ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದಲ್ಲಿ ಭಾರತೀಯರು ಅತಂತ್ರ

Last Updated 2 ಮೇ 2015, 19:30 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳ ಭೂಕಂಪದಿಂದಾಗಿ  ಸಾವಿರಾರು ಭಾರತೀಯರ ಬದುಕು ಅತಂತ್ರವಾಗಿದೆ. ಹತ್ತಾರು ವರ್ಷಗಳ ಹಿಂದೆ ಬದುಕು ಕಟ್ಟಿಕೊಳ್ಳಲು ವಲಸೆ ಬಂದಿರುವ ಜನರ ದುಡಿಮೆಗೂ ಕಲ್ಲು ಬಿದ್ದಿದೆ. ಅನೇಕರು ಊರು ಬಿಟ್ಟಿದ್ದಾರೆ. ಬಹುತೇಕರು ಹೋಗಬೇಕೇ ಅಥವಾ ಇಲ್ಲೇ ಉಳಿಯಬೇಕೇ ಎನ್ನುವ ಗೊಂದಲದಲ್ಲಿದ್ದಾರೆ. ಭಾರತದಿಂದ ವಲಸೆ ಬಂದವರು ಆಗರ್ಭ ಶ್ರೀಮಂತರೇನಲ್ಲ. ದಿನನಿತ್ಯದ ಕೂಳಿಗೆ ಕೂಲಿ ಹುಡುಕಿಕೊಂಡು ಬಂದವರು.

ಭೂಕಂಪದಿಂದ ನೇಪಾಳದಲ್ಲಿ ಪರಿಹಾರ ಹಾಗೂ ಪುನರ್ವಸತಿ ಕಾರ್ಯ ಬಿಟ್ಟು ಉಳಿದೆಲ್ಲ ಕೆಲಸ ಸ್ಥಗಿಗೊಂಡಿದೆ. ನೈಸರ್ಗಿಕ ದುರಂತದಲ್ಲಿ ಹಲವು ಭಾರತೀಯರ ಮನೆಗಳು ಸಂಪೂರ್ಣ ನೆಲಸಮವಾಗಿವೆ. ಕೆಲವರ ಮನೆಗಳು ಭಾಗಶಃ ಹಾನಿಯಾಗಿವೆ. ಅನೇಕ ಮನೆಗಳು ಬಿರುಕು ಬಿಟ್ಟಿವೆ. ಜೀವಭಯ ಇರುವುದರಿಂದ ಬಹುತೇಕರು ಸ್ಥಳೀಯರೊಂದಿಗೆ ಟೆಂಟ್‌ಗಳಲ್ಲಿದ್ದಾರೆ.

ತಾತ್ಕಾಲಿಕ ಟೆಂಟ್‌ಗಳಲ್ಲಿ ಅಗತ್ಯ ಸೌಲಭ್ಯಗಳಿಲ್ಲದೆ ಬೇಸತ್ತವರು ಜಾಗ ಖಾಲಿ ಮಾಡಿದ್ದಾರೆ. ಭಾರತ ಸರ್ಕಾರ ವ್ಯವಸ್ಥೆ ಮಾಡಿರುವ ವಿಶೇಷ ಬಸ್ಸುಗಳು ನೇಪಾಳ ಗಡಿಯಲ್ಲಿರುವ ಬಿಹಾರದ ರಕ್ಷಾಲ್‌, ಉತ್ತರ ಪ್ರದೇಶದ ಸೊನಾಲಿ ಹಾಗೂ ಗೋರಖ್‌ಪುರಗಳಿಗೆ ಜನರನ್ನು ಹೊತ್ತೊಯ್ಯುತ್ತಿವೆ. ಇದುವರೆಗೆ 750ಕ್ಕೂ ಹೆಚ್ಚು ಬಸ್ಸುಗಳನ್ನು ಬಿಡಲಾಗಿದೆ. ಮೊದಲ ಮೂರ್ನಾಲ್ಕು ದಿನ ವಿಶೇಷ ವಿಮಾನಗಳಲ್ಲಿ ಜನರನ್ನು ಕಳುಹಿಸಲಾಯಿತು. ಅನಂತರ ಸ್ವದೇಶಕ್ಕೆ ಹಿಂತಿರುಗುವವರ ಸಂಖ್ಯೆ ಸಿಕ್ಕಾಪಟ್ಟೆ ಏರಿದ್ದರಿಂದ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಬಿಹಾರ, ಜಾರ್ಖಂಡ್‌, ಒಡಿಶಾ ಮತ್ತು ಉತ್ತರ ಪ್ರದೇಶದವರು ನೇಪಾಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹತ್ತು ವರ್ಷದ ಹಿಂದೆ ಬಿಹಾರದ ಪೂರ್ವ ಚಂಪಾರಣ್ಯ ಜಿಲ್ಲೆಯಿಂದ ನೇಪಾಳಕ್ಕೆ ಬಂದಿರುವ ಸುಮಾರು 50 ವರ್ಷದ ಮೊಹಮ್ಮದ್‌ ಗುಲ್ಫಾಮ್‌ ಅನ್ಸಾರಿ ಅವರು ದರ್ಜಿ ಕೆಲಸ ಮಾಡುತ್ತಿದ್ದಾರೆ. ಕಠ್ಮಂಡುವಿನಲ್ಲಿ ನೆಲೆಸಿರುವ ಅವರು ಪತ್ನಿ, ಮಗಳ ಜತೆ ಊರಿಗೆ ಹಿಂತಿರುಗಿದ್ದಾರೆ.

‘ನಮ್ಮ ಮನೆ ಪೂರ್ಣ ಬಿದ್ದು ಹೋಗಿದೆ. ವಾರದಿಂದ ಟೆಂಟ್‌ನಲ್ಲಿದ್ದೆವು. ಇನ್ನು ಅಲ್ಲಿರಲು ಅಸಾಧ್ಯವಾದ್ದರಿಂದ ಊರಿಗೆ ಹೋಗುತ್ತಿದ್ದೇವೆ. ಸರ್ಕಾರ ಊಟ, ತಿಂಡಿಗೆ ವ್ಯವಸ್ಥೆ ಮಾಡುವುದು ಬೇಡ. ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಒದಗಿಸಬೇಕಲ್ಲವೇ? ಕನಿಷ್ಠ ಅಗತ್ಯಗಳನ್ನು ಪೂರೈಸದಿದ್ದರೆ ಹೇಗೆ ಬದುಕುವುದು?’ ಎಂದು ಅನ್ಸಾರಿ ಬಸ್‌ ಹತ್ತುವ ಮೊದಲು ಪ್ರಶ್ನಿಸಿದರು. ಅವರ ಮಾತಿನಲ್ಲಿ ಎಳ್ಳಷ್ಟೂ ಸುಳ್ಳಿರಲಿಲ್ಲ. ಅನೇಕರು ಅವರ ಆರೋಪಗಳನ್ನೇ ಪುನರುಚ್ಚರಿಸಿದರು.

ಹನ್ನೆರಡು ವರ್ಷದ ಹುಡುಗನಿದ್ದಾಗಲೇ ನೇಪಾಳಕ್ಕೆ ಬಂದಿರುವ ಬಿಹಾರದ ಮಹಮೂದ್‌ ಆಲಂ, ಮರದ ಪೆಟ್ಟಿಗೆ ಮಾಡುತ್ತಾರೆ. ಅವರಿಗೀಗ 35 ವರ್ಷ. ಪತ್ನಿ, ನಾಲ್ಕು ಜನ ಮಕ್ಕಳ ಜತೆ ಊರಿಗೆ ವಾಪಸಾಗಿದ್ದಾರೆ. ಅವರ ಮನೆ ಬಿದ್ದಿಲ್ಲ. ಪದೇ ಪದೇ ಭೂಮಿ ಕಂಪಿಸುತ್ತಿರುವುದರಿಂದ ಭಯ ಬಿದ್ದಿದ್ದಾರೆ.

‘ಬಿಹಾರದಲ್ಲಿ ಕೆಲಸ ಸಿಗುವುದಿಲ್ಲ. ತಿಂಗಳು ಬಿಟ್ಟು ಇಲ್ಲಿಗೇ ಬರುತ್ತೇವೆ. ದುಡಿಮೆ ಸಿಗುವ ಕಡೆಗೆ ಬರಬೇಕಲ್ಲವೇ’ ಎಂದು ಅವರು ಕೇಳಿದರು.

ಆಲಂ ಪತ್ನಿ ರುಕ್ಸಾನ ಖಾದ್ರಿ ಅವರಿಗೆ ವಾಪಸ್‌ ಬರಲು ಸುತಾರಾಂ ಮನಸಿಲ್ಲ. ಪತಿ ಮಾತು ಮೀರುವ ಸ್ಥಿತಿಯಲ್ಲಿ ಅವರಿಲ್ಲ. ‘ಮಕ್ಕಳು ವಾರದಿಂದ ಅನ್ನ, ನೀರು ಸಿಗದೆ ಪರದಾಡಿದ್ದಾರೆ. ಎಷ್ಟು ದಿನ ಅವರನ್ನು ಉಪವಾಸ ಕೆಡವಬೇಕು. ಬೇರೆ ದಾರಿ ಇಲ್ಲದೆ ಅನಿವಾರ್ಯವಾಗಿ ಊರಿಗೆ ಹೋಗುತ್ತಿದ್ದೇವೆ’ ಎಂದು ಅವರು ಸಂಕಷ್ಟ ತೋಡಿಕೊಂಡರು.

ಪ್ಲಾಸ್ಟಿಕ್‌ ಪದಾರ್ಥಗಳನ್ನು ಸಂಗ್ರಹಿಸಿ, ಮಾರಾಟ ಮಾಡುವ ಬಿಹಾರ ಮೋತಿಹಾರ್‌ ಜಿಲ್ಲೆಯ ಸಂತೋಷ್‌ ಕುಮಾರ್‌ ಹನ್ನೆರಡು ವರ್ಷದಿಂದ ನೇಪಾಳದಲ್ಲಿದ್ದಾರೆ. ಅವರ ನೆಂಟರು, ಪರಿಚಿತರು, ನೆರೆಹೊರೆಯವರೂ ಸೇರಿ ದರೆ ದುಡಿಮೆಗಾಗಿ ವಲಸೆ ಬಂದಿ ರುವವರ ಸಂಖ್ಯೆ 32 ದಾಟಲಿದೆ.

ಸ್ಮಶಾನದಲ್ಲೂ ಮದುವೆ!
ಭೂಕಂಪದಿಂದ ಮುಂದೂಡಲಾಗಿದ್ದ ಫ್ರಾನ್ಸ್‌ ಯುವತಿ ಮತ್ತು ನೇಪಾಳ ಯುವಕನ ಮದುವೆ ಶುಕ್ರವಾರ ಕೆಲವೇ ಕೆಲವು ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ  ನೆಡೆಯಿತು. ಕಳೆದ ವಾರ ನಿಗದಿಯಾಗಿದ್ದ  ಮದುವೆಯನ್ನು ಭೂಕಂಪನದ ಕಾರಣಕ್ಕಾಗಿ ಮುಂದೂಡಲಾಗಿತ್ತು.

ರೋಗದ ಭೀತಿ: ಕಾಲರಾ, ವಾಂತಿ,ಭೇದಿಯಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಎಂದು ಯುನಿಸೆಫ್‌ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 

ರೋಗಗಳು ಹರಡದಂತೆ ತಡೆಯುವುದು ಹೇಗೆ ಎಂಬುವುದು  ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿದೆ.
ನೇಪಾಳ ಭೂಕಂಪಕ್ಕೆ ಇದುವರೆಗೂ ಕನಿಷ್ಠ 38 ಭಾರತೀಯರು ಮತ್ತು 50 ವಿದೇಶಿಯರು ಬಲಿಯಾಗಿದ್ದಾರೆ ಎಂದು ನೇಪಾಳ ಗೃಹ ಇಲಾಖೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT