ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮೀಳೆಯರ ನಾಡಿನಲ್ಲಿ ಏನಾಗುತ್ತಿದೆ...?

Last Updated 5 ಮಾರ್ಚ್ 2013, 9:20 IST
ಅಕ್ಷರ ಗಾತ್ರ

ರಾಜ್ಯದ ಕರಾವಳಿ ಒಂದು ವಿಷಯದಲ್ಲಿ ಇತರ ಎಲ್ಲಾ ಜಿಲ್ಲೆಗಳಿಗಿಂತ ಭಿನ್ನ. ಉಳಿದೆಲ್ಲೆಡೆ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಹೆಚ್ಚಿದ್ದರೆ, ಈ ಉಭಯ ಜಿಲ್ಲೆಗಳಲ್ಲಿ ಅದು ವ್ಯತಿರಿಕ್ತ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುರುಷ- ಮಹಿಳೆಯ ಅನುಪಾತ 1000:1018 ಇದ್ದರೆ ಉಡುಪಿ ಜಿಲ್ಲೆಯಲ್ಲಿ 1000:1094.

ಇಲ್ಲಿನ ಮಹಿಳಾ ಪ್ರಾಬಲ್ಯಕ್ಕೆ ಇಲ್ಲಿನ ಸಂಸ್ಕೃತಿಯೂ ಕಾರಣ. ತೌಳವ ದೊರೆ ಬೂತಾಳ ಪಾಂಡ್ಯನ ಕಾಲದಲ್ಲಿ ಆರಂಭವಾದ ಅಳಿಯ ಕಟ್ಟು ವ್ಯವಸ್ಥೆ ಇಲ್ಲಿ ಮಹಿಳೆಯರನ್ನು ಅನೇಕ ವಿಷಯಗಳಲ್ಲಿ ಸಶಕ್ತರನ್ನಾಗಿಸಿತ್ತು.

ಅಳಿಯಕಟ್ಟು ಕರಾವಳಿಯ ಮಾತೃಪ್ರಧಾನ ವ್ಯವಸ್ಥೆಯ ಬೇರು. ಅಳಿಯ ಕಟ್ಟಿನ ಪ್ರಕಾರ ಮನೆಯ ಅಧಿಕಾರವೇನಿದ್ದರೂ ಸ್ತ್ರೀ ಕೇಂದ್ರಿತ. ವಂಶದ ಯಾಜಮಾನ್ಯ ಮುಂದುವರಿಯುವುದು ಸ್ತ್ರೀಯ ಮೂಲಕ.

ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತ್ದ್ದಿದಾಗ ಹೆಣ್ಣು ಮಗು ಹುಟ್ಟಲಿ ಎಂದು ದೈವ ದೇವರಲ್ಲಿ ಮೊರೆ ಹೋಗುತ್ತಿದ್ದ, ಕೋಲ ನೇಮಗಳನ್ನು ಮಾಡಿಸುತ್ತಿದ್ದ ನಾಗನಿಗೆ ಹರಕೆ ಹೊರುತ್ತಿದ್ದ ನಾಡಿದು. ಇಲ್ಲಿ ಅಳಿಯಕಟ್ಟನ್ನು ಪಾಲಿಸಿಕೊಂಡು ಬಂದ ಬಂಟ ಹಾಗೂ ಬಿಲ್ಲವ ಸಮುದಾಯದಲ್ಲಿ ಅದೆಷ್ಟೋ ಕುಟುಂಬಗಳ ವಂಶಾಭಿವೃದ್ಧಿಗಾಗಿ ಒಂದಾದರೂ ಹೆಣ್ಣು ಕುಡಿ ಬೇಕೇ ಬೇಕು.

ಇಲ್ಲಿನ ಮಾತೃಪ್ರಧಾನ ವ್ಯವಸ್ಥೆಯ ಪ್ರತಿಬಿಂಬಗಳನ್ನು ನಾವು ಇಲ್ಲಿ ಹಲವು ರೀತಿಯಲ್ಲಿ ಕಾಣಬಹುದು. ಇಲ್ಲಿನ ಶಾಲಾ ಕಾಲೇಜುಗಳಲ್ಲೂ ಹುಡುಗರಿಗಿಂತ ಹುಡುಗಿಯರ ಸಂಖ್ಯೆಯೇ ಹೆಚ್ಚು. ಮನೆ ಮಗಳು ಹೊರಗೆ ಹೋಗಿ ದುಡಿದು ಸಂಸಾರ ಪೊರೆಯುವ ಉದಾಹರಣೆಗಳು ಇಲ್ಲಿನ ಹಳ್ಳಿ ಹಳ್ಳಿಯಲ್ಲೂ ಕಾಣಸಿಗುತ್ತದೆ.

ಉಳಿದೆಡೆಗಳಿಗೆ ಹೋಲಿಸಿದರೆ ಸ್ತ್ರೀಯರಿಗೆ ವಿಧಿಸುತ್ತಿದ್ದ ತಥಾಕಥಿತ ನಿರ್ಬಂಧಗಳು ಇಲ್ಲಿ ಕಡಿಮೆ. ಅದರರ್ಥ ಕರಾವಳಿ ಸ್ತ್ರೀ ಶೋಷಣೆಯಿಂದ ಮುಕ್ತ ಎಂದೇನಲ್ಲ. ಇಲ್ಲೂ ಮಾತೃಪ್ರಧಾನ ವ್ಯವಸ್ಥೆಯನ್ನೇ ಶೋಷಣೆಗೆ ಬಳಸಿಕೊಂಡ ಉದಾಹರಣೆಗಳೂ ಇವೆ. ಉಳಿದ ಕಡೆಗಿಂತ ಇಲ್ಲಿ ಸ್ತ್ರೀಯರಿಗೆ ಹೆಚ್ಚಿನ ಸ್ವಾತಂತ್ರ್ಯವಿತ್ತು ಎಂದರೆ ಅತಿಶಯೋಕ್ತಿ ಆಗಲಾರದು.

ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಿಜಕ್ಕೂ ಆತಂಕ ಹುಟ್ಟಿಸುವಂಥಹದ್ದು. ನಾಲ್ಕು ವರ್ಷದ ಹಿಂದೆ ಬೆಳಕಿಗೆ ಬಂದ ಮೋಹನ್ ಕುಮಾರ್ ಪ್ರಕರಣ ರಾಜ್ಯದ ಜನತೆಯನ್ನೇ ಬೆಚ್ಚಿಬೀಳಿಸಿತ್ತು.

ಕರಾವಳಿಯಲ್ಲಿ ಹೆಣ್ಣು ಮಕ್ಕಳು ನಾಪತ್ತೆ ಪ್ರಕರಣದ ಹಿಂದೆ `ಮತಾಂತರ'ದ ಹುನ್ನಾರ ಇದೆ ಎಂಬ ಆರೋಪಕ್ಕೆ ಹೊರತಾದ ಆಯಾಮ ಹುಡುಗಿಯರ ನಾಪತ್ತೆ ಪ್ರಕರಣಗಳಿಗೆ ಇದೆ ಎಂಬುದನ್ನು ಈ ಪ್ರಕರಣ ತೋರಿಸಿಕೊಟ್ಟಿತು.

ಕರಾವಳಿಯ ಮಾತೃಪ್ರಧಾನ ವ್ಯವಸ್ಥೆ ಇದ್ದರೂ ಆಧುನಿಕ ಕಾಲದಲ್ಲಿ ಮಹಿಳೆ ಹೇಗೆಲ್ಲ ಶೋಷಕರ ಬಲೆಗೆ ಬೀಳಬಲ್ಲಳು ಎಂಬುದನ್ನು ಸೈನೈಡ್ ಮೋಹನ ಕುಮಾರ್ ಪ್ರಕರಣ ಬೆಳಕಿಗೆ ತಂದಿತು. ಈ ಪ್ರಕರಣದ ಬಳಿಕವೂ ಕರಾವಳಿಯಲ್ಲಿ ಹುಡುಗಿಯರು, ಯುವತಿಯರು ನಾಪತ್ತೆಯಾಗುವುದು ಕಡಿಮೆಯಾಗಿಲ್ಲ.

ಕರಾವಳಿಯಲ್ಲಿ ಇತ್ತೀಚೆಗೆ ಇನ್ನೊಂದು ಆಘಾತಕರ ಬೆಳವಣಿಗೆ ನಡೆಯುತ್ತಿದೆ. ನಾಲ್ಕೈದು ತಿಂಗಳ ಹಿಂದೆ ಧರ್ಮಸ್ಥಳದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಹೇಯ ಕೃತ್ಯದ ಕಹಿ ನೆನಪು ಮಾಸುವ ಮುನ್ನವೇ ನಾಲ್ಕೈದು ಮಂದಿ ಪುಂಡರು ಸೇರಿಕೊಂಡು ಯುವತಿಯೊಬ್ಬಳನ್ನು ಕೇರಳಕ್ಕೆ ಕುಂಬಳೆಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ರೈಲ್ವೆ ನಿಲ್ದಾಣ ಬಳಿ ಬಿಟ್ಟು ಹೋದರು.

ಇದಾದ ಎರಡೇ ತಿಂಗಳಲ್ಲಿ ಬಂಟ್ವಾಳ ಸಮೀಪ ಮತ್ತೊಬ್ಬಳು ಯುವತಿಯೂ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿದ್ದಾಳೆ. ಬಡತನದ ಬೇಗೆಯಲ್ಲಿ ನರಳುತ್ತಿದ್ದ ಕುಟುಂಬಕ್ಕೆ ಆಸರೆಯಾಗಬೇಕೆಂಬ ಕನಸು ತುಂಬಿಕೊಂಡು ಡಿಇಡಿ ಶಿಕ್ಷಣ ಪೂರೈಸಿ ಉದ್ಯೋಗ ಅರಸುತ್ತಿದ್ದ ಆ ಯುವತಿ ಮನುಷ್ಯ ರೂಪದ ರಾಕ್ಷಸನ ಕ್ಷಣ ಕಾಲದ ತೃಷೆಗಾಗಿ ಬದುಕನ್ನೇ ಕಳೆದುಕೊಂಡಳು.

ದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರಕ್ಕೆ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು.

ಘಟನೆಯನ್ನು ವಿರೋಧಿಸಿ ಕರಾವಳಿಯಲ್ಲೂ ಸಾಲು ಸಾಲು ಪ್ರತಿಭಟನೆಗಳು ನಡೆದವು. ಆದರೆ ನಮ್ಮೂರಿನ ಹುಡುಗಿಯರ ಮೇಲೆ ಬರ್ಬರ ದೌರ್ಜನ್ಯ ನಡೆದಾಗ ಕಾಟಾಚಾರಕ್ಕೆ ಪ್ರತಿಭಟನೆಗಳು ನಡೆದವು. ಈಗಲೂ ನಮ್ಮ ರಾಜಕಾರಣಿಗಳು, ಸಂಘಟನೆಗಳ ಮುಖಂಡರಿಗೆ ನಮ್ಮೂರಿನ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕಿಂತ ದೆಹಲಿಯ ನಡೆದ ಅತ್ಯಾಚಾರ ಪ್ರಕರಣವೇ ಗಂಭೀರವಾಗಿ ಕಾಣಿಸುತ್ತದೆ.

ಮಹಿಳೆಯರನ್ನು ಸದಾ ಗೌರವಿಸುತ್ತಲೇ ಬಂದ ಕರಾವಳಿಯಲ್ಲೂ ಇಂತಹ ಬೆಳವಣಿಗೆ ಏಕೆ ನಡೆಯುತ್ತಿದೆ? ಎಂಬ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಿದೆ. ಹಳ್ಳಿ ಹಳ್ಳಿಯಲ್ಲೂ ಯುವಜನತೆಗೆ ಇಂಟರ್ನೆಟ್ ನಂತಹ ಆಧುನಿಕ ಮಾಧ್ಯಮಗಳು ಇಂದು ಲಭ್ಯ. ಇದರ ಪ್ರಭಾವ ಯುವ ಜನತೆಯ ಮನೋಸ್ಥಿತಿ ಮೇಲೆ ಪ್ರಭಾವ ಬೀರುತ್ತಿರುವುದೂ ಇದಕ್ಕೆ ಕಾರಣ.

ಇದಕ್ಕಿಂತಲೂ ಕರಾವಳಿಯ ಜನತೆ ಆತಂಕ ಪಡುವ ಇನ್ನೊಂದು ಬೆಳವಣಿಗೆ ಎಂದರೆ ಇಲ್ಲಿನ ಪುರುಷ- ಮಹಿಳೆ ಅನುಪಾತ ಹೆಚ್ಚುತ್ತಿರುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹುಡುಗ-ಹುಡುಗಿಯರ ಅನುಪಾತ 1000: 946ಕ್ಕೆ ಇಳಿದಿದ್ದರೆ, ಉಡುಪಿ ಜಿಲ್ಲೆಯಲ್ಲಿ ಈ ಅನುಪಾತ 1000: 955ಕ್ಕೆ ಇಳಿದಿದೆ. ಇದು ನಿಜಕ್ಕೂ ಆತಂಕ ಹುಟ್ಟಿಸುವ ವಿಚಾರ.

ಮಾರ್ಚ್ 8ರಂದು ವಿಶ್ವದಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಈ ಬಾರಿ ಮಂಗಳೂರಿನಲ್ಲೂ ಮಹಿಳಾ ಸಂಘಟನೆಗಳು ರಾಜ್ಯಮಟ್ಟ ರ‍್ಯಾಲಿ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿಯೇ ಮಹಿಳಾ ದಿನಾಚರಣೆಯನ್ನು ಆಚರಿಸಲು ಸಿದ್ಧತೆ ನಡೆಸಿವೆ.

ಇಲ್ಲಿ ಮಹಿಳೆಯರ ಮೇಲೆ ಸದ್ದಿಲ್ಲದೆ ನಡೆಯುವ ಶೋಷಣೆಗಳ ಬಗ್ಗೆ ಜಾಗೃತಿ ಮೂಡಿಸಲು, ಮಹಿಳೆಯರಲ್ಲಿ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಇಂತಹದ್ದೊಂದು ಕಾರ್ಯಕ್ರಮದ ಅಗತ್ಯವಿತ್ತು. ಈ ಮಹಿಳಾ ದಿನಾಚರಣೆ ಮಹಿಳೆಯ ಸಬಲೀಕರಣದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದುನೋಡಬೇಕಷ್ಟೇ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT