ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಆಯ್ಕೆ ಸಮಿತಿಗೆ ನೋಟಿಸ್‌ ಜಾರಿ

2014–15ನೇ ಸಾಲಿನ ಚಲನಚಿತ್ರ ಪ್ರಶಸ್ತಿ ವಿವಾದ
Last Updated 24 ಮೇ 2016, 19:34 IST
ಅಕ್ಷರ ಗಾತ್ರ

ಬೆಂಗಳೂರು: 2014-15ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆಯ ವಿವಾದಕ್ಕೆ ಸಂಬಂಧಿಸಿದಂತೆ  ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು  ಚಲನಚಿತ್ರ ಆಯ್ಕೆ ಸಮಿತಿಗೆ ಮಂಗಳವಾರ ನೋಟಿಸ್ ಜಾರಿ ಮಾಡಿದೆ.

2014ನೇ ಸಾಲಿನ ರಾಜ್ಯಚಲನಚಿತ್ರ ಪ್ರಶಸ್ತಿ ಆಯ್ಕೆಯಲ್ಲಿ ‘ಕರ್ನಾಟಕ ರಾಜ್ಯ ಚಲನಚಿತ್ರ ನೀತಿ-2011’ರ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಮತ್ತು ಎಲ್.ಎನ್. ಮುಕುಂದರಾಜ್ ಹೈಕೋರ್ಟ್‌ಗೆ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ನಡುವೆ, ಪ್ರಶಸ್ತಿ ಪ್ರದಾನ ಮಾಡದಂತೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದರು. ಆದರೆ, ಈ ಮನವಿ ತಿರಸ್ಕರಿಸಿದ ನ್ಯಾಯಪೀಠ, ‘2014ನೇ ಸಾಲಿಗೆ ಆಯ್ಕೆ ಮಾಡಿರುವ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಅರ್ಜಿ ಕುರಿತ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಆದೇಶಿಸಿತು.

‘ರಾಜ್ಯ ಚಲನಚಿತ್ರ ನೀತಿ-2011ರ ನಿಯಮ 4(7)ರ ಪ್ರಕಾರ, ಚಲನಚಿತ್ರ ಎಂದರೆ ಕನಿಷ್ಠ 2,500 ಮೀಟರ್ ಕಡಿಮೆಯಿಲ್ಲದಿರುವ 35 ಎಂಎಂ ಹಾಗೂ ಅದಕ್ಕಿಂತ ಹೆಚ್ಚಿನ ಅಳತೆಯಲ್ಲಿ ನಿರ್ಮಾಣವಾಗಿರುವ ಸೆಲ್ಯೂಲಾಯ್ಡ್್ ರೂಪದಲ್ಲಿರುವ ಕಥಾನಕವಾಗಿರಬೇಕು. ಆದರೆ, 2014ನೇ ಸಾಲಿನ ಪ್ರಶಸ್ತಿಗೆ ಸೆಲ್ಯೂಲಾಯ್ಡ್‌ ಮಾದರಿಯಲ್ಲಿ ಯಾರೂ ಅರ್ಜಿ ಸಲ್ಲಿಸಿಲ್ಲ.  ಡಿಜಿಬೈಟಾ ಮತ್ತು ಬ್ಲೂ ರೇ ಮಾದರಿಯಲ್ಲಿ  ಸಲ್ಲಿಸಿದ್ದಾರೆ. ಇಷ್ಟಾದರೂ ಆಯ್ಕೆ ಸಮಿತಿಯು ಚಲನಚಿತ್ರಗಳನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ’ ಎಂದು ನಿರ್ದೇಶಕ ಲಿಂಗದೇವರು ಪರ ವಕೀಲರು ವಾದಿಸಿದರು.

ಡಾ.ವಿಷ್ಣುವರ್ಧನ್, ಪುಟ್ಟಣ್ಣ ಕಣಗಾಲ್ ಮತ್ತು ಡಾ.ರಾಜ್‌ಕುಮಾರ್ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮವಿದೆ. 2014ನೇ ಸಾಲಿನ ‘ಡಾ.ರಾಜ್‌ಕುಮಾರ್ ಪ್ರಶಸ್ತಿ’ಗೆ ಬಸಂತ್ ಕುಮಾರ್ ಪಾಟೀಲ್, ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ಬರಗೂರು ರಾಮಚಂದ್ರಪ್ಪ ಮತ್ತು ‘ಡಾ.ವಿಷ್ಣುವರ್ಧನ್ ಪ್ರಶಸ್ತಿ’ ಗೆ ಸುರೇಶ್ ಅರಸ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ, ಈ ಮೂವರು  ಪ್ರಶಸ್ತಿಗೆ ಅರ್ಜಿ ಸಲ್ಲಿಸಿರಲಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಎಲ್.ಎನ್. ಮುಕುಂದರಾಜ್ ಪರ ವಕೀಲರು, ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆ ಸಮಿತಿಯಲ್ಲಿ 9 ಮಂದಿ ಸದಸ್ಯರು ಇರಬೇಕಾಗುತ್ತದೆ. ಸರ್ಕಾರ ಮೊದಲಿಗೆ ಅಧ್ಯಕ್ಷರು ಸೇರಿದಂತೆ 8 ಮಂದಿ ಆಯ್ಕೆ ಸಮಿತಿ ನಿಯೋಜಿಸಿತ್ತು. ಸಮಿತಿಯಲ್ಲಿದ್ದ ಸುಧಾ ನರಸಿಂಹರಾಜು ಸಂಬಂಧಿಕರ ಚಲನಚಿತ್ರವೊಂದು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದವರ ಪಟ್ಟಿಯಲ್ಲಿತ್ತು. ಇದರಿಂದ ಅವರು ಸ್ಥಾನಕ್ಕೆ  ರಾಜೀನಾಮೆ ನೀಡಿದ್ದರು. ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮತ್ತೊಬ್ಬ ಸದಸ್ಯರನ್ನು ಆಯ್ಕೆ ಮಾಡದೆ ಕೇವಲ 8 ಸದಸ್ಯರು ಸಮಿತಿ 2014ನೇ ಸಾಲಿನ ಪ್ರಶಸ್ತಿಗಳನ್ನು ಆಯ್ಕೆ ಮಾಡಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT