ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದಲೋಕದಲ್ಲಿ ಲೀನರಾದ ನಾದಯೋಗಿ ಆರ್.ಕೆ. ಶ್ರೀಕಂಠನ್

ವ್ಯಕ್ತಿ ಸ್ಮರಣೆ
Last Updated 22 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಮೊನ್ನೆ ಸೋಮವಾರ ನಿಧನರಾದ ಡಾ. ಆರ್.ಕೆ. ಶ್ರೀಕಂಠನ್ (೯೪) ಅವರು ಕರ್ನಾಟಕ ಸಂಗೀತ ಕ್ಷೇತ್ರದ ಭೀಷ್ಮಾಚಾರ್ಯರಂತೆ ಇದ್ದವರು.  ಗಾಯಕ, ಬೋಧಕ ಹಾಗೂ ರಾಗ ಸಂಯೋಜಕರಾಗಿ ಏಳು ದಶಕಗಳ ಕಾಲ ಬೆಳಗಿದವರು.

 ಶ್ರೀಕಂಠನ್ ಅವರು ಹುಟ್ಟಿದ್ದು ೧೯೨೦ರ ಏಪ್ರಿಲ್ 14ರಂದು ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ.  ಸಂಗೀತ, ಸಾಹಿತ್ಯ, ವೇದಾಂತಗಳಲ್ಲಿ ನಿಷ್ಣಾತ ರಾದ ಮನೆತನ ಅವರದ್ದು. ತಂದೆ ಕೃಷ್ಣಶಾಸ್ತ್ರಿಗಳು ವ್ಯಾಖ್ಯಾನ ವಿಶಾರದ  ಎಂದೇ ಖ್ಯಾತರು. ತಂದೆಯವರಿಂದ ಪ್ರಾರಂಭವಾದ ಸಂಗೀತ ಶಿಕ್ಷಣ ಅಣ್ಣ ಆರ್.ಕೆ. ವೆಂಕಟರಾಮ ಶಾಸ್ತ್ರಿ ಅವರಲ್ಲಿ ಮುಂದುವರಿಸಿದರು. ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದೇ ಮೈಸೂರು ಪ್ರಸಿದ್ಧ.

ಊರೆಲ್ಲಾ ಸಂಗೀತದ ಅಲೆ. ಹಿರಿಯರ (ಮುಸುರಿ, ಮಹಾರಾಜಪುರಂ, ಅರಿಯಾಕುಡಿ, ಜಿ.ಎನ್.ಬಿ., ವಾಸುದೇವಾಚಾರ್) ಸಂಗೀತ ಕೇಳ್ಮೆ. ದೊಡ್ಡವರ ಸಂಗೀತದ ಗಾಢ ಪ್ರಭಾವ ಅವರ ಮೇಲಾಯಿತು. ತನ್ನದೇ ಆದ ಶೈಲಿಯ ಆವಿರ್ಭಾವವಾಯಿತು.  ಅದೇ ಶ್ರೀಕಂಠನ್ ಬಾನಿ.

ಶ್ರೀಕಂಠನ್ ಅವರ ಕಛೇರಿ ಎಲ್ಲಿ ನಡೆದಿಲ್ಲ! ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರಮುಖ ಸಭೆ- ಸಮ್ಮೇಳನಗಳಲ್ಲೆಲ್ಲಾ ಅವರು ತಮ್ಮ ಗಾನಸುಧೆ ಹರಿಸಿದ್ದಾರೆ. ಅವರ ಕಾರ್ಯಕ್ರಮ ಏರ್ಪಡಿಸುವುದೇ  ಹೆಮ್ಮೆಯ ವಿಷಯ! ಕೇಳುಗರಿಗೆ ಸಂತೋಷ. ಅವರ ಗಾಯನದಲ್ಲಿದ್ದ ಅಂಥ ವಿಶೇಷ ಏನು? ವರ್ಣದಿಂದ ಕಛೇರಿಗೆ ಭದ್ರ ಬುನಾದಿ.

ಒಂದು ಗಣೇಶನ ಕೃತಿಯೊಂದಿಗೆ ಮುಂದುವರಿಕೆ. ಮುಂದೆ ಭಿನ್ನ ರಾಗ-ಕೃತಿಗಳ ಸರಮಾಲೆ. ವೈವಿಧ್ಯಮಯ ರಚನೆಗಳ ಆಯ್ಕೆ. ಸ್ಫುಟವಾದ ಉಚ್ಚಾರಣೆ, ಅರ್ಥಪೂರ್ಣ ಪದ ವಿಂಗಡಣೆ, ಸಂಗೀತಕ್ಕೆ ಸಾಹಿತ್ಯದ ಸಾಂಗತ್ಯ, ಅರ್ಥಭಾವಕ್ಕೆ ಪುಷ್ಟಿ! ಆಲಾಪನೆಯಲ್ಲಿ ಜೀವಸ್ವರಗಳನ್ನು ಮೀಟುತ್ತಾ ರಾಗದ ಅಂತಃಸ್ಸತ್ವದ ದರ್ಶನ. ನೆರವಲ್‌ನಲ್ಲಿ ಸಂಗೀತ- ಸಾಹಿತ್ಯಗಳೆರಡೂ ಪ್ರಜ್ವಲ! ಸ್ವರಪ್ರಸ್ತಾರ ಬರೀ ಲೆಕ್ಕಾಚಾರವಾಗದೆ, ರಾಗಭಾವಕ್ಕೆ ಪೂರಕ. ಯಾವ ಅಂಶವೂ ಅತಿಯಾಗದ ಅವರ ಗಾಯನದಲ್ಲಿ ಒಂದು ಪರಿಪೂರ್ಣತೆಯ ಹೊಳಹು.

ಕಛೇರಿಯ ಕಲೆಗಾರಿಕೆ ಅವರಿಗೆ ಸಹಜವಾಗಿ ಕರಗತ. ಕಲ್ಪಿತ ಸಂಗೀತಕ್ಕಿಂತ ಮನೋಧರ್ಮ - ಸೃಜನಶೀಲತೆಗೆ ವಿಶೇಷ ಪ್ರಾಧಾನ್ಯ. ಇದರಿಂದ ಅವರ ಹಾಡಿಕೆ ಎಂದೂ ನಿತ್ಯ ನೂತನ! ಒಂದೇ ರಾಗವನ್ನು ಅವರು ಹತ್ತು ಸಲ ಹಾಡಿದರೂ, ಅದಕ್ಕೆ (ರಾಗಕ್ಕೆ) ಹತ್ತು ರುಚಿ, ಹತ್ತು ಆಕಾರ, ಹತ್ತು ಬಣ್ಣ. ಪ್ರತಿ ಸಲ ರಾಗ ಹೊಸ ಸೃಷ್ಟಿ. ಇದರಿಂದ ಶ್ರೀಕಂಠನ್ ಅವರ ಕಛೇರಿ ಕಿರಿಯರಿಗೆ ಎಂದೂ ಕೈ ದೀವಿಗೆ. ಅವರ ಕೃತಿ ಭಂಡಾರವೂ ಹೇರಳ. ತ್ರಿಮೂರ್ತಿಗಳ ಕೃತಿಗಳು, ಹರಿದಾಸರ ಪದಗಳು, ಶಿವಶರಣರ ರಚನೆಗಳು, ಭಾವಗೀತೆ - ಹೀಗೆ ನೂರಾರು ರಚನೆಗಳು ಅವರ ಬತ್ತಳಿಕೆ ತುಂಬಿದ್ದವು.

ಬೆಂಗಳೂರು ಗಾಯನ ಸಮಾಜದ ವಾರ್ಷಿಕ (೧೯೮೨) ಸಂಗೀತ ಸಮ್ಮೇಳನದಲ್ಲಿ ಶ್ರೀಕಂಠನ್ ಅವರು ಪ್ರೌಢ ಕಂಠದಿಂದ ಕನ್ನಡ ಕೃತಿಗಳನ್ನು ಹಾಡತೊಡಗಿದರು.  ಪಂಪನಿಂದ ಪು.ತಿ.ನ.ವರೆಗೆ ಕನ್ನಡದ ಪ್ರಸಿದ್ಧ ಕವಿಗಳ ರಚನೆಗಳ ಹಾಡಿಕೆ ಅದು. ಸಾವಿರ ವರ್ಷಗಳ ಕಾವ್ಯಗಳಿಂದ ಆಯ್ದ ಭಾಗಗಳು. ಶಾಸ್ತ್ರೀಯ ಸಂಗೀತ ವೇದಿಕೆಯಿಂದ ಕನ್ನಡ ಕಾವ್ಯ ಗಾಯನ. ಷಟ್ಪದಿ, ಚಂಪೂ, ರಗಳೆ, ಕಂದ, ಸೀಸ ಪದ್ಯಗಳ ಮೇಲೋಗರ. ಕೆಲವು ಕನ್ನಡ ಪದ್ಯಗಳು ಮೊದಲ ಬಾರಿಗೆ ಸಂಗೀತ ಲೇಪನ ಪಡೆದು, ಗಾಯನವಾಗಿ ಜನರನ್ನು ರಂಜಿಸಿದವು. 

ಶ್ರೀಕಂಠನ್ ಅವರು ಈ ಕನ್ನಡ ಗೀತೆಗಳಿಗೆ ರಾಗ ಸಂಯೋಜನೆ ಮಾಡಿ, ಸಂಗೀತ ಮೌಲ್ಯ ತುಂಬಿ, ನಿರೂಪಿಸಿದರು. ಅಂದಿನ ಸಂಗೀತ ಸಮ್ಮೇಳನಾಧ್ಯಕ್ಷ ಬಿ.ವಿ.ಕೆ. ಶಾಸ್ತ್ರಿಗಳಿಂದ ಶ್ರೀಕಂಠನ್ ಅವರಿಗೆ ಶ್ಲಾಘನೆಯ ನುಡಿಗಳು ಸಂದುದು ಸಹಜವೇ. ಶ್ರೀಕಂಠನ್ ಅವರ ಕನ್ನಡಾಭಿಮಾನಕ್ಕೆ ಇನ್ನೂ ಅನೇಕ ಉದಾಹರಣೆಗಳನ್ನು ಕೊಡಬಹುದು. ಹರಿದಾಸರ ಅನೇಕ ದೇವರನಾಮಗಳಿಗೆ ಮಧುರವಾದ ರಾಗ ಸಂಯೋಜನೆ ಮಾಡಿ, ಹಾಡಿ, ಹಾಡಿಸಿ ಅನೇಕ ಕನ್ನಡ ಪದಗಳು ಬೆಳಕು ಕಾಣಲು ಅವರು ಕಾರಣಕರ್ತರಾಗಿದ್ದಾರೆ. ವಿದೇಶಗಳಲ್ಲೂ ಹಾಡಿ, ಕನ್ನಡ ಸಂಗೀತ ಪರಿಮಳ ಪಸರಿಸುವಂತೆ ಮಾಡಿದ್ದಾರೆ.

ಸಾಮಾನ್ಯವಾಗಿ ವಯಸ್ಸಾಗುತ್ತಾ ಬಂದಹಾಗೆ ಗಾಯಕರಿಗೆ ತಮ್ಮ ಗಾಯನದ ಮೇಲಿನ ಹಿಡಿತ ಸಡಿಲವಾಗುತ್ತಾ ಹೋಗುತ್ತದೆ. ಆದರೆ ಶ್ರೀಕಂಠನ್ ಅವರಿಗೆ ವಯಸ್ಸಾದಂತೆಲ್ಲಾ ಪ್ರಾಯ ಬರುತ್ತಿರುವಂತೆ ಭಾಸವಾಗುತ್ತಿತ್ತು! ಕಾರಣ, ವಯಸ್ಸಾದಂತೆ ಅವರ ಕಂಠಬಲ ಕುಗ್ಗಲಿಲ್ಲ; ವೃದ್ಧಿಯಾಗುತ್ತಾ, ಇನ್ನೂ ಪಕ್ವವಾಗುತ್ತಾ ಸಾಗಿತ್ತು! ೯೪ರ ಇಳಿವಯಸ್ಸಿನಲ್ಲೂ ಪ್ರಾಯದ ಗಾಯಕರೂ ನಾಚುವಂತೆ ಹಾಡುತ್ತಿದ್ದುದು - ನಮ್ಮ ಕಣ್ಣ ಬೆಳಸು! ಇದರಿಂದ ಸಮಕಾಲೀನ ಗಾಯಕರಲ್ಲೆಲ್ಲಾ ಜೇಷ್ಠ ಗಾಯಕರಾಗಿ, ಎಲ್ಲ ಕಡೆ ಮಾನಿತರಾದರು.

ಯಾರ ಸಹಾಯವೂ ಇಲ್ಲದೆ ೯೦ರ ನಂತರವೂ ಸಲೀಸಾಗಿ ಓಡಾಡುತ್ತಾ, ಹೊಸ ಕೃತಿಗಳನ್ನು ಕಲಿಯುತ್ತಾ, ಊರಿಂದ ಊರಿಗೆ (ವಿದೇಶಗಳಿಗೂ) ಕಾರ್ಯಕ್ರಮ ನೀಡಲು ಪ್ರವಾಸ ಮಾಡುತ್ತಿದ್ದ ಈ ‘ತರುಣ’ರ ಮನೋಸ್ಥೈರ್ಯ ಅನುಕರಣೀಯ, ಆದರ್ಶಪ್ರಾಯ. ಈಗ್ಗೆ ಕೆಲ ತಿಂಗಳ ಹಿಂದೆ ಚೆನ್ನೈನ ಮ್ಯೂಸಿಕ್ ಅಕಾಡೆಮಿಯಲ್ಲಿ ಶ್ರೀಕಂಠನ್ ಅವರ ಕಾರ್ಯಕ್ರಮ. ಕಛೇರಿ ಮುಗಿದ ತಕ್ಷಣ ಶ್ರೋತೃಗಳು ಎದ್ದು ನಿಂತು ದೀರ್ಘ ಕರತಾಡನ ಮಾಡಿ ತಮ್ಮ ಅತೀವ ಗೌರವವನ್ನು ತೋರಿಸಿದರು. ಅವರ ಶ್ರುತಿಶುದ್ಧ, ಶಾಸ್ತ್ರೀಯ, ಮೌಲಿಕ ಸಂಗೀತ ಎಲ್ಲರ ಗೌರವಕ್ಕೆ ಪಾತ್ರವಾಗಿತ್ತು. ಹೀಗಾಗಿ ಕರ್ನಾಟಕ ಸಂಗೀತದ ಭೀಷ್ಮಾಚಾರ್ಯರಂತೆ ಅವರು ಕಂಗೊಳಿಸುತ್ತಿದ್ದರು.

  ಶ್ರೀಕಂಠನ್ ಅವರು ಬಾನುಲಿ ಸೇರಿ, ಜೀವನದ ಬಹುಭಾಗವನ್ನು ಆಕಾಶವಾಣಿಯ ಏಳಿಗೆಯಲ್ಲೇ ಕಳೆದರು. ನಿಲಯದ ಕಲಾವಿದರಾಗಿ ಸೇರಿ, ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ, ಪ್ರೊಡ್ಯೂಸರ್ ಆಗಿ ನಿವೃತ್ತರಾದರು. ಅಲ್ಲಿ ಅವರು ನಡೆಸಿಕೊಡುತ್ತಿದ್ದ ಸಂಗೀತ ಪಾಠಗಳು (ಗಾನವಿಹಾರ) ಬಹು ಜನಪ್ರಿಯವಾದವು. ಆ ಕಾರ್ಯಕ್ರಮಕ್ಕಾಗಿ ವಾರ ಪೂರ್ತಿ ಕಾದು, ಸಿದ್ಧವಾಗುತ್ತಿದ್ದ ಶ್ರೋತೃಗಳು ದೊಡ್ಡ ಪ್ರಮಾಣದಲ್ಲೇ ಇದ್ದರು. ಹಾಗೆಯೇ ಬೆಳಗಿನ ಗೀತಾರಾಧನ ಕಾರ್ಯಕ್ರಮದಲ್ಲಿ ಬೆಳಕಿಗೆ ತಂದ ಭಕ್ತಿಗೀತೆಗಳು ನಾಡಿನ ಮನೆ ಮಾತಾದವು! ಬಾನುಲಿ ನಾಟಕ, ಸಂಗೀತ ಸಾಮ್ರಾಜ್ಯ, ರಾಷ್ಟ್ರೀಯ ಕಾರ್ಯಕ್ರಮ - ಹೀಗೆ ಭಾಗವಹಿಸದ ಬಾನುಲಿ ಕಾರ್ಯಕ್ರಮವೇ ಇಲ್ಲ.

ಆಕಾಶವಾಣಿಯಲ್ಲಿ ಇವರೊಂದಿಗೆ ಜೊತೆಗೂಡಿದವರು ಶೆಲ್ವಪುಳ್ಳೆ ಅಯ್ಯಂಗಾರ್. (ಇಬ್ಬರಿಗೆ ರುದ್ರಕೋಟೆ ಸಹೋದರರು  ಎಂದು ಸಲಿಗೆಯವರು ಕರೆಯುತ್ತಿದ್ದುದೂ ಉಂಟು!) ಬೋಧಕರಾಗಿ ಶ್ರೀಕಂಠನ್ ಅವರು ಇನ್ನೂ ಬೃಹತ್ ಕೆಲಸ ಮಾಡಿದ್ದಾರೆ. ಯುವ ಆಸಕ್ತರಿಗೆ ಕಠಿಣವಾದರೂ ಕ್ರಮಬದ್ಧ ಶಿಕ್ಷಣ ನೀಡಿ, ಗಾಯಕರ ಒಂದು ಪೀಳಿಗೆಯನ್ನೇ ಅವರು ತರಬೇತುಗೊಳಿಸಿದ್ದಾರೆ. ಮನಸ್ಸು ಮೃದು. ಪಾಠದಲ್ಲಿ ಕಠಿಣ ಶಿಸ್ತು. ಖಚಿತವಾಗಿ ಒಪ್ಪಿಸುವವರಿಗೂ ಶಿಷ್ಯರಿಗೆ ಬಿಡುಗಡೆ ಇಲ್ಲ! ಅಧಿಕೃತ ವರ್ಣಮಟ್ಟು. ಮೋಹಕ ಸಂಗತಿಗಳು.

ಕಷ್ಟವಾದರೂ ಪ್ರೌಢವಾದ ನಿರೂಪಣೆ. ಇದರಿಂದ ಮನಮುಟ್ಟಿದ ಪಾಠ, ಸದಾ ಕಾಲ ನೆನಪಿನಲ್ಲಿ ಹೆಸರಾಗಿರುತ್ತಿತ್ತು. ಶ್ರೀಕಂಠನ್ ಅವರಲ್ಲಿ ಸಂಗೀತ ಕಲಿಯುವುದೇ ಒಂದು ಭಾಗ್ಯ. ಇಂದಿನ ಅನೇಕ ಪ್ರಸಿದ್ಧ ಗಾಯಕರು, ವಾದ್ಯಗಾರರು ಅವರ ಶಿಷ್ಯರೇ  ಎಂಬುದು ನಾಡ ಭಾಗ್ಯ.
ಅವರು ಏಳು ಮಕ್ಕಳ ತಂದೆ. ಧರ್ಮಪತ್ನಿ ಮೈತ್ರೇಯಿಯ ಜೋಪಾನದ ಆರೈಕೆ ಅವರಿಗೆ. ಉದ್ದಕ್ಕೂ ಮಗ ರಮಾಕಾಂತನ ಸಹಗಾಯನ. ಹಸನ್ಮುಖಿ. ಮಿತಭಾಷಿ. ಆದರೆ ಆಡಿದ ಮಾತಿನಲ್ಲಿ ತೂಕ. ಸಂಗೀತದಲ್ಲೂ, ನಿಜ ಜೀವನದಲ್ಲೂ ಗಾಂಭೀರ್ಯ.

ಅವರಿಗೆ ಪ್ರಶಸ್ತಿ -ಗೌರವಗಳು ಹೊಸದೇನಲ್ಲ. ಅವರು ನೆನಪಿಡಲಾಗದಷ್ಟು ಬಿರುದುಗಳು ಅವರ ಕೊರಳನ್ನು ಅಲಂಕರಿಸಿವೆ. ಸಂಗೀತ ಕಲಾರತ್ನ (ಬೆಂಗಳೂರು ಗಾಯನ ಸಮಾಜ) ಮತ್ತು ಸಂಗೀತ ಕಳಾನಿಧಿ  ಎರಡೂ ಗೌರವಕ್ಕೆ ಪಾತ್ರರಾದ ಕೆಲವೇ ಕಲಾವಿದರಲ್ಲಿ ಅವರೂ ಒಬ್ಬರು.

ಕೇಂದ್ರ ಹಾಗೂ  ರಾಜ್ಯ ಸಂಗೀತ ಅಕಾಡೆಮಿಗಳ ಪ್ರಶಸ್ತಿ, ಕನಕ-ಪುರಂದರ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್– ಸಂದ ಮಾನ ಸನ್ಮಾನಗಳಲ್ಲಿ ಇವು  ಕೆಲವು ಮಾತ್ರ. ಬಹಳ ತಡವಾಗಿಯಾದರೂ ಶ್ರೀಕಂಠನ್ ಅವರಿಗೆ ಪದ್ಮಭೂಷಣ ನೀಡಿ, ಸರ್ಕಾರ ತನ್ನ ಗೌರವ ಉಳಿಸಿಕೊಂಡಿತು. ಏಳು ದಶಕಗಳಿಗೂ ಹೆಚ್ಚು ಕಾಲ ಮಧುರ ಸಂಗೀತ ನೀಡಿ ನಾದ ರಸಾಸ್ವಾದನೆ ಮಾಡಿಸಿ, ಆದರ್ಶ ಗುರು, ಗಾಯಕರಾದ ನಾದಯೋಗಿ ಅವರು ಈ ತಿಂಗಳ ೧೭ರಂದು ನಾದಲೋಕದಲ್ಲೇ ಲೀನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT