ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಂಗವೂ ನಕ್ಷತ್ರವೂ

Last Updated 30 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯನ ಬಗೆಗಿನ ವಿವಾದ ಈಚಿನ ಕೆಲವು ವರ್ಷಗಳಿಂದ ನಡೆಯುತ್ತಿದ್ದು ಅದು ಮೊನ್ನೆ ‘ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ’ ಕಾರ್ಯಕ್ರಮದ ಸಂದರ್ಭದಲ್ಲಿ ಅನಪೇಕ್ಷಿತ ತಿರುವನ್ನು ಪಡೆದುಕೊಂಡದ್ದು ವಿಷಾದನೀಯ.

ಆದ್ಯ ವಚನಕಾರ ದಾಸಿಮಯ್ಯ ಎಂಬುವನೊಬ್ಬನಿರುವುದನ್ನು ಯಾರೂ ನಿರಾಕರಿಸುತ್ತಿಲ್ಲ. ಮತ್ತು ನಮ್ಮ  ನೇಕಾರ ಬಂಧುಗಳು ಮೊನ್ನೆ  ಆಚರಿಸಿದ ಜಯಂತಿ ಆ ಆದ್ಯ ವಚನಕಾರನದೇ ಹೊರತು ಅದರ ವಿರೋಧಿ ಗುಂಪಿನವರು ಹೇಳುತ್ತಿರುವ ‘ಜೇಡರ ದಾಸಿಮಯ್ಯ’ನಿಗಿಂತ ಒಂದು ಶತಮಾನ ಹಿಂದೆ ಇದ್ದ, ವಚನಗಳನ್ನು ರಚಿಸದ ಕೇವಲ ಶರಣನಾಗಿದ್ದ ದೇವರ ದಾಸಿಮಯ್ಯನದಲ್ಲ.

ಅಂದರೆ ನೇಕಾರ ಸಮುದಾಯದವರು  ಹೇಳುತ್ತಿರುವ ಮತ್ತು ಸಂಶೋಧಕ ವಿದ್ವಾಂಸರು ಹೇಳುತ್ತಿರುವ ವ್ಯಕ್ತಿ ಒಬ್ಬನೇ. ನೇಕಾರ ಸಮುದಾಯದವರಿಗೆ  ಅವನನ್ನು ‘ದೇವರ’ ಎಂಬ ಪೂರ್ವಪದದಿಂದಲೇ ಗುರುತಿಸಲು ಇಷ್ಟ. ಆದರೆ ಸಂಶೋಧಕರದು ‘ಜೇಡರ’ ಎಂಬುದು ಅವನ ಹೆಸರಿಗೆ ಅಂಟಿದ ಅವನ ಕಾಯಕ ಸೂಚಕ ಪದವಾದ್ದರಿಂದ ಆ ಪೂರ್ವಪದದಿಂದಲೇ ಕರೆಯಬೇಕೆಂದು ಆಗ್ರಹ. ‘ದೇವರ’ ಎಂಬ ಪೂರ್ವ ಪದದಿಂದ ಈ ದಾಸಿಮಯ್ಯನನ್ನು ಗುರುತಿಸಿಬಿಟ್ಟರೆ ಆಗ ಅದು ಈ ದಾಸಿಮಯ್ಯನಿಗಿಂತ ಸುಮಾರು ಒಂದು ಶತಮಾನದ ಹಿಂದೆ ಇದ್ದವನನ್ನು ಸೂಚಿಸುವುದರಿಂದ ವಚನಗಳ ಕರ್ತೃತ್ವ ಅವನಿಗೆ ಸಂದಾಯವಾಗಿಬಿಡುತ್ತದೆಂಬ ಅಳುಕು ಅವರ ಆಗ್ರಹದ ಹಿಂದೆ ಕೆಲಸ ಮಾಡುತ್ತಿರಬೇಕು.‌

ಇನ್ನು ಈ ಇಬ್ಬರು ದಾಸಿಮಯ್ಯಗಳೂ ಒಬ್ಬನೇ ಎಂದು ವಾದಿಸುವ ಸಂಶೋಧಕರೂ ಇದ್ದಾರೆ. ಕನ್ನಡದಲ್ಲಿ ಹೀಗೆ ಹೆಸರಿನ ಮತ್ತು ಕರ್ತೃತ್ವದ ಗೊಂದಲಗಳು ಇದಮಿತ್ಥಂ ಎಂದು ನಿರ್ಣಯವಾಗದವು ಹಲವಿವೆ. ಉದಾಹರಣೆಗೆ ಸುಮಾರು ಅರ್ಧಶತಮಾನದ ಕಾಲ ‘ವಡ್ಡಾರಾಧನೆ’ಯ ಕರ್ತೃ ಶಿವಕೋಟ್ಯಾಚಾರ್ಯನೆಂದು ನಂಬಲಾಗಿದ್ದು ಈಗ ಅದು ಭ್ರಾಜಿಷ್ಣು ಎಂದು ಹೆಚ್ಚುಕಡಿಮೆ ತೀರ್ಮಾನವಾಗಿದ್ದರೂ ಇನ್ನೂ ಪೂರ್ತಿ ಬಗೆಹರಿದಿದೆಯೆಂದು ಹೇಳಲಾಗದು.

ಅದೇ ರೀತಿ ‘ಕವಿರಾಜಮಾರ್ಗ’ದ ಕರ್ತೃ ಶ್ರೀವಿಜಯನೇ ಎಂದಾಗಿದ್ದರೂ ಕೆಲವು ವಿದ್ವಾಂಸರಿಗೆ ನೃಪತುಂಗನನ್ನು ಪೂರ್ತಿ ಬಿಟ್ಟುಕೊಡಲಿಷ್ಟವಿಲ್ಲದೆ ಅವರಿಬ್ಬರ ಜಂಟಿಕರ್ತೃತ್ವ ಎಂದು ಸೂಚಿಸಲು ಇಷ್ಟ. ಇನ್ನು ಒಂದೇ ಹೆಸರಿನ ಹಲವರು ಇದ್ದಾಗ ಒಂದನೆಯ, ಎರಡನೆಯ ಎಂದು ಅವರ ಹೆಸರಿನ ಹಿಂದೆ ಸೇರಿಸಿ ಸಮಸ್ಯೆಯನ್ನು ಬಗೆಹರಿಸಿಕೊಂಡಿರುವ ಉದಾಹರಣೆಗಳು ಇದ್ದೇ ಇವೆ. ಉದಾಹರಣೆಗೆ 1ನೆಯ ನಾಗವರ್ಮ, 2ನೆಯ ನಾಗವರ್ಮ, 1ನೆಯ ಮಂಗರಸ, 2ನೆಯ ಮಂಗರಸ, 3ನೆಯ ಮಂಗರಸ ಇತ್ಯಾದಿ.

ನೇಕಾರ ಸಮುದಾಯದವರು, ಈಗ  ಸಂಶೋಧಕರು ಹೇಳುತ್ತಿರುವ ಜೇಡರ ದಾಸಿಮಯ್ಯನನ್ನು ದೇವರ ದಾಸಿಮಯ್ಯ ಎಂದೇ ಕರೆದುಕೊಳ್ಳಲಿ. ವಚನ ರಚಿಸದ, ಕೇವಲ ಶಿವಶರಣನಾಗಿದ್ದ,  ಈ ದಾಸಿಮಯ್ಯನಿಗಿಂತ ಒಂದು ಶತಮಾನದ ಹಿಂದೆ ಇದ್ದನೆಂದು ಹೇಳಲಾಗುವ ದಾಸಿಮಯ್ಯನನ್ನು ‘ಒಂದನೆಯ ದೇವರ ದಾಸಿಮಯ್ಯ’ ಎಂದು ದಾಖಲೆಯ ಉದ್ದೇಶಕ್ಕೆ ಗುರುತಿಸಿಕೊಂಡರೆ ಏನೂ ಪ್ರಮಾದವಾಗಿಬಿಡುವುದಿಲ್ಲ. ಸಾಹಿತ್ಯ ಚರಿತ್ರೆಯಲ್ಲಿ ದಾಖಲಿಸುವಾಗ ಮಾತ್ರ ಅಗತ್ಯಬೀಳುವ ಆ ದಾಸಿಮಯ್ಯನನ್ನು ಹೀಗೆ ಹೆಸರಿಸಿ,  ಸಂಶೋಧಕರು ‘ಜೇಡರ ದಾಸಿಮಯ್ಯ’  ಎಂದು ಹೇಳುತ್ತಿರುವ ವಚನಕಾರನನ್ನು  ದೇವರ ದಾಸಿಮಯ್ಯನೆಂದು ಗುರುತಿಸಿಕೊಂಡರೆ ಅದರಿಂದಲೂ ಅಂಥದೇನೂ ಪ್ರಮಾದವಾಗುವುದಿಲ್ಲವೆಂದೇ ಸಾಹಿತ್ಯದ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿ ನನ್ನ ನಮ್ರ ತಿಳಿವಳಿಕೆ.

ಇತಿಹಾಸ ಮುಖ್ಯ ನಿಜ. ಆದರೆ ಇತಿಹಾಸವೇ ಎಲ್ಲವೂ ಅಲ್ಲ. ಜಕಣಾಚಾರಿಯೆಂಬ ಹೆಸರಿನ  ಶಿಲ್ಪಿಯೊಬ್ಬ ಇದ್ದುದಕ್ಕೆ ಯಾವ ಐತಿಹಾಸಿಕ ದಾಖಲೆಯೂ ಇಲ್ಲವೆಂದು ಇತಿಹಾಸತಜ್ಞರು ಸಾರಿಹೇಳುತ್ತಿದ್ದರೂ ನಾವು ಪ್ರತಿದಿನವೂ ಹಾಡುವ ನಾಡಗೀತೆಯಲ್ಲಿ ಅವನು ಶಾಶ್ವತ ಸ್ಥಾನ ಪಡೆದಾಯ್ತು, ಅವನ ಹೆಸರಿನಲ್ಲಿ ಚಲನಚಿತ್ರ ಬಹಳ ಹಿಂದೆಯೇ ಆಗಿದೆ. ಅವನ ಹೆಸರಿನಲ್ಲಿ ಪ್ರಶಸ್ತಿ ಕೊಡುತ್ತಿದ್ದಾರೋ ಇಲ್ಲವೋ ನನಗೆ ತಿಳಿಯದು.

ಏನೇ ಆದರೂ  ಹೆಸರುಗಳ ವಿಷಯಕ್ಕೆ ಮನುಷ್ಯರಿಗೆ ಒಂದು ಭಾವನಾತ್ಮಕ ಸಂಬಂಧವಿರುತ್ತದೆ. ಇಲ್ಲದಿದ್ದರೆ ಮೈಸೂರು ಎಂಬ ಹೆಸರು ಸೂಚಿಸುತ್ತಿದ್ದ ಪ್ರದೇಶ ಮತ್ತು ಈಗ ಕರ್ನಾಟಕ ಎಂಬ ಹೆಸರು ಸೂಚಿಸುತ್ತಿರುವ ಪ್ರದೇಶ ಒಂದೇ ಆದರೂ ನಾವೇಕೆ ಕರ್ನಾಟಕಕ್ಕೇ ಗಂಟುಬಿದ್ದೆವು? ಕಾರಣ ಅದಕ್ಕೊಂದು ಐತಿಹಾಸಿಕ ಪರಂಪರೆ ಇದೆ, ಅದರೊಂದಿಗೆ ನಮ್ಮ ಭಾವನೆಗಳು ಬೆಸೆದುಕೊಂಡಿವೆ ಎಂದು. ಹಿಂದೆ ಹಳೆಯ ಮೈಸೂರಿನವರಿಗೂ ಅಂಥದೇ ಭಾವನೆಗಳು ಬೆಸೆದುಕೊಂಡಿದ್ದ ಕಾರಣಕ್ಕೆ ಕರ್ನಾಟಕ ಎಂದು ಹೆಸರಿಸಲು ಅಷ್ಟು ತಡವಾಯಿತು. ಒಂದುಕಾಲದಲ್ಲಿ ವಿಜಯನಗರವೆಂಬ ವೈಭವದ ಹೆಸರಿನಿಂದ ಮೆರೆದದ್ದು ಇಂದು ಹಂಪೆಯಾಗಿದೆ. ಹಾಗೆಯೇ ಹೊಯ್ಸಳರ ದ್ವಾರಸಮುದ್ರ ಇಂದು ಹಳೇಬೀಡಾಗಿದೆ. ಆದರೆ ಪ್ರದೇಶ ಮಾತ್ರ ಅದೇ. ಬೆಂಗಳೂರಿನಲ್ಲಿ ಒಂದು ರಸ್ತೆಗೆ ಡಿ.ವಿ.ಜಿ. ರಸ್ತೆ ಎಂದು ಹೆಸರಿಟ್ಟಿದ್ದರೂ ಇನ್ನೂ ನಾಗಸಂದ್ರ ರಸ್ತೆ ಎಂದು ಕರೆಯುವುದೇನೂ ಪೂರ್ತಿ ನಿಂತಿಲ್ಲ. ಅದರಿಂದ ಅಂಥ ತೊಂದರೆಯೇನಿಲ್ಲ. ಅದೇ ರಸ್ತೆಯೇ, ಅದೇ ಪ್ರದೇಶವೇ ನಮ್ಮ ಮನಸ್ಸಿನಲ್ಲಿರುತ್ತದೆ.

ಡಾ. ಎಂ. ಚಿದಾನಂದಮೂರ್ತಿ ಅವರೇ  ಬರೆದಿರುವ ‘ಸಂಶೋಧನತರಂಗ ಭಾಗ-1’ರಲ್ಲಿ ಈಗ ಅವರು ಜೇಡರದಾಸಿಮಯ್ಯನೆಂದು ಹೇಳುತ್ತಿರುವವನನ್ನು ದೇವರದಾಸಿಮಯ್ಯ ಎಂದೇ ಹೆಸರಿಸಿದ್ದಾರೆ. ಈಚಿನ ಸಂಶೋಧನೆ, ಅದು ಸರಿಯಲ್ಲ ಎಂದು ಹೇಳಿದರೂ ಜನರ ಭಾವನೆಗಳು ಅಷ್ಟು ಸುಲಭವಾಗಿ ಬದಲಾಗಿಬಿಡುವುದಿಲ್ಲ.  ಇಬ್ಬರು(?) ದಾಸಿಮಯ್ಯಗಳೂ ನೇಯ್ಗೆ ಕಾಯಕದವರೇ. ಅಂದರೆ ಜೇಡರ ಕೆಲಸವೇ. ‘ಜೇಡರ’ ಎಂಬ ಪದದ ಬಗ್ಗೆ  ನೇಕಾರರಿಗೆ ಕೀಳರಿಮೆಯ ಭಾವವಿರಬಹುದೇನೋ ನನಗೆ ತಿಳಿಯದು. ಇಷ್ಟುವರ್ಷ ದೇವರ ದಾಸಿಮಯ್ಯನೆಂದು ತಿಳಿಯಲಾದ ವಚನಕಾರನನ್ನು ಅವನ ಬಗೆಗಿನ ಭಾವನೆಗಳ ಸಲುವಾಗಿ ಮತ್ತು ಒಂದು ಒಳ್ಳೆಯ ಹೆಸರು ಎಂಬ ಕಾರಣಕ್ಕೇ ಆದರೂ ಸರಿ ಹಾಗೆಂದೇ ಇಟ್ಟುಕೊಂಡು ಅಷ್ಟೇನೂ ಸಾಹಿತ್ಯಿಕ ಮಹತ್ವ ಹೊಂದಿಲ್ಲದೆ ಇರುವ ಈ ದಾಸಿಮಯ್ಯನಿಗಿಂತ ಒಂದು ಶತಮಾನ ಹಿಂದಿನ ದಾಸಿಮಯ್ಯನನ್ನು  ದಾಖಲೆಯ ಉದ್ದೇಶಕ್ಕಾಗಿ ಒಂದನೆಯ ದೇವರ ದಾಸಿಮಯ್ಯನೆಂದು ನಾನು ಮೇಲೆ ಸೂಚಿಸಿರುವಂತೆ ಇಟ್ಟುಕೊಳ್ಳಬಹುದೆನಿಸುತ್ತದೆ. ಕಾರಣ ಈಗಾಗಲೇ ಹೇಳಿರುವಂತೆ ಇಬ್ಬರು ಹೇಳುತ್ತಿರುವುದೂ ಒಬ್ಬನೇ ವ್ಯಕ್ತಿಯನ್ನಾದ ಕಾರಣ ‘ಪಂಚಾಂಗ ಹೋದರೆ ನಕ್ಷತ್ರ ಹೋಯಿತೇ’ ಎಂಬ ಗಾದೆಮಾತಿನಂತೆ ಪೂರ್ವಪದ ಬದಲಾದರೂ ಅಂಥ ವ್ಯತ್ಯಾಸವೇನೂ ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT