ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಹಾನ್ಸ್‌ ಕಟ್ಟಿದ ಸಾಹಸಿ ಡಾ.ಆರ್‌.ಮಾರ್ತಾಂಡ ವರ್ಮ

ವ್ಯಕ್ತಿ ಸ್ಮರಣೆ
Last Updated 14 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಅದು 70 ರ ದಶಕದ ಮಾತು. ಆಗಿನ್ನು  ಮಾನಸಿಕ ಸಮಸ್ಯೆ ಇದ್ದವರನ್ನು ಹುಚ್ಚರು ಎಂದು ನೋಡುತ್ತಿದ್ದ ಕಾಲ. ಬೆಂಗಳೂರಿನಲ್ಲಿ ಇದ್ದ ಅಖಿಲ ಭಾರತ ಮಾನಸಿಕ ಆರೋಗ್ಯಗಳ ಸಂಸ್ಥೆ (ಎಐಐಎಂಎಚ್‌) ಇನ್ನೂ ನಿಮ್ಹಾನ್ಸ್ ಆಗಿ ರೂಪು ಪಡೆದಿರ ಲಿಲ್ಲ. ಈ ಸಂಸ್ಥೆಯಲ್ಲಿ ಸಮಸ್ಯೆಗಳು ಸಾಕಷ್ಟಿದ್ದವು. ಶಸ್ತ್ರಚಿಕಿತ್ಸೆಯ ಟೇಬಲ್‌ ಮೇಲೆ ಮಲಗಿದ್ದ ರೋಗಿಗೆ ತುರ್ತಾಗಿ ರಕ್ತ ಬೇಕಿತ್ತು. ಆದರೆ ಆಸ್ಪತ್ರೆಯಲ್ಲಿ ರೋಗಿಗೆ ಬೇಕಾದ ರಕ್ತದ ಕೊರತೆಯಿತ್ತು. ಆಗ ವೈದ್ಯರು ಮಾಡಿದ ಕೆಲಸವೆಂದರೆ ಕಾರು ತೆಗೆದು ಅವೆನ್ಯೂ ರಸ್ತೆಗೆ ಹೋಗಿ ರೋಗಿಗೆ ಹೊಂದಾಣಿಕೆಯಾಗುವ ನಾಲ್ವರನ್ನು ಹುಡುಕಿ ಆಸ್ಪತ್ರೆಗೆ ಕರೆದುಕೊಂಡು ಬಂದು ರಕ್ತದಾನಕ್ಕೆ ವ್ಯವಸ್ಥೆ ಮಾಡಿ ಶಸ್ತ್ರಚಿಕಿತ್ಸೆಯನ್ನು ಮುಂದುವರೆಸಿದ್ದರು.

ಹಣವೇ ಪ್ರಧಾನವಾಗಿರುವ ಇಂದು, ಇಂತಹ ಸೇವಾ ಮನೋಭಾವವುಳ್ಳ ವೈದ್ಯರನ್ನು ಕಾಣಲು ಸಾಧ್ಯವೇ? ಆ ಅಪರೂಪದ ವೈದ್ಯರೇ ಇತ್ತೀಚೆಗೆ ನಿಧನರಾದ ಪ್ರಖ್ಯಾತ ನರರೋಗ ತಜ್ಞ ಡಾ. ರಾಜಾ ಮಾರ್ತಾಂಡ ವರ್ಮ.

ಇವರ ಸೇವಾ ಮನೋಭಾವಕ್ಕೆ ಇದೊಂದೇ ಉದಾಹರಣೆಯಲ್ಲ. ಒಮ್ಮೆ ಕೇರಳಕ್ಕೆ ರೋಗಿಯೊಬ್ಬರನ್ನು ನೋಡಲು ತೆರಳಿದ್ದಾಗ ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲಾಯಿತು. ರಾತ್ರಿಯಿಡೀ ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುವಾಗ ಚಾಲಕ ನಿದ್ರೆ ತಡೆಯಲಾಗದೆ ತೂಕಡಿಸುತ್ತಿದ್ದ. ಆಗ ಡಾ.ವರ್ಮ ಆವರೇ ಚಾಲಕನನ್ನು ನಿದ್ರೆ ಮಾಡಲು ತಿಳಿಸಿ ಚಾಲಕನ ಕೆಲಸವನ್ನು ಮಾಡಿದರು. ರಾತ್ರಿಯಿಡೀ ವಾಹನ ಓಡಿಸಿ ಬೆಳಿಗ್ಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಇದು ಅವರ ವೃತ್ತಿನಿಷ್ಠೆ ಮತ್ತು ರೋಗಿಗಳು ಗುಣಮುಖರಾಗಬೇಕು ಎನ್ನುವ ಹಂಬಲವನ್ನು ತೋರಿಸುತ್ತದೆ.

ಕೇರಳದ ತಿರುವನಂತಪುರದ ಬಳಿಯ ಶ್ರೀಮಂತ ಮಾವೇಲಿಕರ ಕುಟುಂಬದಲ್ಲಿ 1923ರ ಸೆಪ್ಟೆಂಬರ್‌ 7ರಂದು ಜನಿಸಿದ  ಆರ್‌.ಎಂ.ವರ್ಮ ಭಾರತದ ಮೊದಲ ಐವರು ಪ್ರಖ್ಯಾತ ನರರೋಗ ತಜ್ಞರಲ್ಲಿ ಒಬ್ಬರು. ಮದ್ರಾಸ್‌ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌, ಇಂಗ್ಲೆಂಡ್‌ನ ರಾಯಲ್‌ ಕಾಲೇಜ್‌ ಆಫ್‌ ಸರ್ಜರಿಯಲ್ಲಿ ಎಫ್‌ಆರ್‌ಸಿಎಸ್‌ ಪೂರ್ಣಗೊಳಿಸಿದ್ದರು. ನಂತರ ಬ್ರಿಸ್ಟಲ್‌ನ ಫ್ರೆಂಚೆ ಆಸ್ಪತ್ರೆಯಲ್ಲಿ ಹಿರಿಯ ರಿಜಿಸ್ಟ್ರಾರ್‌ ಆಗಿ 1957-58ರಲ್ಲಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲೇ ಬೆಂಗಳೂರಿನ ಎಐಐಎಂಎಚ್‌ಗೆ ಸೇರುವಂತೆ ಆಹ್ವಾನ ಬಂತು. ಆ ಸಂದರ್ಭದಲ್ಲಿ ಆಸ್ಪತ್ರೆಯ ಹಿರಿಯ ವೈದ್ಯರು, ಭಾರತಕ್ಕೆ ಹೋಗಬೇಡ. ಅಲ್ಲಿ ಸೌಲಭ್ಯಗಳ ಕೊರತೆಯಿದೆ. ಅಲ್ಲಿಗೆ ಹೋದರೆ ಒಂದೇ ವರ್ಷದಲ್ಲಿ ಇಲ್ಲಿಗೆ ಓಡಿ ಬರುತ್ತೀಯ ಎನ್ನುವ ಎಚ್ಚರಿಕೆಯ ಮಾತನ್ನು ಲೆಕ್ಕಿಸದೆ ಭಾರತದತ್ತ ಹೆಜ್ಜೆ ಹಾಕಿದರು. ಇವರು ಮತ್ತೆ ಬ್ರಿಸ್ಟಲ್‌ಗೆ ವಾಪಸಾಗುವರು ಎನ್ನುವ ನಂಬಿಕೆ ಯಿಂದ ಎರಡು ವರ್ಷ ನರರೋಗ ತಜ್ಞ ಹುದ್ದೆಯನ್ನು ತುಂಬೇ ಇರಲಿಲ್ಲ. ಈ ಅಂಶವನ್ನು ಆರ್‌.ಎಂ.ವರ್ಮ ‘ಡೆಕ್ಕನ್‌ ಹೆರಾಲ್ಡ್’ಗೆ ನೀಡಿದ್ದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು.

ಬೆಂಗಳೂರಿನಲ್ಲಿ ನೆಲೆಸಲು ಒಂದು ಕಾರಣವೂ ಇತ್ತು. ಇವರ ದೊಡ್ಡಮ್ಮ ತಿರುವನಂತಪುರದ ಮಹಾರಾಣಿ ಸೇತುಲಕ್ಷ್ಮಿಬಾಯಿ.  ಈ ಕುಟುಂಬದ ಅನೇಕ ಸದಸ್ಯರು ಇಲ್ಲಿ ಇದ್ದದ್ದರಿಂದ ಸಹಜ ವಾಗಿಯೇ ಬೆಂಗಳೂರು ಇವರನ್ನು  ಸೆಳೆಯಿತು. ಎಐಐಎಂಎಚ್‌ಗೆ ಬಂದು 1958ರಲ್ಲಿ ಪ್ರತ್ಯೇಕವಾದ ನರರೋಗ ವಿಭಾಗವನ್ನು ತೆರೆದರು. ಆದರೆ ಈ ವಿಭಾಗಕ್ಕೆ ಬಂದವರನ್ನು ವಿಚಿತ್ರವಾಗಿ ನೋಡುತ್ತಿದ್ದ ನಾಗರಿಕರ ಮನೋಭಾವವನ್ನು ಬದಲಿಸಲು ವರ್ಮ ಸಾಕಷ್ಟು ಕಷ್ಟಪಡಬೇಕಾಯಿತು. ಇವರು ಇಲ್ಲಿಗೆ ಬಂದಿದ್ದರಿಂದಲೇ  ನಿಮ್ಹಾನ್ಸ್‌ನಂತಹ ಅಖಿಲ ಭಾರತ ಮಟ್ಟದ ಸಂಸ್ಥೆ 1974ರಲ್ಲಿ ಕರ್ನಾಟಕಕ್ಕೆ ದೊರಕಲು ಕಾರಣವಾಯಿತು.

ನಿಮ್ಹಾನ್ಸ್‌ನಲ್ಲಿ ನಿರ್ದೇಶಕರಾಗಿ ಇದ್ದಷ್ಟು ಕಾಲವೂ ಜನಾನುರಾಗಿಯಾಗಿದ್ದರು. ಕನ್ನಡ ಮಾತನಾಡಲು ಬಾರದಿದ್ದರೂ, ರೋಗಿಗಳು ಕನ್ನಡದಲ್ಲಿ ಆಡುತ್ತಿದ್ದ ಮಾತು ಅರ್ಥವಾಗುತ್ತಿತ್ತು. ವೈದ್ಯರಿಗೆ ತಾಳ್ಮೆ ಮುಖ್ಯ. ಅದು ಅವರಲ್ಲಿತ್ತು ಎನ್ನುವ ಅವರ ಹಿರಿಯ ಮಗ ನರರೋಗ ತಜ್ಞ ಡಾ.ರವಿ ಗೋಪಾಲ ವರ್ಮ, ‘ಆಗಿನ ಕಾಲದಲ್ಲಿ ಮನರಂಜನೆಗೆ ಸಿನಿಮಾ ಒಂದೇ ಮುಖ್ಯವಾಗಿತ್ತು. ತಂದೆ ರಜೆ ಹಾಕಿ ನಮ್ಮನ್ನು ಒಂದೇ ದಿನ ಮೂರು ಸಿನಿಮಾ ತೋರಿಸುತ್ತಿದ್ದರು. ಸಿನಿಮಾ ಮಧ್ಯದಲ್ಲಿ ಸ್ಲೈಡ್‌ ಪ್ರತ್ಯಕ್ಷವಾಗಿ ಡಾ.ವರ್ಮ ತುರ್ತಾಗಿ ಆಸ್ಪತ್ರೆಗೆ ಹೋಗಬೇಕು ಎನ್ನುವ ಸಂದೇಶ ಬರುತ್ತಿತ್ತು. ನಮ್ಮನ್ನು ಮನೆಗೆ ಕಳುಹಿಸಿ ಅವರು ಆಸ್ಪತ್ರೆಗೆ ಹೋಗುತ್ತಿದ್ದರು. ರೋಗಿಗಳ ಪ್ರಾಣರಕ್ಷಣೆ ಅವರಿಗೆ ಮುಖ್ಯವಾಗಿತ್ತು’ ಎಂದು ನೆನಪಿಸಿಕೊಂಡರು.

ಎಐಐಎಂಎಚ್‌ಗೆ ಸೇರಿದ ಆರಂಭದ ದಿನಗಳಲ್ಲಿ ಕೋತಿಗಳು ಶಸ್ತ್ರಚಿಕಿತ್ಸೆ ಕೊಠಡಿಗೂ ನುಗ್ಗುತ್ತಿದ್ದವು. ಅಂತಹ ದಿನಗಳಿಂದ ಸಂಸ್ಥೆಯನ್ನು ಮೇಲೆತ್ತಿ ನಿಮ್ಹಾನ್ಸ್‌ಗೆ ವಿಶ್ವಮಾನ್ಯತೆ ನೀಡಿದ ಕೀರ್ತಿ ಡಾ.ಆರ್‌.ಎಂ.ವರ್ಮ ಅವರಿಗೆ ಸಲ್ಲುತ್ತದೆ.  65ರಲ್ಲಿ ಅವರು ಪಾರ್ಕಿನ್‌ಸನ್‌ ಕಾಯಿಲೆಗೆ ಸರಳ ಶಸ್ತ್ರಚಿಕಿತ್ಸಾ ವಿಧಾನವನ್ನೂ ಆವಿಷ್ಕಾರ ಮಾಡಿದ್ದರು. 79ರಲ್ಲಿ ನಿಮ್ಹಾನ್ಸ್‌ನಿಂದ ನಿವೃತ್ತರಾದ ನಂತರ ಅಲ್ಲಿಯೇ ಗೌರವಾನ್ವಿತ ಪ್ರೊಫೆಸರ್‌ ಹುದ್ದೆಯಲ್ಲಿ ಕೆಲಸ ಮಾಡಿದರು.

ಕರ್ನಾಟಕ ಸರ್ಕಾರ 1969ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರೆ,  1972ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿತು. 1980–85ರವರೆಗೆ ಕೇಂದ್ರ ಮಾನಸಿಕ ಆರೋಗ್ಯ ಸಲಹೆಗಾರರಾಗಿ ಮತ್ತು ಇದೇ ಅವಧಿಯಲ್ಲಿ ರಾಷ್ಟ್ರಪತಿ ಗಳ ಗೌರವಾನ್ವಿತ ಸರ್ಜನ್‌ ಆಗಿಯೂ ಸೇವೆ ಸಲ್ಲಿಸಿದ್ದರು.

ನಿವೃತ್ತಿಯ ನಂತರ ಬೆಂಗಳೂರಿನ ಮಲ್ಲಿಗೆ ಮೆಡಿಕಲ್‌ ಸೆಂಟರ್‌, ಮಣಿಪಾಲ್‌ ಆಸ್ಪತ್ರೆ, ಎಂ.ಎಸ್‌.ರಾಮಯ್ಯ ಹಾಗೂ ಭಗವಾನ್‌ ಸತ್ಯಸಾಯಿ ಆಸ್ಪತ್ರೆಯ ಅಭಿವೃದ್ಧಿಗೂ ಶ್ರಮಿಸಿದ್ದರು.

ಪತ್ನಿ ಮಾಲತಿ ವರ್ಮ ಅವರು ಬೆಂಗಳೂರಿನ ಎಪಿಎಸ್‌ ಕಾಲೇಜಿನಲ್ಲಿ 32 ವರ್ಷಗಳ ಕಾಲ ಸಮಾಜ ವಿಜ್ಞಾನ ಅಧ್ಯಾಪಕಿಯಾಗಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಮತ್ತೊಬ್ಬ ಮಗ ಶಶಿ ಗೋಪಾಲ್‌ ವರ್ಮ ಎಂಜಿನಿಯರ್‌ ಆಗಿ ವಿದೇಶದಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT