ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯಕಲೆ ಬೇಕು ಪಠ್ಯದಲ್ಲಿ ನೆಲೆ

Last Updated 28 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಲೆಗಳು ಸಂಸ್ಕೃತಿಯ ಕೈಗನ್ನಡಿ'. ಚರಿತ್ರೆಯ ಪುಟಗಳನ್ನು ತಿರುಗಿಸಿದಾಗ ನಾಗರಿಕತೆಯ ಆರಂಭದ ಸಮಯದಲ್ಲಿ ನೃತ್ಯ ಮಹತ್ತರವಾದ ಪಾತ್ರ ವಹಿಸಿದ್ದುದು  ಕಂಡುಬರುತ್ತದೆ. ನಾಗರಿಕ ಸಮಾಜ ಬದಲಾಗುತ್ತಾ ಬಂದಂತೆ, ನೃತ್ಯವು ಸಮಾಜದಲ್ಲಿ ತನ್ನದೇ ಆದ ಗೌರವವನ್ನು ಬೆಳೆಸಿಕೊಂಡು ಬಂದಿದೆ. ಆದರೂ ನೃತ್ಯ ಕಲೆಯು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಸೇರ್ಪಡೆ ಆಗದಿರುವುದು ವಿಷಾದವೇ ಸರಿ.

ನೃತ್ಯವನ್ನು ಅಭ್ಯಸಿಸುವ ಉದ್ದೇಶವೇನು ಎಂಬ ಪ್ರಶ್ನೆ ಸಾಮಾನ್ಯವಾಗಿ ಬಹುತೇಕರಲ್ಲಿ ಮೂಡುತ್ತದೆ. ನೃತ್ಯದ ಕಲಿಕೆಯಿಂದ ಸಂಯಮ, ತಾಳ್ಮೆ, ಆರೋಗ್ಯ, ಆತ್ಮವಿಶ್ವಾಸ, ಸದಭಿಪ್ರಾಯ ಹಾಗೂ ಕಣ್ಣು- ಮೆದುಳಿನ ನಡುವಿನ ಸಂಯೋಜನೆ ವೃದ್ಧಿಸುವುದಷ್ಟೇ ಅಲ್ಲದೆ, ಅದು ಸಾಮಾಜಿಕ ಶಿಷ್ಟಾಚಾರಗಳನ್ನೂ ಬೆಳೆಸುತ್ತದೆ. ನೃತ್ಯವು ಕಲಿಯುವವರ ದೇಹಕ್ಕೆ ಕೇವಲ ವ್ಯಾಯಾಮವನ್ನೇ ಅಲ್ಲದೆ ಕುಶಲತೆಯನ್ನೂ ಬೆಳೆಸುತ್ತದೆ. ಒಗ್ಗಟ್ಟಿನ ಭಾವವನ್ನು ಹುಟ್ಟುಹಾಕಿ, ಕಲಾವಿದ ಸಮಾಜದ ಒಬ್ಬ ಸದಸ್ಯ ಎಂಬ ಭಾವವನ್ನು ಬೆಳೆಸುತ್ತದೆ. ಚಿಕ್ಕಂದಿನಿಂದಲೇ ನೃತ್ಯವನ್ನು ಅಭ್ಯಸಿಸಿದ ಮಕ್ಕಳು ತಮಗೆ ವಯಸ್ಸಾದಂತೆಲ್ಲ ಆಂತರಿಕ/ ಬಾಹ್ಯ ಪ್ರಚೋದನೆಗಳಿಂದ ಉಂಟಾಗುವ ಮಾನಸಿಕ, ದೈಹಿಕ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಆತ್ಮವಿಶ್ವಾಸಿ ಪ್ರಜೆಗಳಾಗಿ ಬೆಳೆಯುತ್ತಾರೆ.

ಶಿಕ್ಷಣ ವ್ಯವಸ್ಥೆಯಲ್ಲಿ ಅಭ್ಯಾಸದ ವಿಷಯವನ್ನಾಗಿ ನೃತ್ಯವನ್ನು ಅಳವಡಿಸುವ ಅವಶ್ಯಕತೆ ಇದೆಯೇ, ಶೈಕ್ಷಣಿಕ ಕ್ಷೇತ್ರದ ಯಾವ ಹಂತದಲ್ಲಿ ಅದನ್ನು ಅಳವಡಿಸಬೇಕು ಎಂಬ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದರೆ ಮಗುವಿನ ವಯಸ್ಸು ಬಹಳ ಮುಖ್ಯವಾಗುತ್ತದೆ. ನೃತ್ಯವನ್ನು ಯಾವ ವಯಸ್ಸಿನವರು ಬೇಕಾದರೂ ಕಲಿಯಬಹುದಾದರೂ ಅದಕ್ಕೆ ತನ್ನದೇ ಆದ ನಿಯಮಗಳು ಇರುತ್ತವಲ್ಲವೇ? ಆದ್ದರಿಂದ ಮಕ್ಕಳ ವಯಸ್ಸು ಹಾಗೂ ದೈಹಿಕ/ ಮಾನಸಿಕ ಬೆಳವಣಿಗೆಗೆ ಅನುಗುಣವಾಗಿ ನೃತ್ಯವನ್ನು ಪಠ್ಯಕ್ರಮದ ವಿವಿಧ ಹಂತಗಳಲ್ಲಿ ಅಳವಡಿಸಬಹುದು. ಅವುಗಳನ್ನು ಹೀಗೆ ವಿಶ್ಲೇಷಿಸಬಹುದು.

ಪ್ರಾಥಮಿಕ ಶಾಲೆಯ ಹಂತ: ಇಂದಿನ ಮಕ್ಕಳನ್ನು ನಾಳೆಯ ಆರೋಗ್ಯಕರವಾದ ಪ್ರಜೆಗಳನ್ನಾಗಿ ಮಾಡಬೇಕಿದ್ದಲ್ಲಿ ನೃತ್ಯ ಕಲೆಯನ್ನು ಪ್ರಾಥಮಿಕ ಮಟ್ಟದಲ್ಲೇ ಅಳವಡಿಸಬೇಕು. ಕೇವಲ ಶಾಲಾ ವಾರ್ಷಿಕೋತ್ಸವ ಅಥವಾ ಅದೇ ಮಾದರಿಯ ಇತರ ಲಘು ಪ್ರದರ್ಶನಗಳಿಗಾಗಿ ಕಲೆಯನ್ನು ಪ್ರದರ್ಶಿಸುವುದಕ್ಕಿಂತ, ಶಾಲೆಯಲ್ಲಿ ಒಂದು ವಿಷಯವನ್ನಾಗಿ ಸೇರಿಸಿದರೆ ಆ ಕಲೆಯ ಬಗ್ಗೆ ಗೌರವ, ಆಸಕ್ತಿ ಬೆಳೆಯುತ್ತದೆ. ಈ ಹಂತದಲ್ಲಿ ನೃತ್ಯದ ಮೂಲಭೂತ ಚಲನವಲನಗಳಾದ ಬಗ್ಗುವುದು, ತಿರುಗುವುದು, ನಡೆಯುವುದು, ಜಿಗಿತ ಮುಂತಾದವುಗಳನ್ನು ಹಾಗೂ ಅವುಗಳ ಭಿನ್ನತೆಗಳನ್ನು ವಿವಿಧ ಲಯ/ ಗತಿಗಳಲ್ಲಿ ಅಳವಡಿಸಬೇಕು. ಮೂಲಭೂತ ಚಲನೆಗಳನ್ನು ಸಂಗೀತ/ ಕಥೆ/ ಕವಿತೆ ಅಥವಾ ಹಿನ್ನೆಲೆ ವಾದ್ಯದ ಸಹಕಾರದೊಂದಿಗೆ (ಜನಪದ/ ಶಾಸ್ತ್ರೀಯ) ಅಳವಡಿಸಿ ಪಾಠ ಮಾಡಿದರೆ ಮಕ್ಕಳಿಗೆ ಮನರಂಜನೆಯ ಜೊತೆಗೆ ತಮ್ಮ ನೆಲದ ಚರಿತ್ರೆ, ಭೂಗೋಳ ಹಾಗೂ ಸಂಸ್ಕೃತಿಯ ಪರಿಚಯವೂ ಆಗುತ್ತದೆ. ಅವರಿಗೆ ಬೇಕಾದ ದೈಹಿಕ ಹಾಗೂ  ಬೌದ್ಧಿಕ ಬೆಳವಣಿಗೆಯೂ ಆಗುತ್ತದೆ.

ಮಾಧ್ಯಮಿಕ ಶಾಲೆಯ ಹಂತ: ಈ ಹಂತದಲ್ಲಿ ನೃತ್ಯದ ಮೂಲಭೂತ ನಿಯಮಗಳನ್ನು ಅರಿತ ಮಕ್ಕಳು ಇರುವುದರಿಂದ ಹಾಗೂ ದೈಹಿಕವಾಗಿ ಸಬಲರಾಗಿರುವುದರಿಂದ ಪ್ರಾಥಮಿಕ ಹಂತಕ್ಕಿಂತ ತುಸು ಕಠಿಣವಾದ ಅಂಗಾಂಗ ಚಲನೆ, ಪರಿಚಯ ಇರುವ ಚಲನವಲನಗಳ ಮುಂದಿನ ಹಂತದ ಪಾಠಗಳನ್ನು ಮಾಡಬಹುದು. ಈ ಹಂತದಲ್ಲಿ ಮಕ್ಕಳ ದೇಹದ ಮಾಂಸಖಂಡಗಳು ಬಲ ಪಡೆಯತೊಡಗುವುದರಿಂದ ನೃತ್ಯದ ಲಯ/ ಗತಿಗಳಿಗೆ ಅವರು ತೀಕ್ಷ್ಣವಾಗಿ ಸ್ಪಂದಿಸಬಲ್ಲರು. ನೃತ್ಯಕ್ಕೆ ಅಳವಡಿಸುವ ಸಂಗೀತ ಹಾಗೂ ವಾದ್ಯಗಳ ಬಗ್ಗೆ ಪರಿಚಯ ಮಾಡಿಕೊಡುವುದರಿಂದ ಲಯ ಜ್ಞಾನವೂ ಬೆಳೆಯುತ್ತದೆ. ಗುಂಪಿನಲ್ಲಿ ನರ್ತಿಸುವ ಅವಕಾಶಗಳನ್ನು ಒದಗಿಸಿದರೆ, ಅವರು ಭವಿಷ್ಯದಲ್ಲಿ `ಸಂಘ ಜೀವನ'ದ ಮನೋಧರ್ಮವನ್ನು ಬೆಳೆಸಿಕೊಳ್ಳುತ್ತಾರೆ. ನರ್ತಿಸುವ ಸಮಯದಲ್ಲಿ ತಮ್ಮ ದೇಹವನ್ನು ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಬಳಸಿಕೊಳ್ಳಲು ಕಲಿತ ಮಕ್ಕಳು ನಂತರ ದೇಹದ ಬಗ್ಗೆ ಹೆಮ್ಮೆ ಬೆಳೆಸಿಕೊಂಡು ಮಾನಸಿಕವಾಗಿ ಸಹನಾ ಶಕ್ತಿ, ಸಂಘಟನಾ ಶಕ್ತಿ ಹಾಗೂ ಹೊಂದಿಕೊಳ್ಳುವ ಗುಣ  ಬೆಳೆಸಿಕೊಳ್ಳುತ್ತಾರೆ.

ಪ್ರೌಢಶಾಲಾ ಹಂತ: ಈ ಹಂತದಲ್ಲಿ ಶಾಸ್ತ್ರೀಯ/ ಜನಪದದಂತಹ ನೃತ್ಯದಲ್ಲಿನ ಬೇರೆ ಬೇರೆ ಪ್ರಕಾರಗಳನ್ನು ಕಲಿಸಬೇಕು. ಈ ರೀತಿಯ ಕ್ರಮವನ್ನು ಪಾಠ ಮಾಡುವ ಸಮಯದಲ್ಲಿ ಈಗಾಗಲೇ ಕಲಿತಿರುವ ನೃತ್ಯ ನಿಯಮಗಳೊಂದಿಗೆ, ಇತರ ಪ್ರಕಾರಗಳ ನಿಯಮಗಳನ್ನೂ ತಿಳಿಸಿಹೇಳಬೇಕಾದ್ದು ಅವಶ್ಯಕ. ಇದರಿಂದ ಹಲವಾರು ನೃತ್ಯಗಳ/ ನೃತ್ಯ ಗುರುಗಳ ಬಗ್ಗೆ ತಿಳಿವಳಿಕೆ ಬೆಳೆಯುವುದೇ ಅಲ್ಲದೆ, ಇತರ ಪ್ರದೇಶಗಳ ಚರಿತ್ರೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಗಳ ಪರಿಚಯ ಆಗುತ್ತದೆ. ವಿಭಿನ್ನ ನೃತ್ಯ ಪ್ರಕಾರಗಳ ನಿಯಮಗಳಿಗೆ ಅನುಸಾರವಾಗಿ ಅಭಿವ್ಯಕ್ತಿಸುವುದನ್ನು ಕಲಿಯುವ ಮಕ್ಕಳು ನೃತ್ಯದಲ್ಲಿ ನೈಪುಣ್ಯ ಗಳಿಸುತ್ತಾರೆ ಹಾಗೂ ಇತರ ನಿಯಮಗಳನ್ನು ಕೂಡ ಗೌರವಿಸುತ್ತಾರೆ. ಈ ರೀತಿ ತಮ್ಮ ಹಾಗೂ ಇತರ ನೃತ್ಯಗಳ ಆಳ/ ನಿಯಮಗಳನ್ನು ಹೋಲಿಕೆಯ ರೂಪದಲ್ಲಿ ತುಲನೆ ಮಾಡುವ ಸನ್ನಿವೇಶಗಳಲ್ಲಿ ಮಕ್ಕಳು ಮತ್ತೊಬ್ಬರೊಂದಿಗೆ ಚರ್ಚಿಸುವ, ಇತರರ ವಿಚಾರಗಳನ್ನು ಅನುಮೋದಿಸುವ ಹಾಗೂ ಒಗ್ಗಟ್ಟಿನ ಭಾವನೆಗಳನ್ನು ಬೆಳೆಸಿಕೊಳ್ಳುತ್ತಾರೆ.

ಕಾಲೇಜು ಹಾಗೂ ವಿಶ್ವವಿದ್ಯಾಲಯದ ಹಂತ: ನೃತ್ಯ ಕಲೆಯನ್ನು ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನಾ ಹಂತಗಳಲ್ಲಿ ಶಿಕ್ಷಣದ ಒಂದು ವಿಷಯವನ್ನಾಗಿ ಅಳವಡಿಸುವ ನಿರ್ಧಾರ, ಆ ಪ್ರದೇಶದಲ್ಲಿ ನೃತ್ಯ ಕಲೆಗಿರುವ ಸ್ಥಾನಮಾನಗಳನ್ನು ಅವಲಂಬಿಸಿರುತ್ತದೆ. ಅಂದರೆ, ನೃತ್ಯವನ್ನು ಕಲಿಸುವ ಉದ್ದೇಶ ಕೇವಲ ಸಾಮಾನ್ಯ ಜ್ಞಾನವನ್ನು ದೊರಕಿಸಿಕೊಡುವುದು ಆಗಿರಬಹುದು ಅಥವಾ ಗಣಿತ, ಇಂಗ್ಲಿಷ್ ಭಾಷೆ, ವಿಜ್ಞಾನದಷ್ಟೇ ಗಂಭೀರವಾದ ವಿಷಯವೂ ಆಗಿರಬಹುದು. ಏಕೆಂದರೆ ನೃತ್ಯ ಕಲಿಯುವಿಕೆಯು ಅದ್ಭುತವಾದ ದೈಹಿಕ ಸಾಮರ್ಥ್ಯದೊಂದಿಗೆ, ವಿದ್ಯಾರ್ಥಿಯಿಂದ ಹೊಸದನ್ನು ಕಂಡುಹಿಡಿಯುವ, ವಿಶ್ಲೇಷಿಸುವ, ಪರೀಕ್ಷಿಸುವ ಮನೋಧರ್ಮವನ್ನೂ ಬಯಸುತ್ತದೆ. ಈ ಹಂತಗಳಲ್ಲಿ ನೃತ್ಯವನ್ನು ಐಚ್ಛಿಕ ವಿಷಯವನ್ನಾಗಿ ನೀಡುವ ಶಿಕ್ಷಣ ಸಂಸ್ಥೆಗಳು, ತಮ್ಮ ಸಂಸ್ಥೆಯಿಂದ ಪದವಿ ಪಡೆಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ವಿ ನೃತ್ಯಪಟುಗಳು ಆಗುವುದರೊಂದಿಗೆ ಉತ್ತಮ ನೃತ್ಯ ನಿರ್ದೇಶಕರು, ನೃತ್ಯ ಗುರುಗಳು ಹಾಗೂ ಸಂಶೋಧಕರೂ ಆಗುವ ಅವಕಾಶಗಳನ್ನು ಒದಗಿಸಬೇಕು. ಇದಕ್ಕೆ ಅನುಗುಣವಾಗಿ ಪಠ್ಯಕ್ರಮವನ್ನು ತಯಾರಿಸಬೇಕಾಗುತ್ತದೆ.

ಶಿಕ್ಷಣದ ಯಾವುದೇ ಹಂತವಾಗಿರಲಿ ನೃತ್ಯವನ್ನು ಬೋಧಿಸಲು ಪಠ್ಯ ಸಾಮಗ್ರಿಗಳೊಂದಿಗೆ ಗಾಳಿ- ಬೆಳಕು ಸಮೃದ್ಧವಾಗಿರುವ ಖಾಲಿ ಜಾಗ ಇರಬೇಕಾದದ್ದು ಅತ್ಯವಶ್ಯಕ. ಉತ್ತಮ ಮನೋಧರ್ಮವುಳ್ಳ,  ಪೂರ್ವಗ್ರಹ ಪೀಡಿತರಲ್ಲದ ನಿಷ್ಪಕ್ಷಪಾತಿ ನೃತ್ಯ ಶಿಕ್ಷಕರೂ ಬೇಕು! ತಮ್ಮ ಬೆಳವಣಿಗೆಯ ದಿನಗಳಲ್ಲಿ ಅದ್ಭುತವಾದ ದೈಹಿಕ/ ಬೌದ್ಧಿಕ/ ಮಾನಸಿಕ ಶಕ್ತಿ ಹೊಂದಿರುವ ಮಕ್ಕಳಿಗೆ `ನೃತ್ಯ ಕಲಿಯುವಿಕೆ' ಕೇವಲ ಶೈಕ್ಷಣಿಕ ನೆಲೆಯಲ್ಲಿ ಮಾತ್ರ ಸೀಮಿತಗೊಳ್ಳಬಾರದು. ಕಲಾ ಶಿಕ್ಷಕರು ತಮ್ಮ ಶಿಷ್ಯರನ್ನು ಬರೀ ನೃತ್ಯ ಕ್ಷೇತ್ರಕ್ಕೆ ಪರಿಚಯಿಸಿದರಷ್ಟೇ ಸಾಲದು. ಬದಲಾಗಿ, ಕಲಿಕೆಯಿಂದ ಆಗುವ ಪ್ರಯೋಜನವನ್ನೂ ತಿಳಿಸಿ, ಸ್ಪರ್ಧಾತ್ಮಕವಲ್ಲದ ದೃಷ್ಟಿಕೋನವನ್ನು ಬೆಳೆಸುವ ಜವಾಬ್ದಾರಿಯನ್ನೂ ಹೊರಬೇಕು. ಹಾಗಲ್ಲದೆ `ಕೇವಲ ಉಳ್ಳವರ' ಪಾಲಿಗೆ ವಿದ್ಯಾದಾನವನ್ನು ಮಾಡುವುದಾದರೆ, ಕಲೆ ತನ್ನ ಆಧ್ಯಾತ್ಮಿಕ ಸಾರವನ್ನು ಕಳೆದುಕೊಂಡು ನಶಿಸಿಹೋಗುವುದು ಖಚಿತ.
-ಡಾ. ಉಮಾ ಎನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT