ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮಊಟದ ತಟ್ಟೆಯಲ್ಲೆಷ್ಟು ಅನ್ನ ವ್ಯರ್ಥವಾಗುತ್ತಿದೆ?

ಅಕ್ಷರ ಗಾತ್ರ

ಜಗತ್ತು ಮನುಷ್ಯನ ಸೇವನೆಗೆಂದು ಉತ್ಪಾದಿಸಿದ ಆಹಾರ ಪದಾರ್ಥಗಳ ಮೂರನೇ ಒಂದು ಭಾಗ ವ್ಯರ್ಥವಾಗುತ್ತಿದೆ! ಅಂದರೆ ಸರಿ ಸುಮಾರು 100 ಕೋಟಿ 3 ಲಕ್ಷ  ಟನ್‌ಗಳು ! ಇದು ಜಗತ್ತಿನ ಆಹಾರ ಧಾನ್ಯಗಳ ಉತ್ಪಾದನೆಯ ಅರ್ಧಕ್ಕಿಂತಲೂ ಹೆಚ್ಚು! ಹೆಚ್ಚು ಹೆಚ್ಚು ಕೀಟಗಳನ್ನು ಆಹಾರ ರೂಪದಲ್ಲಿ ಸೇವಿಸುವಂತೆ ನೀಡಿದ ಆಸ್ಟ್ರೇಲಿಯಾದ ಕರೆಗೆ ವಿಶ್ವಸಂಸ್ಥೆ ದನಿಗೂಡಿಸಿದೆ.

ಭಾರತೀಯ ಮದುವೆಗಳಲ್ಲಿ ಪ್ರತಿ ವರ್ಷ ಸುಮಾರು 3000 ಟನ್ ಸೇವಿಸಲು ಯೋಗ್ಯ ಆಹಾರ ಕಸದ ತೊಟ್ಟಿಗಳನ್ನು ಸೇರುತ್ತಿದೆ ! ಜಗತ್ತಿನ ಹಲವು ಭಾಗಗಳಲ್ಲಿ ಮಕ್ಕಳು ಆಹಾರವಿಲ್ಲದೇ, ಪೌಷ್ಟಿಕಾಂಶದ ಕೊರತೆಯಿಂದ ಸಾಯುತ್ತಿದ್ದಾರೆ ! ಹೀಗೆ ಆಹಾರವನ್ನು ಕುರಿತು ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಭಾರತದಲ್ಲಿ ಆಹಾರ ಭದ್ರತೆಯ ಕಾನೂನು ತರುವ ಪ್ರಯತ್ನ ನಡೆಯುತ್ತಿರುವಂತೆಯೇ, ಆಹಾರ ಭದ್ರತೆಯ ಕಡೆಗೆ ಗಮನ ಸೆಳೆಯುವ `ಧ್ಯೇಯ'ವನ್ನು ಹೊತ್ತ `ವಿಶ್ವ ಪರಿಸರ ದಿನ' ಬಂದಿದೆ. `ಯೋಚಿಸಿ. ಸೇವಿಸಿ. ಉಳಿಸಿ' ಎನ್ನುವುದು ಈ ಬಾರಿಯ ಧ್ಯೇಯ ವಾಕ್ಯ.

ಪ್ರತಿ ವರ್ಷ ಜೂನ್ 5ನ್ನು ವಿಶ್ವ ಪರಿಸರ ದಿನ ಎಂದು ಆಚರಿಸಲಾಗುತ್ತಿದೆ. ಪರಿಸರ ಸಂಬಂಧಿ ವಿಷಯಗಳಾದ, ಜೈವಿಕ ವೈವಿಧ್ಯ, ನೀರು, ನೆಲ, ಕಾಡು ಮುಂತಾದವುಗಳಲ್ಲಿನ ಸಮಸ್ಯೆಗಳನ್ನು ಗುರುತಿಸಿ, ಸ್ಥಳೀಯ ಪರಿಹಾರಗಳ ಕಡೆಗೆ ಜನರ ಗಮನವನ್ನು ಸೆಳೆದು ಕ್ರಿಯಾಶೀಲರಾಗುವಂತೆ ಮಾಡುವುದು ಈ ಆಚರಣೆಯ ಹಿಂದಿರುವ ಉದ್ದೇಶ. ಮೊಟ್ಟ ಮೊದಲ ವಿಶ್ವಪರಿಸರ ದಿನವನ್ನು 1973 ರಲ್ಲಿ ಆಚರಿಸಲಾಯಿತು.

ಅಂದಿನಿಂದ ಪ್ರತಿ ವರ್ಷ ಈ ದಿನದಂದು ಮಾನವ - ಪರಿಸರ ಸಂಬಂಧಗಳನ್ನು ಅರಿಯದ ಕಂಡುಕೊಳ್ಳದ, ಪ್ರತಿ ಪ್ರಜೆಯೂ ಇದರಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುವ ಪ್ರಯತ್ನಗಳು ನಡೆದಿವೆ. ಪ್ರತಿ ಬಾರಿಯೂ ವಿಷಯವೊಂದನ್ನು ಗುರುತಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಮಾಡಲಾಗುತ್ತದೆ. ಈ ಬಾರಿಯ ಘೋಷ ವಾಕ್ಯ ಸಂಪೂರ್ಣ ಮಾನವ ಕೇಂದ್ರಿತ. ಮುಂಬರುವ ದಿನಗಳಲ್ಲಿ ಜಗತ್ತು ಆಹಾರದ ಕೊರತೆಯನ್ನು ಎದುರಿಸಲಿದೆ ಎನ್ನುವ ಎಚ್ಚರಿಕೆಯ ಮಾತು ಈಗಾಗಲೇ ಕೇಳಿಬರುತ್ತಿದೆ. ಈ ಭೀತಿಗೆ ಭಾರತವೂ ಹೊರತಾಗಿಲ್ಲ.

ದಿನ ನಿತ್ಯ ನಾವು ನೋಡುವ ಟಿ. ವಿ. ಜಾಹೀರಾತುಗಳಲ್ಲಿ ವಿದೇಶಿ ಮೂಲದ ಆಹಾರದ ತಿನಿಸುಗಳು, ತಂಪು ಪಾನೀಯಗಳು ರಾರಾಜಾಜಿಸುತ್ತಿವೆ. ನಮ್ಮ ಮದುವೆ ಮನೆಗಳಲ್ಲಿ ಎಲೆಗಳಲ್ಲಿ ಹೆಚ್ಚಾಗಿ ಬಿಟ್ಟ ಆಹಾರ ಕಸದ ತೊಟ್ಟಿಯನ್ನು ಸೇರುತ್ತಿದೆ! ನಾವೀಗ ಶ್ರೀಮಂತರಾಗಿದ್ದೇವೆ. ಅದಕ್ಕೆಂದೇ ನಮ್ಮ ಮಕ್ಕಳು ಚಾಕೊಲೇಟ್, ಬರ್ಗರ್, ಪಿಜ್ಜಾ ಮುಂತಾದ ತಿನಿಸುಗಳನ್ನು ಬಹುರಾಷ್ಟ್ರೀಯ ಕಂಪೆನಿಗಳ ಅಂಗಡಿಗಳಿಂದ ಕೊಂಡು ತಿನ್ನುತ್ತಿದ್ದಾರೆ.

ಹಿಂದೆಗಿಂತಲೂ ನಾವು ಸುಖವಾಗಿದ್ದೇವೆ. ಈ ಆಹಾರದ ಸುರಕ್ಷತೆಯ ಮಾತುಗಳೆಲ್ಲಾ ಅಂತರರಾಷ್ಟ್ರೀಯ ಮಟ್ಟದ ಸುಳ್ಳು ಪುರಾವೆಗಳು ಎನ್ನುವವರೂ ಇದ್ದಾರೆ. ಅವರೊಮ್ಮೆ ನಗರದ ಹೊರವಲಯದ ಜೋಪಡಿಗಳಲ್ಲಿ, ಗ್ರಾಮಾಂತರ ಪ್ರದೇಶದ ಗುಡಿಸಲುಗಳಲ್ಲಿ, ಬಡ ರೈತನ ಊಟದ ತಟ್ಟೆಯಲ್ಲಿ ಹಣಕಿ ನೋಡಬೇಕು. ಇಂದಿಗೂ ಹಸಿದ ಹೊಟ್ಟೆಯಲ್ಲಿ ಮಲಗುವ ಹಲವರಿದ್ದಾರೆ. ಪೌಷ್ಟಿಕತೆಯ ಕೊರತೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಅದಕ್ಕೆಂದೇ ಈ ಬಾರಿ ವಿಶ್ವಸಂಸ್ಥೆಯ ಗಮನ ನಮ್ಮ ಊಟದ ತಟ್ಟೆಯ ಮೇಲೆ ಬಿದ್ದಿದೆ.

`ಹಸಿವು' ಎಂದರೇನು? ಎನ್ನುವುದು ಅನುಭವಿಸಿದವರಿಗೇ ಗೊತ್ತು. ಭಾರತದ ಇತಿಹಾಸದಲ್ಲಿ ಭೀಕರ ಬರಗಾಲಗಳು ಬಂದು ಹೋಗಿವೆ. ಜನತೆ ತತ್ತರಿಸಿ ಹೋಗಿದ್ದಾರೆ. ಆದರೆ ಹಸಿರು ಕ್ರಾಂತಿಯ ನಂತರ ಇದು ಕಡಿಮೆಯಾಗಿದೆ ಎಂದೇ ಹೇಳಬೇಕು. ಆದರೆ ಇದರೊಂದಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ.

ಯಾವುದನ್ನು ನಾವು ಆಹಾರ ಎಂದು ಸೇವಿಸುತ್ತೇವೆಯೋ ಅದು ಕೇವಲ ಹೊಟ್ಟೆ ತುಂಬಿಸುವ ಪದಾರ್ಥ ಮಾತ್ರವಲ್ಲ. ಅದು ನಮ್ಮ ದೇಹವೆಂಬ ಈ ಯಂತ್ರವನ್ನು ನಡೆಸುವುದರೊಂದಿಗೆ ಅದರ ಬೆಳವಣಿಗೆಗೂ ನೆರವಾಗಬೇಕು. ರೋಗರುಜಿನಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಶಕ್ತಿಯನ್ನು ನೀಡಬೇಕು. ಮನುಷ್ಯನ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿರಬೇಕು. ಅಂತಹ ಆಹಾರ ಸೇವಿಸಿದ ಪ್ರಜೆಗಳಿರುವ ದೇಶ ಪ್ರಗತಿಯನ್ನು ಸಾಧಿಸುವುದರಲ್ಲಿ ಸಂಶಯವಿಲ್ಲ. ಅಂತಹ ಆಹಾರ ಸೇವಿಸಿದ ಮಕ್ಕಳೂ ಮಹಿಳೆಯರೂ ಪರಿಪೂರ್ಣ ಆರೋಗ್ಯದಿಂದಿರುತ್ತಾರೆ. ಅಗ್ಗದ ದರದಲ್ಲಿ ಪೂರೈಸಲಾಗುತ್ತಿರುವ ಧಾನ್ಯಗಳಲ್ಲಿ ಪೋಷಕಾಂಶಗಳಿರುತ್ತವೆಯೇ? ಖಂಡಿತಾ ಆ ಖಾತ್ರಿ ಇಲ್ಲ. ಈ ಧಾನ್ಯಗಳಿಂದ ತಯಾರಾದ ಆಹಾರ ಹೊಟ್ಟೆ ತುಂಬಿಸಬಹುದೇ ಹೊರತು ಪೋಷಕಾಂಶಗಳನ್ನು ಒದಗಿಸಲಾರದು.

ಹೀಗಾಗಿ ಎಷ್ಟೇ ಆಹಾರವನ್ನು ಸೇವಿಸಿದರೂ ಪೋಷಕಾಂಶಗಳು ದೇಹಕ್ಕೆ ದೊರೆಯುವುದಿಲ್ಲ. `ಅವಿತ ಹಸಿವೆ' ಕಾಡುತ್ತದೆ. ಇದನ್ನು ಸರಿಪಡಿಸಲು ಬೆಳೆಯುವ ಆಹಾರ ಧಾನ್ಯಗಳಿಗೆ, ನಂತರ ಅದರಿಂದ ತಯಾರಾದ ಆಹಾರ ಪದಾರ್ಥಗಳ ವಿವಿಧ `ಅನ್ನಾಂಗ' (ವಿಟಮಿನ್) ಗಳನ್ನು ಕೃತಕವಾಗಿ ಸೇರಿಸುವ ಪ್ರಯತ್ನ ನಡೆದಿದೆ. ಇದರಿಂದ ಆ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗುತ್ತದೆ.

ಅದು ಜನ ಸಾಮಾನ್ಯನ ಕೈಗೆ ಎಟುಕುವುದಿಲ್ಲ. ಮತ್ತೆ `ಬಡವ' ಆಹಾರದ ಬಡತನದಿಂದ ಬಳಲುತ್ತಾನೆ. ಸುಲಭವಾಗಿ ಸಿಗುವ ಆಹಾರಧಾನ್ಯಗಳಿಂದ ತಯಾರಿಸಿದ ಆಹಾರ ಸೇವಿಸಿ ಮೈ ಮುರಿದು ದುಡಿಯಲಾರದೇ ಸೋಮಾರಿಯಾಗುತ್ತಾನೆ. ಆರೋಗ್ಯ ಕ್ಷಯಿಸುತ್ತದೆ. ಹೀಗೆ ಇದೊಂದು ವಿಷ ವರ್ತುಲದಂತೆ ಕಾರ್ಯ ನಿರ್ವಹಿಸಿ ಇಡೀ ರಾಷ್ಟ್ರದ ಅಭಿವೃದ್ಧಿಯ ಮೇಲೆ ಪರಿಣಾಮವನ್ನು ಬೀರಬಲ್ಲದು.

ಅದಕ್ಕಾಗಿಯೇ ಈ ಬಾರಿಯ ವಿಶ್ವ ಪರಿಸರ ದಿನದ ಘೋಷ ವಾಕ್ಯ ಇರುವ ಆಹಾರವನ್ನು ವ್ಯರ್ಥವಾಗದಂತೆ ತಡೆಯುವ ಪ್ರಯತ್ನವಾಗಿದೆ. 2011ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 67ನೇ ಸ್ಥಾನದಲ್ಲಿದೆ. ಆಹಾರ ಪೋಲಾಗುವಿಕೆಯು ಆಹಾರ ಭದ್ರತೆಯ ಮೇಲೆ ಗಂಭೀರ ಪರಿಣಾಮವನ್ನು ಬೀರುವುದರಿಂದ ಆಹಾರ ಪೋಲಾಗುವುದನ್ನು ತಡೆಗಟ್ಟುವುದು ಆಹಾರವನ್ನು ಉತ್ಪಾದಿಸುವಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ.

ವಿಶ್ವದಲ್ಲಿ ವ್ಯರ್ಥವಾಗುವ ಆಹಾರದಿಂದ ಇಡೀ ವರ್ಷ 50 ಕೋಟಿ ಜನರ ಹಸಿವನ್ನು ತಣಿಸಬಹುದು. 2012 ರಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ಕೈಗೊಂಡ ಅಧ್ಯಯನವೊಂದರ ಪ್ರಕಾರ ಬೆಂಗಳೂರಿನ ಕಲ್ಯಾಣ ಮಂಟಪಗಳಲ್ಲಿ ಬಡಿಸಿದ ಆಹಾರದ 17.48 ಭಾಗ ಪೋಲಾಗುತ್ತಿದೆ. ಅಂದರೆ ಸುಮಾರು 9515 ಟನ್‌ನಷ್ಟು ಆಗುತ್ತದೆ. ಇದರ ಬೆಲೆ 305.86 ಕೋಟಿ ರೂಪಾಯಿ. ಬಡಿಸದೇ ಪೋಲಾಗುತ್ತಿರುವ ಆಹಾರದ ಪ್ರಮಾಣ ಸರಾಸರಿ 4,735 ಟನ್. ಇದರ ಬೆಲೆ 140.5 ಕೋಟಿ ರೂಪಾಯಿ.

ನಮ್ಮ ದೇಶ ಎದುರಿಸುತ್ತಿರುವ ಮಳೆಯ ಅಭಾವ, ಸಂಪನ್ಮೂಲಗಳ ಕೊರತೆ, ಕೆಲಸಗಾರರ ಸಮಸ್ಯೆ, ಮುಂತಾದ ಸಮಸ್ಯೆಗಳ ನಡುವೆಯೇ ಆಹಾರ ಪೋಲಾಗುವುದನ್ನು ತಡೆಯಲು ಆಹಾರ ಉತ್ಪಾದನೆಯಷ್ಟೇ ಪ್ರಾಧಾನ್ಯತೆಯನ್ನು ನೀಡುವುದು ಅನಿವಾರ್ಯವಾಗಿದೆ. ಆಹಾರವನ್ನು ಬಳಸುವ ಹಕ್ಕು ನಮ್ಮೆಲ್ಲರಿಗಿದೆ. ಆದರೆ ಅದನ್ನು ಪೋಲು ಮಾಡುವ ಹಕ್ಕು ಯಾರಿಗೂ ಇಲ್ಲ. ಇದು ಪ್ರಕೃತಿಗೆ ನಾವು ಮಾಡುತ್ತಿರುವ ಅಪಚಾರವಾಗಿದೆ. ಹಸಿವು, ಅಪೌಷ್ಟಿಕತೆ ಹಾಗೂ ಆಹಾರ ಪೋಲಾಗುವಿಕೆ ಒಟ್ಟಿಗೇ ಇರುವುದು ನಿಜಕ್ಕೂ ವಿಪರ್ಯಾಸ.

ನಮಗೆ ಸಿನಿಮಾದಲ್ಲಿ ತೋರಿಸುವ `ವೈಭವದ' ಮದುವೆಯೇ ಬೇಕು ಎನ್ನುವ ಯುವಜನರು ಒಮ್ಮೆ ಯೋಚಿಸಬೇಕು.
ಇದೆಲ್ಲಾ ಸರಿ. ಆದರೆ ಪರಿಸರಕ್ಕೂ ನಮ್ಮ ಊಟದ ತಟ್ಟೆಗೂ ಎಲ್ಲಿಯ ಸಂಬಂಧ? ಖಂಡಿತಾ ಇದೆ. ನಮ್ಮ ತಟ್ಟೆಗೆ ಬರುವ ಒಂದು ಬಟ್ಟಲು `ಅನ್ನ' ವಾಗಲು ನೆಲ, ಜಲ, ಇಂಗಾಲ, ಪೋಷಕಾಂಶಗಳು ಮುಂತಾದ ಹಲವಾರು ನೈಸರ್ಗಿಕ ಸಂಪನ್ಮೂಲಗಳ ಬಳಕೆಯಾಗಿದೆ.

ಆದುದರಿಂದ ನಾವಿಂದು ಉಳಿಸುವ, ವ್ಯರ್ಥವಾಗದಂತೆ ಕಾಯುವ ಪ್ರತಿ ಬಟ್ಟಲು ಅನ್ನ ನಮ್ಮ ಭವಿಷ್ಯದ ಜನಾಂಗಗಳ ಭವಿಷ್ಯ ನಿಧಿ. ಅದಕ್ಕಾಗಿಯೇ ಊಟಕ್ಕೆ ಕೂತಾಗ ಹಸಿವಾಗಿದೆಯೇ ? ಯೋಚಿಸಿ. ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಡಿಸಿಕೊಂಡು ಸೇವಿಸಿ. ಆಹಾರ ವ್ಯರ್ಥವಾಗದಂತೆ ಉಳಿಸಿ. ಈ ಪರಿಸರ ದಿನವನ್ನು ಕೇವಲ ಓಟ, ಭಿತ್ತಿಪತ್ರ, ಸಮಾರಂಭ, ಊಟ, ತಿಂಡಿಗಳಿಗೆ ಸೀಮಿತವಾಗಿಸದೇ ನಮ್ಮ ಮಕ್ಕಳಿಗೆ ಸರಿಯಾದ `ಊಟ'ದ `ಪಾಠ' ಮಾಡಬೇಕು. ಆಹಾರದ ಬೆಲೆಯನ್ನು ತಿಳಿಸಿಕೊಡುವ ಪ್ರಯತ್ನ ಮಾಡಬೇಕು.

`ಶಾಲೆಯಲ್ಲಿ ಮಧ್ಯಾಹ್ನದ ಊಟದಲ್ಲಿ ನಾವೆಷ್ಟು ವ್ಯರ್ಥ ಮಾಡುತ್ತೇವೆ' ಲೆಕ್ಕ ಹಾಕುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು, ಆಗ ನಮ್ಮ ಆಹಾರವೂ, ಪರಿಸರವೂ, ಭವಿಷ್ಯವೂ, ಪೃಥ್ವಿಯೂ ಸುರಕ್ಷಿತ. ಪರಿಸರ ದಿನದ ಆಚರಣೆಯೂ ಸಾರ್ಥಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT