ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾನ್-ಬಿ, ಮುಟ್ಟು, ಉಪನಯನ....

Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವೈಯಕ್ತಿಕ ನಂಬಿಕೆಗಳು ಮತ್ತು ನಾವು ಕಾರ್ಯ ನಿರ್ವಹಿಸುವ ವೃತ್ತಿಯ ಅಪೇಕ್ಷೆಗಳ ನಡುವಣ ಸಂಘರ್ಷ ಎಲ್ಲ ಕ್ಷೇತ್ರಗಳಲ್ಲೂ ಇದ್ದುದೇ. ವೈದ್ಯಕೀಯ ಕ್ಷೇತ್ರದಲ್ಲಿ ತಾವು ಎದುರಿಸಬೇಕಾದ ಇಂಥ ಸಂಘರ್ಷವನ್ನು ಡಾ. ಗುರುಪ್ರಸಾದ್‌ ಕಾಗಿನೆಲೆ ಇಲ್ಲಿ ದಾಖಲಿಸಿದ್ದಾರೆ. ಅಮೆರಿಕದ ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿನ ನಾರ್ತ್ ಮೆಮೊರಿಯಲ್‌ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಅವರು ತಮ್ಮ ಕಥೆ, ಕಾದಂಬರಿ, ಪ್ರಬಂಧಗಳ ಮೂಲಕ ಸಹೃದಯರಿಗೆ ಪರಿಚಿತರು. ಪ್ರಸ್ತುತ ಬರಹ ಅಮೆರಿಕದಲ್ಲಿನ ತರುಣ ತರುಣಿಯರ ಜೀವನಶೈಲಿಯ ಕೆಲವು ಲಕ್ಷಣಗಳ ಜೊತೆಗೆ ವೈದ್ಯಕೀಯ ಕ್ಷೇತ್ರದ ವೈರುಧ್ಯಗಳನ್ನೂ ಸೂಚ್ಯವಾಗಿ ಕಟ್ಟಿಕೊಡುವ ಪ್ರಯತ್ನ.


ಒಂದು ಶನಿವಾರದ ಮುಂಜಾನೆ. ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನನಗೆ ನನ್ನ ನರ್ಸೊಬ್ಬಳು ‘ನಿನ್ನ ಅದೃಷ್ಟ ಚೆನ್ನಾಗಿದೆ. ರೂಮ್ ನೂರಾ ನಾಲ್ಕರಲ್ಲಿ ಪುಟ್ಟ ಜೋಡಿಯೊಂದು ಕಾಯುತ್ತಾ ಇದೆ. ಮಾರ್ನಿಂಗ್ ಆಫ್ಟರ್ ಪಿಲ್‌ಗೆ  (ಪ್ಲಾನ್ ಬಿ) ಒಂದು ಆರ್ಡರ್ ಬರಿ. ಕೊಟ್ಟು ಬೇಗ ಅವರನ್ನು ಸಾಗಹಾಕು. ಎರಡು ಆಂಬುಲೆನ್ಸ್ ಬರ್ತಾ ಇದೆ. ಅದಕ್ಕೆ ರೆಡಿಯಾಗಬಹುದು’ ಎಂದಳು. ನಾನೂ ನಾಲ್ಕು ‘ಪ್ಲಾನ್-ಬಿ’ಮಾತ್ರೆಗಳಿಗೆ ಬರೆದು ಆ ಜೋಡಿಯಿದ್ದ ಕೋಣೆಗೆ ಒಮ್ಮೆ ಮಾತಾಡಿಸುವ ಶಾಸ್ತ್ರ ಮಾಡಲು ಹೋದೆ. ನನಗೆ ಕೊಂಚ ಆಶ್ಚರ್ಯವಾಯಿತು. ಹದಿನೆಂಟು ವರ್ಷದ ಜೋಡಿ. ಹುಡುಗಿಗೆ ಇನ್ನೂ ಹದಿನಾರು ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹಾಗೆ ಕಾಣುತ್ತಿರಲಿಲ್ಲ. ಕೇಸ್ ಪೇಪರ್ ಮೇಲೆ ಹುಡುಗಿಯ ಜನ್ಮದಿನಾಂಕವನ್ನು ನೋಡಿ ಆಕೆಗೆ ಹದಿನೆಂಟು ವರ್ಷವಾಗಿದ್ದನ್ನು ಖಾತ್ರಿ ಮಾಡಿಕೊಂಡೆ. ಹುಡುಗನ ಮುಖದ ಮೇಲೆ ಒಂದೇ ಒಂದು ಕೂದಲೂ ಇರಲಿಲ್ಲ. ಲೋಕಾಭಿರಾಮದಲ್ಲಿ ಗೊತ್ತಾಗಿದ್ದೆಂದರೆ ಇಬ್ಬರೂ ಹಿಂದಿನ ರಾತ್ರಿಯ ಕಾಕ್ಟೇಲ್‌ನ ನಶೆಯಲ್ಲಿ ಯಾವ ರಬ್ಬರಿನ ರಕ್ಷಣೆಯ ಹಂಗಿಲ್ಲದೆ ಸುಖಿಸಿದ್ದರು. ಮುಂಜಾನೆ ಇಬ್ಬರಿಗೂ ಮಾಡಿದ ತಪ್ಪಿನ ಅರಿವಾಗಿದೆ. ಸೀದಾ ಎಮರ್ಜೆನ್ಸಿ ರೂಮಿಗೆ ಬಂದಿದ್ದಾರೆ. ‘ಮಾರ್ನಿಂಗ್ ಆಫ್ಟರ್ ಪಿಲ್’ಗಾಗಿ. ಬುದ್ಧಿ ಹೇಳಲು ಹೋದ ನನ್ನ ನರ್ಸಿಗೆ ‘ನಮ್ಮಿಬ್ಬರಿಗೂ ಹದಿನೆಂಟು ವರ್ಷ ಆಗಿದೆ. ನಾವೇನಾದರೂ ಮಾಡಬಹುದು. ಡೋಂಟ್ ಜಡ್ಜ್ ಅಸ್. ನಮಗೆ ಏನು ಬೇಕು ಎಂದು ನಾವು ನಿಮಗೆ ಕೇಳುತ್ತಿದ್ದೇವೆ. ಕೊಟ್ಟು ನಿಮ್ಮ ಕೆಲಸ ಹಗುರ ಮಾಡಿಕೊಳ್ಳಿ’ ಎಂದಿದ್ದ, ಆ ಕಿವಿ, ತುಟಿ, ಮೂಗು ಚುಚ್ಚಿಕೊಂಡ ಹುಡುಗ.

ಈ ಮಾರ್ನಿಂಗ್ ಆಫ್ಟರ್ ಪಿಲ್ (ಅಮೆರಿಕಾದಲ್ಲಿ ಪ್ಲಾನ್-ಬಿ ಎಂಬ ಹೆಸರಿನಿಂದಲೇ ಇದು ಪರಿಚಿತ) ಅನ್ನುವುದು ಒಂದು ರೀತಿ ತುರ್ತು ಗರ್ಭನಿಯಂತ್ರಣ. ಸುರಕ್ಷೆಯಿಲ್ಲದ ಸಮಾಗಮದ ನಂತರ ಮಗು ಬೇಡವಾಗಿದ್ದಲ್ಲಿ ಹೆಂಗಸರು ಉಪಯೋಗಿಸುವ ಗರ್ಭನಿಯಂತ್ರಣ ಕ್ರಮ. ಲಿವೋನಾಜೆಸ್ಟ್ರೆಲ್ ಎಂಬ ನಾಲ್ಕು ಮಾತ್ರೆಗಳನ್ನು ಮಿಲನದ ನಂತರ ಆದಷ್ಟೂ ಬೇಗ ತೆಗೆದುಕೊಂಡರೆ ಇದು ಬೇಡದ ಗರ್ಭವನ್ನು ತಡೆಯುತ್ತದೆ ಅಂದರೆ ಹೆಣ್ಣು ಗರ್ಭಿಣಿಯಾಗುವುದನ್ನು ತಡೆಯುತ್ತದೆ. ಹೆಂಗಸಿನ ಅಂಡಾಶಯದಿಂದ ಅಂಡಾಣು (ಎಗ್) ಬಿಡುಗಡೆಯಾಗುವುದನ್ನು ತಡೆಯುವುದು ಅಥವಾ ಮುಂದೂಡುವುದು, ವೀರ್ಯಾಣು ಮತ್ತು ಅಂಡಾಣುವಿನ ಮಿಲನವನ್ನು ತಡೆಯುವುದು ಮತ್ತು ವೀರ್ಯಾಣು ಮತ್ತು ಅಂಡಾಣುವಿನ ಮಿಲನದ ನಂತರ ಆಗುವ ‘ಫ಼ರ್ಟಿಲೈಜ್ಡ್ ಎಗ್’ ಗರ್ಭಾಶಯದ ಒಳಗೋಡೆಗೆ ಅಂಟಿಕೊಳ್ಳುವುದನ್ನು (ಇಂಪ್ಲಾಂಟೇಶನ್) ತಡೆಯುವುದು – ಹೀಗೆ ಬೇರೆ ಬೇರೆ ವಿಧಾನಗಳಿಂದ ಈ ಮಾತ್ರೆಗಳು ಬೇಡದ ಗರ್ಭವನ್ನು ತಡೆಯುತ್ತವೆ. ಈ ಮಾತ್ರೆಗಳನ್ನು ಸಂಭೋಗದ ನಂತರದ ೧೨೦ ಗಂಟೆಗಳ ಒಳಗೆ ತೆಗೆದುಕೊಂಡಲ್ಲಿ ಹೆಚ್ಚು ಫಲದಾಯಕ. ಇದು ಅಮೆರಿಕದಲ್ಲಿ ಪ್ಲಾನ್ ಬಿ, ನೆಕ್ಸ್ಟ್  ಸ್ಟೆಪ್ ಅಥವಾ ಎಲ್ಲಾ ಎಂಬ ಹೆಸರುಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಪ್ಲಾನ್ ಬಿ ಮತ್ತು ನೆಕ್ಸ್ಟ್ ಸ್ಟೆಪ್ ಎಂಬ ಮಾತ್ರೆಗಳನ್ನು ಯಾವ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ಪಡೆಯಬಹುದು. ಅಷ್ಟೂ ಮಾತ್ರೆಗಳಿಗೆ ‘ಎಫ್‌ಡಿಎ’ಯಿಂದ ಅಂಗೀಕಾರವೂ ಸಿಕ್ಕಿದೆ.

ಸಮಸ್ಯೆಯಿರುವುದು ಈ ಮಾತ್ರೆಗಳ ವೈದ್ಯಕೀಯ ಪರಿಣಾಮಗಳ ಬಗ್ಗೆ ಅಲ್ಲ. ವಿವಾದ, ಜಿಜ್ಞಾಸೆಗಳಿರುವುದು ಈ ಮಾತ್ರೆಗಳು ಬರೇ ಗರ್ಭಧಾರಣೆಯನ್ನು ತಡೆಯುತ್ತದೋ ಅಥವಾ ಬಸಿರಾದ ಹೆಂಗಸಿಗೆ ಗರ್ಭಪಾತ ಮಾಡಿಸುತ್ತವೋ ಎಂದು. ವೈದ್ಯಕೀಯ ವಿವರಣೆಗಳ ಪ್ರಕಾರ ಈ ಮಾತ್ರೆಗಳನ್ನು ತೆಗೆದುಕೊಂಡ ಮೇಲೆ ಗರ್ಭಪಾತದ ಸಂಭವನೀಯತೆ ಬಹಳ ಕಮ್ಮಿ ಅಥವಾ ಇಲ್ಲವೇ ಇಲ್ಲ. ಏಕೆಂದರೆ, ಗಂಡು ಹೆಣ್ಣು ಕೂಡಿದ ತಕ್ಷಣ ವೀರ್ಯಾಣು, ಅಂಡಾಣುಗಳು ಕೂಡಿ ಗರ್ಭಧಾರಣೆಯಾಗುವುದಿಲ್ಲ. ವೀರ್ಯಾಣು, ಅಂಡಾಣುಗಳು ಕೂಡುವುದಕ್ಕೆ ಹಲವಾರು ದಿನಗಳೇ ಬೇಕಾಗಬಹುದು. ಈ ಕ್ರಿಯೆಗೆ ಫ಼ರ್ಟಿಲೈಜೇಶನ್ ಎನ್ನುತ್ತಾರೆ. ಈ ವೀರ್ಯಾಣು, ಅಂಡಾಣು ಸೇರಿದ ನಂತರ ಆಗುವುದು ಫ಼ರ್ಟಿಲೈಜ್ಡ್ ಎಗ್. ಈ ಫ಼ರ್ಟಿಲೈಜೇಶನ್ ಆಗುವುದು ಗರ್ಭಾಶಯದಲ್ಲಲ್ಲ. ಫ಼ೆಲೋಪಿಯನ್ ಟ್ಯೂಬ್ ಎಂಬ ಗರ್ಭಾಶಯಕ್ಕೂ ಅಂಡಾಶಯಕ್ಕೂ ನಡುವೆ ಇರುವ ಒಂದು ನಳಿಕೆಯಲ್ಲಿ. ನಂತರ ಈ ಫ಼ರ್ಟಿಲೈಜ್ಡ್ ಎಗ್ ಗರ್ಭಾಶಯಕ್ಕೆ ಬಂದು ಅಂಟಿಕೊಳ್ಳುತ್ತದೆ. ಈ ಕ್ರಿಯೆಗೆ ಇಂಪ್ಲಾಂಟೇಷನ್ ಅನ್ನುತ್ತಾರೆ.

ಈ ಲೇಖನದ ಉದ್ದೇಶ ಇಂಥ ವೈದ್ಯಕೀಯ ಪರಿಭಾಷೆಯನ್ನು ಉಪಯೋಗಿಸಿ ಗರ್ಭಧಾರಣೆ, ಗರ್ಭಪಾತದ  ಬಗ್ಗೆ ಓದುಗರಿಗೆ ಬೋರು ಹೊಡೆಸುವುದಲ್ಲ. ಜೀವ ಯಾವಾಗ ಆರಂಭವಾಗುತ್ತದೆ ಎನ್ನುವುದರ ವಿವರಣೆಯ ಮೇಲೆ ಈ ಮಾತ್ರೆಗಳು ಗರ್ಭಧಾರಣೆಯನ್ನು ತಡೆಯುತ್ತದೋ ಅಥವಾ ನಿಂತ ಗರ್ಭದ ಗರ್ಭಪಾತವನ್ನು ಮಾಡುತ್ತದೋ ಎನ್ನುವುದು ನಿರ್ಧರಿತವಾಗುತ್ತದೆ. ಬಹಳಷ್ಟು ವೈದ್ಯಕೀಯ ಸಮುದಾಯ ಒಪ್ಪಿಕೊಂಡಿರುವ ಪ್ರಕಾರ, ಜೀವ ಆರಂಭವಾಗುವುದು ಎಗ್ ಗರ್ಭಾಶಯದಲ್ಲಿ ಇಂಪ್ಲಾಂಟ್ ಆದನಂತರ. ಆದರೆ, ಗರ್ಭಾಶಯಕ್ಕೆ ಬರದೇ ಅಂದರೆ ಇಂಪ್ಲಾಂಟ್ ಆಗದೇ ಇರುವ ಎಗ್‌ಗಳೂ ಎಷ್ಟೋ ಇರುತ್ತವೆ, ಅದಕ್ಕೆ ಎಕ್ಟಾಪಿಕ್ ಪ್ರೆಗ್ನಂಸಿ ಎಂದು ಕರೆಯುತ್ತಾರೆ. ಬಸಿರೆಂದ ಮೇಲೆ ಜೀವ ಶುರುವಾಯಿತು ಎಂತಲೇ ಅರ್ಥವಾದ್ದರಿಂದ, ಕೆಲ ವಿವರಗಳ ಪ್ರಕಾರ ಬದುಕು ಆರಂಭವಾಗುವುದು ವೀರ್ಯಾಣು, ಅಂಡಾಣು ಒಂದಕ್ಕೊಂದು ಸೇರಿದಾಗ. ಹೀಗೆ ಸೇರಿದ ಮೇಲೆಯಾಗುವ ‘ಎಗ್’ ಅನ್ನು ಗರ್ಭಾಶಯದ ಗೋಡೆಗೆ ಅಂಟದಂತೆ ತಡೆಯುವುದೂ ಗರ್ಭಪಾತ ಮಾಡಿದಂತೆ ಎಂದು ಕೆಲವರು ಇನ್ನೂ ನಂಬುತ್ತಾರೆ.

ನನ್ನ ಪೇಶೆಂಟುಗಳು ಇವೆಲ್ಲ ವಿವರಣೆಗೆ ತಲೆಕೆಡಿಸಿಕೊಳ್ಳುವವರಾಗಿರಲಿಲ್ಲ. ಅವರಿಗೆ ಹಿಂದಿನ ರಾತ್ರಿಯ ಸುಖ ಬರೇ ಆ ರಾತ್ರಿಗೆ ಮಾತ್ರ ಸಾಕಿತ್ತು. ಯಾವುದೇ ಕಾರಣಕ್ಕೂ ಆ ಹೆಣ್ಣು ಬಸಿರಾಗಲು ತಯಾರಿರಲಿಲ್ಲ. ನಾನು ಹಾಗೆಯೇ ಮಾತಾಡುತ್ತ ‘ಪ್ಲಾನ್ ಬಿ ಗೆ ಪ್ರಿಸ್ಕ್ರಿಪ್ಷನ್ ಬೇಡವಲ್ಲ. ಯಾವ ಫಾರ್ಮಸಿಗೆ ಹೋದರೂ ಶೆಲ್ಫಿನಲ್ಲಿರುತ್ತದೆ. ನಿನಗೆ ಬೇಕಾದಷ್ಟು ಮಾತ್ರೆಗಳನ್ನು ತೆಗೆದುಕೊಳ್ಳಬಹುದು’ ಎಂದೆ.

‘ದುಡ್ಡು, ಡಾಕ್’ ಎಂದಳು, ಆಕೆ. ‘ದುಡ್ಡೆಲ್ಲಿಂದ ತರ್ತಾರೆ, ಅದಕ್ಕೆ. ನಮ್ಮ ಹತ್ತಿರ ಒಂದೇ ಒಂದು ಕಾಸಿಲ್ಲ’ ಎಂದು ಕೈಯೆತ್ತಿದಳು.

ಮರುಮಾತಿಲ್ಲದೆ ನಮ್ಮಾಸ್ಪತ್ರೆಯ ಫಾರ್ಮಸಿಗೆ ಫೋನ್ ಮಾಡಿ ‘ನಾಲ್ಕು ಪ್ಲಾನ್ ಬಿ ಮಾತ್ರೆಗಳನ್ನು ಕೊಟ್ಟು ಕಳಿಸು’ ಎಂದೆ.

‘ನಮ್ಮ ಆಸ್ಪತ್ರೆಯ ಫಾರ್ಮಸಿಯಲ್ಲಿ ಪ್ಲಾನ್ ಬಿ ಮಾತ್ರೆಗಳನ್ನು ಇಡುವುದಿಲ್ಲ. ಸಾರಿ, ಈ ವಿಷಯದಲ್ಲಿ ನಾನು ನಿನಗೆ ಸಹಾಯ ಮಾಡಲಾರೆ’ ಎಂದ ಫಾರ್ಮಸಿಸ್ಟ್.

ನನಗೆ ಆಶ್ಚರ್ಯವಾಯಿತು. ನನ್ನ ಪೇಶೆಂಟು ಮಾತ್ರೆಯಿಲ್ಲದೆ ಹೊರಗೆ ಹೋಗೋದಿಲ್ಲ ಎಂದು ಕೂತಿದ್ದಾಳೆ. ಆದರೆ, ಫಾರ್ಮಸಿಸ್ಟ್ ನಮ್ಮಾಸ್ಪತ್ರೆಯಲ್ಲಿ ಆ ಮಾತ್ರೆಗಳಿಲ್ಲ ಎನ್ನುತ್ತಿದ್ದಾನೆ.  ನಾನು ‘ಯಾಕೆ ನಮ್ಮಾಸ್ಪತ್ರೆಯಲ್ಲಿ ಈ ಮಾತ್ರೆಗಳಿಲ್ಲ?’ ಎಂದು ಕೇಳಿದೆ.

‘ಡಾಕ್. ಇದು ಕ್ಯಾಥೊಲಿಕ್ ಆಸ್ಪತ್ರೆ. ಇಲ್ಲಿ ಅಬಾರ್ಷನ್ ಮಾಡೊಲ್ಲ. ಮತ್ತು ಹೋದ ವಾರದ ಫಾರ್ಮಸಿ ಕಮಿಟಿ ಮೀಟಿಂಗಿನಲ್ಲಿ ಈ ಪ್ಲಾನ್ ಬಿ ಮಾತ್ರೆಗಳನ್ನು ಆಸ್ಪತ್ರೆಯ ಫಾರ್ಮಸಿಯಿಂದ ಯಾರಿಗೂ ಡಿಸ್ಪೆನ್ಸ್ ಮಾಡಬಾರದು, ಅದು ಅನ್‌ಕ್ರಿಶ್ಚಿಯನ್ ಎಂದು ಸರ್ವಾನುಮತದಿಂದ ನಿರ್ಣಯಿಸಲಾಗಿದೆ’ ಎಂದ.
‘ಹಾಗಾದರೆ, ನನ್ನ ಪೇಷೆಂಟು’.

‘ನಿನಗೆ ಆ ಮಾತ್ರೆಗಳು ಅಬಾರ್ಶನ್ ಮಾಡಿಸುವುದಿಲ್ಲ ಎಂದು ನಂಬಿಕೆಯಿದ್ದರೆ ಒಂದು ಪ್ರಿಸ್ಕ್ರಿಪ್ಷನ್ ಕೊಡು. ಊರಲ್ಲಿ ಬೇಕಾದಷ್ಟು ಫಾರ್ಮಸಿಗಳಿದ್ದಾವೆ’.
‘ಆಕೆ ದುಡ್ಡಿಲ್ಲ ಅಂತಾ ಇದಾಳೆ’.

‘ಡಾಕ್, ಸುಖ ಪುಕ್ಕಟೆ ಸಿಕ್ಕಲ್ಲ. ನಿನ್ನ ಈ ಪೇಷೆಂಟು ರಾತ್ರೆ ಬಿಯರ್ ಕುಡಕೊಂಡು ಗಾಂಜಾ ಸೇದಿ ಮಜಾ ಮಾಡಿದ್ದಾಳೆ, ಅನ್ನಿಸುತ್ತೆ. ಈಗ ಜ್ಞಾನೋದಯ ಆಗಿದೆ, ಆಕೆಗೆ. ಅದಕ್ಕೆ ದುಡ್ಡೆಲ್ಲಿಂದ ಬಂತು ಎಂದು ಕೇಳಬೇಕಿತ್ತು’ ಎಂದ.

‘ಅದು, ನನ್ನ ಜವಾಬ್ದಾರಿಯಲ್ಲ. ಆಕೆಗೆ ಹದಿನೆಂಟು ವರ್ಷವಾಗಿದೆ. ಆಕೆಗೆ ಏನು ಬೇಕು ಎಂದು ನಿರ್ಧಾರ ಮಾಡಲು ಆಕೆ ಸ್ವತಂತ್ರಳು..’
‘ಡಾಕ್... ನಮ್ಮ ಆಸ್ಪತ್ರೆಯ ಫಾರ್ಮಸಿಯಿಂದ ಈ ಮಾತ್ರೇನ ಕೊಡೋಕೆ ಸಾಧ್ಯವಿಲ್ಲ. ಬೇಕಾದರೆ ಅಡ್ಮಿನಿಸ್ಟ್ರೇಷನ್‌ಗೆ ಕಂಪ್ಲೇಂಟು ಕೊಟ್ಟಿಕೋ’.
ಇದೇ ರೀತಿಯಲ್ಲಿ ನಮ್ಮ ಮಾತುಕತೆ ಮುಂದುವರೆದಿತ್ತು. ಆದರೂ ಒಟ್ಟಾರೆ ನಮ್ಮ ಆಸ್ಪತ್ರೆಯ ಫಾರ್ಮಸಿಯಿಂದ ಆ ಜೋಡಿಗೆ ಅವರಿಗೆ ಬೇಕಾಗಿದ್ದ ಮಾತ್ರೆಗಳನ್ನು ಕೊಡಿಸಲಾಗಲಿಲ್ಲ. ಅವರು ನಮ್ಮ ಆಸ್ಪತ್ರೆಯ ನಿಯಮಾವಳಿಗಳನ್ನು ಬಯ್ದುಕೊಂಡು ಪಕ್ಕದ ಇನ್ನೊಂದು ಆಸ್ಪತ್ರೆಗೆ ಹೋದರನ್ನಿಸುತ್ತೆ.  
ಇಲ್ಲಿ ಎರಡು ವಿಷಯಗಳನ್ನು ನಾವು ಗಮನಿಸಬಹುದು. ಈ ಹದಿನೆಂಟು ವಯಸ್ಸಿನ ಯುವಕ ಯುವತಿಯರ ಈ ಮುಕ್ತ ಜೀವನ ಶೈಲಿ, ನೈತಿಕ ಆಯ್ಕೆ ಸರಿಯೇ ಎಂದು ಕೆಲವರಿಗಾದರೂ ಅನುಮಾನ ಬರಬಹುದು. ನಮ್ಮ ಫಾರ್ಮಸಿಸ್ಟ್ ಪ್ರಕಾರವೇ ಇವರಿಬ್ಬರೂ ಅಪ್ರಾಪ್ತ ವಯಸ್ಸಿನಲ್ಲಿ ಬಸುರಾಗುವ ಚಾನ್ಸ್ ತೆಗೆದುಕೊಳ್ಳುವ ‘ತಪ್ಪನ್ನು’ ಮಾಡಿದ್ದಾರೆ. ಮತ್ತು ಅದಕ್ಕಿಂತ ದೊಡ್ಡ ತಪ್ಪು ಈಗ ಅವರು ಬಸುರಾಗುವುದನ್ನು ತಡೆಯುವುದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳಲು ಕೇಳುತ್ತಿರುವುದು. ಅದು ಅವನ ಪ್ರಕಾರ ‘ಕ್ರಿಶ್ಚಿಯನ್’ ಅಲ್ಲ.

ಕಾನೂನುಬದ್ಧವಾಗಿ ಇವರಿಬ್ಬರೂ ವಯಸ್ಕರು. ಅವರ ಮುಕ್ತ ಲೈಂಗಿಕತೆಗೆ ಅವರಿಗೆ ಯಾರ ಅನುಮತಿಯೂ ಬೇಕಿಲ್ಲ. ಹಾಗೆಯೇ, ಗರ್ಭಧಾರಣೆಯನ್ನು ತಡೆಯುವ ಈ ವಿಧಾನ ಕೂಡ ಯಾವ ವೈದ್ಯವಿದ್ಯೆಯ ಪ್ರಕಾರವೂ ತಪ್ಪಲ್ಲ. ಆದರೆ, ನಮ್ಮ ಫಾರ್ಮಸಿಸ್ಟ್ ಪಕ್ಕಾ ಕೆಥೊಲಿಕ್. ಆತನ ನಂಬಿಕೆಯ ಪ್ರಕಾರ ಇವರಿಬ್ಬರೂ ಪಾಪ ಮಾಡುತ್ತಿದ್ದಾರೆ. ಆತ ಈ ಮಾತ್ರೆಗಳನ್ನು ಕೊಟ್ಟರೆ ಭ್ರೂಣಹತ್ಯೆಯ ಪಾಪ ಆತನಿಗೆ ಬರುತ್ತದೆ ಎಂದು ನಂಬಿದ್ದಾನೆ. ಹಾಗಾಗಿ ಈ ‘ಪ್ಲಾನ್ ಬಿ’ ಅನ್ನುವ ಮಾತ್ರೆಯನ್ನು ಆತ ನಮ್ಮ ಆಸ್ಪತ್ರೆಯ ಫಾರ್ಮಸಿಯಿಂದ ಯಾವುದೇ ಕಾರಣಕ್ಕೆ ಕೊಡಬಾರದು ಎಂದು ಬೈಲಾ ಬರೆದಿದ್ದಾನೆ. ಇದಕ್ಕೆ ಮೆಡಿಕಲ್ ಸ್ಟಾಫ್ ಮೀಟಿಂಗಿನಲ್ಲಿ ಹೇಗೆ ಎಲ್ಲರ ಒಪ್ಪಿಗೆಯ ಮುದ್ರೆ ಬಿತ್ತು ಎಂಬುದು ಜಾತ್ಯತೀತ ಅಮೆರಿಕಾದಲ್ಲಿ ಒಂದು ದೊಡ್ಡ ಪ್ರಶ್ನೆ.

ಅದೇನೇ ಇರಲಿ, ಇಲ್ಲಿ ನಾನು ವೈದ್ಯನಾಗಿ ನನ್ನ ಕೆಲಸವನ್ನು ಮಾಡಲೇಬೇಕಲ್ಲ. ಅವರಿಬ್ಬರೂ ಯಾವ ಕಾನೂನನ್ನೂ ಮುರಿದಿಲ್ಲ. ಅವರ ನಂಬಿಕೆಗಳು, ಜೀವನ ಶೈಲಿ ಏನೇ ಇರಲಿ, ಅವರು ನನ್ನಿಂದ ಏನು ಸಿಗುತ್ತದೆ ಎಂದು ನಿರೀಕ್ಷಿಸಿ ಬಂದಿದ್ದರೋ ಅದು ಸಿಗದೇ ಹೋಯಿತು. ಅವರಿಗೆ ನಾನು ಆಸ್ಪತ್ರೆಯ ಪರವಾಗಿ ಕ್ಷಮಾಪಣೆ ಕೇಳಿ, ಅಂದು ಅವರಿಗೆ ಈ ಮಾತ್ರೆಗಳ ಅವಶ್ಯಕತೆ ಅಷ್ಟೊಂದು ಹೆಚ್ಚಾಗಿ ಇದ್ದಲ್ಲಿ ಸಮೀಪದ ಯಾವುದಾದರೂ ಆಸ್ಪತ್ರೆಗೆ ಹೋಗಿ ಪಡೆದುಕೊಳ್ಳಿ ಎಂದು ಹೇಳಿ ಕಳಿಸಿದೆ.

ನಾನು ಎಂಬಿಬಿಎಸ್ ಓದುತ್ತಿರಬೇಕಾದರೆ ನನ್ನ ಪ್ರೊಫೆಸರ್ ಒಬ್ಬರು ಯಾವುದೇ ಹೆಂಗಸರು ಬಂದು, ‘ಮನೆಯಲ್ಲಿ ದೇವರ ಕಾರ್ಯ ಇದೆ, ಮುಟ್ಟು ಮುಂದೆ ಹಾಕುವ ಮಾತ್ರೆಗಳನ್ನು ಬರೆದುಕೊಡಿ’ ಎಂದು ಕೇಳಿದಾಗ– ‘ಅದನ್ನೆಲ್ಲಾ ತೆಗೆದುಕೊಳ್ಳಬಾರದು. ಅದರಿಂದ ಕ್ಯಾನ್ಸರ್ ಬರುತ್ತದೆ’ ಎಂದು ಹೇಳಿ ಕಳಿಸುತ್ತಿದ್ದರು. ಅವರು ಬರೆದುಕೊಡುವುದು ಹಾಗಿರಲಿ, ನಮಗೂ ಈ ಮಾತ್ರೆಗಳನ್ನು ಯಾರಿಗೂ ಪ್ರಿಸ್ಕ್ರಿಪ್ಷನ್ ಬರೆಯದ ಹಾಗೆ ತಡೆದಿದ್ದರು. ಅವರ ವಾದ ‘ಈ ಹೆಂಗಸರಿಗೆ ಬುದ್ಧಿ ಇಲ್ಲ. ಅಷ್ಟು ಸಂಪ್ರದಾಯಸ್ಥರಾದರೆ ಹೊರಗೆ ಕೂರಬೇಕು, ದೇವರ ಕಾರ್ಯವನ್ನು ಬೇರೆ ಯಾರಾದರೂ ಮಾಡಲಿ. ಆ ದೇವರೇನು ನೀನು ಮುಟ್ಟಾಗಿದ್ದೀ, ನನ್ನ ಪೂಜೆ ಮಾಡಬೇಡ ಎಂದು ಹೇಳುತ್ತಾನಾ? ಸುಮ್ಮನೇ  ಮಾಡಿಕೊಂಡು ಹೋಗಬೇಕು. ಅದು ಬಿಟ್ಟು ಈ ದೇಹದ ಸಹಜ ಕ್ರಿಯೆಯಾದ ಮುಟ್ಟನ್ನು ಮುಂದು ಹಾಕಲು ಮಾತ್ರೆಗಳನ್ನಾದರೂ ಏಕೆ ತೆಗೆದುಕೊಳ್ಳಬೇಕು?’ ಎಂದು ನಮಗೆ ಕೇಳುತ್ತಿದ್ದರು.


ಒಮ್ಮೆಯಂತೂ ಒಬ್ಬಾಕೆ ಬಂದು ‘ಮೇಡಂ, ನಾನು ಪ್ರತಿ ತಿಂಗಳೂ ಹೊರಗೇನೂ ಕೂರುವುದಿಲ್ಲ. ಆದರೆ ಮನೆಯಲ್ಲಿ ಮಗನ ಉಪನಯನ ಇದೆ. ಅದೇ ದಿನ ನನಗೆ ಸರಿಯಾದ ಸಮಯ. ಮಗನ ಮುಂಜೀನ ಮುಟ್ಟಾದಾಗ ಹೇಗೆ ಮಾಡಲಿ’ ಎಂದು ಕೇಳಿದಾಗ, ಆಕೆ ‘ನಾನು ಏನು ಮಾಡಿದರೂ ನಿನಗೆ ಪ್ರಿಸ್ಕ್ರಿಪ್ಷನ್ ಕೊಡುವುದಿಲ್ಲ. ಬೇಕಿದ್ದರೆ ಮಗನ ಉಪನಯನವನ್ನೇ ಮುಂದೆ ಹಾಕು’ ಎಂದಿದ್ದರು.

ನಾನು ಮೇಲೆ ಉದಾಹರಿಸಿದ ಎರಡೂ ಕಡೆ ರೋಗಿಗೆ ಮತ್ತು ವೈದ್ಯವರ್ಗಕ್ಕೆ ನಂಬಿಕೆಗಳ ಟಕ್ಕಾಟಿಕ್ಕಿಯಾಗಿದೆ. ನಮ್ಮ ಆಸ್ಪತ್ರೆಯ ಫಾರ್ಮಸಿಸ್ಟ್ ಯಾವ ಕ್ರಿಶ್ಚಿಯನ್ ಉಪಪಂಗಡದವನೋ ಗೊತ್ತಿಲ್ಲ, ಆತನ ಪ್ರಕಾರ ಮಿಲನದ ನಂತರ ಉಪಯೋಗಿಸುವ ಯಾವುದೇ ಗರ್ಭನಿರೋಧಕ ಕ್ರಮಗಳು ಅಬಾರ್ಶನ್ ಇದ್ದಹಾಗೆ. ಅದನ್ನು ಆತ ಒಪ್ಪುವುದಿಲ್ಲ. ಇದು ಕ್ಯಾಥಲಿಕ್ ಆಸ್ಪತ್ರೆಯಾದ್ದರಿಂದ ಪ್ರಾಯಶಃ ನಮ್ಮ ಆಸ್ಪತ್ರೆಯ ಆಡಳಿತವರ್ಗದ ಮುಖ್ಯಸ್ಥರೂ ಅದಕ್ಕೆ ಒಪ್ಪಿರಲಿಕ್ಕಿಲ್ಲ. ಇಲ್ಲಿ ವೈದ್ಯಜಗತ್ತು ಪ್ರಮಾಣೀಕರಿಸಿ ಒಪ್ಪಿದ ಒಂದು ಚಿಕಿತ್ಸಾಕ್ರಮ ಆತನ ಪ್ರಕಾರ ಅನ್‌ಕ್ರಿಶ್ಚಿಯನ್, ಅದು ಭ್ರೂಣಹತ್ಯೆ. ಆದ್ದರಿಂದ ಏನು ಮಾಡಿದರೂ ಈ ಮಾತ್ರೆಗಳನ್ನು ಆತ ತನ್ನ ಫಾರ್ಮಸಿಯಲ್ಲಿ ಇಡಲು ಒಪ್ಪುವುದಿಲ್ಲ. ಇದೇ ರೀತಿ ‘ಅಬಾರ್ಶನ್’ ಮಾಡಿಸಿಕೊಂಡ ಒಬ್ಬಾಕೆ (ಅಮೆರಿಕಾದಲ್ಲಿ ಬೇಡದ ಗರ್ಭವನ್ನು ತೆಗೆಸಿದಲ್ಲಿ ಮಾತ್ರ ಅದಕ್ಕೆ ಅಬಾರ್ಶನ್ ಅನ್ನುತ್ತಾರೆ. ಗರ್ಭ ಸ್ವಾಭಾವಿಕವಾಗಿ ನಿಲ್ಲದಿದ್ದಲ್ಲಿ ಅದಕ್ಕೆ ಮಿಸ್‌ಕ್ಯಾರಿಯೇಜ್ ಎನ್ನುತ್ತಾರೆ. ಗೊತ್ತಿಲ್ಲದೆ ಎರಡೂ ಪದಪ್ರಯೋಗಗಳನ್ನು ಅದಲುಬದಲು ಮಾಡಿ ತೊಂದರೆಗೆ ಸಿಗಿಹಾಕಿಕೊಂಡಿದ್ದೇನೆ) ನೋವು ತಡೆಯಲಾರದೇ ಎಮರ್ಜನ್ಸಿ ಡಿಪಾರ್ಟ್‌ಮೆಂಟಿಗೆ ಬಂದಾಗ ಅವಳಿಗೆ ನೋವುನಿವಾರಕ ಮಾತ್ರೆಗಳನ್ನೂ ಕೊಡದ ವೈದ್ಯರುಗಳನ್ನು ನಾನು ನೋಡಿದ್ದೇನೆ.

ಹಾಗೆಯೇ ನಮ್ಮ ಮೆಡಿಕಲ್ ಕಾಲೇಜಿನ ‘ಮುಟ್ಟಾದಾಗ ಹೊರಗೆ ಕೂರಬಾರದು’ ಎಂಬ ತಮ್ಮ ನಂಬಿಕೆಯನ್ನು ತಮ್ಮ ರೋಗಿಗಳ ಮೇಲೆಲ್ಲ ಹೇರಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಆ ಹೆಂಗಸು ಹೊರಗೆ ಕೂರುತ್ತಾಳೋ ಇಲ್ಲವೋ ನಮಗೂ ಗೊತ್ತಿಲ್ಲ. ಆದರೆ, ಮಗನ ಉಪನಯನದ ದಿನ ತಾಯಿ ಹೊರಗೆ ಕೂರಬಾರದು ಎಂಬುದು ಆಕೆಯ ನಂಬಿಕೆ. ಆಕೆ ಸಂಪ್ರದಾಯಸ್ಥಳೇ ಇರಲಿ. ನಮ್ಮ ಪ್ರೊಫೆಸರರು ಲಿಬರಟೇರಿಯನ್ ಇರಬಹುದು. ಆದರೆ, ಆ ಹೆಣ್ಣಿನ ನಂಬಿಕೆಗಳನ್ನು ಯಾರು ಕೇಳಬೇಕು? ಅದಕ್ಕಾಗಿ ವೈದ್ಯರ ನೆರವನ್ನು ಕೇಳಿದಾಗ, ಸಹಾಯ ಮಾಡದೇ ಇದ್ದರೂ ಪರವಾಗಿಲ್ಲ, ‘ಮುಟ್ಟು ಮುಂದೂಡುವ ಮಾತ್ರೆಗಳನ್ನು ತೆಗೆದುಕೊಂಡರೆ ಕ್ಯಾನ್ಸರ್ ಬರುತ್ತದೆ’ ಎಂದು ಆ ಹೆಂಗಸಿಗೆ ಹೇಳುವುದು ಅನ್ ಎಥಿಕಲ್ ಅಲ್ಲವೇ? ಏಕೆಂದರೆ, ಮುಟ್ಟು ಮುಂದೆ ಹೋಗುವುದಕ್ಕೆಂದು ಮಾತ್ರ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡರೆ ಕ್ಯಾನ್ಸರ್ ಬರುತ್ತದೆ ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ. ಅದು ನಮ್ಮ ಪ್ರೊಫೆಸರರಿಗೂ ಗೊತ್ತು. ಆದರೆ ಆಕೆಗೆ ಸುಳ್ಳು ಹೇಳಿದರೂ ಪರವಾಗಿಲ್ಲ ತಾನು ಅಮಾನವೀಯ ಎಂದು ನಂಬಿರುವ ಪದ್ಧತಿಯನ್ನು ವಿರೋಧಿಸುವುದು ಅವರಿಗೆ ಬಹಳ ಮುಖ್ಯವಾಗಿತ್ತು.

ನಾನು ಕೆಲಸ ಮಾಡುವ ಆಸ್ಪತ್ರೆಯ ಪಕ್ಕದಲ್ಲಿಯೇ ಜೈಲಿದೆ. ಅಲ್ಲಿ ಕೊಲೆಗಾರರಿಂದ, ಚಿಕ್ಕಚಿಕ್ಕ ಮಕ್ಕಳನ್ನು ಬಲಾತ್ಕಾರ ಮಾಡಿರುವವರೂ ಇದ್ದಾರೆ. ಅವರು ಆಸ್ಪತ್ರೆಗೆ ಬಂದಾಗ ಯಾವ ಅಪರಾಧದಿಂದ ಅವರು ಜೈಲಿನಲ್ಲಿ ಇದ್ದಾರೆಂದು ನಮಗೆ ಗೊತ್ತಾಗುವುದೇ ಇಲ್ಲ. ಹಾಗೆ ಗೊತ್ತಾದಲ್ಲಿ ನಾವು ಪೂರ್ವಗ್ರಹಪೀಡಿತರಾಗುತ್ತೇವೆ ಎಂದು ಅವರ ಬಗ್ಗೆ ಆದಷ್ಟೂ ಕಮ್ಮಿ ವಿವರಗಳನ್ನು ನಮಗೆ ಕೊಡುತ್ತಾರೆ. ಕೆಲವೊಂದು ಕುಪ್ರಸಿದ್ಧ ಅಪರಾಧಿಗಳ ಹೆಸರು ಸಾರ್ವಜನಿಕ ದಾಖಲೆಯಾದ್ದರಿಂದ ಜೈಲಿನಿಂದ ಆಸ್ಪತ್ರೆಗೆ ಕಳಿಸಬೇಕಾದರೆ ಆತನನ್ನು ‘ಅಲಿಯಾಸ್’ ಹೆಸರಿನಿಂದ ಕಳಿಸುತ್ತಾರೆ. ನನ್ನ ಪ್ರಕಾರ ಇದು ಒಳ್ಳೆಯ ಕ್ರಮ. ಒಂದು ಮಗುವನ್ನು ಬಲಾತ್ಕಾರ ಮಾಡಿದ ಕೈದಿಗೆ ಹೃದಯಾಘಾತವಾಗಿದ್ದಾಗ ಆತ ಮಾಡಿರುವ ಅಪರಾಧದ ವಿವರ ಗೊತ್ತಿದ್ದೂ ಎಲ್ಲಕ್ಕೂ ಕುರುಡಾಗಿ, ಕಿವುಡಾಗಿ ಸ್ಥಿತಪ್ರಜ್ಞರಂತೆ ಚಿಕಿತ್ಸೆ ಮಾಡುವುದು ಅಷ್ಟು ಸುಲಭವಲ್ಲ.

ನಾನು ಇಷ್ಟು ವರ್ಷದ ಕೆಲಸದಲ್ಲಿ ತಿಳಿದುಕೊಂಡಿರುವುದು ಏನೆಂದರೆ, ನನ್ನ ಬಳಿ ಬರುವ ರೋಗಿಯ ಹಿನ್ನೆಲೆ ನನಗೆ ಮುಖ್ಯವಲ್ಲ. ಆತನ ಕಾಯಿಲೆಗೆ ಸರಿಯಾದ ಚಿಕಿತ್ಸೆ ಯಾವುದು, ಆತ ನನ್ನಿಂದ ಏನನ್ನು ನಿರೀಕ್ಷಿಸುತ್ತಿದ್ದಾನೆ ಎಂಬುದು ಮಾತ್ರ ನನಗೆ ಮುಖ್ಯವಾಗಬೇಕು. ಆತನ ನಿರೀಕ್ಷೆ ಕಾನೂನುಬದ್ಧವಾಗಿದ್ದಲ್ಲಿ ಮತ್ತು ನಾನು ಮಾಡುವ ಚಿಕಿತ್ಸೆಯಿಂದ ಹಾನಿಗಿಂತ ಹೆಚ್ಚು ಉಪಕಾರವಿದೆ ಎಂಬ ವೈದ್ಯಕೀಯ ಪುರಾವೆಗಳಿದ್ದಲ್ಲಿ ನಾನು ಆ ಚಿಕಿತ್ಸೆಯನ್ನು ಮಾಡುವುದಕ್ಕೆ ಹಿಂಜರಿಯುವುದಿಲ್ಲ. ‘ಪ್ಲಾನ್‌ಬಿ’ ಎಂಬ ಮಾತ್ರೆಗಳು ಸಂಭೋಗದ ನಂತರದ ಗರ್ಭನಿಯಂತ್ರಣಕ್ಕೆ ಸರಿಯಾದ ವಿಧಾನ ಎಂದು ವೈದ್ಯವಿಜ್ಞಾನ ಪ್ರಮಾಣೀಕರಿಸಿದೆ. ಇಲ್ಲಿ ನಾನು ಚಿಕಿತ್ಸೆ ಮಾಡುತ್ತಿರುವುದು ಅಪ್ರಾಪ್ತ ವಯಸ್ಸಿನಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವ ಹುಡುಗಿಗೆ ಎಂದೋ, ಈ ಮಾತ್ರೆಗಳನ್ನು ತೆಗೆದುಕೊಳ್ಳುವುದು ಒಂದು ಸಂಸ್ಕೃತಿಯ ಪ್ರಕಾರ ಗರ್ಭನಿರೋಧಕ ಕ್ರಿಯೆಯಲ್ಲ– ಗರ್ಭಪಾತ ಎಂದೋ ಆ ಮಾತ್ರೆ ಕೋರಿ ಬಂದವರಿಗೆ ಪ್ರಿಸ್ಕ್ರಿಪ್ಶನ್ ಬರೆಯದೇ ಇರುವ ಹಕ್ಕು ನನಗಿಲ್ಲ.

ಇದೇ ತರ್ಕವನ್ನು ವಿಸ್ತರಿಸಿ ಮುಟ್ಟನ್ನು ಮುಂದೂಡಲು ಮಾತ್ರೆಗಳನ್ನು ಕೊಡಬಹುದು ಎಂದು ಯಾವ ವೈದ್ಯಕೀಯ ಸಂಶೋಧನೆಗಳು ಪ್ರಮಾಣೀಕರಿಸಿವೆ ಎಂಬ ಪ್ರಶ್ನೆ ಬರಹುದು. ನನಗೆ ಗೊತ್ತಿರುವ ಪ್ರಕಾರ ಯಾವ ಸಂಶೋಧನೆಯೂ ಇಲ್ಲ. ಆದರೆ, ಇದೊಂದು ಸಾಮಾನ್ಯ ಕ್ರಮ. ನಾನು ಮೇಲೆ ಹೇಳಿದ ಉದಾಹರಣೆಯಲ್ಲಿ ಮಗನ ಉಪನಯನಕ್ಕೆಂದು ಆ ಹೆಂಗಸು ಮಾತ್ರೆ ಕೇಳಿದ್ದರೆ, ನನ್ನ ಜತೆಯ ಕೆಲಸಗಾರ್ತಿ, ‘ಹವಾಯಿ ದ್ವೀಪಗಳಿಗೆ ವೆಕೇಶನ್ ಹೋಗುತ್ತಿದ್ದೇನೆ, ಅಲ್ಲಿ ಬೀಚಿನಲ್ಲಿ ಈಜುವುದಕ್ಕೆ, ಸ್ಕೂಬಾ ಡೈವಿಂಗ್ ಮಾಡುವುದಕ್ಕೆ ಕಸಿವಿಸಿಯಾಗುತ್ತದೆ’ ಎಂದು ನನ್ನಿಂದಲೇ ಮಾತ್ರೆಗಳ ಪ್ರಿಸ್ಕ್ರಿಪ್ಷನ್ ಪಡೆದಿದ್ದಾಳೆ.

ನಮ್ಮ ಹದಿನೆಂಟು ವರ್ಷದ ಹುಡುಗಿ ರಾಜ್ಯ ಆರೋಗ್ಯ ಇಲಾಖೆಗೆ ನಮ್ಮ ಆಸ್ಪತ್ರೆಯ ಈ ಬೈಲಾ ಪ್ರಶ್ನಿಸಿ ದೂರು ಕೊಟ್ಟಿದ್ದಳು. ಈಗ ನಮ್ಮ ಆಸ್ಪತ್ರೆಯ ಫಾರ್ಮಸಿಯಲ್ಲಿ ‘ಪ್ಲಾನ್ ಬಿ’ ಮಾತ್ರೆಗಳನ್ನು ಇಟ್ಟಿದ್ದಾರೆ.

ನಾನೊಬ್ಬ ವೈದ್ಯ ಮಾತ್ರ. ನನ್ನ ನಂಬಿಕೆಗಳು ನನ್ನಲ್ಲಿ ಮಾತ್ರ ಇರಬೇಕು. ಅದನ್ನು ಯಾವುದೇ ಕಾರಣಕ್ಕೆ ನನ್ನ ರೋಗಿಗಳ ಮೇಲೆ ಹೇರುವುದು ತಪ್ಪು.

ಅಮಾನವೀಯ ಎಂದು ತಾನು ನಂಬಿರುವ ಪದ್ಧತಿಯನ್ನು ವಿರೋಧಿಸಲು ವೈದ್ಯ ತನ್ನ ರೋಗಿಗೆ ಸುಳ್ಳು ಹೇಳಬಹುದೇ? ತನ್ನ ನಂಬಿಕೆಗಳನ್ನು ರೋಗಿಯ ಮೇಲೆ ಹೇರದೇ ತನ್ನಲ್ಲೇ ಇಟ್ಟುಕೊಳ್ಳಬೇಕೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT