ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಷ್ಠಿತ ಕ್ಲಬ್‌ಗಳ ಕತ್ತು ಹಿಚುಕಬೇಡಿ

Last Updated 26 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬ್ರಿಟಿಷರು ತಮ್ಮ ವಿಲಾಸಿ ಜೀವನಕ್ಕೆಂದು ದೇಶದಾ­ದ್ಯಂತ ಕ್ಲಬ್‌ಗಳನ್ನು ರಚಿಸಿಕೊಂಡಿದ್ದರು. ಅವುಗಳಲ್ಲಿ ಶಿಸ್ತು­­ಬದ್ಧವಾದ ನಿಯಮಗಳನ್ನು ಅಳವಡಿಸಿ­ಕೊಂಡಿ­ದ್ದರು. ಆ ನಿಯಮಗಳನ್ನು ಯಾರೇ ಉಲ್ಲಂಘಿಸಿದರೂ  ತಾರ­ತಮ್ಯ­ವಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿತ್ತು.

ಬ್ರಿಟಿ­ಷರು ದೇಶ ಬಿಟ್ಟು ಹೋದ ಬಳಿಕ ಆ ಕ್ಲಬ್‌ಗಳು ಭಾರತೀ­ಯರ ಕೈಸೇರಿವೆ. ಆದರೆ ನಿಯಮಗಳು ಬಹುಮಟ್ಟಿಗೆ ಬ್ರಿಟಿಷರ ಕಾಲದವೇ ಉಳಿದಿವೆ. ಹಲವು ಎಕರೆ  ವಿಸ್ತೀರ್ಣವುಳ್ಳ ಪುರಾತನ ಕ್ಲಬ್‌ಗಳು, ಪಂಚತಾರಾ ಹೋಟೆಲ್‌­ಗಳಿ­ಗಿಂತಲೂ ಅಧಿಕ ಪ್ರಾಮುಖ್ಯ ಪಡೆದಿವೆ. ಇಲ್ಲಿರುವ  ಸೌಲಭ್ಯ­ಗಳನ್ನು ಅನುಭವಿಸಲು ಸದಸ್ಯತ್ವ ಪಡೆಯಬೇಕು. ಆದರೆ ಅದನ್ನು ಪಡೆಯುವುದು ಅಷ್ಟು ಸುಲಭವಲ್ಲ.

ಅದನ್ನು ಪಡೆಯಲು ಹಲವಾರು ವರ್ಷ ಕಾಯಬೇಕಾ­ಗುತ್ತದೆ.ಇಲ್ಲಿ ಯಾವುದೇ ಅಕ್ರಮ ನಡೆಯಲು ಅವಕಾಶ­ವಿಲ್ಲ. ಅಲ್ಲದೇ ಇಂತಹ ಕ್ಲಬ್‌ಗಳು ಹಣ ಮಾಡುವ ಉದ್ದೇಶವನ್ನೂ ಹೊಂದಿರುವುದಿಲ್ಲ. ಏಕೆಂದರೆ ಇವುಗಳಿಗೆ ಯಾರ­ದೋ ಒಬ್ಬರ ಒಡೆತನ ಇರುವುದಿಲ್ಲ. ನಿರ್ದಿಷ್ಟ ಅವಧಿಗೆ ನಡೆಯುವ ಚುನಾವಣೆಯಲ್ಲಿ ಆರಿಸಿ ಬರು­ವವರು ಕ್ಲಬ್‌ನ ನಿರ್ವಹಣೆಯ ಜವಾಬ್ದಾರಿ ನಿಭಾಯಿ­ಸು­ತ್ತಾರೆ.

ಇಂತಹ ಕೆಲವು ಕ್ಲಬ್‌ಗಳು ರಾಜ್ಯದ ಮತ್ತು ದೇಶದ  ಪ್ರತಿಷ್ಠೆಯ ಪ್ರತೀಕವೆನಿಸಿವೆ. ನೂರು, ನೂರೈವತ್ತು ವರ್ಷಗಳ ಇತಿಹಾಸವುಳ್ಳ ಇಂತಹ ಕ್ಲಬ್‌ಗಳ ಬಗ್ಗೆ ಸದಸ್ಯತ್ವವನ್ನೇ ಹೊಂದಿರದ ಕೆಲವು ರಾಜಕಾರಣಿಗಳು ಅಸಂಬದ್ಧವಾದ ಹೇಳಿಕೆ ನೀಡುತ್ತ, ಅವುಗಳ ಪ್ರತಿಷ್ಠೆಗೆ ಕುಂದು ತರುವ ರೀತಿ ನಡೆದುಕೊಳ್ಳುತ್ತಿದ್ದಾರೆ. ನಿಯಮ ಬದಲಿಸಲು ಸರ್ಕಾರದ ಮೇಲೆ ಪರೋಕ್ಷವಾಗಿ ಒತ್ತಡ ಹೇರುತ್ತಿದ್ದಾರೆ.

ಇದು ಎಷ್ಟರಮಟ್ಟಿಗೆ ಸಮಂಜಸ? ಕೆಲವು ಖಾಸಗಿ ಸಂಘ–ಸಂಸ್ಥೆಗಳಲ್ಲಿ ತಮ್ಮದೇ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ.   ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಕೂಡ ಸದಸ್ಯತ್ವ ಪಡೆಯುವಾಗ ಅಲ್ಲಿನ ನಿಯಮಗಳನ್ನು ಒಪ್ಪಿ ಸದಸ್ಯತ್ವ ಪಡೆಯಲಾಗುತ್ತದೆ.  ಇದರಲ್ಲಿ ವಸ್ತ್ರಸಂಹಿತೆಯೂ ಒಂದು. ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸಿ ನಂತರ ಆ ಶಾಲೆಯ ವಿರುದ್ಧ ತಿರುಗಿಬಿದ್ದು ‘ರೀ, ನಮ್ಮದು ಭಾರತ ದೇಶ.

ನಮ್ಮ ಮಕ್ಕಳಿಗೆ ಟೈ ಕಟ್ಟುವಂತೆ   ಹೇಳಬೇಡಿ’ ಎನ್ನುವಂತಿದೆ, ಸದಸ್ಯತ್ವವಿಲ್ಲದ ರಾಜಕಾರಣಿಗಳ ನಡೆ ನುಡಿ.ಬಿಬಿಎಂಪಿ ಸೇರಿದಂತೆ  ಅನೇಕ ಸಂಸ್ಥೆಗಳು  ಇಂತಹ ಕ್ಲಬ್‌ಗಳ ಶಿಸ್ತು, ನಿಯಮ, ಸ್ವಚ್ಛತೆಯನ್ನು  ಮಾದರಿಯಾ­ಗಿಸಿ­ಕೊಳ್ಳಬೇಕು.  ನಿತ್ಯ ಸಾವಿರಾರು ಜನರು ಬಂದು ಹೋಗುವ ಜಾಗದಲ್ಲಿ ಒಂದೇ ಒಂದು ತ್ಯಾಜ್ಯ  ಕೂಡ ಕಾಣಸಿಗುವುದಿಲ್ಲ. ತ್ಯಾಜ್ಯವನ್ನು ಗೊಬ್ಬರ ಮಾಡಿ, ಕೈತೋಟ ಮಾಡುವವರಿಗೆ ಉಚಿತವಾಗಿ ನೀಡ­ಲಾಗುತ್ತದೆ. ಮಳೆ ನೀರು ಇಂಗಿಸುವ ವ್ಯವಸ್ಥೆ ಇರುತ್ತದೆ.

ದೇಶ–ವಿದೇಶಗಳ ಪ್ರತಿಷ್ಠಿತರು ವಿಸ್ಮಯಪಡುವ ರೀತಿಯಲ್ಲಿರುವ ಇಂತಹ ಕ್ಲಬ್‌ಗಳಿಗೆ  ಹೆಚ್ಚಿನ  ಪ್ರೋತ್ಸಾಹ  ನೀಡಲು  ರಾಜಕಾರಣಿಗಳು ಯತ್ನಿಸಬೇಕು.  ಕೆರೆ ಕುಂಟೆ ಕಬಳಿಸಿದಂತೆ ಕ್ಲಬ್‌ಗಳನ್ನು ಪುಕ್ಕಟೆಯಾಗಿ ಅನುಭವಿಸಲು ಯತ್ನಿಸಬಾರದು. ದೀರ್ಘ  ಇತಿಹಾಸವುಳ್ಳ ಕ್ಲಬ್‌ಗಳು ರಾಜಕಾರಣಿಗಳ ಮತ್ತು ಮುಂಗೋಪಿ ಅಧಿಕಾರಿಗಳ ವರ್ತನೆಗೆ ಸಿಲುಕಿ ನಲುಗುತ್ತಿವೆ. ಕ್ಲಬ್‌ಗಳ ಆಡಳಿತ ಮಂಡಳಿ ಮತ್ತು ಹಿರಿಯ ಸದಸ್ಯರು ಇನ್ನಾದರೂ ಎಚ್ಚೆತ್ತು ಇವುಗಳ ಉಳಿವಿಗೆ ಕೈಜೋಡಿಸಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT