ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಗುಂದ–ನರಗುಂದಕ್ಕೆ ಖಾಕಿ ಸರ್ಪಗಾವಲು

ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ 200ಕ್ಕೂ ಹೆಚ್ಚು ಮಂದಿ ಬಂಧನ
Last Updated 30 ಜುಲೈ 2016, 0:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾದಾಯಿ ನ್ಯಾಯಮಂಡಳಿಯಲ್ಲಿ ರಾಜ್ಯದ ಮಧ್ಯಂತರ ಅರ್ಜಿ ತಿರಸ್ಕೃತಗೊಂಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ನರಗುಂದ ಹಾಗೂ ನವಲಗುಂದ ಪಟ್ಟಣಗಳಲ್ಲಿ ಶುಕ್ರವಾರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಎರಡೂ ಊರುಗಳಲ್ಲೂ ಪೊಲೀಸ್‌ ಸರ್ಪಗಾವಲು ಹಾಕಲಾಗಿದ್ದು, ಗಡಿ ಭದ್ರತಾ ಪಡೆ ಮತ್ತು ಕ್ಷಿಪ್ರ ಕಾರ್ಯಾಚರಣೆ ಯೋಧರು ಪಥಸಂಚಲನ ನಡೆಸಿದರು.  ನವಲಗುಂದದಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ ಒಂದು ತಾಸು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕರ್ಫ್ಯೂ ಜಾರಿಯಲ್ಲಿರುವಂತಹ ವಾತಾವರಣವಿತ್ತು. ಮನೆಯಿಂದ ಯಾರೊಬ್ಬರೂ ಹೊರಬರದಂತೆ ಹಾಗೂ ಹೊರಗಿನಿಂದ ಯಾರೊಬ್ಬರೂ ಊರು ಪ್ರವೇಶಿಸದಂತೆ ಪೊಲೀಸರ ಕಾವಲು ಹಾಕಲಾಗಿದೆ. ಇದರಿಂದಾಗಿ ಜನರು ಪರದಾಡುತ್ತಿದ್ದುದು ಕಂಡು ಬಂತು.

ಬೆಳಿಗ್ಗೆಯೇ ಸಶಸ್ತ್ರ ಮೀಸಲು ಪಡೆಯ 16 ತುಕಡಿಗಳು ಹಾಗೂ ರಾಜ್ಯ ಮೀಸಲು ಪಡೆಯ 10 ತುಕಡಿಗಳ ಸದಸ್ಯರು ಪಥಸಂಚಲನ ನಡೆಸಿದ್ದರು. ಇದೇ ವೇಳೆಗೆ ಅಳ್ನಾವರದಿಂದ ನವಲಗುಂದಕ್ಕೆ ಬರುತ್ತಿದ್ದ ಪೊಲೀಸ್‌ ಜೀಪಿಗೆ ಯಮನೂರಿನ ಬಳಿ ಪ್ರತಿಭಟನಾಕಾರರು ಕಲ್ಲು ತೂರಿದರು. ತಕ್ಷಣ ಅಲ್ಲಿಗೆ ಧಾವಿಸಿದ ಪೊಲೀಸರು  100 ಕ್ಕೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಂಡರು.

ಗುರುವಾರದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ ಎನ್ನಲಾದ ಕೆಲವರ ಮನೆಗಳಿಗೆ ನುಗ್ಗಿದ ಪೊಲೀಸರು, ಶಂಕಿತರನ್ನು ಹೊರಗೆಳೆದು ತಂದರು. ಈವರೆಗೆ ನವಲಗುಂದದಲ್ಲಿ 200 ಮತ್ತು ನರಗುಂದದಲ್ಲಿ 15 ಜನರನ್ನು ಈವರೆಗೆ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಉತ್ತರ ವಲಯ ಐಜಿಪಿ ರಾಮಚಂದ್ರ ರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಕೂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್ ಮತ್ತು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಭಾಸ್ಕರ್ ರಾವ್‌ ಕೂಡ ಶುಕ್ರವಾರ ನವಲಗುಂದಕ್ಕೆ ಬಂದಿಳಿದರು.

ನರಗುಂದದಲ್ಲಿ ಬಿಗಿ ಬಂದೋಬಸ್ತ್‌: ನರಗುಂದದ ಹೋರಾಟ ವೇದಿಕೆಯಲ್ಲಿ ನಾಲ್ಕೈದು ಜನ ಮಾತ್ರ ಭಾಗವಹಿಸಿ ಧರಣಿ ಮುಂದುವರಿಸಿದರು.
ಶುಕ್ರವಾರವೂ ಪಟ್ಟಣದಲ್ಲಿ ನಿಷೇಧಾಜ್ಞೆ ಮುಂದುವರಿದಿದ್ದು, ಎಸ್‌ಪಿ, ಡಿವೈಎಸ್‌ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಇದರ ಜೊತೆಗೆ ಗಡಿ ಭದ್ರತಾ ಪಡೆಯ ಐದು, ರಾಜ್ಯ ಮೀಸಲು ಪೊಲೀಸ್‌ ಪಡೆಯ ಐದು, ಜಿಲ್ಲಾ ಸಶಸ್ತ್ರ ಪೊಲೀಸ್‌ ಪಡೆಯ ಎರಡು ತುಕಡಿಗಳನ್ನು ಹಾಗೂ ಹೋಮ್‌ಗಾರ್ಡ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದಕರ್ ತಿಳಿಸಿದರು. 

ಅಲ್ಲಿಯೂ ಬೆಳಿಗ್ಗೆ ಪೊಲೀಸರು ಹಾಗೂ ಭದ್ರತಾ ಪಡೆ ಯೋಧರು ಪಥ ಸಂಚಲನ ನಡೆಸಿದರು. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪಟ್ಟಣ ಬಿಕೋ ಎನ್ನುತ್ತಿತ್ತು.

ಅಂಗಡಿ, ಮುಂಗಟ್ಟುಗಳು ಬಾಗಿಲು ತೆರೆಯಲಿಲ್ಲ. ಜನರು ಮನೆಯಿಂದ ಹೊರಬರುವುದು ಕೂಡ ವಿರಳವಾಗಿತ್ತು. ಶಾಲೆ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳೂ ಕಾರ್ಯನಿರ್ವಹಿಸಲಿಲ್ಲ.

ಪಟ್ಟಣದಲ್ಲಿ ಮದ್ಯಮಾರಾಟ ನಿಷೇಧಿಸಿದ್ದು, ಶುಕ್ರವಾರ ಮಧ್ಯರಾತ್ರಿಯವರೆಗೆ  ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ತಿಳಿಸಿದ್ದಾರೆ.

ವಿವಿಧೆಡೆ ಪ್ರತಿಭಟನೆ: ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿ ರೈತ ಸಂಘ, ದಲಿತ ಸೇನೆ ಹಾಗೂ ಕನ್ನಡ ಸೇನೆ ವತಿಯಿಂದ ಒಂದು ತಾಸು ರಸ್ತೆ ತಡೆದು, ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ  ಹಾಗೂ ಬಿ.ಬಿ.ಚಿಮ್ಮನಕಟ್ಟಿ ಅವರ ಮನೆಗೆ ಮುತ್ತಿಗೆ ಹಾಕಿದ  ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.

ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಯುವಕನ ಬಂಧನ
ನವಲಗುಂದ (ಧಾರವಾಡ ಜಿಲ್ಲೆ): ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಹರಿಕೃಷ್ಣ ಮತ್ತು ಅವರ ತಂದೆ, ಇಲ್ಲಿಯ ಪಕ್ಷಾತೀತ ರೈತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಸುಮ್ನ ಮನ್ಯಾಗ್ ಓದಕೋಂತ ಕುಂತಿದ್ದ ಮಗನ್ನ ಕರ್ಕೊಂಡು ಹೋಗ್ಯಾರ್ರೀ. ಮುಂದಿನ ತಿಂಗ್ಳು ಯೋಳನೇ ತಾರೀಖಿಗೆ ಮಗಾ ಐ.ಎ.ಎಸ್‌ ಪರೀಕ್ಷೆ ಬರಿಯಾಂವ ಇದ್ದ. ಓದಕೋಂತ ಕುಂತಂವ್ಗ ಪೊಲೀಸ್ರು ಬೂಟುಗಾಲಲ್ಲಿ ಒದ್ದು, ಕರ್ಕೊಂಡು ಹೋಗ್ಯಾರ್ರೀ....’ ಎಂದು ಹರಿಕೃಷ್ಣ ಅವರ ತಾಯಿ ಸುಜಾತಾ ಸುದ್ದಿಗಾರರ ಎದುರು ಗೋಳಿಟ್ಟರು.

‘ಒಂದು ವರ್ಷದಿಂದ ಎಷ್ಟೋ ಮಕ್ಕಳ ಪರೀಕ್ಷೆ ಹಾಳು ಮಾಡಿದ್ದೀರಿ ನೀವು. ಈಗ ನಿಮ್ಮ ಮಗನ ವಿಷಯ ಬಂದಾಗ ಬೇಸರವಾಗುತ್ತದೆಯೇ? ನಿಮಗೂ ಅದು ಅರ್ಥವಾಗಬೇಕು. ಅಂದರೆ ಅದು ಇತರರಿಗೆ ಪಾಠವಾಗುತ್ತದೆ’ ಎಂದು ಪೊಲೀಸರು ಈ ಸಂದರ್ಭದಲ್ಲಿ ಹೇಳಿದರು ಎನ್ನಲಾಗಿದೆ.

ಶಾಲಾ–ಕಾಲೇಜುಗಳಿಗೆ ರಜೆ
ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.

ಪರಿಸ್ಥಿತಿಯನ್ನು ನೋಡಿಕೊಂಡು ಬಸ್‌ ಸಂಚಾರ ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕ ಅಶೋಕ ಪಟ್ಟಣ ರಾಜೀನಾಮೆ?
ರಾಮದುರ್ಗ (ಬೆಳಗಾವಿ ಜಿಲ್ಲೆ):
ಮಹಾದಾಯಿ ನ್ಯಾಯಮಂಡಳಿಯಲ್ಲಿ ರಾಜ್ಯದ ಮಧ್ಯಂತರ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ರಾಮದುರ್ಗದ ಶಾಸಕ ಅಶೋಕ ಪಟ್ಟಣ ಮತ್ತು ಕಾಂಗ್ರೆಸ್‌ ಪಕ್ಷದ ಚುನಾಯಿತ ಪ್ರತಿನಿಧಿಗಳು ಶುಕ್ರವಾರ ತಹಶೀಲ್ದಾರ ತುಕಾರಾಮ ದಾಸರ ಅವರಿಗೆ ರಾಜೀನಾಮೆ ಸಲ್ಲಿಸಿದರು.

ಆದರೆ, ಇದೊಂದು ನಾಟಕ ಎಂದು ಮೂದಲಿಸಿರುವ ಮಾಜಿ ಶಾಸಕ, ಬಿಜೆಪಿಯ ಮಹಾದೇವಪ್ಪ ಯಾದವಾಡ, ‘ನಿನ್ನೆ ತನಕ ಬೆಂಗಳೂರಿನಲ್ಲಿಯೇ ಇದ್ದ ಶಾಸಕರು ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿಲ್ಲ. ಪ್ರತಿಭಟನೆಕಾರರು ತಮ್ಮ ಮನೆಗೆ ಮುತ್ತಿಗೆ ಹಾಕುವ ಭಯದಿಂದ ಈ ಢೋಂಗಿತನ ಪ್ರದರ್ಶಿಸಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಮೇಲ್ಮನವಿ ಸಲ್ಲಿಸುವುದೊಂದೇ ಮಾರ್ಗ’
ಬೇಲೂರು:
‘ನೀರು ಹಂಚಿಕೆ ಸಂಬಂಧ ಮಹಾದಾಯಿ ನ್ಯಾಯ ಮಂಡಳಿ ವಾಸ್ತವಾಂಶ ಅರಿಯದೇ ರಾಜ್ಯದ ಬಗ್ಗೆ ತಪ್ಪು ತೀರ್ಪು ನೀಡಿದೆ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟರು.

ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದೊಂದೇ ಈಗ ಉಳಿದಿರುವ ಮಾರ್ಗ ಎಂದರು.

ತಾಲ್ಲೂಕು ಕಾಫಿ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಡಿಯಲು ನೀರು ಕೊಡಿ ಎಂದು ಕೇಳಲಾಗಿತ್ತೇ ಹೊರತು ವ್ಯವಸಾಯಕ್ಕೆ ನೀರು ಕೊಡಿ ಎಂದಲ್ಲ. ನ್ಯಾಯಮಂಡಳಿ ಇದನ್ನು ಅರಿತು ತೀರ್ಪು ನೀಡಬೇಕಿತ್ತು ಎಂದು ಹೇಳಿದರು.

ನ್ಯಾಯಮಂಡಳಿ ಮಧ್ಯಂತರ ತೀರ್ಪು ನೀಡುವ ಮುನ್ನ ಜನರ ಹಿತಾಸಕ್ತಿಯಿಂದ ಸ್ಥಳಕ್ಕೆ ಹೋಗಿ ಪರಿಶೀಲಿಸಿ ತೀರ್ಪು ನೀಡಬೇಕಿತ್ತು. ನೀರು ಎತ್ತುವಳಿ ಮಾಡುವ ಸ್ಥಳದಲ್ಲಿ ನೀರಿದೆ ಎಂಬ ಪುರಾವೆಯನ್ನು ರಾಜ್ಯ ಸರ್ಕಾರ ನ್ಯಾಯಮಂಡಳಿಗೆ ನೀಡಬೇಕಿತ್ತು. ಒಟ್ಟಾರೆ ನೀರಿನಲ್ಲಿ ಶೇ 30ರಷ್ಟು ಸಮುದ್ರ ಪಾಲಾಗುತ್ತಿದೆ. ಇದರಲ್ಲಿ 7.5 ಟಿಎಂಸಿ ಅಡಿ ನೀರನ್ನು ಕುಡಿಯಲು ನೀಡುವಂತೆ ಕೇಳಿತ್ತು. ಮಾನವೀಯತೆ ದೃಷ್ಟಿಯಿಂದ ನ್ಯಾಯ ಮಂಡಳಿ ನೀರು ನೀಡುವ ಬಗ್ಗೆ ಪರಿಶೀಲಿಸಬಹುದಿತ್ತು ಎಂದರು.

ಶಾಂತಿ ಕಾಪಾಡಲು ಮನವಿ
ಬೆಂಗಳೂರು:
ಬಂದ್‌ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡದೆ, ಶಾಂತಿಯಿಂದ ವರ್ತಿಸಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌  ಮನವಿ ಮಾಡಿದ್ದಾರೆ.

ಮಾಧ್ಯಮ ಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಧಾರವಾಡ, ಗದಗ ಜಿಲ್ಲೆಗಳಲ್ಲಿ ಗುರುವಾರ ನಡೆದ ಪ್ರತಿಭಟನೆಯಿಂದಾಗಿ ಏಳು ಸರ್ಕಾರಿ ಕಚೇರಿಗಳಿಗೆ ಹಾನಿಯಾಗಿದೆ.

ಶನಿವಾರದ ಬಂದ್‌ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ, ಹಿಂಸೆ ನಡೆಯದಂತೆ ಕಟ್ಟೆಚ್ಚರ ವಹಿಸಲು ಎಲ್ಲಾ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮಹಾದಾಯಿ ನ್ಯಾಯಮಂಡಳಿಯ ಮಧ್ಯಂತರ ಆದೇಶ ಕುರಿತು ಕಾಂಗ್ರೆಸ್‌ ಪಕ್ಷಕ್ಕೆ ಅಸಮಾಧಾನವಿದೆ. ರಾಜ್ಯದ ಜನತೆ ಕುಡಿಯುವ ನೀರಿಗಾಗಿ ನಡೆಸುತ್ತಿರುವ ನ್ಯಾಯಯುತ ಹೋರಾಟಕ್ಕೆ ಪಕ್ಷದ ತಾತ್ವಿಕ ಬೆಂಬಲವಿದೆ ಎಂದು ಪರಮೇಶ್ವರ್‌ ಹೇಳಿದರು.
ಬಂದ್‌ ಸಂದರ್ಭದಲ್ಲಿ ಕಾನೂನು ಮೀರಿ ವರ್ತಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದೂ ಎಚ್ಚರಿಸಿದರು.

ವಿಷ ಸೇವಿಸಿದ ಯುವಕರ ಚೇತರಿಕೆ
ಹುಬ್ಬಳ್ಳಿ:
ಶನಿವಾರದ ಬಂದ್‌ ಸಂದರ್ಭದಲ್ಲಿ ನವಲಗುಂದ ಮತ್ತು ನರಗುಂದ ಭಾಗದ ಮಹಾದಾಯಿ ಹೋರಾಟಗಾರರಿಗೆ ಹುಬ್ಬಳ್ಳಿ ಪ್ರವೇಶಕ್ಕೆ ನಿರ್ಬಂಧ ಹೇರಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ಈ ಎರಡೂ ಪಟ್ಟಣಗಳಲ್ಲಿ ನಿಷೇಧಾಜ್ಞೆ ಇದ್ದು, ಅಲ್ಲಿನ ರೈತರು ಹುಬ್ಬಳ್ಳಿ ಕಡೆ ಬರದಂತೆ ಕಟ್ಟೆಚ್ಚರವಹಿಸಲು ಪೊಲೀಸರು ಯೋಜನೆ ರೂಪಿಸಿದ್ದಾರೆ. ನರಗುಂದದಲ್ಲಿ ಗುರುವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ ಸಂಗಮೇಶ ಚರಂತಿಮಠ ಮತ್ತು ನಂದೀಶ ಮಠದ ಚೇತರಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT