ್‌ ಖಿಲ್ಜಿಯಿಂದ ನಾಶಗೊಂಡ ನಳಂದ ವಿ.ವಿಯ ಅವಶೇಷಗಳು ಇರುವ ಜಾಗದಿಂದ 12 ಕಿ.ಮೀ ದೂರದಲ್ಲಿ ಈಗಿರುವ ತಾತ್ಕಾಲಿಕ ಕಟ್ಟಡ ಇದೆ.

ಆರಂಭಿಕ ಹಂತವಾಗಿ ಪರಿಸರ ವಿಜ್ಞಾನ ಮತ್ತು ಇತಿಹಾಸ ಅಧ್ಯಯನ ಕೋರ್ಸ್‌ಗಳನ್ನು ತೆರೆಯಲಾಗಿದೆ. ‘ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು, ಅಧ್ಯಾಪಕರು ಬರಲಿದ್ದಾರೆ’ ಎಂದು ವಿ.ವಿ. ಕುಲಪತಿ ಗೋಪ ಸಭರ್ವಾಲ್‌ ಹೇಳುತ್ತಾರೆ.

‘ಭೌತಿಕ ಮತ್ತು ಬೌದ್ಧಿಕ ಸೀಮೆಗಳನ್ನು ಮೀರಿ ವಿದ್ಯಾರ್ಥಿಗಳಿಗೆ ಶ್ರೇಷ್ಠ ವಿದ್ಯೆಯ ದಾನ ಮಾಡಬೇಕು. ಹಿಂದಿನ ನಳಂದ ವಿ.ವಿ ಯಾವ ಮೌಲ್ಯಗಳನ್ನು ಪ್ರತಿಪಾದಿಸಿತ್ತೋ, ಅದೇ ಮೌಲ್ಯಗಳನ್ನು ಇಂದಿನ ನಳಂದ ವಿ.ವಿ ಕೂಡ ಅನುಸರಿಸುತ್ತದೆ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ವಿಶ್ವವಿದ್ಯಾಲಯಕ್ಕೆ ಎಂದು ಕೇಂದ್ರ ಸರ್ಕಾರ ಈಗಾಗಲೇ ₨ 2,700 ಕೋಟಿ ಬಿಡುಗಡೆ ಮಾಡಿದೆ. 2020ರ ವೇಳೆಗೆ ನಳಂದ ವಿ.ವಿ ಪೂರ್ಣ ಪ್ರಮಾಣದಲ್ಲಿ ಚಟುವಟಿಕೆಗಳಿಂದ ಕೂಡಿರುತ್ತದೆ. ಆ ವೇಳೆಗೆ ಅಲ್ಲಿ  ಸ್ನಾತಕೋತ್ತರ ಮತ್ತು ಡಾಕ್ಟರೇಟ್‌ ವಿದ್ಯಾರ್ಥಿಗಳಿಗೆ ಏಳು ಕೋರ್ಸ್‌ಗಳು ಇರಲಿವೆ. ವಿ.ವಿ ಕ್ಯಾಂಪಸ್ ವಿಸ್ತೀರ್ಣ 443 ಎಕರೆ ಆಗಿರಲಿದೆ. ತನ್ನದೇ ಆದ ಕ್ಯಾಂಪಸ್‌ ನಿರ್ಮಾಣ ಆಗುವವರೆಗೆ ವಿದ್ಯಾರ್ಥಿಗಳಿಗೆ ಸರ್ಕಾರಿ ಹೋಟೆಲ್‌ ಒಂದರ ಕೊಠಡಿಗಳಲ್ಲಿ ತರಗತಿಗಳು ನಡೆಯಲಿವೆ.

‘ಹೋಟೆಲ್‌ನ ಒಂದು ಮಹಡಿಯಲ್ಲಿ ವಿದ್ಯಾರ್ಥಿಗಳಿಗೆ, ಇನ್ನೊಂದರಲ್ಲಿ ವಿದ್ಯಾರ್ಥಿನಿಯರಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಅದೇ ಕಟ್ಟಡದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ’ ಎಂದು ಕುಲಪತಿ ತಿಳಿಸಿದರು.

ಸ್ನಾತಕೋತ್ತರ ಕೋರ್ಸ್‌ನ ಒಂದು ವರ್ಷದ ಶುಲ್ಕ ₨ 3 ಲಕ್ಷ. ಆಡಳಿತಾತ್ಮಕ ವೆಚ್ಚ ಎಂದು ₨ 75 ಸಾವಿರ ಪ್ರತ್ಯೇಕ. ಇದಲ್ಲದೆ, ವಸತಿಗೆ ವಿದ್ಯಾರ್ಥಿಗಳು ಹೆಚ್ಚುವರಿ ಮೊತ್ತ ಪಾವತಿಸಬೇಕು. ವಾರ್ಷಿಕ ₨ 3.75 ಲಕ್ಷ ಶುಲ್ಕ ಎಲ್ಲರಿಗೂ ಎಟಕುವಂತೆ ಇಲ್ಲ ಎಂದು ಕೆಲವು ಹಿರಿಯ ಶಿಕ್ಷಣ ತಜ್ಞರು ಟೀಕೆಯನ್ನೂ ವ್ಯಕ್ತಪಡಿಸಿದ್ದಾರೆ.

‘ಐಐಟಿ ಅಥವಾ ಐಐಎಂನಲ್ಲಿ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಇಷ್ಟೇ ಮೊತ್ತ ಪಾವತಿಸಬೇಕು. ಆದರೆ ಮಾನವಿಕ ವಿಷಯಗಳಿಗೆ ಇಷ್ಟು ಪಾವತಿಸಲು ಅವರು ಮನಸ್ಸು ಮಾಡುವುದಿಲ್ಲ’ ಎಂದು ಪಟ್ನಾ ವಿಶ್ವವಿದ್ಯಾಲಯ ಅಧ್ಯಾಪಕರೊಬ್ಬರು ಅಭಿಪ್ರಾಯಪಟ್ಟರು. ಶುಲ್ಕ ಮಾತ್ರವಲ್ಲ, ಇತರ ಕೆಲವು ವಿಷಯಗಳಲ್ಲೂ ವಿ.ವಿ ಟೀಕೆಗೆ ಒಳಗಾಗಿದೆ.

‘ನಳಂದ ವಿ.ವಿ ಪುನರುತ್ಥಾನ ಅತ್ಯಂತ ಮಹತ್ವದ್ದು. ಆದರೆ ಇದರ ಆಡಳಿತ ಮಂಡಳಿಯ ಹೆಚ್ಚಿನ ಸದಸ್ಯರು ಹೊರದೇಶಗಳಲ್ಲಿ ಇದ್ದಾರೆ. ಅವರಿಗೆ ಯೋಜನೆಯ ಸೂಕ್ಷ್ಮ ವಿಚಾರಗಳು ತಿಳಿದಿರುವ ಸಾಧ್ಯತೆ ಕಡಿಮೆ’ ಎಂದು ಸಮಾಜ ವಿಜ್ಞಾನಿ ಅಜಯ್‌ ಕುಮಾರ್‌ ಹೇಳುತ್ತಾರೆ.
ವಿ.ವಿ. ಆಡಳಿತ ಮಂಡಳಿಯಲ್ಲಿ ಲಾರ್ಡ್‌ ಮೇಘನಾಥ ದೇಸಾಯಿ, ಪ್ರೊ. ಸುಗತ ಬೋಸ್‌ ಇವರೊಂದಿಗೆ ಸಿಂಗಪುರ, ಚೀನಾ ಮತ್ತು ಜಪಾನ್‌ ದೇಶಗಳ ಶಿಕ್ಷಣ ತಜ್ಞರು ಇದ್ದಾರೆ. ಅಮರ್ತ್ಯ ಸೇನ್‌ ಅವರು ವಿ.ವಿ.ಯ ಕುಲಾಧಿಪತಿ.

ದಾಖಲಿತ ಇತಿಹಾಸದ ಪ್ರಕಾರ ನಳಂದ ವಿ.ವಿಯನ್ನು 5ರಿಂದ 12ನೇ ಶತಮಾನದವರೆಗಿನ ಅತ್ಯುನ್ನತ ವಿದ್ಯಾಕೇಂದ್ರಗಳಲ್ಲಿ ಒಂದು. ಒಂದನೇ ಕುಮಾರಗುಪ್ತನ ಅವಧಿಯಲ್ಲಿ ಹುಟ್ಟಿದ ಈ ವಿ.ವಿ.ಯು ಬೌದ್ಧ ತತ್ವಜ್ಞಾನ ಅಧ್ಯಯನದ ಅತ್ಯುನ್ನತ ಕೇಂದ್ರವಾಗಿತ್ತು. ಎರಡು ಚದರ ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದ ಇದರಲ್ಲಿ, 1,500 ಅಧ್ಯಾಪಕರು ಹಾಗೂ 10 ಸಾವಿರ ವಿದ್ಯಾರ್ಥಿಗಳು ಇದ್ದರು. ಒಂದು ದಂತಕತೆ ಪ್ರಕಾರ ಪಾಣಿನಿ ಕೂಡ ಇಲ್ಲೇ ಅಧ್ಯಯನ ನಡೆಸಿದ್ದ.

ಈ ವಿ.ವಿ.ಯ ವಿದ್ಯಾರ್ಥಿ ಮತ್ತು ಅಧ್ಯಾಪಕ ಆಗಿದ್ದ ಚೀನಾದ ವಿದ್ವಾಂಸ ಹ್ಯೂಯೆನ್‌ ತ್ಸಾಂಗ್‌ ಪ್ರಕಾರ, ಇಲ್ಲಿ ಆರು ಮಹಡಿಗಳ ಕಟ್ಟಡ ಇತ್ತು. ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಇತ್ತು. ವಿದ್ಯಾರ್ಜನೆಗೂ ಯಾವುದೇ ಶುಲ್ಕ ಇರಲಿಲ್ಲ. ಆದರೆ ವಿದ್ಯಾರ್ಥಿಗಳು ಕಠಿಣ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿತ್ತು.

ತತ್ವಶಾಸ್ತ್ರ, ಖಗೋಳಶಾಸ್ತ್ರ, ಸಾಹಿತ್ಯ, ತರ್ಕ, ಬೌದ್ಧ ಮತ್ತು ಹಿಂದೂ ತತ್ವಜ್ಞಾನಗಳ ಬಗ್ಗೆ ಇಲ್ಲಿ ಅಧ್ಯಯನ ಮಾಡಬಹುದಿತ್ತು. ದಕ್ಷಿಣ ಏಷಿಯಾದ ರಾಷ್ಟ್ರಗಳಾದ ಜಪಾನ್‌, ಟಿಬೆಟ್‌ ಮತ್ತು ಚೀನಾಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪಸರಿಸುವ ಕೆಲಸವನ್ನು ಈ ವಿ.ವಿ ಮಾಡಿತ್ತು. ವಿ.ವಿ.ಯ ಅವಶೇಷಗಳನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT