ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಠವಿಲ್ಲ, ಶಿಕ್ಷಕರಿಲ್ಲ: ಪರೀಕ್ಷೆ ಮಾತ್ರ ಕಡ್ಡಾಯ

ಸರ್ಕಾರಿ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ ವಿದ್ಯಾರ್ಥಿಗಳ ಪ್ರತಿಭಟನೆ
Last Updated 23 ಜುಲೈ 2016, 15:13 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನಲ್ಲಿ (ಜಿಎಫ್‌ಟಿಐ) ನಿಗದಿತ ಪಠ್ಯಕ್ರಮವನ್ನು ಪೂರ್ಣಗೊಳಿಸದೇ ಪರೀಕ್ಷೆಗಳನ್ನು ನಡೆಸಲಾಗಿದೆ. ಅದರಿಂದ ತಮಗೆ ತೊಂದರೆ ಆಗಿದೆ ಎಂದು ಆರೋಪಿಸಿ ಅಲ್ಲಿನ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿಂದ ಪ್ರತಿಭಟಿಸುತ್ತಿದ್ದಾರೆ.

ಹೆಸರಘಟ್ಟದಲ್ಲಿರುವ ಜಿಎಫ್‌ಟಿಐ, ಡೈರೆಕ್ಟರೇಟ್ ಆಫ್ ಟೆಕ್ನಿಕಲ್ ಎಜುಕೇಶನ್ (ಡಿಟಿಇ) ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ಸಿನಿಮಟೋಗ್ರಫಿ ಮತ್ತು ಸೌಂಡ್ ರೆಕಾರ್ಡಿಂಗ್ ಎಂಜಿನಿಯರಿಂಗ್ ಕೋರ್ಸ್‌ಗಳಿದ್ದು, ಇವೆರಡಕ್ಕೂ 2009 ಮತ್ತು 2015ರಲ್ಲಿ ಪರಿಷ್ಕೃತ ಪಠ್ಯಕ್ರಮ ರೂಪಿಸಲಾಗಿದೆ. ಅದರ ಪ್ರಕಾರ ಪ್ರತಿ ವಿಷಯಕ್ಕೂ ಇಂತಿಷ್ಟು ಗಂಟೆಗಳ ಪಾಠ ಮತ್ತು ಪ್ರಾಯೋಗಿಕ ತರಬೇತಿ ನೀಡಬೇಕು ಎಂದಿದೆ.

ಆದರೆ ಯಾವ ವಿಷಯದಲ್ಲೂ ಶೇಕಡ ನೂರರಷ್ಟು ಪಾಠವಾಗದಿದ್ದರೂ ಡಿಟಿಇ ಪರೀಕ್ಷೆ ನಡೆಸಿದ್ದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನೆ ನಡೆಸುತ್ತಿರುವ ಹಲವು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ. ಆದರೆ ಪ್ರಾಂಶುಪಾಲೆ ರೇಣುಕಾ ನಾಯ್ಡು ಹೇಳುವ ಪ್ರಕಾರ, ಹಾಜರಾತಿ ಕೊರತೆಯ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ.

ಡಿಟಿಇ ಪಠ್ಯಕ್ರಮದ ಪ್ರಕಾರ ಸಿನಿಮಟೋಗ್ರಫಿಯ ಆರನೇ ಸೆಮಿಸ್ಟರ್‌ನ ಬೋಧನೆಗೆ ಒಟ್ಟು 608 ಗಂಟೆಗಳ ಪಾಠ ಅವಶ್ಯ. ಅಂದರೆ ಏಳು ತಿಂಗಳಿಗೂ ಹೆಚ್ಚು. ಆದರೆ ಡಿಟಿಇ ನಿಗದಿಪಡಿಸಿರುವ ತರಬೇತಿ ಅವಧಿ ಬರೀ ನಾಲ್ಕು ತಿಂಗಳು! ಇಂಥ ದೋಷಗಳು ಸೌಂಡ್ ರೆಕಾರ್ಡಿಂಗ್ ಎಂಜಿನಿಯರಿಂಗ್ ವಿಭಾಗದಲ್ಲೂ ಸಿಗುತ್ತವೆ.

ಸಂಸ್್ಥೆಯ ಬೋಧಕ ಸಿಬ್ಬಂದಿಗೆ ತಾಂತ್ರಿಕ ಪರಿಣತಿ ಇಲ್ಲ ಮತ್ತು ಚಿತ್ರೋದ್ಯಮದ ಬಗೆಗೂ ತಿಳಿವಳಿಕೆ ಇಲ್ಲ ಎಂಬುದು ವಿದ್ಯಾರ್ಥಿಗಳ ಆರೋಪಗಳಲ್ಲೊಂದು. ಸಂಸ್ಥೆಯಲ್ಲಿ ಸದ್ಯ ಏಳು ಪೂರ್ಣಕಾಲಿಕ ಬೋಧಕ ಸಿಬ್ಬಂದಿ ಇದ್ದಾರೆ. ಉಳಿದಂತೆ ಅರೆಕಾಲಿಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ.

2015ನೇ ಸಾಲಿನಲ್ಲಿ ಇದೇ ಸಂಸ್ಥೆಯಲ್ಲಿ ಕೋರ್ಸ್ ಮುಗಿಸಿರುವವರನ್ನೂ ಅರೆಕಾಲಿಕ ಬೋಧಕರನ್ನಾಗಿ ನೇಮಿಸಿಕೊಳ್ಳಲಾಗಿದೆ. ಅವರಿಗೆ ಔದ್ಯಮಿಕ ಅನುಭವ ಇಲ್ಲ. ಪಿಯುಸಿ ಮುಗಿಸಿದ ಮಹದೇವ ಸ್ವಾಮಿ ಸಿನಿಮಾ ವಿಭಾಗದಲ್ಲಿ ಬೋಧಿಸುತ್ತಾರೆ, ಸ್ವತಃ ಪ್ರಾಂಶುಪಾಲರಿಗೇ ಸಿನಿಮಾ ವಿಭಾಗದ ತಿಳಿವಳಿಕೆ ಇಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

ಹಳೆಯ ತಂತ್ರಜ್ಞಾನವೇ ಗತಿ: ಚಿತ್ರೋದ್ಯಮಕ್ಕೆ ಸಂಬಂಧಿಸಿದ ವಿಷಯಗಳ ತರಬೇತಿಗೆಂದೇ ಇರುವ ಜಿಎಫ್‌ಟಿಐನಲ್ಲಿ ಅದಕ್ಕೆ ಅವಶ್ಯವಿರುವ ಸಮಕಾಲೀನ ತಂತ್ರಜ್ಞಾನ ಮತ್ತು ಉಪಕರಣಗಳನ್ನೇ ಪೂರೈಸಲಾಗಿಲ್ಲ. 2015ರ ಡಿಟಿಇ ಪಠ್ಯಕ್ರಮಕ್ಕೆ ಅನುಗುಣವಾದ ಉಪಕರಣಗಳು ಇಲ್ಲಿಲ್ಲ. ಚಿತ್ರೋದ್ಯಮವು ನೆಗೆಟಿವ್ ಯುಗದಿಂದ ಡಿಜಿಟಲ್ ಮಾದರಿಗೆ ಹೊರಳಿದ್ದರೂ ಜಿಎಫ್‌ಟಿಐ ಮಾತ್ರ ಮಗ್ಗುಲು ಬದಲಿಸಿಲ್ಲ. ಸಂಸ್ಥೆ ಇನ್ನೂ ಫಿಲ್ಮ್ ರೋಲ್ ಕಾಲದಲ್ಲೇ ಇದೆ.

ಹಳೆಯ ಕಾಲದ ರೋಲ್ ಕ್ಯಾಮೆರಾ, ಎರಡು ಡಿಎಸ್‌ಎಲ್‌ಆರ್ ಕ್ಯಾಮೆರಾ ಗಳಿವೆ. ಇರುವ ಎರಡು ಕಂಪ್ಯೂಟರ್‌ ಗಳಲ್ಲಿ ಒಂದು ಆಡಳಿತ ಕಚೇರಿಯಲ್ಲಿದ್ದರೆ ಇನ್ನೊಂದು ಲ್ಯಾಬ್‌ನಲ್ಲಿದೆ. ಈ ಹಳೆಯ ಕಂಪ್ಯೂಟರ್‌ಗಳಲ್ಲಿ ಬಳಕೆಯಲ್ಲಿರುವುದು ‘ವಿಂಡೋಸ್ 98’ ಪೈರೇಟೆಡ್ ಆಪರೇ ಟಿಂಗ್ ಸಿಸ್ಟಂ. ಹೊಸ ತಂತ್ರಾಂಶಗಳು ಈ ಕಂಪ್ಯೂಟರ್‌ಗಳನ್ನು ಸೋಕಿಯೂ ಇಲ್ಲ.

ವಿದ್ಯಾರ್ಥಿ ಪರಿಷತ್ತು ಮಾಡಿರುವ ಆರೋಪವನ್ನು ಪರಿಶೀಲಿಸಲು ಡಿಟಿಇ ನೇಮಿಸಿದ್ದ ನಾಲ್ವರು ಸದಸ್ಯರಿರುವ ವಿಚಾರಣಾ ಸಮಿತಿಯೇ ಒಪ್ಪಿಸಿದ ವರದಿ ಪ್ರಕಾರ, ಒಂದರಿಂದ ಆರನೇ ಸೆಮಿಸ್ಟರ್‌ ಗಳಿಗೆ ಎಂಟು ಪ್ರಯೋಗಾಲಯಗಳಿವೆ. ಈ ಪೈಕಿ ಐದು ಪ್ರಯೋಗಾಲಯಗಳಲ್ಲಿ ಇರುವುದು ಶೇಕಡ 30ರಿಂದ 50ರಷ್ಟು ಉಪಕರಣಗಳು ಮಾತ್ರ.

ಸಂಸ್ಥೆಗೆ ಅಗತ್ಯವಿರುವ ಉಪಕರಣಗ ಳನ್ನು ಖರೀದಿಸಲು ಈವರೆಗೆ ರಾಜ್ಯ ಸರ್ಕಾರವು ₹ 52.45 ಲಕ್ಷ ಅನುದಾನ ನೀಡಿದೆ. ನಿಗದಿತ ಅವಧಿಯಲ್ಲಿ ಅನುದಾ ನದ ಬಳಕೆಯಾಗದ ಕಾರಣ ₹ 38 ಲಕ್ಷ ವಾಪಸ್ ಹೋಗಿದೆ.

ಇದಕ್ಕೆ ರೇಣುಕಾ ನಾಯ್ಡು ಅವರು, ‘ಇ–ಟೆಂಡರ್ ಕರೆದಿ ದ್ದೆವು. ಟೆಂಡರ್ ರದ್ದಾದ ಕಾರಣ ಅನುದಾನ ಬಳಸಿಕೊಳ್ಳಲು ಸಾಧ್ಯವಾ ಗಿಲ್ಲ’ ಎಂದು ತಾಂತ್ರಿಕ ಕಾರಣಗಳನ್ನು ನೀಡುತ್ತಾರೆ. ಶಿಕ್ಷಕರ ಪರಿಣತಿಯ ಕುರಿತೂ, ‘ಅವರೆಲ್ಲ ಸರ್ಕಾರದಿಂದಲೇ ನೇಮಕಗೊಂಡವರು’ ಎಂದು ಪ್ರತಿಕ್ರಿಯಿಸುತ್ತಾರೆ. ಸಮಸ್ಯೆಗೆ ಪರಿಹಾರ ಕೋರಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾ ದಾಗ, ‘ಹೀಗೆಲ್ಲ ಮಾಡಬೇಡಿ. ಈ ಸಂಸ್ಥೆಯನ್ನು ಮುಚ್ಚಿ ದರೆ ನಮ್ಮ ನೌಕರಿ ಹೋಗುತ್ತದೆ’ ಎಂದು ಶಿಕ್ಷಕರು ತಮ್ಮ ಹತ್ತಿರ ಬೇಡಿಕೊಳ್ಳುತ್ತಾರೆ ಎಂಬ ಅಂಶವನ್ನು ವಿದ್ಯಾರ್ಥಿಗಳೇ ಬಹಿರಂಗಪ ಡಿಸುತ್ತಾರೆ. ಒಟ್ಟಿನಲ್ಲಿ ಪ್ರಾಂಶುಪಾಲರ ಅಸಹಾಯಕತೆ, ಸರ್ಕಾರದ ನಿರ್ಲಕ್ಷ್ಯದ ನಡುವೆ ವಿದ್ಯಾರ್ಥಿಗಳು ಬಳಲುವಂತಾಗಿದೆ.

ಬಾಯಿ ಪಾಠದಿಂದ ಉಪಯೋಗವಿಲ್ಲ
ನೀರಿಗೆ ಇಳಿಯದಿದ್ದರೆ ಈಜು ಬರುವುದಿಲ್ಲ. ಸಿನಿಮಾ ಕೂಡ ಹಾಗೆ. ಸೌಂಡ್ ರೆಕಾರ್ಡಿಂಗ್, ಸಿನಿಮ ಟೊಗ್ರಫಿ ಪ್ರಾಯೋಗಿಕವಾಗಿ ಕಲಿಯಬೇಕಾದ ವಿಚಾರ. ಬಾಯಿ ಪಾಠದಿಂದ ಉಪಯೋಗವಿಲ್ಲ. ಸಿನಿಮಾ ನೋಡಿ ಚರ್ಚಿಸುವ ಸಂಸ್ಕೃತಿ ಜಿಎಫ್‌ಟಿಐನಲ್ಲಿ ಇಲ್ಲ. ಇದು ದೇಶದ ಮೊದಲ ಫಿಲ್ಮ್ ಇನ್‌ಸ್ಟಿಟ್ಯೂಟ್. ಕನ್ನಡ ಚಿತ್ರೋದ್ಯಮಕ್ಕೆ ಅದರ ಕೊಡುಗೆ ಅಪಾರ. ಅಶೋಕ ಕಷ್ಯಪ್, ಸಂತೋಷ್ ರೈ ಪಾತಾಜೆ, ಸತ್ಯ ಹೆಗಡೆ, ಗೋವಿಂದ ನಿಹಲಾನಿ, ವಿ.ಕೆ. ಮೂರ್ತಿ  ಅವರೆಲ್ಲ ಕಲಿತ ಸಂಸ್ಥೆ. ಇವರನ್ನೆಲ್ಲ ಕರೆದು ವರ್ಕ್‌ಶಾಪ್ ಮಾಡಿಸಬಹುದು.

ಮೂಲಸೌಕರ್ಯಗಳೆಲ್ಲ ಇವೆ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಾರೆ. ಕೇವಲ ಕಟ್ಟಡವಿದ್ದರೆ ಸಾಲದು. ಆಧುನಿಕ ಉಪಕರಣಗಳೂ ಬೇಕು. ಡಿಟಿಇ ನೇಮಿಸಿದ್ದ ವಿಚಾರಣಾ ಸಮಿತಿಯಲ್ಲಿ ತಾಂತ್ರಿಕ ಪರಿಣತರೇ ಇರಲಿಲ್ಲ. ಅವರು ಹೇಗೆ ತಾಂತ್ರಿಕ ಅಂಶಗಳ ಅಧ್ಯಯನ ಮಾಡಲು ಸಾಧ್ಯ?ಬೇರೆ ರಾಜ್ಯಗಳಲ್ಲಿರುವ ಸುಸಜ್ಜಿತ ಫಿಲ್ಮ್ ಇನ್‌ಸ್ಟಿಟ್ಯೂಟ್ ಜೊತೆ ನಾವೂ ಸ್ಪರ್ಧೆ ಮಾಡಬೇಕೆಂದು ಡಿಟಿಇಗೆ ಅನ್ನಿಸಿದರೆ ಮಾತ್ರ ಜಿಎಫ್‌ಟಿಐ ಸುಧಾರಿಸುತ್ತದೆ. ಅದೆಲ್ಲ ಬಿಟ್ಟು ನಮ್ಮದೂ ಒಂದು ಇನ್‌ಸ್ಟಿಟ್ಯೂಟ್ ಇದೆ ಎಂಬ ಹೆಸರಷ್ಟೇ ಸಾಕೆಂದರೆ ಅದಕ್ಕೆ ಮದ್ದಿಲ್ಲ.
–ಗಿರೀಶ ಕಾಸರವಳ್ಳಿ, ನಿರ್ದೇಶಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT