ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಡ್ದನ ಬಂತು ರಂಗಕ್ಕೆ

Last Updated 22 ಜುಲೈ 2015, 19:30 IST
ಅಕ್ಷರ ಗಾತ್ರ

ತುಳುನಾಡ ಸಂಸ್ಕೃತಿ ಸಂಪ್ರದಾಯವನ್ನು ನಾಡಿಗೆ ಪರಿಚಯಿಸುವ ಉದ್ದೇಶದಿಂದ ಪ್ರಖ್ಯಾತವಾದ ಕ್ರಿಯಾವಿಧಿ ಆಧರಿಸಿದ ‘ಸಿರಿ’ ಎಂಬ ಜಾನಪದೀಯ ನಾಟಕವನ್ನು ಪ್ರಸ್ತುತ ಪಡಿಸುತ್ತಿದೆ ‘ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾ’.  
ತುಳು ಪಾಡ್ದನಗಳಲ್ಲಿ ಕಂಡುಬರುವ ತುಳುನಾಡ ಸಂಸ್ಕೃತಿಯ ಸಿರಿ ನಾಟಕವನ್ನು ರಂಗರೂಪಕ್ಕೆ ತರುವ ವಿಶಿಷ್ಟ ಪ್ರಯತ್ನ ಇವರದ್ದು.

‘ಸಿರಿ’ ಸಂಸ್ಕೃತಿಯನ್ನು ಮೂಲರೂಪದ ತುಳುವಿನಿಂದ ಕನ್ನಡಕ್ಕೆ ಪರಿವರ್ತಿಸಿ ನಾಟಕ ರಚಿಸಿದ್ದಾರೆ ನಾ.ದಾಮೋದರ ಶೆಟ್ಟಿ. ಪ್ರವೀಣ್‌ ಡಿ. ರಾವ್ ನಾಟಕಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಶಶಿಧರ್‌ ಅಡಪ ರಂಗ ವಿನ್ಯಾಸ ಹಾಗೂ ಪರಿಕರಗಳನ್ನು ಒದಗಿಸಿದ್ದಾರೆ.

ನಗರದ ಗುರುನಾನಕ್‌ ಭವನದಲ್ಲಿ ನಡೆಯಲಿರುವ ಈ ನಾಟಕವನ್ನು ನಿರ್ದೇಶಿಸಿದ್ದಾರೆ ರಂಗ ನಿರ್ದೇಶಕಿ ಬಿ. ಜಯಶ್ರೀ.
ವಿವಿಧ ರಾಜ್ಯದ ಯುವ ಕಲಾವಿದರನ್ನು ಒಗ್ಗೂಡಿಸಿ ಆ ಮೂಲಕ ಅವರಲ್ಲಿನ ನಟನಾ ತುಡಿತವನ್ನು ಹೊರಗೆಡಹಿ, ನಾಟಕಕ್ಕೊಂದು ಸ್ವರೂಪ  ನೀಡಿದ್ದಾರೆ ಬಿ. ಜಯಶ್ರೀ. ಸಿರಿ ನಾಟಕ ನಿರ್ದೇಶನ ಹಾಗೂ ಸಿರಿ ಸಂಪ್ರದಾಯದ ಕುರಿತು ಮಾತನಾಡಿದ್ದಾರೆ ಬಿ. ಜಯಶ್ರೀ.

ತುಳು ನಾಟಕವನ್ನು ರಂಗರೂಪಕ್ಕೆ ಇಳಿಸಿದ ಉದ್ದೇಶವೇನು?‌
ರಂಗ ಕಲಾವಿದೆಯಾದ ನಾನು ರಂಗಭೂಮಿಯಲ್ಲಿ ಯಾವುದೇ ನಿರ್ದಿಷ್ಟವಾದ ಇತಿಮಿತಿಯನ್ನು ಇರಿಸಿಕೊಂಡಿಲ್ಲ. ಯಾವುದೋ ಒಂದು ಒಳ್ಳೆಯ ಕಥಾವಸ್ತುವಿದ್ದರೆ ಅದನ್ನು ನಾಡಿಗೆ ಪರಿಚಯಿಸಬೇಕು ಎಂಬುದು ನನ್ನ ಉದ್ದೇಶ.

ಸಿರಿ ಪಾಡ್ದನವನ್ನೇ ನಾಟಕಕ್ಕೆ ವಸ್ತುವಿಷಯವಾಗಿ ಆಯ್ದುಕೊಳ್ಳಲು ಕಾರಣ?
ದಕ್ಷಿಣ ಕನ್ನಡದಲ್ಲಿ ಹಲವು ವರ್ಷಗಳ ಹಿಂದಿನಿಂದ, ಇಂದಿಗೂ ಆಚರಿಸುತ್ತಿರುವ ಒಂದು ಕ್ರಿಯಾವಿಧಿ ಸಿರಿ. ಸುಮಾರು 20 ವರ್ಷಗಳಿಂದಲೂ ಇದನ್ನು ರಂಗರೂಪಕ್ಕೆ ತರಬೇಕು ಎಂಬ ಆಸೆಯಿತ್ತು. ಆದರೆ ತುಳುನಾಡಿನ ಈ ಸಿರಿ ಪಾಡ್ದನವನ್ನು ಕೇಳುವಂತಹ ಸನ್ನಿವೇಶ, ಸಂದರ್ಭಗಳು  ಸಿಕ್ಕಿರಲಿಲ್ಲ. ಈ ಪಾಡ್ದನ ಹಾಗೂ ನನ್ನ ನಡುವೆ ಕಣ್ಣಮುಚ್ಚಾಲೆ ನಡೆಯುತ್ತಲೇ ಇತ್ತು.

ಸಿರಿ ಪಾಡ್ದನವನ್ನು ನಾಟಕವಾಗಿ ರೂಪಿಸಲು ಅವಕಾಶ ಸಿಕ್ಕಿದ್ದು ಹೇಗೆ?
ಸಿರಿ ಸಂಪ್ರದಾಯ ಇದ್ದಿದ್ದು ತುಳುವಿನಲ್ಲಿ. ನಮಗೆ ಅದನ್ನು ಕನ್ನಡಕ್ಕೆ ಭಾಷಾಂತರಿಸುವವರು ಬೇಕಿತ್ತು. ಹಲವರ ಬಳಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದರೂ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ವರ್ಷದ ಹಿಂದೆ ನಾ.ದಾಮೋದರ ಶೆಟ್ಟಿ ಅವರ ಬಳಿ ಸಿರಿಯನ್ನು ಕನ್ನಡಕ್ಕೆ ಭಾಷಾಂತರಿಸಿ ಕೊಡಿ ಎಂದಾಗ ಅವರು ಪ್ರಯತ್ನ ಪಡುತ್ತೇನೆ ಎಂದಿದ್ದರು. ಇತ್ತೀಚೆಗೆ ಅವರು ಸಿಕ್ಕಾಗ ‘ಸಿರಿ’‌ಮುಕ್ಕಾಲು ಭಾಗ ಮುಗಿದಿದೆ ಎಂದರು. ಅದೇ ಸಮಯಕ್ಕೆ ಸರಿಯಾಗಿ ‘ನ್ಯಾಷನಲ್‌ ಸ್ಕೂಲ್ ಆಫ್‌ ಡ್ರಾಮಾ’ದವರು ನಾಟಕ ಪ್ರದರ್ಶನವನ್ನು ಘೋಷಿಸಿಬಿಟ್ಟಿದ್ದರು. ಹೀಗೆ ಇಂದು ‘ಸಿರಿ’ ಸುಮಾರು ಒಂದೂ ಮುಕ್ಕಾಲು ಗಂಟೆಯ ನಾಟಕವಾಗಿ ಪ್ರೇಕ್ಷಕರ ಮುಂದೆ ಬಿತ್ತರಗೊಳ್ಳಲು ಸಿದ್ಧವಾಗಿದೆ. 

ಒಂದು ಸಂಸ್ಕೃತಿ ಸಂಪ್ರದಾಯವನ್ನು ನಾಟಕ ರೂಪಕ್ಕೆ ಪರಿಚಯಿಸಿದ್ದೀರಿ? ಇದು ನಿಮಗೆ ಸವಾಲು ಅನ್ನಿಸಲಿಲ್ಲವೇ?
ಸವಾಲು ಎಂದು ನನಗೆ ಎಲ್ಲೂ ಅನ್ನಿಸಲಿಲ್ಲ. ಯಾವುದೇ ಸಂಸ್ಕೃತಿ ಸಂಪ್ರದಾಯಗಳಲ್ಲಿ ಕೆಲವು ವ್ಯತ್ಯಾಸಗಳಿರುತ್ತವೆಯೇ ಹೊರತು ಬಹಳಷ್ಟು ವ್ಯತ್ಯಾಸ ಇರುವುದಿಲ್ಲ. ಇದು ಜನಪದ ಕಲೆ. ಜನಪದಕ್ಕೆ ಜನ ಏನು ಕೊಟ್ಟರೂ ತೆಗೆದುಕೊಳ್ಳುತ್ತದೆ.  ತಮಟೆ, ಕಥಕ್ಕಳಿ, ದೊಡ್ಡಾಟ ಮುಂತಾದವುಗಳನ್ನೆಲ್ಲಾ ಸಂಯೋಜಿಸಿ ಈ ನಾಟಕದಲ್ಲಿ ಅಳವಡಿಸಿದ್ದೇವೆ.

‘ಸಿರಿ’ ಅಂದರೆ ನಿಮ್ಮ ಮಾತುಗಳಲ್ಲಿ?
ಸಿರಿ ಅಂದರೆ ಶ್ರೀಮಂತ. ಭಾರತದಲ್ಲಿ ಬಡತನ ಎನ್ನುವುದು ಅತ್ಯಂತ ಶ್ರೀಮಂತವಾಗಿದೆ. ಬಡವರಿಗೆ ತಮ್ಮ ಬಡತನದ ನೋವನ್ನು ಮರೆಯಲು ಇರುವುದು ‘ಸಿರಿ’ ಒಂದೇ. ಸಿರಿ ಆಚರಣೆಯ ಮೂಲಕ ತಮ್ಮ ನೋವನ್ನು ಮರೆತು ಬಡತನವನ್ನು ಗೆದ್ದು ನಿಲ್ಲುವ ಸಂಭ್ರಮ ಆ ಜನರದ್ದು ಎಂಬುದು ನನ್ನ ಅನಿಸಿಕೆ.

ಯುವಪೀಳಿಗೆಯನ್ನು ಇಟ್ಟುಕೊಂಡು ನಾಟಕ ನಿರ್ದೇಶನ ಮಾಡಿದ ಅನುಭವ ಹೇಗಿತ್ತು?
ವಿವಿಧ ರಾಜ್ಯಗಳಿಂದ ಬಂದ ಕಲಾವಿದರನ್ನು ಒಗ್ಗೂಡಿಸಿ ನಾಟಕ ಮಾಡಿಸುವುದೇ ಒಂದು ಸಂತೋಷದ ವಿಷಯವಾಗಿತ್ತು. ಈ ಹುಡುಗರಲ್ಲಿ ನಟಿಸಬೇಕು ಎನ್ನುವ ಉತ್ಸಾಹವಿದೆ. ವಿವಿಧ ಭಾಷೆಯವರಾದ ಇವರು ಕನ್ನಡ ಸಂಭಾಷಣೆಯನ್ನು ತಮ್ಮ ಭಾಷೆಯಲ್ಲಿ ಬರೆದುಕೊಂಡು, ಪ್ರತಿ ಅಕ್ಷರವನ್ನೂ ಕೇಳಿ ತಿಳಿದುಕೊಂಡು ನಾಟಕದಲ್ಲಿ ಸಂಭಾಷಣೆ ಹೇಳಿದ್ದಾರೆ.

ಸಂಸ್ಕೃತಿಯನ್ನು  ನಾಟಕ ರೂಪಕ್ಕೆ ಪರಿವರ್ತಿಸಿದ್ದೀರಿ. ಜನ ಇದನ್ನು ಹೇಗೆ ಸ್ವೀಕರಿಸಬಹುದು?‌
ಯಾವುದೋ ಎರಡು ಸಾವಿರ ವರ್ಷಗಳ ಹಿಂದಿನಿಂದ ಆಚರಣೆಯಲ್ಲಿರುವ  ಈ ಸಂಪ್ರದಾಯವು ಸಮಕಾಲೀನತೆಯೊಂದಿಗೆ ತಳುಕು ಹಾಕಿಕೊಂಡಿದೆ. ಹೆಣ್ಣು ಕೂಡ ಗಂಡಿಗೆ ಸಮಾನಳು ಎಂಬುದನ್ನು ಹೇಗೆ ‘ಸಿರಿ’ ಹೇಗೆ ವ್ಯಕ್ತಪಡಿಸುತ್ತಾಳೋ, ಅದೇ ಭಾವ ಇಂದು ಸಮಾಜದಲ್ಲಿದೆ. ಬಹಳ ವರ್ಷಗಳಿಂದಲೂ ಇಂತಹ ಮನೋಭಾವಗಳು ಇದ್ದವು ಎಂಬುದನ್ನು ಜನರಿಗೆ ತೋರಿಸಿದರೆ ಜನ ಖಂಡಿತ ಖುಷಿಯಿಂದ ಸ್ವೀಕರಿಸಿ ನಾಟಕ ನೋಡುತ್ತಾರೆ.

ರಂಗಭೂಮಿಯ ಪರಿಣತ ಕಲಾವಿದರಿಗೂ, ಇಲ್ಲಿನ ಕಲಾವಿದರಿಗೂ ಇರುವ ವ್ಯತ್ಯಾಸವೇನು?
ಇಲ್ಲಿನ ಕಲಾವಿದರಿಗೆ ಕಲಿಯಬೇಕು ಎಂಬ ತುಡಿತವಿದೆ. ರಂಗಭೂಮಿಯಲ್ಲಿ  ಹೆಸರು ಗಳಿಸಿದ ಕಲಾವಿದರಿಗೆ ನಾವು ಕಲಿತಾಗಿದೆ ಎಂಬ ಭಾವವಿರುತ್ತದೆ. ಈಗ ರಂಗಭೂಮಿಗೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುವ ಆಸೆಯಿಂದ ಬರುವವರೇ ಅನೇಕರು. ಇವರ ಮಧ್ಯೆ ಈ ಹುಡುಗರಲ್ಲಿನ ಕಲಿಯುವ ಉತ್ಸಾಹ ನನಗೆ ಖುಷಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT