ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ದನಿ ಹೇಗೆ?

ನುಡಿ ನಿದಾನ ಸರಣಿ–2
Last Updated 14 ಏಪ್ರಿಲ್ 2014, 9:27 IST
ಅಕ್ಷರ ಗಾತ್ರ

ವೇದಿಕೆಯ ಕಾರ್ಯಕ್ರಮವೊಂದರಲ್ಲಿ ಮೈಕಿನ ಮುಂದೆ ಮಾತನಾಡಲು ಬಂದುನಿಂತ ವ್ಯಕ್ತಿ ಆಜಾನುಬಾಹು, ದೃಢಕಾಯದವನು. ಅವನ ಮೈಕಟ್ಟಿಗೆ ಸರಿಯಾಗಿ ‘ಮೇಘಗಂಭೀರ’ ಧ್ವನಿಯನ್ನು ನಿರೀಕ್ಷಿಸುತ್ತ ಕುಳಿತಿದ್ದವರೆಲ್ಲರಿಗೂ ಆತ ಮಾತನಾಡಲು ಪ್ರಾರಂಭಿಸಿದಾಗ ಮೂಡಿಬಂದ ‘ಕೀರಲು ಧ್ವನಿ’ ಕೇಳಿ ಒಂದು ಸಣ್ಣ ಆಘಾತವಾಗುತ್ತದೆ.

ಕಣ್ಣೆದುರಿನ ದೇಹದ ಗಾತ್ರಕ್ಕೂ, ಕಿವಿಯಲ್ಲಿ ಕೇಳುವ ಧ್ವನಿಗೂ ಸಂಬಂಧ ಕಲ್ಪಿಸಿಕೊಳ್ಳಲಾಗದೆ ಕುಳಿತವರೆಲ್ಲ ಒಂದು ಕ್ಷಣ ವಿಚಲಿತರಾಗುತ್ತಾರೆ. ಈ ಅಸಮಂಜಸ ರೀತಿಗೆ ಕೆಲವರು ಕಿಸಕ್ಕನೆ ನಗುತ್ತಾರೆ. ಕೆಲವರು ‘ಅಯ್ಯೋ’ ಎಂದು ಮುಖ ಬೇರೆಡೆಗೆ ಹೊರಳಿಸಿ ಅಸಮಾಧಾನ ವ್ಯಕ್ತಪಡಿಸಿದರೆ ಇನ್ನು ಕೆಲವರು, ‘ಪಾಪ ದೇಹಕ್ಕೆ ತಕ್ಕ ಹಾಗೆ ಧ್ವನಿ ಇರಬಾರದಿತ್ತೇ?’ ಎಂದು ತಾವೇ ಪೇಚಾಡಿಕೊಂಡು ಆ ವ್ಯಕ್ತಿಯ ಬಗ್ಗೆ ಅನುಕಂಪಿತರಾಗುತ್ತಾರೆ. ವೇದಿಕೆಯಲ್ಲಿ ಮಾತನಾಡಲು ಬಂದ ಆ ವ್ಯಕ್ತಿಯ ಬಗೆಗೆ ಸಭಿಕರಲ್ಲಿ ಮೂಡಿದ ಮಾನಸಿಕ ಚಿತ್ರಕ್ಕೆ ಕಾರಣ ಆ ವ್ಯಕ್ತಿಯ ‘ಧ್ವನಿ’; ಗಂಟಲಿನಿಂದ ಹೊರಡುವ ಶಬ್ದದ ಗುಣ. ಇದು ಪ್ರತಿಯೊಬ್ಬ ವ್ಯಕ್ತಿಯ ದೇಹ ಸಂರಚನೆಯನ್ನು ಆಧರಿಸಿ ಇರುತ್ತದೆ ಎನ್ನುವುದನ್ನು ನಾವೆಲ್ಲರೂ ಮೊದಲು ಗ್ರಹಿಸಿದರೆ ಬೇರೆಯವರ ಧ್ವನಿಯ ಬಗ್ಗೆ ನಮ್ಮ ಅಭಿಪ್ರಾಯ ಮೂಡುವುದು ಭಿನ್ನವಾಗುತ್ತದೆ. ಆಗ ಧ್ವನಿಯ ಗುಣಕ್ಕಿಂತಲೂ, ಆ ವ್ಯಕ್ತಿ ಆಡುತ್ತಿರುವ ಮಾತಿನ ‘ಹೂರಣ’ದ ಕುರಿತು ಯೋಚಿಸಲು ಪ್ರಾರಂಭಿಸುತ್ತೇವೆ.


‘ಮುಖ ಮನಸ್ಸಿನ ಕನ್ನಡಿ’ ಎನ್ನುವುದು ಪ್ರಚಲಿತವಾಗಿರುವ ಮಾತು. ಹಾಗೆಯೇ ಸ್ಥೂಲವಾಗಿ ‘ಧ್ವನಿ ವ್ಯಕ್ತಿತ್ವದ ಕನ್ನಡಿ’ ಎಂದೂ ಹೇಳಬಹುದು. ಕೆಲವರು ಈ ಮಾತು ಅತಿಯಾಯ್ತು ಎನ್ನಬಹುದೇನೋ. ಆದರೆ ‘ಮಾತು’ ರೂಪುಗೊಳ್ಳುವಾಗ ಒಂದು ನಿರ್ದಿಷ್ಟ ಸಂದರ್ಭ, ವಿಷಯ, ಅದು ಒಳಗೊಂಡಿರುವ ವ್ಯಕ್ತಿ, ಬಳಸುವ ಭಾಷೆ, ಸಂದರ್ಭದ ಭಾವನಾತ್ಮಕ ತೀವ್ರತೆ, ಆ ಮಾತು ಒಳಗೊಂಡಿರುವ ವ್ಯಕ್ತಿ ವಯಸ್ಸು, ವಿದ್ಯಾಭ್ಯಾಸ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಸ್ಥಿತಿ-ಗತಿಗಳು ಇತ್ಯಾದಿ ಹಲವಾರು ಸೂಕ್ಷ್ಮ ವಿಚಾರಗಳು ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸಿ, ಮಾತಿನಲ್ಲಿ ಬಳಸಲಾಗುವ ಪದಗಳ ಆಯ್ಕೆ, ವಾಚ್ಯಾರ್ಥ ಮತ್ತು ಧ್ವನ್ಯಾರ್ಥಗಳನ್ನು ಪ್ರಭಾವಿಸುತ್ತವೆ.

ವ್ಯಕ್ತಿಯೊಬ್ಬನ ಮಾನಸಿಕ ಸಂಸ್ಕಾರಕ್ಕೆ ಈ ಎಲ್ಲ ವಿಚಾರಗಳೂ ಕಾರಣವಾಗಿ, ಆತ ಆಡಿದ ಮಾತಿನ ‘ಧ್ವನಿ’ಯಲ್ಲಿ ವ್ಯಕ್ತವಾಗುತ್ತದೆ. ಒರಟು ಧ್ವನಿಯವ ನಮ್ರನಾಗಿ ತೋರಿಕೊಳ್ಳಬಹುದು, ಮೃದುಧ್ವನಿಯವ ಒರಟು ಮಾತುಗಳನ್ನು ಆಡಬಹುದು. ಮಾತೊಂದನ್ನು ಆಡುವಾಗ ಉದ್ದೇಶಿತ ಅರ್ಥವನ್ನು ತರುವ ಪ್ರಕ್ರಿಯೆಯನ್ನೇ ‘ಕಾಕು’ ಎನ್ನುವುದು. ಪದಗಳನ್ನು ಉಚ್ಚರಿಸುವಾಗ ಧ್ವನಿಯ ಏರಿಳಿತಗಳ ಮೂಡುವ ಈ ‘ಕಾಕು’ವೇ ಬಹಳ ಸಂದರ್ಭಗಳಲ್ಲಿ ಸಾಂದರ್ಭಿಕ ಅರ್ಥದ ಜೊತೆಗೆ ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಅವನ ಮಾತಿನ ಮೂಲಕ ಹೊರಗೆಡಹುತ್ತದೆ. ಹೀಗಾಗಿ ‘ಧ್ವನಿಯೇ ವ್ಯಕ್ತಿತ್ವದ ಕನ್ನಡಿ’ ಎನ್ನುವುದು ಸೂಕ್ತವಾಗುತ್ತದೆ. ಇಷ್ಟು ಪ್ರಭಾವಶಾಲಿಯಾಗಿ ಮಾತಿನ ಧ್ವನ್ಯಾರ್ಥವನ್ನು ದೀಪ್ತಗೊಳಿಸುವ ‘ಕಾಕು’ವನ್ನು  ಗ್ರಹಿಸಿ, ನಮ್ಮ ಮಾತಿನಲ್ಲಿ ಅದನ್ನು ಅಳವಡಿಸುವುದೇ ಒಂದು ಕೌಶಲ. ಇದು ಮಾತುಗಾರಿಕೆಯ ಒಂದು ಮುಖ್ಯ ಕೌಶಲವೂ ಹೌದು.

ನಮ್ಮ ಮಾತನ್ನು, ನಾವು ಗಂಟಲಿನಿಂದ ಹೊರಡಿಸುವ ಶಬ್ದಗುಣವನ್ನು ನಮ್ಮ ಮಾತನ್ನು ಕೇಳಿಸಿ ಕೊಳ್ಳುವವರು, ಅವರವರ ಸಾಮರ್ಥ್ಯ ಮತ್ತು ಮಿತಿಗಳನ್ನು ಅವಲಂಬಿಸಿ ಬೇರೆ ಬೇರೆ ರೀತಿಗಳಿಂದ ಗ್ರಹಿಸುತ್ತಾರೆ. ಆದರೆ, ನಮ್ಮ ಧ್ವನಿಯನ್ನು ನಾವೇ ಕೇಳಿಸಿಕೊಂಡಿದ್ದೇವೆಯೇ? ಆ ಕುರಿತು ನಾವೇ ಆಲೋಚನೆ ಮಾಡಿದ್ದೇವೆಯೇ? ನಮ್ಮ ‘ಧ್ವನಿಚಿತ್ರ’ ನಮಗೇ ಹಿತವೆನಿಸುತ್ತದೆಯೇ? - ಇಂಥ ಹಲವಾರು ಪ್ರಶ್ನೆಗಳನ್ನು ಆಸಕ್ತರು ಕೇಳಿಕೊಂಡಲ್ಲಿ ಧ್ವನಿ ಸಂಸ್ಕರಣೆಗೆ ಬೇಕಾದ ಪ್ರೋತ್ಸಾಹಕರ ವಾತಾವರಣವನ್ನು ನಾವೇ ನಿರ್ಮಾಣ ಮಾಡಿಕೊಂಡಂತಾಗುತ್ತದೆ. ಆ ಸಂಬಂಧದ ಪ್ರಶ್ನಾವಳಿ ಹೀಗಿರಬಹುದು:


1.  ಯಾವಾಗಲಾದರೂ ನೀವು ನಿಮ್ಮದೇ ಧ್ವನಿಯ ಬಗ್ಗೆ ಯೋಚಿಸಿದ್ದೀರಾ? 
2. ನೀವು ಎಂದಾದರೂ ನಿಮ್ಮ ಮುದ್ರಿತ ಧ್ವನಿಯನ್ನು ಕೇಳಿಸಿಕೊಂಡಿದ್ದೀರಾ? (ಉದಾ: ಟೇಪ್‌ರೆಕಾರ್ಡರ್‌ನಲ್ಲಿ)
3. ನಿಮ್ಮ ಮುದ್ರಿತ ಧ್ವನಿ ಕೇಳಿದಾಗ ನಿಮಗದು ಹಿಡಿಸಿತೇ?
4. ಇತರರು ನಿಮ್ಮ ಧ್ವನಿಯ ಬಗ್ಗೆ ಯಾವಾಗಲಾದರೂ ಆಕ್ಷೇಪಣೆ/ ಅಭಿಪ್ರಾಯ ವ್ಯಕ್ತಪಡಿಸಿದ್ದುಂಟೇ? ಹೌದು ಎಂದಾದರೆ ಅವರ ಅಭಿಪ್ರಾಯವೇನು?
5. ನಿಮ್ಮ ಧ್ವನಿ ನಿಮ್ಮ ಮನಸ್ಸಿನಲ್ಲಿರುವಂತೆ ನಿಮ್ಮ ವ್ಯಕ್ತಿತ್ವದ ಚಿತ್ರಣ ನೀಡುತ್ತದೆಯೆಂದು ನಿಮಗೆ ಅನಿಸುತ್ತದೆಯೇ? (ಗಂಡು, ಹೆಣ್ಣು, ಬುದ್ಧಿವಂತ, ವಿದ್ಯಾವಂತ, ಸ್ನೇಹಪರ ಇತ್ಯಾದಿ ಚಿತ್ರಣಗಳು) ಹೌದು ಅಥವಾ ಇಲ್ಲ ಎನ್ನುವುದಾದರೆ ಯಾವ ರೀತಿಯಾಗಿ?
6. ನಿಮ್ಮ ಸ್ನೇಹಿತರಲ್ಲಿ (ಪುರುಷರು ಮತ್ತು ಸ್ತ್ರೀಯರು), ನಿಮಗೆ ಯಾರದ್ದಾದರೂ ಧ್ವನಿ ಮೆಚ್ಚುಗೆಯಾಗುತ್ತದೆಯೇ? ಹೌದು ಎನ್ನುವುದಾದರೆ ಏಕೆಂದು ವಿವರಿಸಿ:
7. ನಿಮ್ಮ ಸ್ನೇಹಿತರಲ್ಲಿ (ಪುರುಷರು ಮತ್ತು ಸ್ತ್ರೀಯರು), ನಿಮಗೆ ಯಾರದ್ದಾದರೂ ಧ್ವನಿ ಇಷ್ಟವಾಗುವುದಿಲ್ಲವೇ? ಹೌದು ಎನ್ನುವುದಾದರೆ ಏಕೆಂದು ವಿವರಿಸಿ.
8. ನಿಮ್ಮ ಧ್ವನಿ ನಿಮ್ಮ ಕುಟುಂಬದ ಯಾವುದಾದರೂ ಸದಸ್ಯರ ಧ್ವನಿಯೊಂದಿಗೆ ಹೋಲುತ್ತದೆಯೇ? ಹೌದಾದರೆ ವಿವರಿಸಿ.
9. ಈ ಕೆಳಗಿನ ಯಾವ ಪದಗಳು ನಿಮ್ಮ ಮಾತಿನ ಧ್ವನಿಯ ಗುಣವನ್ನು ವಿವರಿಸಬಲ್ಲವೋ ಅವುಗಳನ್ನು ಗುರುತಿಸಿಕೊಳ್ಳಿ (ಸಾಮಾನ್ಯವಾಗಿ ಮಾತನಾಡುವ ಸಂದರ್ಭ - ಮುಖಾಮುಖಿ ಅಥವಾ ಮುದ್ರಿತ ಧ್ವನಿ). ಇವುಗಳನ್ನು ಹೊರತುಪಡಿಸಿ ಬೇರಾವುದಾದರೂ ವಿವರಣೆಗಳಿದ್ದರೆ ಅವನ್ನೂ ನೀಡಿ
ಸುಖಕರ ಧ್ವನಿ/ ಮಾದಕ ಧ್ವನಿ/ ಮರಳಿನಂಥ ಧ್ವನಿ/ ಗೊಗ್ಗರು ಧ್ವನಿ/ ಒರಟು ಧ್ವನಿ//ತೆಳ್ಳನೆಯ ಧ್ವನಿ/ ಚೀರುವ ಧ್ವನಿ / ಕೀರಲು ಧ್ವನಿ/ ಏಕಶೃತಿ (ಏರಿಳಿತಗಳಿಲ್ಲದ)/ ಅನುನಾಸಿಕ ಧ್ವನಿ(ಮೂಗಿನ) ಅಸ್ಪಷ್ಟ ಧ್ವನಿ/ ಕುಸುಕಲು ಧ್ವನಿ/ ಅತಿ ಮೃದು ಧ್ವನಿ/ ಹೆಚ್ಚು ಶ್ರುತಿಯ ಧ್ವನಿ/ ತಗ್ಗು ಶ್ರುತಿಯ ಧ್ವನಿ/ ಅತಿ ವೇಗದ ಧ್ವನಿ/ ದುರ್ಬಲ ಧ್ವನಿ/ ಸ್ಪಷ್ಟ ಧ್ವನಿ/ ಏದುಸಿರಿನ ಧ್ವನಿ/ ಅತಿ ದೊಡ್ಡ ಧ್ವನಿ/ ಗಟ್ಟಿ ಧ್ವನಿ ಗೋಳಿನ ಧ್ವನಿ/ ಆಸಕ್ತಿ ಮೂಡಿಸುವ ಧ್ವನಿ/ಅನುರಣಿಸುವಂಥ ಧ್ವನಿ /ಗಂಡು ಧ್ವನಿ/ ಹೆಣ್ಣು ಧ್ವನಿ/ ಅಭಿವ್ಯಕ್ತಿಪೂರ್ಣ ಧ್ವನಿ/ ಸಾಧಾರಣ ಧ್ವನಿ

ಅಬ್ಬಾ ! ಪ್ರತಿನಿತ್ಯ ನಾವಾಡುವ ಮಾತಿಗೆ ಇಷ್ಟೊಂದು ಧ್ವನಿ ವೈವಿಧ್ಯವಿದೆಯೇ? - ಎಂದು ಅಚ್ಚರಿಪಡುವಂತಾಗುತ್ತದೆಯಲ್ಲವೇ? ನಿಜ, ವ್ಯಕ್ತಿಯಿಂದ ವ್ಯಕ್ತಿಗೆ ಈ ಗುಣಗಳು ಬದಲಾಗುತ್ತವೆ. ಮೇಲಿನ ಗುಣದೋಷಗಳ ಮಿಶ್ರಣದಿಂದಾಗಿ ಪ್ರತಿಯೊಬ್ಬ ವ್ಯಕ್ತಿಯ ಧ್ವನಿಯೂ ಅತ್ಯಂತ ಅನನ್ಯವಾಗಿರುತ್ತದೆ. ದೋಷಗಳೇ ಇಲ್ಲದ ಧ್ವನಿ ಇದೆಯೇ ಎಂದರೆ ಇಲ್ಲ ಎಂದೇ ಹೇಳಬೇಕು. ಆದರೆ, ಇರುವ ದೋಷಗಳನ್ನು ತಕ್ಕಮಟ್ಟಿಗೆ ನೀಗಿಕೊಂಡು ಉತ್ತಮ ಧ್ವನಿಯನ್ನು ರೂಪಿಸಿಕೊಳ್ಳಲು ಪರಿಶ್ರಮ ಬೇಕು. ನುರಿತ ತಜ್ಞರ ತರಬೇತಿಯೂ ಅತಿ ಅಗತ್ಯ. ಮೇಲಿನ ಗುಣದೋಷಗಳು ವ್ಯಕ್ತಿಯ ದೈಹಿಕ ಸಂರಚನೆಯ ವಿಶೇಷತೆಗಳಿಂದ ಉಂಟಾಗುತ್ತವೆ ಆದ್ದರಿಂದ, ಒಂದು ಮಿತಿಯಲ್ಲಿ ಮಾತ್ರ ದೋಷಗಳನ್ನು ಸರಿಪಡಿಸಿಕೊಂಡು ಗುಣಗಳನ್ನು ವೃದ್ಧಿಸಿಕೊಳ್ಳಬಹುದು. ಈ ಮಿತಿಯ ಬಗ್ಗೆ ಅರಿವು ಹೊಂದಿರಲೇಬೇಕಾದದ್ದು ಅತ್ಯಗತ್ಯ.

(ಮುಂದಿನ ವಾರ: ನಿಮ್ಮ ಧ್ವನಿಬಿಂಬ ಹೇಗೆ?)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT