ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪಂಚಲಿಂಗೇಶ್ವರ' ಜಾತ್ರಾ ಸಡಗರ

ಒಂದೆರಡಲ್ಲ, ಬರೋಬ್ಬರಿ 4750 ಚದರ ಅಡಿ ವ್ಯಾಪ್ತಿಯ ವಿಸ್ತಾರವಾದ ಅಡಿಪಾಯ. 67 ಅಡಿ ಎತ್ತರದ ಮೂರು ಅಂತಸ್ತುಗಳ ಇಳಿಜಾರು ಛಾವಣಿ. ಛಾವಣಿಗಳಿಗೆ ತಾಮ್ರದ ಹೊದಿಕೆ. 1.20 ಕೋಟಿ ರೂಪಾಯಿ ವೆಚ್ಚದಲ್ಲಿ ಧರ್ಮಸ್ಥಳದಿಂದ ಕೊಡುಗೆಯಾಗಿ ಬಂದ ಮೂರು ಸ್ವರ್ಣ ಲೇಪಿತ ಕಳಸಗಳು.

ಇದು ಮರುಹುಟ್ಟು ಪಡೆದು ಭವ್ಯವಾಗಿ ತಲೆ ಎತ್ತಿ ನಿಂತಿರುವ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವಿಹಂಗಮ ನೋಟ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡದೆಂದು ಬಣ್ಣಿಸಲಾದ ವಿಟ್ಲದ ಈ ಪಂಚಲಿಂಗೇಶ್ವರ ದೇವಾಲಯಲ್ಲಿ ಇದೀಗ ಸಡಗರವೋ ಸಡಗರ. ಗ್ರಾಮದ ಪ್ರಮುಖ ರಸ್ತೆಗಳು, ರಥ ಎಳೆಯುವ ಗದ್ದೆ, ದೇವಾಲಯದ ಆವರಣ ಸೇರಿದಂತೆ ಎಲ್ಲ ಕಡೆ ಚಪ್ಪರ, ತಳಿರು ತೋರಣದ ಶೃಂಗಾರ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ತಂಡೋಪತಂಡವಾಗಿ ಸ್ವಯಂ ಸೇವಕರಾಗಿ ಪಂಚಲಿಂಗೇಶ್ವರನ ಸೇವಾ ಕೈಂಕರ್ಯ ನಡೆಸುತ್ತಿರುವ ಜನರ ದಂಡು. ಪ್ರತಿನಿತ್ಯ ಅನ್ನದಾನ. ದೇವಾಲಯದ ಆವರಣದಲ್ಲೆಲ್ಲಾ ಭಕ್ತಾದಿಗಳಿಂದ ಬಂದ ಲೋಡುಗಟ್ಟಲೆ ಹೊರೆ ಕಾಣಿಕೆಯ ರಾಶಿ.

2001ರಲ್ಲಿ ಕಂಡ ಜೀರ್ಣೋದ್ಧಾರದ ಕನಸು 2013ರಲ್ಲಿ ನನಸಾಗುವ ವೇಳೆಗೆ ಆಗಿದ್ದುದು ಕೇವಲ ಜೀರ್ಣೋದ್ಧಾರವಲ್ಲ, ಬದಲಿಗೆ ದೇಗುಲದ ಪುನರ್ ನಿರ್ಮಾಣ. ಸಂಪೂರ್ಣ ಮಣ್ಣಿನಿಂದ ನಿರ್ಮಾಣವಾಗಿದ್ದ ದೇವಾಲಯ ಈಗ ಭವ್ಯವಾದ ಶಿಲಾಮಯ ದೇವಸ್ಥಾನವಾಗಿ ಎದ್ದು ನಿಂತಿದೆ. ನಿನ್ನೆಯಿಂದ (ಸೋಮವಾರದಿಂದ) 29ರವರೆಗೆ ಮರು ಸಮರ್ಪಿತ ದೇಗುಲದಲ್ಲಿ `ವಿಟ್ಲಾಯನ' ಎಂದೇ ಖ್ಯಾತಿ ಪಡೆದ ಜಾತ್ರೆಯ ಸಡಗರ.

ಪುರಾತನವಾದ ಈ ಪಂಚಲಿಂಗೇಶ್ವರ ದೇವಸ್ಥಾನ ಪಾಂಡವ ನಿರ್ಮಿತ ದೇವಸ್ಥಾನ ಎಂದೇ ಪ್ರತೀತಿ. ಪಾಂಡವರು  ಅರಗಿನ ಅರಮನೆಯಿಂದ ಪಾರಾದ ಬಳಿಕ ಕೆಲಕಾಲ ವಾಸವಿದ್ದ ಏಕಚಕ್ರ ನಗರವೇ ಈಗಿನ ವಿಟ್ಲ ಎಂಬ ನಂಬಿಕೆ ಇದೆ. ಭೀಮ ಬಕಾಸುರನನ್ನು ಕೊಂದದ್ದು ಇಲ್ಲಿಯೇ ಎಂದು  ಹೇಳುವ ಜನ ಅದಕ್ಕೆ ಸಾಕ್ಷಿ ಎಂಬಂತೆ ದೇವಸ್ಥಾನದ ಆವರಣದಲ್ಲೇ ಕುಂತಿ ಮನೆ, ದೇವಾಲಯದಲ್ಲಿ ಕುಂತೀಶ್ವರ ಗುಡಿ, ಬಕಾಸುರ ವಾಸವಾಗಿದ್ದನೆನ್ನಲಾದ ಸಮೀಪದ ಕಳಂಜಿಮಲೆಯ ಬಕಾಸುರ ಗುಹೆ, ಭೀಮ- ಬಕಾಸುರ ಕದನದಲ್ಲಿ  ಬಕಾಸುರನ ಅವಯವಗಳು ಹೋಗಿ ಬಿತ್ತೆನ್ನಲಾದ ಜಾಗಗಳಿಗೆ ತಲೆಂಗಳ, ಕಣ್ಣೂರು, ಕೈಯೂರು, ಬಾಯಾರು ಎಂದು ಹೆಸರಾದದ್ದು, ಭೀಮ ಸ್ನಾನ ಮಾಡಿದ ಕೆರೆ -ನೆತ್ತರಕೆರೆ ಎಂದು ಹೆಸರಾದ `ದಂತಕತೆ'ಯನ್ನು ಉಸುರುತ್ತಾರೆ.

ಖ್ಯಾತ ಸಂಶೋಧಕ ಡಾ. ಪಿ. ಗುರುರಾಜ ಭಟ್ ಅವರ ಪ್ರಕಾರ ಪಂಚಲಿಂಗೇಶ್ವರ ದೇವಸ್ಥಾನ ಕ್ರಿ.ಶ. 7-8ನೇ ಶತಮಾನದ್ದು. ಕ್ರಿ.ಶ. 1257ಕ್ಕೂ ಮೊದಲು ವಿಟ್ಲ ಸೀಮೆಯನ್ನು ಆಳುತ್ತಿದ್ದ ದೊಂಬ ಹೆಗ್ಗಡೆ ಅರಸು ಮನೆತನದ ಆರಾಧ್ಯ ದೈವ ವಿಟ್ಲದ ಪಂಚಲಿಂಗೇಶ್ವರ ಎನ್ನಲಾಗಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಗೌರವಾಧ್ಯಕ್ಷತೆಯಲ್ಲಿ ರೂಪುಗೊಂಡ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಪೇಜಾವರದ ವಿಶ್ವೇಶ ತೀರ್ಥ ಶ್ರೀಪಾದರು, ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ಒಡಿಯೂರಿನ ಗುರುದೇವಾನಂದ ಸ್ವಾಮೀಜಿ, ಶ್ರಿ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತಿತರ ಯತಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯಿತು.

2007ರ ಜನವರಿ 27ರಂದು  `ಬಾಲಾಲಯ' (ದೇವಸ್ಥಾನದ ಮಾದರಿ) ಉದ್ಘಾಟನೆ, ನಂದಿ (ಬಸವ) ಮೂಲಕ ಕಳಸವನ್ನು ಕೆಳಕ್ಕೆ ಎಳೆಯುವುದರೊಂದಿಗೆ ಜೀರ್ಣೋದ್ಧಾರ ಕಾರ್ಯಕ್ಕೆ ನಾಂದಿ. ಒಂದೇ ದಿನದಲ್ಲಿ ಸಹಸ್ರಾರು ಭಕ್ತರು ಮೂರು ಅಂತಸ್ತಿನ ಛಾವಣಿಯನ್ನು ಬಿಚ್ಚಿದರು. ಮುಂದಿನ 9 ದಿನದಲ್ಲಿ  ಅಲ್ಲಿ ಉಳಿದಿದ್ದುದು ಅಡಿಪಾಯದ ಸ್ಥಳ ಮಾತ್ರ. ಅಂದಿನಿಂದ ಆರಂಭವಾದ ದೇಗುಲ ಪುನರ್ ನಿರ್ಮಾಣದ ಕಾರ್ಯ ನಿರಂತರವಾಗಿ 5 ವರ್ಷಗಳ ಕಾಲ ಮುಂದುವರೆಯಿತು.

ಬೃಹದಾಕಾರದ ದೇವಾಲಯದ  ಗೋಡೆಗಳಲ್ಲಿ ಕೆಂಪು ಕಲ್ಲುಗಳ ಸಾಲು, ಹೊರಭಾಗಕ್ಕೆ ಸಂಪೂರ್ಣವಾಗಿ ಶಿಲಾಮಯ ಗೋಡೆ. ಈ ಶಿಲೆಗಳಲ್ಲಿ ಸುಂದರ ಕೆತ್ತನೆ. `ಕೊಡಿಮರ' ಎಂದು ಕರೆಯಲಾಗುವ ಬೃಹತ್ ಧ್ವಜಸ್ಥಂಭವನ್ನು ದೀರ್ಘಕಾಲದ ಬಾಳಿಕೆಗಾಗಿ ಎಳ್ಳೆಣ್ಣೆಯ ತೊಟ್ಟಿಯಲ್ಲಿ ಮುಳಗಿಸಿ ಇಡಲಾಗಿತ್ತು . ಇದಕ್ಕೆ ಭಕ್ತಾದಿಗಳೆಲ್ಲರೂ ದೇಣಿಗೆ ಅರ್ಪಿಸಿ ಎಳ್ಳೆಣ್ಣೆ ಎರೆದದ್ದು, ದೇವಾಲಯಕ್ಕೆ ಬಳಸಿದ ಮರಗಳಿಗೆ ಪರ್ಯಾಯವಾಗಿ ಸಹಸ್ರಾರು ಸಸಿಗಳು ವಿಟ್ಲ ಸೀಮೆ ಪರಿಸರಲ್ಲಿ ವಿತರಿಸಿ ನೆಟ್ಟದ್ದು ಸದಾಕಾಲ ನೆನಪಿನಲ್ಲಿ ಉಳಿಯುವ ಘಟನೆಗಳಾದವು.

ಐದು ಲಿಂಗ ಏಕೆ?
ಪಂಚಲಿಂಗೇಶ್ವರ ದೇಗುಲದ ಈ ಐದು ಲಿಂಗಗಳು ಪಂಚತತ್ವಗಳ ಸೂಚಕ. ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಎಂಬ ಶಿವನ ಪಂಚಸ್ವರೂಪಗಳು ಭಾರತೀಯ ಪರಂಪರೆಯಲ್ಲಿ ಶಾಶ್ವತವಾಗಿ ಮಿಳಿತಗೊಂಡ ಪಂಚತತ್ವಗಳನ್ನು ಪ್ರತಿನಿಧೀಕರಿಸುವ ಮೂರ್ತ ಸ್ವರೂಪಗಳು.

ಸದ್ಯೋಜಾತನಾಗಿ ಮೂಲಾಧಾರ(ಭೂಮಿ), ವಾಮದೇವನಾಗಿ ಸ್ವಾಧಿಷ್ಠಾನ(ಜಲ), ಅಘೋರನಾಗಿ ಮಣಿಪು (ಅಗ್ನಿ), ತತ್ಪುರುಷನಾಗಿ ಅನಾಹತ(ವಾಯು), ಈಶಾನನಾಗಿ ವಿಸುದ್ಧ(ಆಕಾಶ) ತತ್ವಗಳನ್ನು ಪ್ರತಿನಿಧೀಕರಿಸುವುದು. ಪ್ರಕೃತಿಯ ಶಕ್ತಿಸೆಲೆಗಳಾದ ಪಂಚಭೂತಗಳಲ್ಲಿ ಪರಮೇಶ್ವರನನ್ನು ಪ್ರಮಾಣೀಕರಿಸಿ ಶಿರಬಾಗಿ ಉಪಾಸನೆಯನ್ನು ಸಲ್ಲಿಸುವ ಪದ್ಧತಿ ಇಲ್ಲಿದೆ.

ದೇವಸ್ಥಾನದ ಗರ್ಭಗುಡಿಯೂ ಅಷ್ಟೇ ವಿಶಿಷ್ಟವಾದದ್ದು. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕೇರಳದಲ್ಲಿ ಇರುವ ದೇವಾಲಯಗಳದು `ಗಜಪೃಷ್ಠಾಕೃತಿಯ' ಶೈಲಿ. ಮುಖಮಂಟಪಗಳೂ ಗರ್ಭಗುಡಿಗೆ ಹೊಂದಿಕೊಂಡಿರುವುದು ಇದರ ವಿಶೇಷತೆ. ಗರ್ಭಗುಡಿಯ ಹಿಂಭಾಗ ಆನೆಯ ಹಿಂಭಾಗದಂತೆ ಇರುವುದರಿಂದ ಈ ಹೆಸರು. ಈ ಪರಿಸರದಲ್ಲಿ ಇಷ್ಟೊಂದು ಬೃಹತ್ತಾದ ಗಜಪೃಷ್ಠ ಗರ್ಭಗುಡಿಯ ದೇವಾಲಯ ಬೇರಾವುದೂ ಇಲ್ಲದೇ ಇರುವುದು ಈ ದೇವಾಲಯದ ಹೆಗ್ಗಳಿಕೆ. ಗಣಪತಿ, ಅಮ್ಮನವರ ಗುಡಿ, ಕುಂತೀಶ್ವರ ಗುಡಿ ಇವು ದೇವಾಲಯ ಪ್ರಾಂಗಣದಲ್ಲೇ ಇರುವ ಇತರ ಗುಡಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT