ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾಣಗಳಲ್ಲಿ ವಿಜ್ಞಾನ ಹುಡುಕಬೇಡಿ

ವಿದ್ವಾಂಸ ಡಾ.ಪಿ.ವಿ. ನಾರಾಯಣ ಕಿವಿಮಾತು
Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪುರಾಣ ಹಾಗೂ ಮಹಾಕಾವ್ಯಗಳು ಅನುಭವದ ಅಭಿವ್ಯಕ್ತಿ. ಅವುಗಳಲ್ಲಿ ವಸ್ತುಸ್ಥಿತಿ ಇರು­ವುದಿಲ್ಲ. ಹೀಗಾಗಿ ಅಲ್ಲಿ ವಿಜ್ಞಾನವನ್ನು ಹುಡುಕುವುದು ಬೇಡ’ ಎಂದು ವಿದ್ವಾಂಸ ಡಾ.ಪಿ.ವಿ. ನಾರಾಯಣ ಅಭಿಪ್ರಾಯಪಟ್ಟರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಭಾನುವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ  ಮಾತನಾಡಿದ ಅವರು, ‘ಮಹಾಕಾವ್ಯಗಳು ಜನರಲ್ಲಿ ಕನಸು ಬಿತ್ತು­ತ್ತವೆ. ಆದರೆ, ಕನಸೇ ಬೆಳವಣಿಗೆ ಅಲ್ಲ. ಹಾಗೆಯೇ ಕನಸಿ­ಲ್ಲದೆ ಬೆಳವಣಿಗೆ ಇಲ್ಲ. ಅನುಭವ ವಿಸ್ತರಿಸಲು ಕಾವ್ಯವೇ ಹೊರತು ವಿಚಾರ ಪ್ರಚೋದಿಸಲಲ್ಲ’ ಎಂದು ಅಭಿಪ್ರಾಯಪಟ್ಟರು.

ಖಭೌತ ವಿಜ್ಞಾನಿ ಪ್ರೊ. ರಾಜೇಶ್‌ ಕೊಚ್ಚಾರ್‌ ಅವರು, ‘ಋಗ್ವೇದ ಅಫಘಾನಿಸ್ತಾನದಲ್ಲಿ ಜನಿಸಿದೆ ಎನ್ನುವುದು ಸಂಶೋಧನೆಗಳಿಂದ ರುಜುವಾತಾಗಿದೆ. ಹರಪ್ಪ ನಾಗರಿಕತೆ ಕಾಲದಲ್ಲಿಯೇ ಇಂಡೊ– ಇರಾನಿ­ಯನ್‌ ಬುಡಕಟ್ಟು ಜನಾಂಗ ಅಫಘಾನಿ­ಸ್ತಾನ­­ದಲ್ಲಿ ಬಂದು ತಳವೂರಿತು. ಆ ಸಂದರ್ಭದಲ್ಲೇ ಋಗ್ವೇದದ ಶ್ಲೋಕ­ಗಳ ರಚನಾ ಪ್ರಕ್ರಿಯೆ ಶುರುವಾಯಿತು’ ಎಂದು ವಿವರಿಸಿದರು.

‘ಸರಸ್ವತಿ ನದಿ ಇರುವುದು ಅಫಘಾನಿಸ್ತಾನ­ದಲ್ಲಿಯೇ ಹೊರತು ಭಾರತದಲ್ಲಿ ಅಲ್ಲ. ಘಗ್ಗರ್‌ ನದಿಯನ್ನೇ ಸರಸ್ವತಿ ನದಿ ಎಂದು ಭ್ರಮಿಸಲಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. ಹುಸಿ ವಿಜ್ಞಾನ ತಿರಸ್ಕರಿಸಿ: ಗಣಿತತಜ್ಞ ಡಾ.ಎಸ್‌. ಬಾಲಚಂದ್ರ ರಾವ್‌, ‘ಐರೋಪ್ಯ ಖಗೋಳಶಾಸ್ತ್ರದ ಬೆಳವಣಿಗೆಯಲ್ಲಿ ಕ್ರಿ.ಶ 2ನೇ ಶತಮಾನದಿಂದ 16ನೇ ಶತಮಾನದ ವರೆಗೆ ಯಾವುದೇ ಹೇಳಿಕೊಳ್ಳುವಂತಹ ಆವಿಷ್ಕಾರಗಳು ಆಗಲೇ ಇಲ್ಲ.

ಆದರೆ, ಇದೇ ವೇಳೆಯಲ್ಲಿ ಭಾರತದಲ್ಲಿ ಗಣಿತ ಮತ್ತು ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಅದ್ಭುತವಾದ ಕೊಡುಗೆಗಳು ಮೂಡಿಬಂದವು. ದೇಶದಲ್ಲಿ ಬೆಳೆದು ಬಂದ ಖಗೋಳ ಶಾಸ್ತ್ರಕ್ಕೆ ಒಂದು ವ್ಯವಸ್ಥಿತ ವೈಜ್ಞಾನಿಕ ತಳಹದಿಯನ್ನು ಹಾಕಿಕೊಟ್ಟ ಕೀರ್ತಿ ಆರ್ಯಭಟನಿಗೆ ಸಲ್ಲುತ್ತದೆ’ ಎಂದು ಹೇಳಿದರು.

‘ದೇಶದ ಜನ ನಮ್ಮದೇ ಕೊಡುಗೆಗಳಾದ ವೈದ್ಯಕೀಯ ಮತ್ತು ಖಗೋಳ ವಿಜ್ಞಾನ ಕಡೆಗಣಿಸುತ್ತ, ಮೂಢ ಆಚರಣೆಗಳನ್ನು ನಿತ್ಯ ಜೀವನದ ಭಾಗಗಳಾಗಿ ಮಾಡಿಕೊಳ್ಳುತ್ತಿದ್ದಾರೆ’ ಎಂದು ವಿಷಾದಿಸಿದರು. ‘ಟಿ.ವಿ.ಗಳು ಕೂಡ ಜ್ಯೋತಿಷ ಕಾರ್ಯಕ್ರಮಗಳನ್ನು ನಿತ್ಯ ಬಿತ್ತರಿಸುವ ಮೂಲಕ ಜನರಲ್ಲಿ ಮೌಢ್ಯತೆ ಬೆಳೆಸುತ್ತಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT