ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಪಕ್ಷ: ಕಾಂಗ್ರೆಸ್‌, ಬಿಜೆಪಿ ಜಗಳ

Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಸಭೆ ಪ್ರತಿ­ಪ­ಕ್ಷದ ನಾಯಕನ ಸ್ಥಾನಮಾನ ಕುರಿತು  ನಿರ್ಧಾರ ಪ್ರಕಟಿಸದ ಸ್ಪೀಕರ್‌ ಸುಮಿತ್ರಾ ಮಹಾ­ಜನ್‌ ಅವರನ್ನು ಟೀಕಿಸಿರುವ ಕಾಂಗ್ರೆಸ್‌ ವಿರುದ್ಧ ಸರ್ಕಾರ ಮಂಗಳ­ವಾರ­ ಹರಿಹಾಯ್ದಿದೆ.

‘ಸ್ಪೀಕರ್‌ ಅವರ ಬಗ್ಗೆ ಕಾಂಗ್ರೆಸ್‌ ಮಾಡು­ತ್ತಿರುವ ಆಕ್ಷೇಪ ಆ ಪಕ್ಷದ ಹತಾಶ ಸ್ಥಿತಿಗೆ ಹಿಡಿದ ಕನ್ನಡಿ. ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಪಡೆ­ಯಲು ಅಗತ್ಯವಾದ ಸಂಖ್ಯಾಬಲವನ್ನು ಕಾಂಗ್ರೆ­­ಸ್‌ಗೆ ಜನರು ನೀಡಿಲ್ಲ. ಇದಕ್ಕೆ ನಾವೇನು ಮಾಡಲು ಸಾಧ್ಯ’ ಎಂದು ಸಂಸದೀಯ ವ್ಯವಹಾರ ರಾಜ್ಯ  ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದರು.

‘ಸ್ಪೀಕರ್‌ ಸ್ಥಾನವನ್ನು ಯಾರೇ ಅಲಂಕ­ರಿ­ಸಿದರೂ ಅವರು ನಿಷ್ಪಕ್ಷಪಾ­ತ­ವಾ­ಗಿಯೇ ಕಾರ್ಯನಿರ್ವಹಿಸುತ್ತಾರೆ. ಆದರೆ, ಕಾಂಗ್ರೆಸ್‌ ಮುಖಂಡರ ಟೀಕೆ  ಅತಿರೇಕತನದ್ದು, ಇದನ್ನು ಒಪ್ಪಲಾಗದು’ ಎಂದರು. ಕಾಂಗ್ರೆಸ್‌ ಮುಖಂಡರ ಆಕ್ಷೇಪದ ಬಗ್ಗೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.

ಸ್ಪೀಕರ್‌ ಅವರ ಕಾರ್ಯ­ವೈಖರಿ­ಯನ್ನು ಆಕ್ಷೇಪಿಸಿರುವ ಕಾಂಗ್ರೆಸ್‌ ಹಿರಿಯ ಮುಖಂಡ ಕಮಲ್‌ನಾಥ್‌, ‘ಕೆಲವು ವಿಷಯಗಳನ್ನು ಅಧಿವೇಶನದಲ್ಲಿ ಪ್ರಸ್ತಾ­ಪಿಸಬೇಕು ಎಂದು ಅನೇಕ ಪಕ್ಷ­ಗಳು ತವಕಿಸುತ್ತಿದ್ದರೂ ಅದಕ್ಕೆ ಅವಕಾಶ ಸಿಗುತ್ತಿಲ್ಲ’ ಎಂದರು. ಸಂಸತ್ತಿನ ಹೊರಗೆ ಸುದ್ದಿಗಾರ­ರೊಂದಿಗೆ ಮಾತನಾಡಿದ ಅವರು, ‘ಯಾವ ವಿಷಯಗಳು ಆದ್ಯತೆಗೆ ಅರ್ಹ­ವಾ­ಗಿವೆಯೋ ಅಂಥವಕ್ಕೆ ಆದ್ಯತೆ ದೊರೆ­ಯು­ತ್ತಿಲ್ಲ. ಈ ವಿಚಾರವಾಗಿ ಪ್ರತಿಪಕ್ಷಗಳ ಮುಖಂಡರು ಲೋಕಸಭಾ ಸ್ಪೀಕರ್‌ ಅವ­ರನ್ನು ಭೇಟಿ ಮಾಡಲು ಆಲೋ­ಚಿಸಿ­ದ್ದಾರೆ’ ಎಂದರು.

ಇದಕ್ಕೂ ಮೊದಲು, ಲೋಕಸಭೆಯ ಕಾಂಗ್ರೆಸ್‌ ಉಪನಾಯಕ ಅಮರಿಂದರ್‌ ಸಿಂಗ್‌ ಕೂಡ ಸ್ಪೀಕರ್‌ ಅವರ ಧೋರಣೆಯನ್ನು ಟೀಕಿಸಿದ್ದರು.
‘ವಿರೋಧ ಪಕ್ಷದ ನಾಯಕನ ಸ್ಥಾನ­ಮಾನ ಕುರಿತು ಸ್ಪೀಕರ್‌ ಅವರು ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇದನ್ನು  ನೋಡಿದರೆ, ಅವರು ಸರ್ಕಾ­ರದ ಪ್ರಭಾವಕ್ಕೆ ಒಳಗಾದಂತೆ ಕಾಣು­ತ್ತದೆ’ ಎಂದು ಅಮರಿಂದರ್‌ ಆಪಾದಿ­ಸಿ­ದ್ದರು.

ಲೋಕಸಭೆಯ ಒಟ್ಟು ಸದಸ್ಯ ಬಲದ ಶೇಕಡ 10ರಷ್ಟು ಸಂಖ್ಯಾಬಲ ಹೊಂದಿದ ಪಕ್ಷಕ್ಕೆ ಇಲ್ಲವೆ ಪಕ್ಷಗಳ ಒಕ್ಕೂಟಕ್ಕೆ ಅಧಿಕೃತ ವಿರೋಧ ಪಕ್ಷದ ಮಾನ್ಯತೆಯನ್ನು ಸ್ಪೀಕರ್‌ ನೀಡುತ್ತಾರೆ. ಆದರೆ, 16ನೇ ಲೋಕಸಭೆಯಲ್ಲಿ ಬಿಜೆಪಿ ನಂತರ ಅತ್ಯಧಿಕ ಸ್ಥಾನವನ್ನು (44) ಕಾಂಗ್ರೆಸ್‌ ಹೊಂದಿದ್ದರೂ, ಅಧಿಕೃತ ವಿರೋಧ ಪಕ್ಷದ ಮಾನ್ಯತೆ ಪಡೆಯಲು ಕಡ್ಡಾಯವಾದ ಸಂಖ್ಯಾಬಲ ಹೊಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT