ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಕಜ್‌ಗೆ ಸತತ ಆರನೇ ವಿಜಯ

ವಿಶ್ವ ಸ್ನೂಕರ್‌: ಬೆಂಗಳೂರಿನ ಆಟಗಾರನಿಗೆ ಅಗ್ರಸ್ಥಾನ, ನಾಕೌಟ್‌ಗೆ ಲಕ್ಷ್ಮಣ್‌
Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹನ್ನೆರಡು ಬಾರಿಯ ವಿಶ್ವ ಚಾಂಪಿಯನ್‌ ಪಂಕಜ್‌ ಅಡ್ವಾಣಿ ನಿರೀಕ್ಷೆ­ಯಂ­ತೆಯೇ ಗುಂಪಿನ ಆರೂ ಪಂದ್ಯಗಳಲ್ಲಿ ಗೆಲುವು ಪಡೆದು ಐಬಿಎಸ್ಎಫ್‌ ವಿಶ್ವ ಸ್ನೂಕರ್‌ ಚಾಂಪಿ­ಯನ್‌­ಷಿಪ್‌ ‘ಎಚ್‌’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದರು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ‘ಗೋಲ್ಡನ್‌ ಬಾಯ್‌’ ಮಂಗಳವಾರಪ್ರಾಬಲ್ಯ ಮೆರೆದರು. ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ
4-0 ಫ್ರೇಮ್‌ಗಳಿಂದ ಸ್ವಿಟ್ಜರ್‌ಲೆಂಡ್‌ನ ಮೈಕ್‌ ಟೊಥ್‌ ಅವರನ್ನು ಮಣಿಸಿದರು.

ಅನುಭವಿ ಆಟಗಾರ ಪಂಕಜ್‌ ಮೊದಲ ಫ್ರೇಮ್‌ನಲ್ಲಿ 90-12ರಲ್ಲಿ ಸುಲಭ ಗೆಲುವು ಪಡೆದು­ಕೊಂಡರು. ಕಪ್ಪು ಬಣ್ಣದ ಬಾಲನ್ನೇ ಗುರಿ­ಯಾಗಿರಿ­ಸಿಕೊಂಡು ಆಡಿ ಗೆಲುವಿನ ಅಂತರ ಹೆಚ್ಚಿಸಿ­ಕೊಂಡರು. ಬೆಂಗಳೂರಿನ ಆಟಗಾರನಿಗೆ ಎರಡನೇ ಫ್ರೇಮ್‌ನಲ್ಲಿ 61-17ರಲ್ಲಿ ಜಯ ಒಲಿಯಿತು. ಈ ಪಂದ್ಯದಲ್ಲಿ ಪಂಕಜ್ ಗೆಲುವು ನಿರೀಕ್ಷಿತವೇ ಆಗಿತ್ತು.

ಮೊದಲ ಎರಡೂ ಫ್ರೇಮ್‌ಗಳಲ್ಲಿ ಪಂಕಜ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರಿಂದ ಎದುರಾಳಿ ಆಟಗಾರ ಒತ್ತಡಕ್ಕೆ ಒಳಗಾದರು.

13 ವರ್ಷದ ಕಾಮಿಯಾಷಿ ಅಪೂರ್ವ ಆಟ
ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಅತಿ ಕಿರಿಯ ಸ್ಪರ್ಧಿ ಎನಿಸಿರುವ ಜಪಾನ್‌ನ ಕೈಷಿನ್‌ ಕಾಮಿಯಾಷಿ ಚುರುಕಿನ ಆಟದ ಮೂಲಕ ನೆರೆದಿದ್ದ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು.
ಜಪಾನ್ ನ್ಯಾಷನಲ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ ಅಪ್‌ ಆಗಿದ್ದ 13 ವರ್ಷದ ಕಾಮಿಯಾಷಿ ಆಕರ್ಷಣೆಯ ಕೇಂದ್ರ ಬಿಂದು ಎನಿಸಿದ್ದಾರೆ. ಮಂಗಳವಾರದ ಪಂದ್ಯದಲ್ಲಿ 4-0 ಫ್ರೇಮುಗಳಿಂದ  ಫಿನ್‌ಲೆಂಡ್‌ನ 39 ವರ್ಷದ ಜಾನಿ ಕನಾನೆನ್‌ ಎದುರು ಜಯ ಪಡೆದು ಅಚ್ಚರಿಯ ಫಲಿತಾಂಶ ನೀಡಿದರು. ಚುರುಕಾದ ಬೌಲ್‌ಗಳನ್ನು ಗುರಿ ಸೇರಿಸಿದ ಬಾಲಕನ ಆಟಕ್ಕೆ ಅಭಿಮಾನಿಗಳು ಚಪ್ಪಾಳೆಯ ಉಡುಗೊರೆ ನೀಡಿದರು.
‘ಜೆ’ ಗುಂಪಿನಲ್ಲಿ ಕಾಮಿಯಾಷಿ ಪಡೆದ ಮೊದಲ ಗೆಲುವು ಇದಾಗಿದೆ. ಬೆಂಗಳೂರಿನ ವರ್ಷಾ ಸಂಜೀವ್‌ ಭಾರತದ ಅತ್ಯಂತ ಕಿರಿಯ ಸ್ಪರ್ಧಿ ಎನಿಸಿದ್ದಾರೆ.

ಮೂರನೇ ಫ್ರೇಮ್‌ನಲ್ಲಿ ಪಂಕಜ್‌ 78 ಪಾಯಿಂಟ್ಸ್‌ ಕಲೆ ಹಾಕಿದರೆ, ಟೊಥ್‌ ಅವರಿಗೆ ಪಾಯಿಂಟ್‌ ಖಾತೆ ತೆರೆಯಲು ಸಾಧ್ಯವಾಗಲಿಲ್ಲ!.
ನಾಲ್ಕನೇ ಫ್ರೇಮ್‌ನಲ್ಲೂ 75-10ರಲ್ಲಿ ಜಯ ಒಲಿಸಿಕೊಂಡರು. ಈ ಪಂದ್ಯದಲ್ಲಿ ಪಂಕಜ್ ಒಟ್ಟು 304 ಪಾಯಿಂಟ್‌ಗಳನ್ನು ಕಲೆ ಹಾಕಿದರು.

‘ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನಾಕೌಟ್‌ ಹಂತ ತಲುಪಬೇಕು ಅಂದುಕೊಂಡಿದ್ದೆ. ನಾನು ಅಂದುಕೊಂಡಂತೆಯೇ ಆಗಿದೆ. ಆದರೆ, ತವರಿನಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಜಯಿಸಲು ಈಗ ಅತ್ಯುತ್ತಮ ಅವಕಾಶ ಸಿಕ್ಕಿದೆ. ಆದರೆ, ಮುಂದಿನ ಪಂದ್ಯಗಳು ಸವಾಲಿನಿಂದ ಕೂಡಿರಲಿವೆ’ ಎಂದು ಪಂಕಜ್ ಪಂದ್ಯದ ನಂತರ ನುಡಿದರು.

29 ವರ್ಷದ ಪಂಕಜ್ ಈ ವರ್ಷ ಸ್ನೂಕರ್‌­ಗಿಂತಲೂ ಹೆಚ್ಚಾಗಿ ಬಿಲಿಯರ್ಡ್ಸ್‌ನತ್ತ ಗಮನ ಹರಿಸಿ­ದ್ದರು. ಹೋದ ತಿಂಗಳು ಬಿಲಿಯರ್ಡ್ಸ್‌ನಲ್ಲಿ ಎರಡು ವಿಶ್ವ ಪ್ರಶಸ್ತಿ ಜಯಿಸಿರುವ ಅವರು ಈಗ ಸ್ನೂಕರ್‌ನಲ್ಲಿ ಚಾಂಪಿಯನ್‌ ಆಗುವ ಕನಸು ಹೊಂದಿದ್ದಾರೆ.

ನಾಕೌಟ್‌ ಹಂತಕ್ಕೆ ಲಕ್ಷ್ಮಣ್: ‘ಬಿ’ ಗುಂಪಿನ ಕೊನೆಯ ಲೀಗ್‌ ಪಂದ್ಯದಲ್ಲಿ ಗೆಲುವು ಪಡೆದ ಭಾರತದ ಲಕ್ಷ್ಮಣ್ ರಾವತ್‌ 4-1ರಲ್ಲಿ ಬೆಲ್ಜಿಯಂನ ಜೂರಿ­ಯನ್‌ ಹಸ್‌ಡೆನ್ಸ್‌ ಎದುರು ಗೆಲುವು ಪಡೆದು ನಾಕೌಟ್‌ ಹಂತಕ್ಕೆ ಸ್ಥಾನ ಭದ್ರಪಡಿಸಿ­ಕೊಂಡರು.

ಲಕ್ಷ್ಮಣ್‌ ಮೊದಲ ಫ್ರೇಮ್‌ನಲ್ಲಿ 9-80ರಲ್ಲಿ ಸೋಲು ಕಂಡರು. ನಂತರದ ನಾಲ್ಕೂ ಫ್ರೇಮ್‌­ಗಳಲ್ಲಿ ಕ್ರಮವಾಗಿ 68-10, 66-37, 55-11, 66-33ರಲ್ಲಿ ಜಯಭೇರಿ ಮೊಳಗಿಸಿದರು.

ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ವರುಣ್‌ ಮದನ್‌ 4-1ರಲ್ಲಿ ರಷ್ಯಾದ ಇವಾನ್‌ ಕಕೊವಸ್ಕಿ ಮೇಲೂ, ರಾಹುಲ್ ಅಜಯ್‌ ಸಚದೇವ್‌ 4-1ರಲ್ಲಿ ಸ್ವಿಟ್ಜರ್‌ಲೆಂಡ್‌ನ ಜಿರ್ನಿ ಜಾನ್ಸನ್‌ ವಿರುದ್ಧವೂ, ಶಹಬಜ್‌ ಅದಿಲ್ ಖಾನ್‌ 4-2ರಲ್ಲಿ ಸಿಂಗಪುರದ ಅಂಗ್ ಬೂನ್ ಚಿನ್‌ ಮೇಲೂ, ಲಕ್ಕಿ ವಟ್ನಾನಿ 4-2ರಲ್ಲಿ ಹಾಂಕಾಂಗ್‌ನ ಚೇಯಿ ವೇಯಿ ಯು ವಿರುದ್ಧವೂ ಗೆಲುವು ಪಡೆದರು. ಆದರೆ, ಮನನ್‌ ಚಂದ್ರಾ, ರೂಪೇಶ್‌ ಷಾ ಪರಾಭವಗೊಂಡರು.

ಮಾಸ್ಟರ್ಸ್‌ ವಿಭಾಗದಲ್ಲಿ ಭಾರತದ ಅಲೋಕ್‌ ಕುಮಾರ್‌ 3-0ರಲ್ಲಿ ಈಜಿಪ್ಟ್‌ನ ಜಾರ್ಜಿಯಿಸ್‌ ಎಸ್ತೊಟಿಯು ಮೇಲೂ, ನದೀಮ್‌ ಅಜೀಜ್‌ ಶೇಠ್‌ 3-0ರಲ್ಲಿ ಸ್ವಿಟ್ಟರ್‌ಲೆಂಡ್‌ನ ಟಾಮ್‌ ಜಿಮ್ಮೆರಿಮನ್‌ ವಿರುದ್ಧವೂ, ಕೆ. ವೆಂಕಟೇಶಮ್‌ 3-0ರಲ್ಲಿ ಈಗ್ನೇಷನ್ ಸ್ಟಾನ್‌ಫೀಲ್ಡ್‌ ಮೇಲೂ, ರಫತ್‌ ಹಬೀಬ್‌ 3-0ರಲ್ಲಿ ಕೆನಡಾದ ಪಾಲ್‌ ಫ್ಲೆಮಿಂಗ್‌ ವಿರು­­ದ್ಧವೂ, ಎಸ್‌. ಪ್ರೇಮ್ ಪ್ರಕಾಶ್‌ 3-0ರಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಸಲೀಮ್‌ ಅಲಿ ಅಸುವಾಡಿಯಾ ಮೇಲೂ ಜಯ ಸಾಧಿಸಿ­ದರು.

ಉಮಾದೇವಿಗೆ ಸೋಲು: ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಆರ್‌. ಉಮಾದೇವಿ ನಾಗರಾಜ್‌ ಮತ್ತೆ ಸೋಲು ಕಂಡಿದ್ದಾರೆ. ಅವರು  0-3ರಲ್ಲಿ ಭಾರತದವರೇ ಆದ ನೀನಾ ಪ್ರವೀಣ್‌ ಎದುರು ಸೋತರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಪುಣೆಯ ಅಮಿ ಕಮಾನಿ 3-1 (51-63, 53-42,65-28, 59-48) ರಷ್ಯಾದ ಅನಸ್ತೇಸಿಯಾ ನೆಚವಾಯಿ ಮೇಲೂ, ವಿದ್ಯಾ ಪಿಳ್ಳೈ 3-0ರಲ್ಲಿ ಭಾರತದ ನೀತಾ ಸಾಂಘ್ವಿ ವಿರುದ್ಧವೂ, ಜೂಡ್‌ ವಾಲಿಯಾ 3-0ರಲ್ಲಿ ಸುನಿತಿ ದಾಮಿನಿ ಮೇಲೂ, ವರ್ಷಾ ಸಂಜೀವ್‌ 3-1ರಲ್ಲಿ ಅಮೆ ಕ್ಲೆಯರ್‌ ಕೀಂಗ್‌ ವಿರುದ್ಧವೂ ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT