ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಗ್ಗೆ ಬಳಕೆ ಬಗೆ ಬಗೆ

Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನುಗ್ಗೆಯಲ್ಲಿ ಬಿಸುಡಲು ಏನಿಲ್ಲ. ಅದರ ಕಾಯಿ ಮಾತ್ರವಲ್ಲ; ಎಲೆ, ಬೇರು, ಹೂ, ತೊಗಟೆ ಎಲ್ಲವೂ ಬಳಕೆಯ ದೃಷ್ಟಿಯಿಂದ ಮಹತ್ವ ಪಡೆದಿವೆ. ಇದರ ಮರವನ್ನು ಕೆತ್ತಿದಾಗ ಒಸರುವ ಅಂಟನ್ನು ಹಾಲಿನಲ್ಲಿ ಬೆರೆಸಿ ಲೇಪಿಸಿದರೆ ತಲೆಶೂಲೆ ಶೀಘ್ರ ಶಮನವಾಗುತ್ತದೆ ಎಂದಿದೆ ವೈದ್ಯಗ್ರಂಥ.

ನುಗ್ಗೆಕಾಯಿ ರಕ್ತವರ್ಧಕ. ಯಕೃತ್ ಮತ್ತು ಗುಲ್ಮ ವ್ಯಾಧಿಗಳಿಗೆ ರಾಮಬಾಣ ಎನ್ನುತ್ತಾನೆ ಚಕ್ರದತ್ತ. ಹಲ್ಲು ಮತ್ತು ವಸಡಿನ ರಕ್ಷಣೆಗೆ ಬೇಕಾದ `ಸಿ' ಜೀವಸತ್ವ ನಿಂಬೆ, ನೆಲ್ಲಿಕಾಯಿಯಲ್ಲಿ ಇರುವಷ್ಟೇ ಪ್ರಮಾಣದಲ್ಲಿ ನುಗ್ಗೆಕಾಯಿಯಲ್ಲಿ ಇದೆ.

ದವಡೆಯಿಂದ ರಕ್ತ ಸೋರುವ ಪಯೋರಿಯಾ ವ್ಯಾಧಿಗೆ ಅದು ಒಳ್ಳೆಯ ಮದ್ದು. ಶೀತ, ಕೆಮ್ಮು, ಕುಷ್ಠ, ಕ್ಷಯ, ಶೂಲ ರೋಗಗಳ ನಿವಾರಣೆಗೆ ಅದು ಮದ್ದಾಗಬಲ್ಲದು. ಕಬ್ಬಿಣ, ಶರ್ಕರ, ರಂಜಕ, ಪಿಷ್ಟ, ಸುಣ್ಣ, ಕೊಬ್ಬು, ನಾರು, ಫಾಸ್ಫರಸ್, ಅಲ್ಪ ಪ್ರಮಾಣದ `ಬಿ' ಅನ್ನಾಂಗ ಇರುವ ನುಗ್ಗೆ ಹಸಿವನ್ನು ವರ್ಧಿಸುತ್ತದೆ. ಸಂಧಿವಾತ, ಹೃದ್ರೋಗ, ರಕ್ತದ ಒತ್ತಡಗಳಿಗೂ ಮದ್ದಾಗುತ್ತದೆ.

ಉನ್ಮಾದ, ಗಂಡಮಾಲೆ ಚಿಕಿತ್ಸೆಗೆ ನುಗ್ಗೆಯ ಬೀಜ ಸಹಕಾರಿ. ಹುರಿದು ತಿನ್ನಲು ಸ್ವಾದಿಷ್ಟ. ಜ್ವರ, ಜಂತುಹುಳ, ಕಫ ನಿವಾರಕ. ನುಗ್ಗೆ ಬೀಜದಿಂದ ತೆಗೆದ ತೈಲ ಯಾವ ಚಳಿಗೂ ಗಟ್ಟಿಯಾಗದ ಕಾರಣ ಗಡಿಯಾರದ ಕೀಲೆಣ್ಣೆಗೆ ಉಪಯೋಗ ಆಗುತ್ತಿತ್ತು. ಬೀಜ ಮತ್ತು ಹೂಗಳ ತೈಲವು ಸಂಧಿವಾತ ನಿವಾರಕ. ಸೌಂದರ್ಯ ವೃದ್ಧಿಗೆ ಸಹಾಯಕ. ಸುಗಂಧಿತ ಹೂಗಳು ಎಣ್ಣೆಯಲ್ಲಿ ಹುರಿದು ತಿನ್ನಲು ರುಚಿಕರ. ಮೂತ್ರವರ್ಧಕ. ಹಾಲಿನೊಂದಿಗೆ ಬೇಯಿಸಿ ತಿಂದರೆ ವೀರ್ಯವರ್ಧಕ. ಬಂಜೆತನ ನಿವಾರಣೆ ಮಾಡುತ್ತದೆ. ಹೃದಯ ಚಿಕಿತ್ಸೆಗೆ ಬಳಸುವ ಬೆಂಜಾಲಮಿನ್, ಸ್ಟೆರೊಕಿನ್, ಮಾರಿಂಗಿನ್ ಎಂಬ ಕ್ಷಾರಗಳು ಹೂ, ಬೇರು, ತೊಗಟೆಗಳಿಂದ ದೊರಕುತ್ತವೆ.

ನುಗ್ಗೆಯ ಎಲೆಗಳಲ್ಲಿ ಪ್ರೊಟೀನ್, ಕೊಬ್ಬು, ಖನಿಜ, ಸುಣ್ಣ, ಫಾಸ್ಫರಸ್, `ಬಿ' ಅನ್ನಾಂಗಗಳಿವೆ. ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆ, ಹೊಟ್ಟೆಯ ಕ್ರಿಮಿ, ನರ ದೌರ್ಬಲ್ಯ, ಅಶಕ್ತಿ ಪರಿಹರಿಸುತ್ತದೆ. ಮಕ್ಕಳ ಇರುಳುಗಣ್ಣು ತಡೆಗೆ ಉತ್ತಮ ಆಹಾರ. ಉಪ್ಪು, ನಿಂಬೆ ರಸ, ಕರಿಮೆಣಸಿನ ಪುಡಿಯೊಡನೆ ಬೇಯಿಸಿ ತಿಂದರೆ ಉಬ್ಬಸಕ್ಕೆ ಮದ್ದು. ಕ್ಷಯ ರೋಗವೂ ಶಮನ. ಹಸಿ ಎಲೆಗಳ ರಸ ಮತ್ತು ಹಾಲಿನ ಮಿಶ್ರಣ ಮಕ್ಕಳಿಗೆ, ಗರ್ಭಿಣಿಯರಿಗೆ ಪೌಷ್ಟಿಕ. ಎದೆಹಾಲು ಹೆಚ್ಚುತ್ತದೆ.

ಎಕ್ಕ- ನುಗ್ಗೆಯ ಎಲೆಗಳನ್ನು ಅರೆದು ಮೂಲವ್ಯಾಧಿಯ ಮೊಳಕೆಗಳಿಗೆ ಹಚ್ಚಿದರೆ ತುರಿಕೆ, ನೋವು ಪರಿಹಾರ. ಎಳ್ಳೆಣ್ಣೆಯೊಂದಿಗೆ ಎಲೆಗಳ ರಸದಿಂದ ತಯಾರಿಸಿದ ತೈಲ ಜಜ್ಜಿದ ಗಾಯಗಳಿಗೆ ಮದ್ದು. ಮೂಗಿಗೆ ಸೇದಿದರೆ ನೆಗಡಿ ನಿವಾರಕ. ತೆಂಗಿನೆಣ್ಣೆಯಿಂದ ಮಾಡಿದ ತೈಲ ಕೇಶವರ್ಧಕ. 

ನುಗ್ಗೆ - ದೇವದಾರು ಮರದ ತೊಗಟೆಗಳನ್ನು ಮಜ್ಜಿಗೆಯಲ್ಲಿ ಅರೆದು ಹಚ್ಚಿದರೆ ಗಂಡಮಾಲೆ ರೋಗಕ್ಕೆ ಸಿದ್ಧೌಷಧ. ವಾಯುವಿಡಂಗ ಮತ್ತು ನುಗ್ಗೆಯ ಹಸಿ ತೊಗಟೆಯಿಂದ ತಯಾರಿಸಿದ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ಜಂತು ಹುಳಗಳು ಸಾಯುತ್ತವೆ.

ಮಧುಮೇಹ ರೋಗಿಗಳಿಗೆ ಗುಪ್ತಾಂಗದಲ್ಲಿ ನವೆಯಿದ್ದರೆ ನುಗ್ಗೆಯ ಹಸಿ ತೊಗಟೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ತೇದು ಲೇಪಿಸಬಹುದು. ಇದರ ಬೇರಿನ ಗಂಧ ಲೇಪನವು ಶಕ್ತಿ ಪ್ರಚೋದಕ ಸಹ. ಸಾಸಿವೆಯೊಂದಿಗೆ ನುಗ್ಗೆ ಬೇರನ್ನು ಸೇರಿಸಿ ಮಾಡಿದ ಕಷಾಯ ದಿನ ಬಿಟ್ಟು ದಿನ ಬರುವ ಜ್ವರದ ನಿವಾರಕ. ಬೇರಿನಿಂದ ಭಟ್ಟಿ ಇಳಿಸಿದ ಸತ್ವಕ್ಕೆ ವಾತ ನಿರೋಧಕ ಗುಣವಿದೆ. ಜೇನುತುಪ್ಪ ಸೇರಿದರೆ ಸ್ವರ ಭಂಗ ನಿವಾರಿಸುತ್ತದೆ.

ನಾಯಿ ಕಚ್ಚಿದಾಗ ನುಗ್ಗೆ ಎಲೆ, ಅರಿಶಿಣ, ಬೆಳ್ಳುಳ್ಳಿಗಳನ್ನು ಅರೆದು ಹಚ್ಚಿದರೆ ಗುಣವಾಗುತ್ತದೆ. ಹಾವಿನ ವಿಷಕ್ಕೂ ನುಗ್ಗೆಯ ನಾನಾ ಭಾಗಗಳಿಂದ ಚಿಕಿತ್ಸೆ ಮಾಡುತ್ತಾರೆ. ಅದರ ಚಿಗುರೆಲೆಗಳನ್ನು ಅಕ್ಕಿ ತೊಳೆದ ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯವು ವ್ರಣಗಳನ್ನು ತೊಳೆಯಲು ಉಪಯುಕ್ತ ಕೀಟಾಣುನಾಶಕ.

ನುಗ್ಗೆ ಎಲೆಗಳ ರಸಕ್ಕೆ ನಿಂಬೆರಸ, ಜೇನು, ಎಳನೀರು ಬೆರೆಸಿ ಕುಡಿದರೆ ಆಮಶಂಕೆ, ಭೇದಿ ಶೀಘ್ರ ತಡೆಯಬಹುದು. ಬೂದುಗುಂಬಳದ ರಸದೊಂದಿಗೆ ನುಗ್ಗೆ ಎಲೆಗಳ ರಸ ಬೆರೆಸಿ ಕುಡಿಯುವುದರಿಂದ ಗರ್ಭಿಣಿಯರ ಕಾಲುಗಳಲ್ಲಿ ತುಂಬುವ ನೀರು ಇಳಿಯುತ್ತದೆ.     
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT