ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಘಂಟು ಕಾರ್ಯಕ್ಕೆಂದೇ ದೀರ್ಘಾಯುಷ್ಯ

Last Updated 28 ಆಗಸ್ಟ್ 2013, 19:48 IST
ಅಕ್ಷರ ಗಾತ್ರ

ಬೆಂಗಳೂರು: `ನಿಘಂಟು ಕಾರ್ಯದ ಮೂಲಕ ಭಾಷಾ ಸೇವೆ ಮಾಡಲೆಂದೇ ದೇವರು ನನಗೆ ದೀರ್ಘಾಯುಷ್ಯ ಕೊಟ್ಟಿರಬಹುದು' ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಟಕಸುಬ್ಬಯ್ಯ ಹೇಳಿದರು.

ವರ್ಲ್ಡ್ ಅಕಾಡೆಮಿ ಆಫ್ ಸೈನ್ಸ್, ಹ್ಯುಮಾನಿಟೀಸ್, ಎಜುಕೇಷನ್ ಅಂಡ್ ಲಿಟರೇಚರ್ (ವಾಶೆಲ್) ಮತ್ತು ಶಿರಡಿ ಸಾಯಿಬಾಬಾ ಜನಹಿತ ಟ್ರಸ್ಟ್ ನಗರದಲ್ಲಿ ಬುಧವಾರ ಆಯೋಜಿಸಿದ್ದ `ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ 101ನೇ ವರ್ಷದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಬ್ಬ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ನನ್ನೊಂದಿಗೆ ಓದಿದ ಹಾಗೂ ನನ್ನ ಜತೆಗೆ ಉಪನ್ಯಾಸಕರಾಗಿ ಕೆಲಸ ಮಾಡಿದ ಯಾರೂ ಇಂದು ಬದುಕಿಲ್ಲ. ನಾನು ಎಲ್ಲೇ ಹೋದರೂ ನನ್ನ ಓರಗೆಯ ಯಾರಾದರೂ ಸಿಗಬಹುದೇನೋ ಎಂದು ಕಣ್ಣುಗಳು ಹುಡುಕಾಡುತ್ತವೆ. ಆದರೆ, ಹಿಂದೆ ನನ್ನ ಜತೆಗಿದ್ದ ಯಾರೂ ಸಿಗುವುದಿಲ್ಲ. ಬಹುಶಃ ನಿಘಂಟಿನ ಕಾರ್ಯಕ್ಕಾಗಿಯೇ ದೇವರು ನನಗೆ ದೀರ್ಘಾಯುಷ್ಯ ನೀಡಿರಬಹುದು' ಎಂದು ಅವರು ನುಡಿದರು.

`ಉಪನ್ಯಾಸಕನಾಗಿ ನಿವೃತ್ತನಾದ ನಂತರ 25 ವರ್ಷಗಳ ಕಾಲ ನಿಘಂಟು ಕಾರ್ಯದಲ್ಲಿ ತೊಡಗಿಕೊಂಡೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಕಚೇರಿ ನನ್ನ ಕರ್ಮಭೂಮಿಯಾಗಿತ್ತು. ಎಂಟು ಸಂಪುಟಗಳ ನಿಘಂಟನ್ನು ಸಿದ್ಧ ಪಡಿಸಿದ ಕಾರ್ಯ ನಾನು ಕನ್ನಡಕ್ಕೆ ಮಾಡಿದ ಅಲ್ಪ ಸೇವೆ. `ಪ್ರಜಾವಾಣಿ'ಯಲ್ಲಿ 18 ವರ್ಷಗಳ ಕಾಲ `ಇಗೋ ಕನ್ನಡ' ಅಂಕಣ ಬರೆದೆ. ಮೊದಲ ಬಾರಿಗೆ ಅಧ್ಯಾಪಕರಿಂದ ಸುಮಾರು 200 ಪತ್ರಗಳು ಬಂದಿದ್ದವು' ಎಂದು ನೆನಪಿಸಿಕೊಂಡರು.

`ಭಾಷೆಯ ಬಗೆಗಿನ ಅರಿವು ವಿಸ್ತರಿಸಲು `ಇಗೋ ಕನ್ನಡ' ಅಂಕಣ ಸಹಕಾರಿಯಾಗಿತ್ತು. ಮೂರು ಸಂಪುಟಗಳಲ್ಲಿ ಪ್ರಕಟವಾಗಿದ್ದ `ಇಗೋ ಕನ್ನಡ' ಪುಸ್ತಕ, ಈಗ ಒಂದೇ ಸಂಪುಟದಲ್ಲಿ ಹೊರ ಬರಲು ಸಿದ್ಧವಾಗುತ್ತಿದೆ ಎಂದು ಹೇಳಿದರು.

`ನನಗೆ ನೂರು ವರ್ಷವಾದರೂ ಇಂದಿಗೂ ಆರೋಗ್ಯ ಚೆನ್ನಾಗಿದೆ. ಕಣ್ಣು, ಕಿವಿ, ಬಾಯಿ ಚೆನ್ನಾಗಿ ಕೆಲಸ ಮಾಡುತ್ತಿವೆ. ಆದರೆ, ಇರುವ ಒಂದು ಕೊರತೆ ಎಂದರೆ ೀರಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಮೊದಲು ವಾಯುವಿಹಾರಕ್ಕೆ ಹೋಗುವಾಗ ಓಡುತ್ತಿದ್ದೆ' ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಶಿಕ್ಷಕರಿಗೆ `ವಿದ್ಯಾಶ್ರೀ ರತ್ನ' ಹಾಗೂ ವಿದ್ಯಾರ್ಥಿಗಳಿಗೆ `ಬಾಲಶ್ರೀ ರತ್ನ' ಪ್ರಶಸ್ತಿ ವಿತರಿಸಲಾಯಿತು. ಸಂಘದ ಅಧ್ಯಕ್ಷ ಚಿನ್ನಸ್ವಾಮಿ ಜಗನ್ನಾಥ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT