ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡೆ ಎಂಬ ಅಪೂರ್ವ ಪ್ರತಿಭೆ...

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಅದು ಹೋದ ವರ್ಷ ಗುಜರಾತ್‌ನ ರಾಜಕೋಟ್‌ನಲ್ಲಿ ನಡೆದ ರಣಜಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯ. ಕರ್ನಾಟಕದ ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲರೂ ಪೆವಿಲಿಯನ್‌ ಸೇರಿದ್ದರು. ಆದರೆ, ಸ್ಫೋಟಕ ಬ್ಯಾಟ್ಸ್‌ಮನ್‌ ಮನೀಷ್‌ ಪಾಂಡೆ 177 ರನ್‌ ಬಾರಿಸಿ ಎದುರಾಳಿ ಬೌಲರ್‌ಗಳ ಬೆವರಿಳಿಸಿದ್ದರು. ಆ ಪಂದ್ಯದಲ್ಲಿ ಕರ್ನಾಟಕ ನಿರಾಸೆ ಕಂಡಿತಾದರೂ ಅಪೂರ್ವ ಇನಿಂಗ್ಸ್‌ ಕಟ್ಟಿ ಪಾಂಡೆ ಎಲ್ಲರ ಮನಸ್ಸು ಗೆದ್ದಿದ್ದರು.

ನಾಲ್ಕು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಏಳನೇ ಆವೃತ್ತಿ ಫೈನಲ್‌ ಪಂದ್ಯವದು. ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ನೀಡಿದ್ದ 200 ರನ್‌ ಗುರಿಯ ಎದುರು ಕೋಲ್ಕತ್ತ ನೈಟ್‌ ರೈಡರ್ಸ್‌ನ ಪ್ರಮಖ ಆಟಗಾರರು ಪರದಾಡಿದ್ದರು. ಆದರೆ, ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ ಪಾಂಡೆ 50 ಎಸೆತಗಳಲ್ಲಿ 94 ರನ್ ಗಳಿಸಿ ಹೀರೊ ಆಗಿ ಮೆರೆದಾಡಿದ್ದರು.

ಇವು ಒಂದೆರೆಡು ಉದಾಹರಣೆಗಳಷ್ಟೇ. 25 ವರ್ಷದ ಮನೀಷ್‌ ಪಾಂಡೆ ಇಂಥ ಹಲವಾರು ಸ್ಮರಣೀಯ ಇನಿಂಗ್ಸ್‌ಗಳನ್ನು ಕಟ್ಟಿದ್ದಾರೆ. ಕಡಿಮೆ ಎಸೆತಗಳಲ್ಲಿ ವೇಗವಾಗಿ ರನ್‌ ಗಳಿಸುವ  ಛಾತಿ ಅವರಿಗೆ ಸರಾಗವಾಗಿ ಒಲಿದು ಬಿಟ್ಟಿದೆ. ಪಾಂಡೆ ಅಬ್ಬರ ನೋಡಿರುವ ಕೆಲ ಕ್ರಿಕೆಟ್‌ ಪ್ರೇಮಿಗಳು ‘ಮನೀಷ್‌ ಭವಿಷ್ಯದ ಕೊಹ್ಲಿ’ ಎಂತಲೂ ಬಣ್ಣಿಸುತ್ತಾರೆ. ಈ ವಿಷಯವನ್ನು ಮನೀಷ್‌ ಎದುರು ಇಟ್ಟರೆ  ‘ಇದು ಮೂರ್ಖ ಪ್ರಶ್ನೆ’ ಎಂದು ಉತ್ತರ ನೀಡುತ್ತಾರೆ.

ಇದನ್ನೆಲ್ಲಾ ಈಗ ಹೇಳಲು ಕಾರಣವಿದೆ. ಅವರು ಮೊದಲ ಸಲ ರಾಷ್ಟ್ರೀಯ ಟ್ವೆಂಟಿ–20 ತಂಡದಲ್ಲಿ ಸ್ಥಾನ ಗಳಿಸಿಕೊಂಡಿದ್ದರು. ಆದರೆ, ವೆಸ್ಟ್‌್ ಇಂಡೀಸ್‌ ಕ್ರಿಕೆಟ್‌ ಮಂಡಳಿ ಮತ್ತು ಆಟಗಾರರ ನಡುವಿನ ವೇತನ ವಿವಾದ ಬಿಕ್ಕಟ್ಟು ಉಲ್ಬಣಗೊಂಡ ಕಾರಣ ಐದನೇ ಏಕದಿನ, ಟೆಸ್ಟ್‌ ಮತ್ತು ಟ್ವೆಂಟಿ–20 ಪಂದ್ಯ ರದ್ದಾಯಿತು. ಬಿಸಿಸಿಐ ಆಯ್ಕೆದಾರರು ಪಾಂಡೆ ಪ್ರತಿಭೆಯನ್ನು ತಡವಾಗಿಯಾದರೂ ಗುರುತಿಸಿದ್ದರೂ, ಅದೃಷ್ಟ ರಾಜ್ಯದ ಆಟಗಾರನಿಗೆ ಕೈಕೊಟ್ಟಿತು. ಆದರೆ, ಎರಡು ತಿಂಗಳು ಕಳೆದರೆ ಸಾಕು ರಣಜಿ ಆರಂಭ.

ಈಗ ದುಲೀಪ್‌ ಟ್ರೋಫಿ ನಡೆಯುತ್ತಿದೆ. ಆದ್ದರಿಂದ ಮುಂದಿನ ಪ್ರತಿ ಹಾದಿಯೂ ಸವಾಲಿನಿಂದ ಕೂಡಿದೆ. ಭರವಸೆಯ ಬ್ಯಾಟ್ಸ್‌ಮನ್‌ ಪಾಂಡೆ ರಾಜ್ಯ ರಣಜಿ ತಂಡದ ‘ರನ್‌ ಮೆಷಿನ್‌’ ಎನಿಸಿಕೊಂಡಿದ್ದಾರೆ. ಪಾಂಡೆ ತಂಡದಲ್ಲಿದ್ದಾರೆಂದರೆ ಸಾಕು ಉಳಿದ ಆಟಗಾರರಿಗೆ ಅದೇನೋ ಭರವಸೆ. ಅವರ ಅಬ್ಬರ ಮತ್ತು ಚುರುಕುತನ ಮುಂದೊಂದು ದಿನ ರಾಷ್ಟ್ರೀಯ ತಂಡದಲ್ಲಿ ಸ್ಥಾನ ತಂದುಕೊಡುತ್ತದೆ ಎನ್ನುವ ಭರವಸೆ ಮೂಡಿಸಿದೆ.

ತಿರುವು ನೀಡಿದ ವಿಶ್ವಕಪ್‌: ಕ್ವಾಲಾಲಂಪುರದಲ್ಲಿ 2007–08ರಲ್ಲಿ ನಡೆದ 19 ವರ್ಷದೊಳಗಿನವರ ಜೂನಿಯರ್‌ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ಆಗ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡದಲ್ಲಿ ಪಾಂಡೆ ಕೂಡಾ ಇದ್ದರು. ವಿಶ್ವಕಪ್‌ನಲ್ಲಿ ಅವರು ತೋರಿದ ಪ್ರದರ್ಶನ  ಕ್ರಿಕೆಟ್‌ ಬದುಕಿಗೆ ಮಹತ್ವದ ತಿರುವು ನೀಡಿತು. ಆದ್ದರಿಂದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿಯೂ ಸ್ಥಾನ ಪಡೆದುಕೊಂಡರು.

ಎರಡು ವರ್ಷ ಮುಂಬೈ ತಂಡದಲ್ಲಿದ್ದ ಪಾಂಡೆ ಐಪಿಎಲ್‌ನಲ್ಲಿ ಹೊಸ ದಾಖಲೆಯೊಂದನ್ನು ಬರೆದರು. 2009ರಲ್ಲಿ ಡೆಕ್ಕನ್‌ ಚಾರ್ಜಸ್‌ ಎದುರು ಶತಕ ಬಾರಿಸಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎನ್ನುವ ಕೀರ್ತಿಯೂ ಪಾಂಡೆ ಹೆಸರಿನಲ್ಲಿದೆ. ನಂತರದ ಐಪಿಎಲ್‌ಗಳಲ್ಲಿ ಅಷ್ಟೇನೂ ಅಬ್ಬರಿಸಲಿಲ್ಲವಾದರೂ, ಪುಣೆ ವಾರಿಯರ್ಸ್‌, ಆರ್‌ಸಿಬಿ ತಂಡಗಳಲ್ಲಿಯೂ ಆಡಿ ಬಂದರು. ಈಗ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಪ್ರಮುಖ ಶಕ್ತಿ.

ಕ್ಲಬ್‌ನಿಂದಲೇ ಅಬ್ಬರ: ಮೂಲತಃ ನೈನಿತಾಲ್‌ನವರಾದ ಪಾಂಡೆ ತಮ್ಮ ತಂದೆ  ಜೊತೆ 15 ವರ್ಷದವರಿದ್ದಾಗಲೇ ಬೆಂಗಳೂರಿಗೆ ಬಂದು ಜವಾನ್ಸ್‌ ಕ್ರಿಕೆಟ್‌ ಕ್ಲಬ್‌ ಸೇರಿದರು. 2008ರಲ್ಲಿ ರೈಲ್ವೇಸ್‌ ವಿರುದ್ಧದ ಚೊಚ್ಚಲ ಬಾರಿಗೆ ಪ್ರಥಮ ದರ್ಜೆ ಪಂದ್ಯವನ್ನಾಡಿದ್ದ ಪಾಂಡೆ ಆರು ವರ್ಷಗಳಿಂದ ಒಮ್ಮೆಯೂ ರಾಜ್ಯ ತಂಡದಿಂದ ಸ್ಥಾನ ಕಳೆದುಕೊಂಡಿಲ್ಲ. ಪ್ರತಿ ರಣಜಿಯಲ್ಲೂ ಅವರು ಸಾಮರ್ಥ್ಯ ಸಾಬೀತು ಮಾಡುತ್ತಲೇ ಬಂದಿದ್ದಾರೆ.  ರಾಜ್ಯ ತಂಡದಲ್ಲಿ ಮನೀಷ್ ಎಂದರೆ ಎಲ್ಲರಿಗೂ ವಿಶೇಷ ಪ್ರೀತಿ. ಸದಾ ನಗುನಗುತ್ತಾ ಇತರ ಆಟಗಾರರನ್ನು ಕಿಚಾಯಿಸುತ್ತಿರುತ್ತಾರೆ.

ಫೀಲ್ಡಿಂಗ್‌ನಲ್ಲೂ ತೋರುವ ಚುರುಕುತನಕ್ಕೆ ತಂಡದ ಫೀಲ್ಡಿಂಗ್ ಕೋಚ್‌ ಮನ್ಸೂರ್ ಅಲಿಖಾನ್ ಭೇಷ್‌ ಎಂದಿದ್ದಾರೆ. ಈ ಸಲದ ರಣಜಿ ಋತುವಿಗೆ ಈಗಾಗಲೇ ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟಿಸಲಾಗಿದ್ದು, ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಯುವ ಆಟಗಾರರೇ ತಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಪೈಪೋಟಿಯೂ ಹೆಚ್ಚಿದೆ. ರಾಷ್ಟ್ರೀಯ ತಂಡದಲ್ಲಿ ಆಡುವ ಕನಸು ಹೊಂದಿರುವ ಪಾಂಡೆ ಪ್ರತಿ ಪಂದ್ಯದಲ್ಲಿಯೂ ಉತ್ತಮ ಲಯ ಕಂಡುಕೊಳ್ಳುವ ಅಗತ್ಯವಿದೆ. ಏಕೆಂದರೆ, ಯುವ ಆಟಗಾರರು ರಾಷ್ಟ್ರೀಯ ತಂಡದ ಕದ ತಟ್ಟಲು ಜಿದ್ದಿಗೆ ಬಿದ್ದು ಕಾಯುತ್ತಿದ್ದಾರೆ. 

ತಡವಾಗಿಯಾದರೂ ಅವಕಾಶ ಸಿಕ್ಕಿದೆ; ಇರ್ಫಾನ್‌
‘ಜೂನಿಯರ್‌ ವಿಶ್ವಕಪ್ ತಂಡದಲ್ಲಿದ್ದ  ಮನೀಷ್‌ ಪಾಂಡೆಗೆ ಮೂರ್ನಾಲ್ಕು ವರ್ಷಗಳ ಹಿಂದೆಯೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗಬೇಕಿತ್ತು’ ಎಂದು ಜವಾನ್ಸ್‌ ಕ್ಲಬ್‌ನ ಕೋಚ್‌ ಇರ್ಫಾನ್‌ ಸೇಠ್‌ ನುಡಿದರು. ‘1996ರಲ್ಲಿ ಪಾಂಡೆ ನಮ್ಮ ಕ್ಲಬ್‌ ಸೇರಿದ ವರ್ಷದಿಂದಲೂ ವೇಗವಾಗಿ ರನ್‌ ಕಲೆ ಹಾಕುತ್ತಿದ್ದ. ವೇಗವಾಗಿ ರನ್‌ ಗಳಿಸುವುದೆಂದರೆ ಆತನಿಗೆ ತುಂಬಾ ಖುಷಿ. ಆದ್ದರಿಂದ ಕ್ಲಬ್‌ ಸೇರಿದ ಮೊದಲ ವರ್ಷದಲ್ಲಿಯೇ ‘ಭರವಸೆಯ ಆಟಗಾರ’ ಪ್ರಶಸ್ತಿ ಪಡೆದುಕೊಂಡಿದ್ದ.

ಕ್ಲಬ್‌ನಲ್ಲಿ ಸಾಮಾನ್ಯವಾಗಿ ಬೆಳಿಗ್ಗೆ 5.30ಕ್ಕೆ ಅಭ್ಯಾಸ ಆರಂಭವಾಗುತ್ತಿತ್ತು. ಆದರೆ, ನಾನು ಕ್ರೀಡಾಂಗಣಕ್ಕೆ ಬರುವ ಮುಂಚಿತವೇ ಪಾಂಡೆ ಸೈಕಲ್‌ ತುಳಿದುಕೊಂಡು ಬಂದು ಕ್ಲಬ್‌ ಅಂಗಳದಲ್ಲಿರುತ್ತಿದ್ದ. ಪಾಂಡೆ ಈಗೇನಾದರೂ ಸಾಧನೆ ಮಾಡಿದ್ದಾನೆಂದರೆ ಆಟದ ಬಗ್ಗೆ ಆತ ಹೊಂದಿರುವ ಬದ್ಧತೆಯೇ ಕಾರಣ’ ಎಂದೂ ಇರ್ಫಾನ್ ಹೇಳಿದರು.

ಮೂರನೇ ಕ್ರಮಾಂಕದ ಹೀರೊ...
ಅದು ಪಾಂಡೆ ಪಾಲ್ಗೊಂಡ ಚೊಚ್ಚಲ ಪ್ರಥಮ ದರ್ಜೆ ಟೂರ್ನಿಯಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಡೆಯರ್‌ ಕ್ಲಬ್‌ ಎದುರಿನ ಪಂದ್ಯವದು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವವರು ಯಾರೂ ಇರಲಿಲ್ಲ. ಯಾರನ್ನೇ ಕೇಳಿದರೂ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಹಿಂದೇಟು ಹಾಕುತ್ತಿದ್ದರು.

ಆಗ, ಪಾಂಡೆಗೆ ಮೂರನೇ ಕ್ರಮಾಂಕದಲ್ಲಿ ಕಳುಹಿಸಿ ಎಂದು ಜವಾನ್ಸ್‌ ಕ್ಲಬ್‌ನ ಕೋಚ್‌ ಹೇಳಿದರು. ಆಗ ತಂಡದ ನಾಯಕ ‘ಅವನಿನ್ನು ಚಿಕ್ಕವನು’ ಎಂದರು. ಆದರೆ, ಪಾಂಡೆ ಈ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಒಪ್ಪಿದರು. ಆಗ ಪಾಂಡೆ 155 ರನ್‌ ಬಾರಿಸಿ ಎದುರಾಳಿ ಬೌಲರ್‌ಗಳ ಬೆವರಿಳಿಸಿದ್ದರು. ಆಗ ಪಾಂಡೆಗೆ 15 ವರ್ಷವಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT