ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಖರ ಬಿಸಿಲಿಗೆ `ಗಾಜಿನ ಸವಾಲು'!

Last Updated 19 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಜಾಗತಿಕ ತಾಪಮಾನ ಏರಿಕೆ ಇಂದಿನ ಬಹುದೊಡ್ಡ ಸಮಸ್ಯೆ, ಅದಕ್ಕೆ ಪರಿಹಾರ ಕಂಡುಹಿಡಿಯುವುದೂ ಅಷ್ಟೇ ದೊಡ್ಡ ಸವಾಲು. ಭೂಮಿಯ ಮೇಲೆಎ ಸಮಭಾಜಕ ವೃತ್ತದ ಅಕ್ಕಪಕ್ಕ ಬರುವ ದೇಶಗಳಲ್ಲಿ ಎಲ್ಲ ಊರುಗಳು ಇತ್ತೀಚಿನ ವರ್ಷಗಳಲ್ಲಿ ಬಿಸಿಲ ಬೇಗೆಯಿಂದ ತತ್ತರಿಸುತ್ತಿವೆ. `ಗ್ರೀಷ್ಮ ಋತು' ಅಂದರೆ ಬೇಸಿಗೆ ಕಾಲ ಬಂದರೆ ತಲೆ ಮೇಲೆ ಕೆಂಡದ ಮಳೆ ಸುರಿದ ಅನುಭವವಾಗುತ್ತದೆ.

ಇಂತಹ ಸಂಕಷ್ಟದಿಂದ ಪಾರಾಗಲು ಜನತೆ ಮನೆಯಿಂದ ಹೊರ ಬರುವುದನ್ನೇ ತ್ಯಜಿಸುತ್ತಾರೆ. ಬಿಸಿಲ ತಾಪದಿಂದ ಮನೆ, ಕಾರು ಸಂರಕ್ಷಿಸುವ ಉಪಾಯವನ್ನು ಮೈಸೂರಿನ ನಾಲ್ವರು ಯುವ ತಂತ್ರಜ್ಞರು ಕಂಡುಕೊಂಡಿದ್ದಾರೆ. ಇವರು ರೂಪಿಸಿದ ವಿಧಾನ ಅಳವಡಿಸಿದರೆ ಅಪಾಯಕಾರಿ(ಅಲ್ಟ್ರಾವಾಯ್ಲೆಟ್) ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಬಹುದು. ವಾಹನಗಳು ಮತ್ತು ಮನೆಯ ಒಳಭಾಗದ  ವಾತಾವರಣವನ್ನು ತಂಪಾಗಿ ಇರಿಸಬಹುದು.

ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಹಾಗೂ ಶ್ರೀ ಜಯ ಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜಂಟಿಯಾಗಿ ಇಂಥದೊಂದು ಸಾಧ್ಯತೆ ಶೋಧಿಸಿದ್ದಾರೆ. ಇದಕ್ಕಾಗಿ ವಿದ್ಯಾರ್ಥಿಗಳು ಕಾಲೇಜಿನಿಂದ ಯಾವುದೇ ನೆರವು ಪಡೆದಿಲ್ಲ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಏಕೈಕ ಆಶಯದಿಂದ ಈ ನವೀನ ಮಾದರಿ ರೂಪಿಸಿದ್ದಾರೆ.

` ಎಸ್‌ಜೆಸಿಇ' ಕಾಲೇಜಿನ ನಿಶಾಂತ್ ಭಟ್ (ಇಂಡಸ್ಟ್ರಿಯಲ್ ಆಂಡ್ ಪ್ರೊಡಕ್ಷನ್ ಎಂಜಿನಿಯರಿಂಗ್), ಕುಲದೀಪ್ ಕುಮಾರ್ (ಮೆಕ್ಯಾನಿಕಲ್ ಎಂಜಿನಿಯರಿಂಗ್) ಹಾಗೂ ಎನ್‌ಐಇ ಕಾಲೇಜಿನ ಎಂ.ಸಿ.ಪ್ರತೀಕ್, ಬಿ.ಎಂ.ಚೇತನ್ (ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್) ಈ ವಿಧಾನದ ರೂವಾರಿಗಳು. ಈ ನಾಲ್ವರೂ ಪಿಯುಸಿ ಒಡನಾಡಿಗಳು. ಪಿಯುಸಿಯಲ್ಲಿ ಕ್ಲಾಸ್‌ಮೇಟ್ ಆಗಿದ್ದವರು, ಬಳಿಕ ಬೇರೆ ಬೇರೆ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮುಂದುವರಿಸಿದರು. ಹಲವು ವರ್ಷಗಳ ಸ್ನೇಹವನ್ನು ಈ ಶೋಧದ ಮೂಲಕ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

ಕಾಲೇಜಿನ ನಿತ್ಯದ ಪಾಠದ ಹೊರತಾಗಿ ಒಟ್ಟಿಗೆ ಸೇರಿಕೊಂಡು `ಪ್ರಾಜೆಕ್ಟ್' ನಿರ್ವಹಿಸಬೇಕು ಎನ್ನುವುದು ಈ  ಸ್ನೇಹಿತರ ಬಹುದಿನಗಳ ಕನಸಾಗಿತ್ತು. ಕಾಲೇಜು ಅವಧಿ ಮುಗಿದ ಮೇಲೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ಯಾವ ಕೆಲಸ ಮಾಡಿದರೆ ಉತ್ತಮ ಎಂಬ ಚರ್ಚೆ ನಡೆಸುತ್ತಿದ್ದರು. ಬೆಂಗಳೂರಿನಲ್ಲಿ ರಾಷ್ಟ್ರ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ನಡೆಯುವ ವಿಷಯ ಇವರ ಕಿವಿಗೆ ಬಿದ್ದಾಗ ಅದಕ್ಕೆ ತಕ್ಕದಾದ ಅತ್ಯುತ್ತಮ ಯೋಜನಾ ವಿನ್ಯಾಸ ರೂಪಿಸುವ ಚಿಂತನೆ ಮೊಳೆಯಿತು. ಖಾಸಗಿ ಕಂಪೆನಿ ಪ್ರಾಯೋಜಿಸುವ ಈ ಪ್ರದರ್ಶನ ಎಂಜಿನಿಯರಿಂಗ್ ವಿಜ್ಞಾನಿಗಳ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ. ಹಲವು ದಿನಗಳ ಚರ್ಚೆ ನಡೆಸಿ ‘Smartphone Operated Intelligent Eco frendly window’ಂಬ ವಿಷಯವನ್ನು ಅಂತಿಮಗೊಳಿಸಿದರು.

ಕಾರು ಹಾಗೂ ಮನೆಯ ಒಳಭಾಗದಲ್ಲಿ ಅಪಾಯಕಾರಿ ಸೂರ್ಯ ರಶ್ಮಿ ಪ್ರವೇಶ ತಡೆಯುವುದು ಇದರ ಮುಖ್ಯ ಉದ್ದೇಶ. ಇದು ಬೆಳಕಿನ ಧ್ರುವೀಕರಣ (Polarization) ಪ್ರಕ್ರಿಯೆಯ ಮೂಲಕ ಬೆಳಕಿನ ಪ್ರಖರತೆಗೆ ತಡೆಯೊಡ್ಡುತ್ತದೆ. ಈ ಆಶಯಕ್ಕೆ ಪೂರಕವಾಗಿ ಕೆಲಸ ಮಾಡುವ ಗ್ಲಾಸ್ ರೂಪಿಸಿದ್ದಾರೆ. ಇದು ಫೋನ್ ಅಥವಾ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರಖರ ಬಿಸಿಲು ಇದ್ದಾಗ ಗ್ಲಾಸ್ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಬಿಸಿಲ ತೀವ್ರತೆ ಕ್ಷೀಣಿಸಿದರೆ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಹೀಗೆ ಬಣ್ಣ ಬದಲಿಸುವ ಪ್ರಕ್ರಿಯೆಯಿಂದ ಮನೆ ಅಥವಾ ಕಾರಿನ ಒಳಗೆ ಕಿರಣಗಳು ಪ್ರವೇಶಿಸದಂತೆ ನಿಭಾಯಿಸುತ್ತದೆ. ವಾತಾವರಣದ ಸಮತೋಲನ ಕಾಯುವ ಕೆಲಸ ಮಾಡುತ್ತದೆ. ಪ್ರಸ್ತುತ ಬಳಕೆಯಲ್ಲಿರುವ ಗ್ಲಾಸ್‌ಗೆ ಕೆಲವು ರಾಸಾಯನಿಕ ಬಳಸಿ ಅದನ್ನು ಸಿದ್ಧಪಡಿಸಬಹುದು.

ಮನೆಯ ಬಾಗಿಲು, ಕಿಟಕಿ ತೆರೆದಾಗ ಸೂರ್ಯನ ಕಿರಣಗಳು ಮನೆಯೊಳಗೆ ಪ್ರವೇಶ ಮಾಡುತ್ತವೆ. ಇದರಿಂದ ಮನೆಯ ಹವಾಮಾನ ಬಿಸಿಯಾಗುತ್ತದೆ. ಹವಾನಿಯಂತ್ರಣ, ಇಲ್ಲವೇ ಏರ್ ಕೂಲರ್ ಆ ಬಿಸಿಯನ್ನು ತಂಪಾಗಿಸುತ್ತದೆ. ಆದರೆ ನೂತನ ವಿಧಾನದಲ್ಲಿ ರೂಪಿಸಿದ ಗ್ಲಾಸುಗಳನ್ನು ಮನೆಯ ಕಿಟಕಿ, ಬಾಗಿಲಿಗೆ ಅಳವಡಿಸಿದರೆ ಸಾಕು ಅದು ಮನೆಯನ್ನು ತಂಪಾಗಿಡುತ್ತದೆ.
ಬೇಸಿಗೆಯಲ್ಲಿ ಮನೆಯಲ್ಲಿ ಕೂರುವುದೇ ಕಷ್ಟ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ ತೀವ್ರವಾಗಿರುತ್ತದೆ. ಉಷ್ಣಾಂಶ ಎಲ್ಲೆಡೆ 40 ಡಿಗ್ರಿ ದಾಟಿರುತ್ತದೆ. ಬಳ್ಳಾರಿ, ಗುಲ್ಬರ್ಗ, ರಾಯಚೂರುಗಳಲ್ಲಿ(ಶೇ 45-46 ಡಿಗ್ರಿ ಸೆ.) ಅಕ್ಷರಶಃ ಕೆಂಡದ ಮಳೆ ಸುರಿದ ಅನುಭವ. ಇಂಥ ಕಡೆ ಮನೆಯ ವಾತಾವರಣವನ್ನು ಎಷ್ಟೇ ತಂಪಾಗಿಡಲು ಪ್ರಯತ್ನಿಸಿದರೂ ಪ್ರಯೋಜನವಾಗದು. ಹವಾನಿಯಂತ್ರಣ (ಎ.ಸಿ) ವ್ಯವಸ್ಥೆ ಹೊರಗಿನ ಗಾಳಿಯನ್ನು ನಿಯಂತ್ರಿಸುವುದಿಲ್ಲ.

ಬಿಸಿಲ ನಾಡುಗಳಲ್ಲಿ ಕಾರು ಚಾಲನೆ ವೇಳೆಯೂ ಇಂತಹುದೇ ಕಷ್ಟ ಅನುಭವಿಸುತ್ತೇವೆ. ಉಷ್ಣತೆ ಹೆಚ್ಚಾದರೆ ಪ್ರಯಾಣ ಕಿರಿಕಿರಿ ಅನಿಸುತ್ತದೆ. ಸಾಮಾನ್ಯವಾಗಿ ಕಾರಿನ ಮೇಲ್ಮೈ ಮೇಲೆ ಸೂರ್ಯನ ಕಿರಣಗಳು ದಾಳಿ ಮಾಡುತ್ತವೆ. ಅದನ್ನು ಮುಟ್ಟಿದರೆ ಸಾಕು ಕೈಗೆ ಬಿಸಿ ತಾಗುತ್ತದೆ. ಈ ಬಿಸಿ ಒಳಗೆ ಪ್ರಯಾಣ ಮಾಡುವ ಜನರನ್ನೂ ಬಾಧಿಸುತ್ತದೆ. ಮೇಲ್ಭಾಗದ ಬಿಸಿಯಿಂದ ಒಳಗೆ ಕುಳಿತವರು ಬೆವರುತ್ತಾರೆ. ಹವಾನಿಯಂತ್ರಣ ವ್ಯವಸ್ಥೆ ಒಳಭಾಗವನ್ನು ಮಾತ್ರ ತಂಪಾಗಿರುತ್ತದೆ. ಪದೇಪದೇ ಕಾರಿನ ಬಾಗಿಲು ತೆರೆಯಬೇಕಾದ ಸಂದರ್ಭದಲ್ಲಿ ಪ್ರಯಾಣಿಕರು ಸುಸ್ತು ಹೊಡೆಯುತ್ತಾರೆ.

ಮೇಲಿನ ಎರಡೂ ಸಂದರ್ಭಗಳಲ್ಲೂ ನಮ್ಮ ನೆರವಿಗೆ ಬರುವಂತೆ ಈ `EcofrendlyWindow’ ವನ್ನು ಬ್ಲೂಟೂತ್ ಮೂಲಕ ನಿಯಂತ್ರಿಸಬಹುದು. ಇಲ್ಲವೆ ಒಂದು ಬಾರಿ ಅಳವಡಿಸಿ ಸ್ವಯಂ ಚಾಲಿತವಾಗಿಯೂ ಪರಿವರ್ತನೆ ಮಾಡಬಹುದು. ಈಗಾಗಲೇ ಮನೆ ಹಾಗೂ ಕಾರಿಗೆ ಅಳವಡಿಸಿ ಈ ಯಶಸ್ಸು ಕಾಣಲಾಗಿದೆ. ಏ.ಸಿ(ಏರ್‌ಕೂಲರ್)ಗೆ ಬಳಸುವ ವಿದ್ಯುತ್ ಸಹ ಉಳಿಯುತ್ತದೆ.
`ಇದು ಅತ್ಯುತ್ತಮ ಸಂಶೋಧನೆ. ಜಾಗತಿಕ ಮಟ್ಟದಲ್ಲಿ ಇದಕ್ಕೆ ಉತ್ತಮ ಮನ್ನಣೆ ದೊರೆಯುವ ಆಶಯವನ್ನು ನಾವು ಹೊಂದಿದ್ದೇವೆ' ಎನ್ನುತ್ತಾರೆ `ಎಸ್‌ಜೆಸಿಇ' ಪ್ರಾಂಶುಪಾಲ ಬಿ.ಜಿ.ಸಂಗಮೇಶ್ವರ.


ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತುಗಳ ಉಪಕರಣಗಳ ಪ್ರದರ್ಶನದಲ್ಲಿ ಈ ಪರಿಸರ ಸ್ನೇಹಿ ವಿಧಾನ ತಜ್ಞರಿಗೆ ಇಷ್ಟವಾಯಿತು. ದೇಶದ ಖ್ಯಾತನಾಮ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿ ತಮ್ಮ ಅನ್ವೇಷಣೆಗಳನ್ನು ಪ್ರದರ್ಶನಕ್ಕೆ ಇರಿಸಿದ್ದರು. ಐಐಟಿ ಮದ್ರಾಸ್, ಐಐಟಿ ಖರಗ್‌ಪುರ, ಐಐಟಿ ತಿರುಚ್ಚಿ ಮುಂತಾದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಅಲ್ಲಿದ್ದರು. ಹತ್ತು ಅನ್ವೇಷಣೆಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದವು. ಮೈಸೂರಿನ ಈ ಹುಡುಗರು ರೂಪಿಸಿದ ವಿಜ್ಞಾನ ಮಾದರಿ ತೀರ್ಪುಗಾರರ ಮೆಚ್ಚುಗೆ ಪಡೆಯಿತು. ಮೊದಲ ಬಹುಮಾನವನ್ನೂ ದಕ್ಕಿಸಿಕೊಂಡಿತು.

ಪೇಟೆಂಟ್ ಸಾಧ್ಯತೆ
ವಿಜ್ಞಾನ ವಸ್ತುಗಳ ಪ್ರದರ್ಶನದಲ್ಲಿ ಪರಿಣಿತರಿಂದ ಮೆಚ್ಚುಗೆ ಪಡೆದ ಈ ಪ್ರಾಜೆಕ್ಟ್ ಬಗ್ಗೆ ಪೇಟೆಂಟ್ ಪಡೆಯಲು ವಿದ್ಯಾರ್ಥಿಗಳು ಯತ್ನ ನಡೆಸಿದ್ದಾರೆ.

`ನಮ್ಮ ಉತ್ಪನ್ನಕ್ಕೆ ಪೇಟೆಂಟ್ ದೊರೆಯುವ ಕಾಲ ಸಮೀಪಿಸಿದೆ. ಇದಕ್ಕಾಗಿ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ತೀರ್ಪುಗಾರರ ಮೆಚ್ಚುಗೆ ನಮ್ಮ ಆತ್ಮ ವಿಶ್ವಾಸ ವೃದ್ಧಿಸಿದೆ' ಎನ್ನುತ್ತಾರೆ ನಿಶಾಂತ್ ಭಟ್.

`ಇದು ಎಲ್ಲಿಯೂ ನಡೆಯದ ಸಂಶೋಧನೆ. ಇದಕ್ಕೆ ಸೂಕ್ತ ಮನ್ನಣೆ ದೊರೆಯಬೇಕು. ಆವರೆಗೆ ತಾಂತ್ರಿಕ ವಿವರ ಬಹಿರಂಗ ಮಾಡುವುದಿಲ್ಲ' ಎನ್ನುವುದು ಅವರ ನಿಲುವು.

`ವಿದ್ಯಾರ್ಥಿಗಳು ನಡೆಸುವ ಸಂಶೋಧನೆಗಳನ್ನು ಉತ್ಪನ್ನವಾಗಿ ಪರಿವರ್ತಿಸುವ ಕೆಲಸ ಎಲ್ಲೆಡೆ ನಡೆಯಬೇಕಿದೆ. ದೇಶ 2020ರ ವೇಳೆಗೆ ಬಲಿಷ್ಠವಾಗಲು ಇದು ಮೊದಲ ಹೆಜ್ಜೆ. ಚೀನಾ, ಅಮೆರಿಕ ದೇಶಗಳ ತಾಂತ್ರಿಕ ಪೈಪೋಟಿ ಎದುರಿಸುವ ಸಂಶೋಧನೆಗಳನ್ನು ಭಾರತೀಯ ವಿದ್ಯಾರ್ಥಿಗಳು ಕೈಗೊಳ್ಳುತ್ತಿದ್ದಾರೆ. ಅಂತಹ ಸಂಶೋಧನೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಉತ್ಪನ್ನ ಸಹ ಸೇರಿದೆ' ಎನ್ನುತ್ತಾರೆ `ಎನ್‌ಐಇ' ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಜಿ.ಎಲ್.ಶೇಖರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT