ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಕನ್ನಡದ ಕಂದ; ಆದರೆ ಕನ್ನಡ ಬಳಸುವುದಿಲ್ಲ!

ಮುಕ್ತ ಛಂದ
Last Updated 28 ಜೂನ್ 2014, 19:30 IST
ಅಕ್ಷರ ಗಾತ್ರ

1.
ನಾನು ಹೊಸತಾಗಿ ನೌಕರಿಗೆ ಸೇರಿದ ಸಂದರ್ಭ. ಕನ್ನಡ ಮಾಧ್ಯದಲ್ಲಿ ಸಾಲಿ ಕಲಿತ ನಾನು ಸಹಜವಾಗಿ ನನ್ನ ಎಲ್ಲ ಕಚೇರಿ ವ್ಯವಹಾರದಲ್ಲಿ ಕನ್ನಡವನ್ನು ಬಳಸಬೇಕು ಅಂದುಕೊಂಡಿದ್ದೆ. ಒಮ್ಮೆ ಕೇಂದ್ರ ಕಚೇರಿಗೆ ಪತ್ರವೊಂದನ್ನು ಬರೆಯುವಾಗ ‘ಸಿರಿಗನ್ನಡಂ ಗೆಲ್ಗೆ’ ಎಂಬ ತಲೆಬರಹವನ್ನು ಹಾಕಿ ಪತ್ರವನ್ನು ಕನ್ನಡದಲ್ಲಿ ಸಿದ್ಧಪಡಿಸಿದೆ. ನನ್ನ ಕನ್ನಡ ಪತ್ರವನ್ನು ನೋಡಿ ಅವರು ಶಹಬ್ಬಾಸ್ ಹೇಳುತ್ತಾರೆ ಎಂದು ಮನಸ್ಸಿನೊಳಗೇ ಖುಷಿಗೊಂಡಿದ್ದೆ. ಹಳ್ಳಿಯ ನಿರಕ್ಷರಕುಕ್ಷಿಗೂ ಇಂಗ್ಲೀಷ್‌ನಲ್ಲೇ ಪತ್ರ ಬರೆಯುವ ಪರಂಪರೆ ಅಲ್ಲಿತ್ತು! ಇನ್ನೇನು ಕಚೇರಿ ಮುಖ್ಯಸ್ಥರ ಸಹಿ ಪಡೆದು ಅದನ್ನು ರವಾನಿಸಬೇಕು ಎಂದು ಅವರ ಬಳಿಗೆ ಪತ್ರವನ್ನು ತೆಗೆದುಕೊಂಡು ಹೋದೆ.

ಕನ್ನಡದಲ್ಲಿರುವ ಪತ್ರವನ್ನು ನೋಡಿ ‘ಏನಿದು?’ ಎಂದರು. ವಿಷಯವನ್ನು ಕನ್ನಡ ಸಾಲಿ ಹುಡುಗನಂತೆ ನಾನೇ ಗಟ್ಟಿಯಾಗಿ ಓದಿ ಹೇಳಿದೆ. ನನ್ನ ಮೇಲಧಿಕಾರಿ ಅಷ್ಟೆ ಗಡಸು ದ್ವನಿಯಲ್ಲಿ ‘You don’t know English?  What is your qualification? ಹೋಗಿ ಇಂಗ್ಲೀಷ್‌ನಲ್ಲಿ ಪತ್ರ ಮಾಡಿಕೊಂಡ ಬನ್ನಿ’ ಎಂದರು. ‘ಅಲ್ಲಾ ಸಾ.. ಕಚೇರಿ ವ್ಯವಹಾರ ಕನ್ನಡದಲ್ಲೇ ಇರಬೇಕೆಂದು ಕರ್ನಾಟಕ ಸರಕಾರದ ಆದೇಶವಿದೆ’ ಎಂದೆ. ಅದಕ್ಕೆ ಅವರು ಮತ್ತಷ್ಟು ಕ್ರೋಧಗೊಂಡು ‘ಇಲ್ಲಿ ನಾನು ಬಾಸ್, ನೀವು ವ್ಯವಸ್ಥಾಪಕರು’ ಎಂದು ಗದರಿಸಿ ಕಳಿಸಿದರು. ಮನಸ್ಸು ಹತಾಶಗೊಂಡಿತ್ತು. ಕಚೇರಿ ಸಿಬ್ಬಂದಿ ನನ್ನ ಅವಸ್ಥೆ ನೋಡಿ ನಗುತ್ತಿದ್ದರು. ‘ಸಾಹೇಬ್ರಿಗೆ ಕನ್ನಡ ಬರಲ್ಲಾ ಸಾರ್, ಅವರು ಗಡಿನಾಡಿನವರು’ ಎಂದು ಅವರ ಊರ ಹೆಸರು ಹೇಳಿದರು. ಅಂದಿನಿಂದ ಇಂದಿನವರೆಗೂ ಕರ್ನಾಟಕದಲ್ಲಿದ್ದರೂ ಕನ್ನಡದಲ್ಲಿ ಕಚೇರಿ ವ್ಯವಹಾರ ಮಾಡದಂತಹ ಅನಿವಾರ್ಯತೆಯನ್ನು ಬೆಳೆಸಿಕೊಂಡಿದ್ದೇನೆ.

ಧಾರವಾಡದಲ್ಲಿ ನೌಕರಿ ಮಾಡುವಾಗ ಮೇಲಾಧಿಕಾರಿಗಳಿಗೆ ನನ್ನ ಬಗ್ಗೆ ಬಹಳ ಪ್ರೀತಿ ಇತ್ತು. ಆ ಸಲಿಗೆಯನ್ನು ಬಳಸಿಕೊಂಡು ಮತ್ತೊಮ್ಮೆ ಕನ್ನಡದಲ್ಲಿ ಕಚೇರಿ ವ್ಯವಹಾರ ಮಾಡಲು ಯತ್ನಿಸಿದೆ. ಅವರು ನಯವಾಗಿ ‘ಅಲ್ರೀ ನಿಮಗ ಕನ್ನಡ ಬರುತ್ತಿದೆ ಎಂದು ಉಳಿದವರಿಗೆಲ್ಲ ಕನ್ನಡ ಬರಬೇಕೆಂದೇನಿಲ್ಲವಲ್ಲಾ’ ಎಂದು ಹೇಳಿ ನನ್ನ ಉತ್ಸಾಹಕ್ಕೆ ತಣ್ಣೀರು ಎರಚಿದರು. ಅವರ ಮೇಲೆ ಇದ್ದ ನನ್ನ ಅಭಿಮಾನವೆಲ್ಲ ಹಾಳಾಗಿ ಹೋಯಿತು. ಈ ನನ್ನ ಹುಚ್ಚು ಪ್ರಯತ್ನದ ಮಾಹಿತಿ ಕೇಂದ್ರ ಕಚೇರಿವರೆಗೆ ಹೋಯಿತು. ಅಲ್ಲಿದ್ದ ನನ್ನ ಹಿತೈಷಿಯೊಬ್ಬರು ‘ಮೇಲಿನವರು ಹೇಳಿದಷ್ಟು ಕೇಳಿಕೊಂಡು ನೌಕರಿ ಮಾಡು. ಕೆಲವರು ಇಂಥಾದ್ದನ್ನ ಕಾಯ್ತಿರ್ತಾರ, ಸುಮ್ನ ಯಾಕ ತೊಂದ್ರಿ ಮಾಡ್ಕೋತಿ’ ಎಂದು ಬುದ್ದಿವಾದ ಹೇಳಿದರು. ಅವತ್ತಿನಿಂದ ಕನ್ನಡಕ್ಕೆ ಎಳ್ಳುನೀರು ಬಿಟ್ಟೆ. ಇತ್ತೀಚೆಗೆ ವಾತಾವರಣ ಸ್ವಲ್ಪ ಬದಲಾದಂತೆ ಕಾಣುತ್ತದೆ. ಸರ್ಕಾರದ ಮುತವರ್ಜಿಯಿಂದ ಕನ್ನಡದ ಬಳಕೆಗೆ ಹೆಚ್ಚು ಒತ್ತಡ ಉಂಟಾಗುತ್ತಿದೆ. ಆದರೂ ತೃಪ್ತಿಕರವಾಗಿಲ್ಲ.

2
ನಾನು ಕನ್ನಡದ ಓದುಗ ಮತ್ತು ಬರಹಗಾರ. ನನ್ನ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಸಾಲಿ ಕಲಿಯಲಿ. ನಮ್ಮ ಭಾಷೆಗೆ ಇರುವ ಸತ್ವ, ಸ್ವಾದ, ಮತ್ತು ಶ್ರೀಮಂತಿಕೆಯನ್ನು ಅವರು ಅನುಭವಿಸಲಿ ಎಂಬ ಹಂಬಲದಿಂದ ಮಗಳನ್ನು ಕನ್ನಡ ಮಾಧ್ಯಮ ಸಾಲಿಗೆ ಸೇರಿಸಿದೆ. ‘ಮಗುವಿನ ಬುದ್ಧಿ ಮತ್ತು ಆತ್ಮವಿಕಾಸವಾಗಬೇಕಾದರೆ ಅದು ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಮಾತ್ರ ಸಾಧ್ಯ’ ಎಂದು ನಂಬಿದವನು ನಾನು. ಅದನ್ನು ಎಲ್ಲರಿಗೂ ಮನಗಾಣಿಸಲು ಯತ್ನಿಸಿ ಸೋತಿದ್ದೇನೆ. ನನ್ನ ಮಗಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ದಕ್ಕಾಗಿ ನನ್ನ ಅನಕ್ಷರಸ್ಥ ಅಪ್ಪ ಅವ್ವನಿಂದ, ತಂಗಿಯರಿಂದ, ಸಂಬಂಧಿಕರಿಂದ ಟೀಕೆಗೆ ಗುರಿಯಾಗಿದ್ದೇನೆ. ನನ್ನ ಹೆಂಡತಿಯಂತೂ ಪ್ರತಿರೋಧ ಮಾಡಿ ಸೋತು ಸುಮ್ಮನಾಗಿದ್ದಾಳೆ. ಸಂದರ್ಭ ಸಿಕ್ಕಾಗಲೆಲ್ಲ ನನ್ನನ್ನು ಹಂಗಿಸುತ್ತಾಳೆ. ಬಂಧುಬಳಗದ ಮುಂದೆ ನನ್ನ ಕನ್ನಡದ ಹುಚ್ಚುತನದ ಬಗ್ಗೆ ಆಡಿಕೊಳ್ಳುತ್ತಾಳೆ. ನನ್ನ ಮಗಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ದಕ್ಕಾಗಿ ಎದೆ ಉಬ್ಬಿಸಿ ಹೆಮ್ಮೆಯಿಂದ ಹೇಳಿಕೊಳ್ಳಲು ಯತ್ನಿಸುತ್ತೇನೆ. ಅಪಹಾಸ್ಯಕ್ಕೆ ಈಡಾಗಿ ಸುಮ್ಮನಾಗುತ್ತೇನೆ.

ವರಕವಿ ಬೇಂದ್ರೆ, ಶಂಬಾ ಜೋಶಿ, ಆಲೂರು ವೆಂಕಟರಾಯ – ಅವರಂತಹ ಕನ್ನಡ ಪ್ರಾತಃಸ್ಮರಣಿಯ ಸಾಹಿತಿಗಳು ಬಾಳಿಬದುಕಿದ ಸಾಧನಕೇರಿಯಲ್ಲಿ ನಾನು ವಾಸವಾಗಿದ್ದೇನೆ. ಆದರೆ ಈ ಯಾವ ಕವಿವರ್ಯರು ಜನರನ್ನು ಪ್ರಭಾವಿಸಿದಂತೆ ಕಾಣುತ್ತಿಲ್ಲ. ನಮ್ಮ ಮನೆಯ ಕೆಲಸದಾಕೆಯ ಮಗ ಸಹ ಇಂಗ್ಲೀಷ್ ಮಾಧ್ಯಮ ಶಾಲೆಗೆ ಹೋಗುತ್ತಾನೆ! ಬೀದಿಯ ಮಕ್ಕಳೊಂದಿಗೆ ಆಟವಾಡುವ ನನ್ನ ಮಗಳು ತನ್ನಓರಗೆಯ ಮಕ್ಕಳು ಮಾತನಾಡುವ, ಉಚ್ಚರಿಸುವ ಇಂಗ್ಲೀಷ್ ಪದಗಳ ಅರ್ಥವಾಗದೆ ಅಮಾಯಕಳಂತೆ ಬಂದು ‘ಅಪ್ಪಾ ಹಾಗಂದರೇನು’ ಎಂದು ನನ್ನನ್ನು ಕೇಳುತ್ತಾಳೆ. ನನಗೆ ಅವಳ ಸ್ಥಿತಿ ಕಂಡು ಮರುಕವೆನಿಸುತ್ತದೆ.

ನನ್ನ ಹುಚ್ಚು ಅಭಿಮಾನಕ್ಕೆ ಅವಳ ಭವಿಷ್ಯವನ್ನು ಹಾಳುಮಾಡುತ್ತಿದೇನೆಯೇ ಎನ್ನಿಸುತ್ತಿದೆ.  ನನ್ನಮಗಳು ಮಾತ್ರ ‘ಇರ್ಲಿ ಬಿಡಪ್ಪ, ನಾ ಕನ್ನಡ ಸಾಲೀನ ಕಲಿತೇನಿ’ ಎಂದು ನನ್ನನ್ನು ಸಮಾಧಾನಪಡಿಸುತ್ತಾಳೆ. ನನ್ನ ಮಗಳ ಮಾತಿನಿಂದ ನನ್ನೊಳಗೊಬ್ಬ ಹಟವಾದಿ, ಛಲಗಾರ ಹೂಂಕರಿಸುತ್ತಾನೆ. ಕನ್ನಡ ಸಾಲಿ ಕಲಿತ ನನ್ನ ಮಗಳು ದೊಡ್ಡ ಸಾಧನೆ ಮಾಡಬೇಕು. ಸಂತೋಷದ, ನೆಮ್ಮದಿಯ, ಅಭಿಮಾನದ ಬದುಕು ಬಾಳಬೇಕು. ಅದನ್ನೆಲ್ಲ ನ್ನನ್ನನ್ನು ಅಣಕಿಸುವ ಈ ಜನರಿಗೆ ತೋರಿಸಬೇಕು ಎಂದು ಆಶಾವಾದಿಯಾಗಿ ಹೋರಾಡುತ್ತೇನೆ.

3
ಶಾಲೆ, ಆಸ್ಪತ್ರೆ, ಅಂಗಡಿ, ಮಾಲ್‌– ಹೀಗೆ ಎಲ್ಲಿ ಹೋದರೂ ಇಂಗ್ಲೀಷ್ ವ್ಯವಹಾರಿಕ ಭಾಷೆಯಾಗುತ್ತಿದೆ. ದೇಶಿ ಕನ್ನಡ ಮಾತನಾಡುವ ನನ್ನನ್ನು, ನನ್ನ ಮಗಳನ್ನು ಜನ ಒಂದು ರೀತಿಯ ತಾತ್ಸಾರದಿಂದ ನೋಡುತ್ತಾರೆ. ಯಾವುದೋ ಹಳ್ಳಿಯ ಗಮಾರರು ಎನ್ನುವಂತೆ ಗೇಟ್ ಕೀಪರ್ ಸಹ ನೋಡುತ್ತಾನೆ. ಅಥವಾ ಹಾಗೆ ನಾನು ಭ್ರಮಿಸಿಕೊಳ್ಳುತ್ತೇನೆ. ನನ್ನ ಹೆಂಡತಿ ಈಗಲೇ ತೀರ್ಮಾನ ಮಾಡಿದ್ದಾಳೆ– ನಮ್ಮ ಮಗನನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗೇ ಸೇರಿಸಬೇಕೆಂದು. ನಮ್ಮ ಮನೆಯಲ್ಲಿ ‘ನನ್ನ ಕನ್ನಡ’ ನನ್ನೊಂದಿಗೆ ಮುಗಿದು ಹೋಗುತ್ತದೆಯೋ ಏನೋ ಎಂದು ಸಂಕಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT