ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಸ್ಮಾರಕದ ಸುತ್ತ ಸಮಸ್ಯೆಗಳ ಹುತ್ತ

Last Updated 23 ಏಪ್ರಿಲ್ 2014, 19:57 IST
ಅಕ್ಷರ ಗಾತ್ರ

ಆಗ್ರಾ (ಉತ್ತರ ಪ್ರದೇಶ): ‘ತಾಜ್‌­ಮಹಲ್‌’ ಸೌಂದರ್ಯಕ್ಕೆ ಮನ­ಸೋಲದ ಹೃದಯಗಳಿಲ್ಲ. ಪ್ರತಿನಿತ್ಯ ಲಕ್ಷಾಂತರ ಜನರ ಕಣ್ಮನ ತಣಿಸುತ್ತಿ­ರುವ ಶಹಜಹಾನನ ‘ಪ್ರೀತಿಯ ದ್ಯೋತಕ’ ಪರಿಸರ ಮಾಲಿನ್ಯದಿಂದ ಸೊರಗುತ್ತಿದೆ. ಇಡೀ ಜಗತ್ತಿಗೆ ‘ಪ್ರೀತಿಯ ಬೆಲೆ ಏನು?’ ಎಂದು ಸಾರಿ ಹೇಳು­ತ್ತಿ­ರುವ ಮೊಘಲರ ಸುಂದರ ಸ್ಮಾರಕ­ವನ್ನು ರಕ್ಷಣೆ ಮಾಡಬೇಕೆಂದು ಪರಿಸರ ತಜ್ಞರು ಕೂಗೆಬ್ಬಿಸಿದ್ದಾರೆ.

ಹದಿನೇಳನೆ ಶತಮಾನದಲ್ಲಿ ಕಟ್ಟಲಾಗಿ­ರುವ ತಾಜ್‌ಮಹಲ್‌, ಯಮುನೆ ದಂಡೆ ಮೇಲಿದೆ. ‘ಯಮುನೆ’ ಒಡಲು ಪದೇ ಪದೇ ಬತ್ತುತ್ತಿದೆ. ಅಲ್ಲದೆ, ಅಳಿ­ದು­ಳಿದ ನೀರು ಕಲುಷಿತಗೊಂಡಿದೆ. ಇದ­ರಿಂ­ದಾಗಿ ತಾಜ್‌ ಮಹಲ್‌ಗೆ ಧಕ್ಕೆಯಾ­ಗು­ತ್ತಿದೆ. ಯಮುನೆ ಮೇಲೆ ಅವಲಂಬಿ­ತವಾಗಿರುವ ಕೈಗಾರಿಕೆಗಳು ತ್ಯಾಜ್ಯವನ್ನು ನದಿಗೇ ಬಿಡುತ್ತಿವೆ. ದೆಹಲಿ, ಹರಿ­ಯಾಣ, ಉತ್ತರ ಪ್ರದೇಶದ ಕೆಲ ಭಾಗ­ಗಳ ಜನರು ಇದೇ ನೀರನ್ನು ಆಶ್ರಯಿಸಿದ್ದಾರೆ.

‘ಪರಿಸರ ಮಾಲಿನ್ಯದಿಂದಾಗಿ ತಾಜ್‌ ಮಹಲ್‌ ಅಸ್ತಿತ್ವಕ್ಕೆ ಧಕ್ಕೆ ಆಗುತ್ತಿದೆ’ ಎಂದು ವೈಜ್ಞಾನಿಕ ಅಧ್ಯಯನಗಳು ದೃಢ­ಪ­ಡಿಸುತ್ತಿದ್ದಂತೆ, ಕೇಂದ್ರ ಸರ್ಕಾರ ಅನನ್ಯ ಸ್ಮಾರಕ ರಕ್ಷಣೆಗೆ ಕ್ರಮಗಳನ್ನು ಕೈಗೊಂಡಿದೆ. ಎರಡು ದಶಕಗಳಿಂದ ಅನೇಕ ಸುರಕ್ಷಿತ ಕ್ರಮಗಳನ್ನು ಆರಂಭಿ­ಸಿದ್ದರೂ, ಪ್ರಯೋಜನವಾಗಿಲ್ಲ ಎನ್ನುವ ಕೊರಗು ಸ್ಥಳೀಯರನ್ನು ಬಾಧಿಸುತ್ತಿದೆ. ಜಗದ್ವಿಖ್ಯಾತ ಸ್ಮಾರಕಕ್ಕೆ ಧಕ್ಕೆ ಮಾಡು­ತ್ತಿದ್ದ ಸುಮಾರು 200 ಕೈಗಾರಿಕೆಗಳನ್ನು ಸುಪ್ರೀಂಕೋರ್ಟ್‌ ಆದೇಶದಂತೆ ಮುಚ್ಚ­­ಲಾಗಿದೆ. ಸಿಮೆಂಟ್, ಕಬ್ಬಿಣ ಇತರ ಕಾರ್ಖಾನೆಗಳೂ  ಇದರಲ್ಲಿ ಸೇರಿವೆ. ಮಥುರಾದಲ್ಲಿರುವ ತೈಲ ಸಂಸ್ಕ­ರಣಾ ಘಟಕ ವಿಷಾನಿಲ ಹೊರ­ಬಿಡುತ್ತಿದೆ.

ಅತ್ಯಧಿಕ ಸಂಖ್ಯೆಯಲ್ಲಿ ಬರುತ್ತಿರುವ ಪ್ರವಾಸಿಗರಿಂದಾಗಿ ಸ್ಮಾರಕಕ್ಕೆ ತೊಂದರೆ­ಯಾಗುತ್ತಿದೆ. ಪ್ರವಾಸಿಗರ ವಾಹನ­ಗಳನ್ನು ಎರಡು ಕಿ.ಮೀ. ದೂರದಲ್ಲಿ ತಡೆಯಲಾಗುತ್ತಿದೆ. ಡೀಸೆಲ್‌  ಆಟೋ­ಗ­ಳಿಗೆ ಬದಲಾಗಿ, ಸಿಎನ್‌ಜಿ ಆಟೋ­ಗ­ಳಿಗೆ ಅನುಮತಿ ನೀಡಲಾಗಿದೆ. ಪ್ರಯಾ­ಣಿಕರ ಅನುಕೂಲಕ್ಕಾಗಿ ‘ಬ್ಯಾಟರಿ ಚಾಲಿತ’ ವಾಹನ ಮತ್ತು ಒಂಟೆ ಗಾಡಿ­ಗಳನ್ನು ಬಿಡಲಾಗಿದೆ. ತಾಜ್‌ ಮಹಲ್‌ ಸಮೀಪಕ್ಕೆ ಪ್ರವಾಸಿಗರನ್ನು ಬಿಡ­ಬಾರದು ಎನ್ನುವ ಆಲೋಚನೆ ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆ ಪರಿಶೀಲನೆ­ಯಲ್ಲಿತ್ತು. ಆದರೆ, ಅದರ ಅನುಷ್ಠಾನ ಸುಲಭವಲ್ಲ ಎನ್ನುತ್ತವೆ ಅಧಿಕೃತ ಮೂಲಗಳು.

ತಾಜ್‌ ಮಹಲ್‌ ಸುತ್ತಮುತ್ತ ನೂರಾರು ಗಿಡಗಳನ್ನು ನೆಡಲಾಗಿತ್ತು. ಈ ಗಿಡಗಳು ಬದುಕುಳಿಯಲಿಲ್ಲ. ಪರಿ­ಸರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲ­ಜನಕ ಬಿಡುವ ತುಳಸಿ ಗಿಡಗಳನ್ನು ನೆಡುವ ಯೋಜನೆಯೂ ಸಫಲವಾಗಿಲ್ಲ. ಪರಿಸರ ಮಾಲಿನ್ಯದ ವಿರುದ್ಧ ಅನೇಕ ಸಂಘಟನೆಗಳು ಬೀದಿಗಿಳಿದಿವೆ. ಹೋರಾಟ ನಡೆಯುತ್ತಲೇ ಇದೆ.

‘ಮಾಲಿನ್ಯ ನಿಯಂತ್ರಣ ಮಂಡಳಿ ಹಲ್ಲು ಕಿತ್ತ ಹಾವಾಗಿದೆ. ಅದರಿಂದ ಯಾವುದೇ ಪ್ರಯೋಜನವೂ ಇಲ್ಲ’ ಎಂದು ಪರಿಸರ ಹೋರಾಟಗಾರರಾದ ಲಾಲ್‌ದಾಸ್‌ ಬಾಬಾ ಮತ್ತು ಜೈಕೃಷ್ಣ ದಾಸ್‌ ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ಇಬ್ಬರೂ ಪರಿಸರವಾದಿಗಳು ಹಲವು ವರ್ಷಗಳಿಂದ ಯಮುನೆ ಒಡಲನ್ನು ಶುಚಿಗೊಳಿಸಬೇಕೆಂದು ಹೋರಾಟ ನಡೆ­ಸು­ತ್ತಿದ್ದಾರೆ. ಈ ಹೋರಾಟದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡುತ್ತಿದ್ದಾರೆ.

ಆಗ್ರಾದ ತಾಜ್‌ಮಹಲ್‌ ಒಂದು ರೀತಿ ಸಮಸ್ಯೆ ಎದುರಿಸುತ್ತಿದ್ದರೆ, ಜನ ಮತ್ತೊಂದು ರೀತಿ ಸಮಸ್ಯೆಗೆ ಸಿಕ್ಕಿಕೊಂ­ಡಿದ್ದಾರೆ. ಒಂದು ತಿಂಗಳಿಂದ ಕುಡಿ­ಯುವ ನೀರಿಗೆ ಪರದಾಡುತ್ತಿದ್ದಾರೆ. ನದಿಗೆ ಇನ್ನೂ  ಹೊಸ ನೀರು ಬಂದಿಲ್ಲ. ಸದ್ಯ ಹರಿದು ಬರುತ್ತಿರುವ ಅಳಿದುಳಿದ ನೀರು ಕಲುಷಿತಗೊಳ್ಳುತ್ತಿದೆ. ಆಗ್ರಾ ಜಲ ಮಂಡಳಿ ಪೂರೈಕೆ ಮಾಡುತ್ತಿರುವ ನೀರಿನ ಬಣ್ಣ ಜನರಿಗೆ ಆತಂಕ ಹುಟ್ಟಿ­ಸಿದೆ. ಡಿಸೆಂಬರ್‌ನಿಂದಲೇ ನೀರಿಗೆ ಸಮಸ್ಯೆ­ಯಾಗಿದೆ. ಆದರೆ, ಒಂದು ತಿಂಗಳಿಂದ ಹಾಹಾಕಾರ ಹೆಚ್ಚಾಗಿದೆ ಎಂದು ಪಾಲಿಕೆ ಸದಸ್ಯರು ಕಳವಳ ವ್ಯಕ್ತಪಡಿಸುತ್ತಾರೆ.

ಆಗ್ರಾಕ್ಕೆ ಸುಮಾರು 200 ಕ್ಯುಸೆಕ್ ನೀರು ಅಗತ್ಯವಿದೆ. ಆದರೆ, 35 ಕ್ಯುಸೆಕ್‌ ಮಾತ್ರ ಲಭ್ಯವಾಗುತ್ತಿದೆ. ಗಂಗಾ ಕಾಲುವೆ­ಯಿಂದ ಯಮುನೆಗೆ ಹೆಚ್ಚು ನೀರು ಬಿಡುಗಡೆ ಮಾಡಬೇಕೆಂದು ಆಗ್ರಾ ಜಿಲ್ಲಾಧಿಕಾರಿ ಉತ್ತರ ಪ್ರದೇಶದ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ರೈತರು ಕಾಲು­ವೆಗೆ ಅನಧಿಕೃತ ಪಂಪ್‌ಗಳನ್ನು ಹಾಕಿ ನೀರು ಎತ್ತುವ ಕೆಲಸ ಮಾಡುತ್ತಿದ್ದಾರೆ. ಇದು ಇನ್ನಷ್ಟು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಬೇಸಿಗೆ ಆರಂಭ­ವಾ­ಗುವ ಮೊದಲೇ ಆಗ್ರಾ ನೀರಿನ ಸಮಸ್ಯೆ­ಯಿಂದ ತತ್ತರಿಸಿದೆ. ಜೂನ್‌ ತಿಂಗಳು ಆರಂಭವಾದರೆ ಜನರಿಗೆ ನೀರು ಒದಗಿ­ಸು­ವುದು ಹೇಗೆ ಎಂಬ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ.

ಆಗ್ರಾ ಸುಮಾರು 20 ಲಕ್ಷ ಜನಸಂಖ್ಯೆ ಇರುವ ನಗರ. ಈಗಾಗಲೇ ಎರಡು ಯೋಜನೆಗಳಿಂದ ನೀರು ಪೂರೈಕೆ ಮಾಡ­ಲಾಗುತ್ತಿದೆ. ಗಂಗಾ ನೀರನ್ನು ನೇರವಾಗಿ ನಗರಕ್ಕೆ ಪೂರೈಸುವ ₨ 1200 ಕೋಟಿ ಯೋಜನೆ ಪ್ರಗತಿಯಲ್ಲಿದೆ. ಇದು ಜಪಾನ್‌ ಸರ್ಕಾರದ ಪ್ರಾಯೋಜಕತ್ವದಲ್ಲಿ ಕಾರ್ಯ­ಗತ­ವಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಯಮುನೆಯಲ್ಲಿನ ನೀರಿನ ಕೊರತೆ ಮತ್ತು ಮಾಲಿನ್ಯ ಆಗ್ರಾ ಪ್ರವಾ­ಸೋದ್ಯಮದ ಮೇಲೂ ಪರಿಣಾಮ ಬೀರಿದೆ. ತಾಜ್‌ ಮಹಲ್‌ ಸುತ್ತಮುತ್ತ 400 ಹೋಟೆಲ್‌ಗಳಿವೆ. ಆದರೆ, ಆಗ್ರಾಕ್ಕೆ ಬರುವ ಜನ ಅಲ್ಲಿ ಉಳಿ­ಯು­ವುದಿಲ್ಲ. ಬೆಳಿಗ್ಗೆ ಬಂದು ರಾತ್ರಿ ವಾಪಸ್‌ ಹೋಗಿಬಿಡುತ್ತಾರೆ. ಇದರಿಂದ ಹೋಟೆಲ್‌ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಕ್ಕಿಕೊಂಡಿದೆ ಎಂದು ಆಗ್ರಾ ಹೋಟೆಲ್‌ ಮಾಲೀಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಸುರೇಂದ್ರ ಶರ್ಮ ‘ಪ್ರಜಾವಾಣಿ’ಗೆ ಅಳಲು ತೋಡಿಕೊಂಡರು.

ದೆಹಲಿ ಹೋಟೆಲ್‌ ಲಾಬಿ ಪ್ರಬಲ­ವಾಗಿದೆ. ಅವರೇ ಆಗ್ರಾ, ಮಥುರಾಕ್ಕೆ ಪ್ರತಿನಿತ್ಯ ಪ್ರವಾಸ ಏರ್ಪಡಿಸಿ ವಾಪಸ್‌ ಕರೆದೊಯ್ಯುವುದರಿಂದ ಇಲ್ಲಿ ಯಾರೂ ಉಳಿಯಲು ಇಷ್ಟಪಡುವುದಿಲ್ಲ. ಕಾನೂನು– ಸುವ್ಯವಸ್ಥೆ ನೆಪದಲ್ಲಿ ಪೊಲೀಸರು ಎಂಟು ಗಂಟೆಗೆ ಮಾರು­ಕಟ್ಟೆ­ಗಳನ್ನು ಬಂದ್‌ ಮಾಡಿಸುತ್ತಾರೆ. ಆದರೆ ವಿದೇಶಿ ಪ್ರವಾಸಿಗರು ರಾತ್ರಿ ಮಾರುಕಟ್ಟೆಗಳನ್ನು ಸುತ್ತಾಡಲು ಬಯ­ಸುತ್ತಾರೆ. ಇವೆಲ್ಲವೂ ಆಗ್ರಾ ಪ್ರವಾ­ಸೋದ್ಯಮದ ಮೇಲೆ ಪರಿಣಾಮ ಬೀರು­ತ್ತಿದೆ ಎಂದು ಶರ್ಮ ಹೇಳಿದರು.

ಆಗ್ರಾ ಲೋಕಸಭೆಗೆ ಗುರುವಾರ ಚುನಾ­ವಣೆ ನಡೆಯುತ್ತಿದೆ. ಇದು ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರ.

ಆಗ್ರಾ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ­ಯಿಂದ ಡಾ. ರಾಂಸಿಂಗ್‌ ಕಟೇರಿಯಾ, ಕಾಂಗ್ರೆಸ್‌ನಿಂದ ಉಪೇಂದ್ರಸಿಂಗ್‌ ಮಾತ್ರ­­ವಲ್ಲ ಬಿಎಸ್‌ಪಿ, ಎಸ್‌ಪಿ , ಎಎಪಿ ಅಭ್ಯರ್ಥಿಗಳೂ ಸ್ಪರ್ಧಿಸುತ್ತಿ­ದ್ದಾರೆ. ಕಳೆದ ಸಲ ಇಲ್ಲಿ ಗೆದ್ದಿದ್ದ ರಾಂಸಿಂಗ್‌ ಅವರಿಗೆ ಇದು ಎರಡನೇ ಚುನಾವಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT