ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೇನು ಭಾರತದ ಗುಲಾಮರಲ್ಲ: ಪಾಕ್

Last Updated 19 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ‘ನಾವೇನು ಭಾರತದ ಗುಲಾಮರಲ್ಲ. ಕಾಶ್ಮೀರ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯುವಲ್ಲಿ ನಾವು ಸಮಾನ ಪಾಲುದಾರಿಕೆ ಹೊಂದಿದ್ದೇವೆ’ ಎಂದು ಪಾಕಿಸ್ತಾನ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಪಾಕಿಸ್ತಾನದ ಹೈಕಮಿಷನರ್‌ ಭೇಟಿಯಾ­ಗಿದ್ದರಿಂದ ಉಭಯ ರಾಷ್ಟ್ರಗಳ ವಿದೇ­ಶಾಂಗ ಕಾರ್ಯದರ್ಶಿಗಳ ಮಾತು­ಕತೆ­­ಯನ್ನು ಭಾರತ ರದ್ದುಗೊಳಿಸಿದ ಮರುದಿನವೇ ಪಾಕಿಸ್ತಾನ ಹೀಗೆ ತಿರುಗೇಟು ನೀಡಿದೆ.

ಕಾಶ್ಮೀರ ಭಾರತದ ಅಂಗವಲ್ಲ. ಅದು ಸಮಸ್ಯಾತ್ಮಕ ಪ್ರದೇಶ ಎಂದೂ ಪಾಕಿಸ್ತಾನ ಹೇಳಿದೆ. ‘ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನರ್‌ ಅಬ್ದುಲ್‌ ಬಸಿತ್‌ ಭಾರತದ ಆಂತರಿಕ ವ್ಯವಹಾರ­ಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ’ ಎಂದು ಪಾಕಿಸ್ತಾನ ದ ವಿದೇಶಾಂಗ ವ್ಯವಹಾರಗಳ ಸಚಿ­ವಾಲ­ಯದ ವಕ್ತಾರೆ ತಸ್ನೀಮ್‌ ಅಸ್ಲಮ್‌ ಸ್ಪಷ್ಟಪಡಿಸಿದ್ದಾರೆ.

‘ಹುರಿಯತ್‌ ನಾಯಕರ ಜತೆ ಪಾಕಿ­ಸ್ತಾನ ಮಾತುಕತೆ ನಡೆಸುತ್ತಿ­ರುವುದು ಇದೇ ಮೊದಲಲ್ಲ.  ದಶಕಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಇದರಲ್ಲಿ ಹೊಸದೇನಿದೆ’ ಎಂದೂ ಅವರು ಪ್ರಶ್ನಿಸಿದ್ದಾರೆ. ದಶಕಗಳಷ್ಟು ಹಳೆಯದಾದ ಕಾಶ್ಮೀರ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಅರ್ಥಪೂರ್ಣ ಚರ್ಚೆಗೆ ಚಾಲನೆ ನೀಡಲು ಪಾಕ್ ಹುರಿಯತ್‌ ನಾಯಕರ ಜತೆ ಮಾತು­ಕತೆಗೆ ಮುಂದಾ­ಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

‘ಈ ಬೆಳವಣಿಯಿಂದ ಉಭಯ ರಾಷ್ಟ್ರಗಳ ಉತ್ತಮ ಸಂಬಂಧ ವೃದ್ಧಿ ಪ್ರಯತ್ನಗಳಿಗೆ ಭಾರಿ ಹಿನ್ನಡೆ­ಯಾಗಿದೆ’ ಎಂದು ಅಸ್ಲಮ್‌ ಕಳವಳ ವ್ಯಕ್ತಪಡಿಸಿದ್ದಾರೆ. 

ಅಮೆರಿಕ ಪ್ರತಿಕ್ರಿಯೆ:‘ಭಾರತ–ಪಾಕಿಸ್ತಾನ ಮಾತುಕತೆ ರದ್ದಾಗಿರುವ ಬೆಳವಣಿಗೆ ದುರ್ದೈವದ ಸಂಗತಿ’ ಎಂದು ಅಮೆರಿಕ ಪ್ರತಿಕ್ರಿಯಿಸಿದೆ. ಉಭಯ ರಾಷ್ಟ್ರಗಳು ದ್ವಿಪಕ್ಷೀಯ ಸಂಬಂಧ ವೃದ್ಧಿಯ ಪ್ರಯತ್ನವನ್ನು ಇಲ್ಲಿಗೆ ಕೈಬಿಡಬಾರದು. ಈ ಘಟನೆಯನ್ನು ಮರೆತು ಮುಂದುವರಿ­ಯಬೇಕು ಎಂದು  ಸಲಹೆ ಮಾಡಿದೆ. 

ಅಂತರರಾಷ್ಟ್ರೀಯ ಸಮಸ್ಯೆ: ಈ ನಡುವೆ, ಪಾಕಿಸ್ತಾನದ ಹೈಕಮಿಷನರ್‌ ಅಬ್ದುಲ್‌  ಬಸಿತ್‌ ಜತೆ ಮಾತುಕತೆ ನಡೆಸಲು ಹುರಿಯತ್‌ ನಾಯಕರಾದ ಸೈಯದ್‌ ಅಲಿ ಶಾ ಗಿಲಾನಿ, ಮಿರ್ವೇಜ್‌ ಉಮರ್‌ ಫಾರೂಕ್‌, ಜಮ್ಮು ಮತ್ತು ಕಾಶ್ಮೀರ್‌ ಲಿಬರೇಶನ್‌ ಫ್ರಂಟ್‌ ನಾಯಕ ಮೊಹಮ್ಮದ್‌ ಯಾಸಿನ್‌ ಮಲಿಕ್‌ ದೆಹಲಿಗೆ ಬಂದಿದ್ದಾರೆ.

‘ಭಾರತ ಸರ್ಕಾರ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ರದ್ದು ಪಡಿಸಿರು­ವುದು ಪ್ರಜಾತಂತ್ರ ವಿರೋಧಿ ಕ್ರಮ’ ಎಂದು ಅವರು  ಸುದ್ದಿಗಾರರಿಗೆ ತಿಳಿಸಿದರು. ‘ಕಾಂಗ್ರೆಸ್‌  ಮತ್ತು ಅಟಲ್‌ ಬಿಹಾರಿ ವಾಜಪೇಯಿ ಆಡಳಿತದಲ್ಲೂ ನಾವು ಪಾಕಿಸ್ತಾನದ ಹೈಕಮಿಷನರ್‌ ಜತೆ ಮಾತುಕತೆ ನಡೆಸಿದ್ದೇವೆ.  ಮಾತುಕತೆ ರದ್ದು ಮಾಡಿರುವ ಕ್ರಮ ಖಂಡಿತ ಸಮರ್ಥನೀಯವಲ್ಲ’ ಎಂದು  ಪ್ರತಿಕ್ರಿಯಿಸಿದರು.

‘ನಮಗೆ ನೀಡಿದ  ಭರವಸೆಯನ್ನು ಈಡೇರಿಸದ ಹೊರತು ಕಾಶ್ಮೀರ ಸಮಸ್ಯೆಗೆ ಪರಿಹಾರ ಇಲ್ಲ.  ಭಾರತ ಸರ್ಕಾರ ಕಾಶ್ಮೀರ ಸಮಸ್ಯೆ ಬಗೆಹರಿಸಲು  ಪ್ರಯತ್ನ ಮಾಡುವ ಬದಲು  ಬಲ ಪ್ರಯೋಗಿಸಿ  ಹತ್ತಿಕ್ಕಲು ಯತ್ನಿಸುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ. 

‘ಮಾತುಕತೆ ರದ್ದು ಮಾಡುವ ಮೂಲಕ ಭಾರತ ಅತಿರೇಕದ ಪ್ರತಿಕ್ರಿಯೆ ನೀಡಿದೆ. ಕಾಶ್ಮೀರ ಸಮಸ್ಯೆಗೆ ಶಾಂತಿ­ಯುತ ಮತ್ತು ರಾಜಕೀಯ ಪರಿಹಾರದ ಹೊರತು ಅನ್ಯ ಮಾರ್ಗವಿಲ್ಲ’ ಎಂದು ಮತ್ತೊಬ್ಬ ಹುರಿಯತ್‌ ನಾಯಕ ಮಿರ್ವೇಜ್‌ ಉಮರ್‌ ಫಾರೂಕ್‌ ಪ್ರತಿಕ್ರಿಯಿಸಿದರು.

ಕೇಂದ್ರದ ವಿರುದ್ಧ ಕಿಡಿ:ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್‌ ಕಾನ್ಫರೆನ್ಸ್ ಮತ್ತು ವಿರೋಧ ಪಕ್ಷವಾದ ಪಿಡಿಪಿ, ಕೇಂದ್ರ ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿವೆ.

ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಜನತೆಯ ಹಿತ­ದೃಷ್ಟಿಯಿಂದ  ಈ ಬೆಳವಣಿಗೆ ದುರದೃಷ್ಟಕರ ಎಂದು ನ್ಯಾಷನಲ್‌ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ. ‘ಇಸ್ಲಾಮಾಬಾದ್‌ ಮತ್ತು ದೆಹಲಿಯಲ್ಲಿ ಕುಳಿತವರಿಗೆ ಗಡಿಯಲ್ಲಿಯ ಗುಂಡು ಹಾಗೂ ಬಾಂಬ್‌ಗಳ ಸದ್ದು ಕೇಳಿಸುವುದಿಲ್ಲ. ಇಲ್ಲಿಯ ಜನರ ಕಷ್ಟ, ನೋವುಗಳು ಅವರಿಗೆ ಅರ್ಥವಾಗುವುದಿಲ್ಲ’ ಎಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಕಿಡಿ ಕಾರಿದ್ದಾರೆ. 

ಕಾಶ್ಮೀರ ಭಾರತದ ಅಂಗವಲ್ಲ. ಅದು ಸಮಸ್ಯಾತ್ಮಕ ಪ್ರದೇಶ

– ತಸ್ನೀಮ್‌ ಅಸ್ಲಮ್‌, ಪಾಕ್ ವಿದೇಶಾಂಗ   ವಕ್ತಾರೆ

ಕಾಶ್ಮೀರ  ಅಂತರ­ರಾಷ್ಟ್ರೀಯ ಸಮಸ್ಯೆಯೇ ಹೊರತು ಭಾರತದ ಆಂತರಿಕ ಸಮಸ್ಯೆ ಅಲ್ಲ
– ಸೈಯದ್‌ ಅಲಿ ಶಾ ಗಿಲಾನಿ, ಹುರಿಯತ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT