ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ಇಂಧನಗಳ ಹೊಸ ಮಾರ್ಗ

Last Updated 15 ಜುಲೈ 2014, 19:30 IST
ಅಕ್ಷರ ಗಾತ್ರ

ಅದೆಷ್ಟೇ ವಿದ್ಯುತ್‌ ಕಡಿತ, ಇಂಧನ ಕೊರತೆ ಇರಲಿ. ಲೈನ್‌ಮನ್‌ನಿಂದ ಹಿಡಿದು ಸರ್ಕಾರವನ್ನೂ ಶಪಿಸುತ್ತೇವೆಯೇ ಹೊರತು, ಪರ್ಯಾಯ ಮಾರ್ಗವನ್ನು ಕಂಡುಕೊಂಡು ಅನುಸರಿಸುವುದಿಲ್ಲ. ಅಪ್ಪ ಹಾಕಿದ ಆಲದ ಮರ ಎಂಬಂತೆ. ವಿದ್ಯುತ್‌ ಇಲ್ಲದಿದ್ದರೆ ಕ್ಯಾಂಡಲ್‌, ಅದೂ ಮುಗಿದು ಹೋದರೆ ಕೊನೆಗೆ ಸೀಮೆಎಣ್ಣೆ ದೀಪವನ್ನಾದರೂ ಬಳಸುತ್ತೇವೆ.

ಸೌರಶಕ್ತಿ, ಪವನಶಕ್ತಿಯಂತಹ ಪರ್ಯಾಯ ಇಂಧನ ಮೂಲಗಳು ನಮಗೆ ಅದೇಕೋ ರುಚಿಸುವುದಿಲ್ಲ. ಜಗತ್ತೇ ತಲೆಕೆಳಗಾದರೂ ನಾವು ಮಾತ್ರ ಬರಿದಾಗದ ನೈಸರ್ಗಿಕ ಶಕ್ತಿ ಮೂಲಗಳ ಬಳಕೆಗೆ ಮನಸ್ಸು ಮಾಡುವುದಿಲ್ಲ ಎಂಬ ನಮ್ಮ ದೃಢ ಸಂಕಲ್ಪ ಹೊಸತೇನೂ ಅಲ್ಲ. ಮುಗಿದುಹೋಗುವ ಸಂಪನ್ಮೂಲಗಳ ಬಗೆಗಿನ ನಮ್ಮ ಅತಿಯಾದ ವ್ಯಾಮೋಹ ಬಹಳ ಹಿಂದಿನದ್ದು. ಸೌರವಿದ್ಯುತ್, ಪವನಶಕ್ತಿ ವಿಷಯದಲ್ಲೂ ಅದು  ಮುಂದುವರಿದಿದೆಯಷ್ಟೆ.

ಹೀಗಾಗಿಯೇ ಅದೆಷ್ಟೇ ಪ್ರಭಾವ ಬೀರಿದರೂ, ಅನುಕೂಲ, ಲಾಭದ ಬಗ್ಗೆ ಯಾರೇ ಹೇಳಿದರೂ, ಹೆಚ್ಚೆಂದರೆ ‘ಹೌದಾ?’ ಎಂಬ ಉದ್ಘಾರ ತೆಗೆದು,  ಬಿಟ್ಟುಬಿಡುತ್ತೇವೆ. ಬಹುಪಾಲು ಮಂದಿ ಇದರ ಬಗ್ಗೆ ಕಿಂಚಿತ್ತೂ ಒಲವೂ ತೋರುತ್ತಿಲ್ಲ. ಹಾಗೆಂದು, ಸಂಬಂಧಪಟ್ಟ ಕಂಪೆನಿಗಳು, ತಂತ್ರಜ್ಞರೇನೂ ಕೈಕಟ್ಟಿ ಕೂತಿಲ್ಲ.

ಸೌರಶಕ್ತಿ, ಪವನಶಕ್ತಿ ಬಳಕೆಗೆ ಉತ್ತೇಜನ ನೀಡಲು, ‘ಮರಳಿ ಯತ್ನವ ಮಾಡು’ ಎನ್ನುತ್ತಾ, ಹೊಸ ಹೊಸ ರೀತಿಯ ಸಾಧನಗಳನ್ನು ರೂಪಿಸುತ್ತಲೇ ಬಂದಿದ್ದಾರೆ. ಈ ಹಾದಿಯಲ್ಲೇ ಸೌರಶಕ್ತಿ ಸಂಗ್ರಹ ರಸ್ತೆ ಹಾಗೂ ಸೌರ ಮತ್ತು ಪವನ ವಿದ್ಯುಚ್ಚಕ್ತಿಯಿಂದ ಮೊಬೈಲ್‌ ಫೋನ್‌ ಬ್ಯಾಟರಿಯನ್ನು ಚಾರ್ಜ್‌ ಮಾಡಬಲ್ಲ ಹೆಲ್ಮೆಟ್‌ ವಿನ್ಯಾಸಗೊಂಡಿವೆ. ಇವುಗಳ ಕಾರ್ಯವೈಖರಿ, ಉಪಯೋಗದ ಬಗ್ಗೆ ಗಮನಿಸೋಣ.

ಹೆಲ್ಮೆಟ್‌
ಬೈಕ್‌ ಸವಾರಿ ವೇಳೆ ತಲೆಗೆ ರಕ್ಷಣೆ ನೀಡುವ ಹೆಲ್ಮೆಟ್‌ನಿಂದ ಮೊಬೈಲ್‌ ಚಾರ್ಜ್‌ ಮಾಡಲು ಸಾಧ್ಯವಿದೆ! ಅಹಮದಾಬಾದ್‌ನ ನಿರ್ಮಾ ವಿಶ್ವವಿದ್ಯಾಲಯದ ಪ್ರಗ್ನೇಶ್ ದುಧಿಯಾ ಮತ್ತು ಅಲೋಕ್‌ ಭಟ್‌ ಎಂಬ ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸೌರ ಮತ್ತು ಪವನ ಶಕ್ತಿ ಮೂಲಕ ಮೊಬೈಲ್‌ ಚಾರ್ಜ್‌ ಮಾಡುವ ಹೆಲ್ಮೆಟ್‌ ಅಭಿವೃದ್ಧಿಪಡಿಸಿದ್ದಾರೆ.

ಈ ಹೆಲ್ಮೆಟ್‌ ಮುಂಭಾಗಕ್ಕೆ ಪವನಶಕ್ತಿ ಉತ್ಪಾದಿಸಬಲ್ಲ ಸಣ್ಣ ಗಾಳಿ ರೆಕ್ಕೆಗಳನ್ನು ಅಳವಡಿಸಿದ್ದು, ಮೇಲ್ಭಾಗದಲ್ಲಿ ಸೌರಶಕ್ತಿ ಹೀರುವ ಫಲಕಗಳನ್ನು ಜೋಡಿಸಲಾಗಿದೆ. ಹೆಲ್ಮೆಟ್‌ ಧರಿಸಿ ಬೈಕ್‌ ಅಥವಾ ಸೈಕಲ್‌ ಸವಾರಿ ಆರಂಭಿಸಿದರೆ ಗಾಳಿ ಚಕ್ರ ಮತ್ತು ಸೋಲಾರ್‌್ ಕೋಶ ಕೆಲಸ ಮಾಡಲಾರಂಭಿಸುತ್ತವೆ. ಈ ಹೆಲ್ಮೆಟ್‌ ಧರಿಸಿ 40 ನಿಮಿಷಗಳ ವರೆಗೆ ಮೋಟಾರ್ ಬೈಕ್‌ ಅಥವಾ ಬೈಸಿಕಲ್‌ ಸವಾರಿ ಮಾಡಿದರೆ ಮೊಬೈಲ್‌ ಚಾರ್ಜ್‌ ಆಗುತ್ತದೆ.

ಚಾರ್ಜಿಂಗ್‌ ಕೇಬಲನ್ನು ಹೆಲ್ಮೆಟ್‌ಗೆ ಪ್ಲಗ್‌ ಮಾಡಿ, ಹೆಲ್ಮೆಟ್‌ನಲ್ಲಿರುವ ಸ್ವಿಚ್‌ ಆನ್‌ ಮಾಡಿದರೆ ಮೊಬೈಲ್‌ ಚಾರ್ಜ್‌ ಆಗಲಾರಂಭಿಸುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಸೂರ್‍ಯನ ಬೆಳಕು ಹೆಲ್ಮೆಟ್‌ ಮೇಲ್ಭಾಗಕ್ಕೆ ಬೀಳಲು ಆರಂಭಿಸುತ್ತಿದ್ದಂತೆಯೇ ಅದರಿಂದ ನೇರವಾಗಿ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಬಹುದು. ಇಲ್ಲವೇ ಅದನ್ನು ಶೇಖರಣೆ ಮಾಡಿಟ್ಟು ಬೇಕೆಂದಾಗ ಬಳಸಬಹುದಾಗಿದೆ.

ಸೂರ್‍ಯ ಮುಳುಗಲಾರಂಭಿಸಿದಾಗ ಹೆಲ್ಮೆಟ್‌ ಮುಂಭಾಗದಲ್ಲಿ ಇರುವ ಗಾಳಿ ರೆಕ್ಕೆಗಳು ತಿರುಗುತ್ತಾ ಚಾರ್ಜಿಂಗ್‌ಗೆ ಬೇಕಾದ ಶಕ್ತಿ ಒದಗಿಸುತ್ತವೆ. ಇದೊಂದು ಪವನವಿದ್ಯುತ್‌ ಯಂತ್ರದ ಪುಟ್ಟ ಮಾದರಿಯಂತೆ ಕೆಲಸ ಮಾಡುತ್ತದೆ. ಪವನಶಕ್ತಿಗೆ ಮೋಟಾರ್‌ ಬೈಕ್‌ ಅಥವಾ ಸೈಕಲ್‌ ಚಲಿಸುತ್ತಲೇ ಇರಬೇಕೆಂದಿಲ್ಲ. ಗಾಳಿ ಬೀಸುವ ದಿಕ್ಕಿಗೆ ಗಾಳಿ ರೆಕ್ಕೆಗಳು ತಿರುಗುವಂತೆ ಹೆಲ್ಮೆಟ್ಟನ್ನು ತಿರುಗಿಸಿ ಇಟ್ಟರಾಯ್ತು. ರೆಕ್ಕೆ ತಿರುಗುತ್ತಿದ್ದಂತೆಯೇ ಶಕ್ತಿ ಉತ್ಪಾದನೆ ಆರಂಭವಾಗುತ್ತದೆ.

ಇಂತಹ ವಿಶಿಷ್ಟ ಹೆಲ್ಮೆಟ್‌ ರೂಪಿಸಲು ತಗಲುವ ವೆಚ್ಚ ಕೇವಲ ₨1320. ಸುರಕ್ಷತೆ ಮತ್ತು ಅನುಕೂಲದ ದೃಷ್ಟಿಯಿಂದ ಅಷ್ಟೇನೂ ದುಬಾರಿ ಅಲ್ಲ ಎನ್ನುವುದು ವಿದ್ಯಾರ್ಥಿಗಳ ವಾದ. ಏನೇ ಇರಲಿ, ಮೊಬೈಲ್‌ ಚಾರ್ಜ್‌ ಮಾಡಬಹುದು ಎನ್ನುವ ಕಾರಣಕ್ಕಾದರೂ ಬೈಕ್‌ ಸವಾರರು ಹೆಲ್ಮೆಟ್‌ ಧರಿಸುವೆಡೆಗೆ ಹೆಚ್ಚು ಕಾಳಜಿ ತೋರುತ್ತಾರೇನೋ ಎಂಬ ನಿರೀಕ್ಷೆಯನ್ನಾದರೂ ಮಾಡಬಹುದು.

ಸೌರಶಕ್ತಿ ರಸ್ತೆ
ಕಾಂಕ್ರಿಟ್‌ ರಸ್ತೆಗೆ ಪರ್ಯಾಯವಾಗಿ, ವಿದ್ಯುತ್‌ ಸಂಗ್ರಹಣೆಯ ಸಾಧನವಾಗಿ ಸೌರಶಕ್ತಿ ರಸ್ತೆಗಳ ನಿರ್ಮಾಣದ ವಿಶಿಷ್ಟ ಪ್ರಯೋಗವನ್ನು ಅಮೆರಿಕದ ಸ್ಕಾಟ್‌ ಮತ್ತು ಜೂಲಿ ಬ್ರೂಸ್‌ ದಂಪತಿ ನಡೆಸಿದ್ದಾರೆ. ರಸ್ತೆಗಳಿಗೆ ಕಾಂಕ್ರಿಟ್ ಹಾಕುವ ಬದಲಿಗೆ ಸೋಲಾರ್‌ ಪ್ಯಾನೆಲ್‌ಗಳನ್ನು  (ಸೌರ ಶಕ್ತಿ ಹೀರುವಂತಹ ಫಲಕ) ಜೋಡಿಸಿ ಸೌರಶಕ್ತಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ.

ಈ ರಸ್ತೆಗಳು ಸೂರ್ಯನ ಶಾಖವನ್ನು ಹೀರಿಕೊಂಡು ತಮ್ಮಲ್ಲಿ ಸಂಗ್ರಹಿಸಿಕೊಳ್ಳುತ್ತವೆ. ವಿದ್ಯುತ್ ಚಾಲಿತ ಕಾರುಗಳು ಈ ರಸ್ತೆಯಲ್ಲಿ ಓಡಾಡಬಹುದು. ಭವಿಷ್ಯದಲ್ಲಿ ಕಾಂಕ್ರಿಟ್‌ ರಸ್ತೆಗಳ ಬದಲಾಗಿ ಸೌರಶಕ್ತಿ ರಸ್ತೆಗಳೇ ಎಲ್ಲೆಡೆ ನಿರ್ಮಾಣವಾಗಲಿವೆ ಎನ್ನುವುದು ಈ ದಂಪತಿಯ ಆಶಾವಾದದ ಮಾತು. 

ಈ ಸೌರಶಕ್ತಿ ರಸ್ತೆಯಿಂದಲೇ ವಾಹನಗಳನ್ನು (ಸೋಲಾರ್‌ ಕಾರ್‌, ಬೈಕ್‌ಗಳನ್ನು) ಚಾರ್ಜ್‌ ಮಾಡಿ ಚಲಾಯಿಸಬಹುದು. ಇದರಿಂದ ರಸ್ತೆ ಮಧ್ಯದಲ್ಲಿ ಚಾರ್ಜ್ ಇಲ್ಲದೆ ಎಲೆಕ್ಟ್ರಾನಿಕ್‌ ಕಾರು ನಿಂತು ಹೋಗುವ ಪ್ರಮೇಯವೇ ಎದುರಾಗುವುದಿಲ್ಲ ಎನ್ನುತ್ತಾರೆ ಬ್ರೂಸ್‌ ದಂಪತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT