ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಣಯಗಳ ವ್ಯರ್ಥ ಕಸರತ್ತು

Last Updated 12 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ರಾಜ್ಯದ ಪ್ರಚಲಿತ ವಿದ್ಯಮಾನಗಳನ್ನೊಳಗೊಂಡಂತೆ ನಾಡು, ನುಡಿಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ವಿಜಾಪುರದಲ್ಲಿ ಮುಕ್ತಾಯವಾದ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಕೈಗೊಳ್ಳಲಾಗಿದೆ. ಪ್ರತಿ ವರ್ಷವೂ ನಿರ್ಣಯಗಳನ್ನು ಅಂಗೀಕರಿಸುವುದು ಸಾಹಿತ್ಯ ಸಮ್ಮೇಳನದ ಬಹು ಮುಖ್ಯವಾದ ಅಲಂಕಾರಿಕ ವಿದ್ಯಮಾನ.

ಏಕೆಂದರೆ ಈ ನಿರ್ಣಯಗಳಿಗೆ ದಕ್ಕಬೇಕಾದ  ಮನ್ನಣೆ ಸರ್ಕಾರದಿಂದ ಸಿಗುತ್ತಿಲ್ಲ. ಈ ನಿರ್ಣಯಗಳು ಬರೀ ಕಾಗದದ ಮೇಲೆ ಉಳಿಯುವ ದಾಖಲೆಗಳಷ್ಟೇ ಆಗುತ್ತಿರುವುದು ಈವರೆಗಿನ ಅನುಭವ. ಹೀಗಾಗಿಯೇ ಈ ಹಿಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ತಕ್ಷಣವೇ ಕಾರ್ಯಗತಗೊಳಿಸಬೇಕು ಎಂಬಂಥ ನಿರ್ಣಯವನ್ನೂ ಈ ಬಾರಿ ಅಂಗೀಕರಿಸಲಾಗಿದೆ.

ಅಂದಂದಿನ ಬೆಳವಣಿಗೆಗಳಿಗೆ ನಾಡಿನ ಸಾಂಸ್ಕೃತಿಕ ಜಗತ್ತು ತೋರಿಸುವ ಪ್ರತಿಕ್ರಿಯೆ ರೂಪದಲ್ಲಿ, ಈ ನಿರ್ಣಯಗಳನ್ನು ಸಾಹಿತ್ಯ ಸಮ್ಮೇಳನದ ಪ್ರಮುಖ ಅಂಗವಾದ ಬಹಿರಂಗ ವೇದಿಕೆಯಲ್ಲಿ ಮಂಡಿಸಿ ಚರ್ಚಿಸಿ ಅಂಗೀಕರಿಸಲಾಗುತ್ತದೆ. ಅಷ್ಟರ ಮಟ್ಟಿಗೆ ನಿರ್ಣಯಗಳಿಗೆ ಪ್ರಜಾಸತ್ತಾತ್ಮಕ ಮನ್ನಣೆ ಇರುತ್ತದೆ. ಜೊತೆಗೆ, ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳ ಅನುಷ್ಠಾನದ ಉಸ್ತುವಾರಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದಾದರೂ ನಿರ್ಣಯಗಳ ಅನುಷ್ಠಾನದ ಖಾತರಿ ಇರುವುದಿಲ್ಲ.

ಕನ್ನಡಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕಿರುವ ಬದ್ಧತೆಯ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿಯೇ, ಮೂಡುಬಿದರೆ, ಗದಗ ಸಮ್ಮೇಳನಗಳಲ್ಲಿ, ನಿರ್ಣಯಗಳ ದೊಡ್ಡ ಪಟ್ಟಿಯನ್ನು ಅಂಗೀಕರಿಸುವ ಸಂಪ್ರದಾಯ ಮುರಿದು ಹಿಂದಿನ ಸಮ್ಮೇಳನಗಳ ಅನುಷ್ಠಾನಗೊಳ್ಳದಿರುವ ನಿರ್ಣಯಗಳನ್ನು ಜಾರಿಗೆ  ತರುವಂತೆ ಒತ್ತಾಯಿಸುವ ಒಂದೇ ನಿರ್ಣಯ ಅಂಗೀಕರಿಸಿದಂತಹ ಬೆಳವಣಿಗೆಗಳೂ ಆಗಿವೆ. ಇಷ್ಟಾದರೂ ನಿರ್ಣಯಗಳ ಕುರಿತಂತೆ ಸರ್ಕಾರದ ನಿರಾಸಕ್ತಿ, ಸಾಂಸ್ಕೃತಿಕ ಲೋಕದ ಸ್ಪಂದನಗಳಿಗೆ ಸರ್ಕಾರ ತೋರಿಸುವಂತಹ ಅನಾದರವಾಗಿದೆ.

ಕಾವೇರಿ ನ್ಯಾಯಮಂಡಳಿಯ ಐತೀರ್ಪಿನ ಅಧಿಸೂಚನೆ ಹೊರಡಿಸಬಾರದೆಂದು ಒತ್ತಾಯಿಸುವ ನಿರ್ಣಯವೂ ಸೇರಿದಂತೆ ನೆಲ, ಜಲ, ಭಾಷೆಗಳ ಕುರಿತಾದ ಸಂವೇದನೆಗಳಿಗೆ ದನಿ ನೀಡುವ ಹತ್ತು ನಿರ್ಣಯಗಳನ್ನು ಈ ಬಾರಿ ಅಂಗೀಕರಿಸಲಾಗಿದೆ. ಡಾ ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಬೇಡಿಕೆಯಂತೂ ಲಾಗಾಯ್ತಿನಿಂದಲೂ ಇದ್ದೇ ಇದೆ. ಆದರೆ ಡಬ್ಬಿಂಗ್ ಸಂಸ್ಕೃತಿಯನ್ನು ನಿಷೇಧಿಸಬೇಕೆಂಬ ನಿರ್ಣಯ, ಸಮ್ಮೇಳನಾಧ್ಯಕ್ಷರ ಲಿಖಿತ ಭಾಷಣದಲ್ಲಿರುವ ಆಶಯಗಳಿಗೆ ವಿರೋಧವಾಗಿದೆ.

ತಾತ್ವಿಕವಾಗಿ ಹೇಳುವುದಾದರೆ `ಡಬ್ಬಿಂಗ್‌ನಿಂದ ಕನ್ನಡ ಸಿನಿಮಾ ಬೆಳೆಯುತ್ತದೆ, ಮತ್ತಷ್ಟು ಎತ್ತರಕ್ಕೆ ಏರುತ್ತದೆ' ಎನ್ನುವ ವಾದವನ್ನು ಸಮ್ಮೇಳನಾಧ್ಯಕ್ಷರು ಮಂಡಿಸಿದ್ದಾರೆ. 2011ರಲ್ಲಿ ಬೆಂಗಳೂರಿನಲ್ಲಿ ನಡೆದ ಸಮ್ಮೇಳನದಲ್ಲೂ ಡಬ್ಬಿಂಗ್ ವಿರೋಧಿ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಒಂದು ವರ್ಷಕ್ಕೆ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸುತ್ತಾ ಪ್ರಭಾವಿ ಉದ್ಯಮವಾಗಿ ಬೆಳೆದಿರುವ ಕನ್ನಡ ಚಿತ್ರರಂಗ, ಮುಕ್ತ ಸ್ಪರ್ಧೆಗಳ ನಡುವೆ ಹೊಸ ಮಜಲುಗಳಿಗೆ ತೆರೆದುಕೊಳ್ಳಬೇಕಾಗಿರುವುದು ಸದ್ಯದ ಅಗತ್ಯ ಎಂಬುದನ್ನು ಮರೆಯಲಾಗದು.

ವಿಜಾಪುರವನ್ನು ವಿಜಯಪುರವೆಂದು ಮರುನಾಮಕರಣ ಮಾಡಬೇಕೆಂಬ ನಿರ್ಣಯ ವಿವಾದಾಸ್ಪದ. ಈ ನಗರದೊಳಗಿನ ಪರ್ಷಿಯನ್ ಸಂಸ್ಕೃತಿಯ ಸ್ಮೃತಿಗಳನ್ನು ಅಳಿಸಿಹಾಕುವ ಯತ್ನವಾಗಬಾರದು ಇದು ಎಂಬಂತಹ ಎಚ್ಚರ ನಮ್ಮಡನಿರಬೇಕು. ಹಾಗೆಯೇ ರಾಜ್ಯದ ಎಲ್ಲಾ ಮಹಿಳಾ ಕಾಲೇಜುಗಳನ್ನು ವಿಜಾಪುರ ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡಿಸಬೇಕೆಂಬ ನಿರ್ಣಯವೂ ಮಹಿಳೆಯರ ಅಭಿವೃದ್ಧಿಗೆ ಪೂರಕವಾಗುವಂತಹದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT