ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ: ನಮ್ಮ ಪ್ರಥಮ ರಾಷ್ಟ್ರಕವಿ

Last Updated 2 ಜುಲೈ 2014, 19:30 IST
ಅಕ್ಷರ ಗಾತ್ರ

ಪಂಪನ ‘ಪಂಪಭಾರತ’ ಮತ್ತು ‘ಆದಿ­ಪುರಾಣ’ ಕಾವ್ಯಗಳು ಮಿಲ್ಟನ್ನನ paradise last and paradise regained ಕಾವ್ಯ­ಗಳಿದ್ದಂತೆ. ಹೀಗೆನ್ನುವ ಡಾ.ಎಲ್‌. ಬಸವರಾಜು ಅವರು, ಆಂಗ್ಲಭಾಷಿಕರು ಮಿಲ್ಟನ್ನನನ್ನು ಅಧ್ಯಯನ­ಕ್ಕೊಳಪಡಿಸುವಂತೆ, ಮೊದಲ ಹಂತ­ದಲ್ಲಿ ಈ ಎರಡೂ ಕಾವ್ಯಗಳನ್ನು ಪಂಡಿತರಿಗೆ ಉಪಯುಕ್ತವಾಗುವಂತೆ ‘ಮೂಲಪಾಠ ಪರಿಷ್ಕರಣ’ ಮಾಡಿ ಸಂಪಾದಿಸಿಕೊಟ್ಟರು.

ಎರಡನೇ ಹಂತದಲ್ಲಿ ಈ ಪ್ರಾಚೀನ ಕಾವ್ಯಗಳ ವಾಚನ ಸಂದರ್ಭದಲ್ಲಿ ಸಂಧಿಗಳನ್ನೂ ಸಮಾಸ­ಗಳನ್ನೂ ಬಿಡಿಸಿ ಓದುವುದು, ಶಾಲಾ--–ಕಾಲೇಜು ಅಧ್ಯಾಪಕ ಹಾಗೂ ವಿದ್ಯಾರ್ಥಿಗಳಿಗೆ ಕಷ್ಟವೆಂದು ಪರಿಗಣಿಸಿ, ಅವರಿಗೆ ಉಪಯುಕ್ತವಾಗುವಂತೆ ಸಂಧಿ­­–ಸಮಾಸಗಳನ್ನು ವಿಂಗಡಿಸಿ, ಪದ್ಯ–ಪಾಠ­ಗಳನ್ನು ಒಡೆದು ‘ಸರಳ ಆದಿಪುರಾಣ’ ಹಾಗೂ ‘ಸರಳ ಪಂಪಭಾರತ’ ಎಂದು ಪ್ರಕಟಿಸಿದರು.

ಇನ್ನು ಮೂರನೇ ಹಂತದಲ್ಲಿ ಶ್ರೀಸಾಮಾನ್ಯ ಕನ್ನಡಿಗರೂ ಪಂಪನ ಗ್ರಂಥಗಳ ಸೊಗಸನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಈ ಎರಡೂ ಹಳಗನ್ನಡ ಕಾವ್ಯಗಳನ್ನೂ ಹೊಸಗನ್ನಡಕ್ಕೆ ಛಾಯಾನು­ವಾದ ಮಾಡಿ ‘ಪಂಪನ ಸಮಸ್ತ ಭಾರತ ಕಥಾ­ಮೃತ’ ಮತ್ತು ‘ಪಂಪನ ಆದಿಪುರಾಣ ಕಥಾಮೃತ’ ಗ್ರಂಥಗಳನ್ನು ಪ್ರಕಟಿಸಿ ಕೃತಕೃತ್ಯ­ರಾಗಿದ್ದಾರೆ.

ಹೀಗೆ ಅವಿರತ ಶ್ರಮ ವಹಿಸಿ ನಾಲ್ಕೈದು ದಶಕಗಳ ಕಾಲ ಪಂಪನೊಂದಿಗೆ ಅನುಸಂಧಾನ ಮಾಡಿದ ಎಲ್‌.ಬಿ. ಅವರು ಎಲ್ಲಿಯೂ ‘ಪಂಪನನ್ನು ಪಂಡಿತರಿಂದ ಬಿಡುಗಡೆಗೊಳಿಸುವ’ ಅನುಚಿತ ಮಾತಾಡಿಲ್ಲ. ಇದು ವಿದ್ವತ್ತಿಗೆ ತೋರುವ ಗೌರವವೂ ಅಲ್ಲ.

ಹೀಗಿದ್ದೂ ಪ್ರಸ್ತುತ ಪಂಪನ ‘ವಿಕ್ರಮಾರ್ಜುನ ವಿಜಯದ ತಿಳಿಗನ್ನಡ ಅವತರಣಿಕೆ’ಯನ್ನು ರಚಿಸಿದ ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ‘ಪಂಪನನ್ನು ಪಂಡಿತರಿಂದ ಬಿಡಿಸದೆ ಹೋದರೆ ಇಡೀ ಸಮಾಜದಿಂದ ಅವನು ತಪ್ಪಿಹೋಗುತ್ತಾನೆ’ ಎನ್ನುವುದು ದಾಷ್ಟ್ಯದ ಮಾತಾದೀತು. ಯಾಕೆಂದರೆ ಈ ನಿಟ್ಟಿನಲ್ಲಿ ಇವರದೂ ಒಂದು ನಮ್ರ ಪ್ರಯತ್ನ ಎಂದರೆ ಉಚಿತವಾದೀತು. ಪಂಪ ಎಂದರೆ ಎಲ್ಲ ಕಾಲಕ್ಕೂ ಎಲ್ಲರಿಗೂ ಸಲ್ಲುವ ಕವಿ.

–ಪ್ರೊ. ಶಿವರಾಮಯ್ಯ
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT