ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆಗೆ ಬೆಳಕಾದವರು

Last Updated 28 ಜೂನ್ 2015, 19:30 IST
ಅಕ್ಷರ ಗಾತ್ರ

1934ರಲ್ಲಿ ಮಹಾತ್ಮ ಗಾಂಧಿ ಮಂಗಳೂರಿಗೆ ಭೇಟಿ ನೀಡಿದರು. ಭೇಟಿ ವೇಳೆ ಅಲ್ಲಿನ ಡಿಸಿಎಂ ವಿದ್ಯಾರ್ಥಿ ನಿಲಯಕ್ಕೆ ಬಂದಿದ್ದರು. ಆ ವಿದ್ಯಾರ್ಥಿ ನಿಲಯ ಸ್ಥಾಪಿಸಿದ ವ್ಯಕ್ತಿಯ ಬಗ್ಗೆ ತಿಳಿದ ಗಾಂಧೀಜಿ ಆಶ್ಚರ್ಯಪಟ್ಟರು.  ‘ಈ ವಿದ್ಯಾರ್ಥಿ ನಿಲಯ ಸ್ಥಾಪಿಸಿದ ಪೂಜ್ಯರ ಮಾನವೀಯ ಸೇವಾ ಕಾರ್ಯಗಳಿಂದ ನಾನು ಹಲವು ಸಂಗತಿಗಳನ್ನು ಅರಿತೆ. ಇದರ ಸಂಸ್ಥಾಪಕರು ನಮಗೆಲ್ಲ ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅಸ್ಪೃಶ್ಯ ಸಮುದಾಯ ದವರ ಪುನರುತ್ಥಾನದ ಕಾರ್ಯಕ್ಕೆ ಸ್ಫೂರ್ತಿ ನೀಡಿದ್ದಾರೆ. ಅಸ್ಪೃಶ್ಯತೆ ನಿವಾರಣೆ ಮತ್ತು ದಲಿತೋದ್ಧಾರದ ಕಾರ್ಯದಲ್ಲಿ ಇವರೇ ನನ್ನ ಗುರುಗಳು’ ಎಂದು ಗಾಂಧೀಜಿ ಮುಕ್ತ ಕಂಠದಿಂದ ಹೊಗಳಿದರು.

ಅಹಿಂಸೆಯ ಸಾಕಾರ ರೂಪ ಗಾಂಧೀಜಿ ಮನದುಂಬಿ ಹೊಗಳಿದ್ದು ಕುದ್ಮಲ್ ರಂಗರಾಯರನ್ನು. ದೇಶವನ್ನು ಪಾರತಂತ್ರ್ಯದಿಂದ ಪಾರುಮಾಡಲು ಹೋರಾಟ ನಡೆಯುತ್ತಿದ್ದ ಅವಧಿಯಲ್ಲೇ ಆತ್ಮಾಭಿಮಾನ ಬಲಿಕೊಟ್ಟು ಬದುಕುತ್ತಿದ್ದ ಸಮಾಜದ ತಳವರ್ಗದಲ್ಲಿ ಎಚ್ಚರ ಮೂಡಿ ಸುವ ಪ್ರಯತ್ನವೂ ನಡೆಯುತ್ತಿತ್ತು. ಇಂಥ ಹೋರಾಟದ ನಾಯಕರಾದ ನಾರಾಯಣ ಗುರುಗಳು, ಜ್ಯೋತಿಬಾ ಫುಲೆ, ಸ್ವಾಮಿ ವಿವೇಕಾನಂದ, ಗಾಂಧೀಜಿ, ಬಿ.ಆರ್. ಅಂಬೇಡ್ಕರ್ ಅವರ ಸಾಲಿನಲ್ಲಿ  ರಂಗರಾಯರೂ ಒಬ್ಬರು.

ದಲಿತರು, ಹಿಂದುಳಿದವರ ಪಾಲಿಗೆ ಜಡಗೊಂಡಿದ್ದ ಭಾರತದ ಸಾಮಾಜಿಕ ವ್ಯವಸ್ಥೆಯೊಳಗೆ ಶಿಕ್ಷಣ-ಹೋರಾಟ-ಸಂಘಟನೆಯ ಮೂಲಕ ಪರಿವರ್ತನೆಯ ಬೆಳಕು ಹಚ್ಚಿದ  ಅಂಬೇಡ್ಕರ್ ಜನಿಸುವ (1891) ಮೊದಲು, ಸಂಸ್ಥಾನದ ಹುದ್ದೆಗಳಲ್ಲಿ ಶೇಕಡ 50ರಷ್ಟನ್ನು ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಕೊಲ್ಹಾಪುರದ ಶಾಹು ಮಹಾರಾಜ ಪಟ್ಟಕ್ಕೆ ಬರುವ (1894) ಮೊದಲೇ ಜನಿಸಿದವರು ರಂಗ ರಾಯರು (1859, ಜೂನ್‌ 29). ಕೇರಳದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸುಧಾರಣೆಯ ಬೀಜ ಬಿತ್ತಿದ ಮಹಾನ್ ಸಂತ ನಾರಾಯಣ ಗುರುಗಳ ಸಮಕಾಲೀನರು  ರಂಗರಾಯರು.

ರಂಗರಾಯರು ಜನಿಸಿದ್ದು ಕಾಸರಗೋಡು ಜಿಲ್ಲೆಯ ಕುದ್ಮಲ್ ಎಂಬ ಊರಿನಲ್ಲಿ, ಪ್ರತಿಷ್ಠಿತ ಸಾರಸ್ವತ ಬ್ರಾಹ್ಮಣ  ಕುಟುಂಬದಲ್ಲಿ. ಇವರು ಬಡವರ ವಕೀಲರೆಂದೇ ಖ್ಯಾತರು. ನೂರೈವತ್ತಕ್ಕೂ ವರ್ಷಗಳ ಹಿಂದೆ ಜನಿಸಿದ ರಂಗರಾಯರನ್ನು ನೆನಪಿಸಿಕೊಳ್ಳಲು ಒಂದು ಕಾರಣವಿದೆ. ಮೊನ್ನೆ ಫೇಸ್‌ಬುಕ್‌ ಪುಟಗಳನ್ನು ನೋಡುತ್ತಿದ್ದಾಗ ಒಂದು ಸಾಲು ಕಣ್ಣಿಗೆ ಬಿತ್ತು. ‘ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿ ಜಾರಿಯಾಗಬಾರದು’ ಎಂಬ ಮಾತನ್ನು ಆ ಸಾಲು ಧ್ವನಿಸುತ್ತಿತ್ತು.

ಹೌದಲ್ಲವೇ, ಜಾತಿ ಆಧಾರಿತ ಮೀಸಲಾತಿ ಜಾತ್ಯತೀತ ಭಾರತದಲ್ಲಿ ಏಕೆ ಬೇಕು ಎಂದು ನನ್ನ ಬುದ್ಧಿ ಯೋಚಿಸುತ್ತಿರುವಾಗಲೇ, ‘ಜಾತಿ ಆಧಾರಿತ ತಾರತಮ್ಯ ಇರುವ ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿ ಇರುವುದರಲ್ಲಿ ತಪ್ಪೇನಿದೆ’ ಎಂದು ಮನಸ್ಸು ಪ್ರಶ್ನಿಸಲು ಆರಂಭಿಸಿತು. ಎಂದೋ ಓದಿದ್ದ ರಂಗರಾಯರ ಬದುಕಿನ ಪುಟಗಳು ಕಣ್ಮುಂದೆ ಹಾಯಲು ಆರಂಭಿಸಿದವು.

ರಂಗರಾಯರು 1892ರಲ್ಲಿ ದಲಿತರಿಗಾಗಿ ಒಂದು ಶಾಲೆಯನ್ನು ಮಂಗಳೂರಿನಲ್ಲಿ ಆರಂಭಿಸಿದರು. ಬಳಿಕ ಕಂಕನಾಡಿ,   ಮೂಲ್ಕಿ, ಚೇಳೂರು, ಉಡುಪಿ, ಬನ್ನಂಜೆ, ಅತ್ತಾವರಗಳಲ್ಲಿಯೂ ದಲಿತರಿಗೆ ಶಾಲೆ ತೆರೆದರು. ಈ ಶಾಲೆಗಳನ್ನು ‘ಪಂಚಮಶಾಲೆ’ ಎಂದು ಕರೆಯಲಾಗುತ್ತಿತ್ತು. ದಲಿತರ ಶಾಲೆಗಳಿಗೆ ಪಾಠ ಮಾಡಲು ಮೆಲ್ವರ್ಗದ ಅಧ್ಯಾಪಕರು ಬರಲೊಪ್ಪದಾಗ ಕ್ರೈಸ್ತರನ್ನು ಅಧ್ಯಾಪಕ ರನ್ನಾಗಿ  ನೇಮಿಸಿಕೊಂಡರು.

ಆದರೆ ದಲಿತರ ಮಕ್ಕಳು ಶಾಲೆಗೆ ಹೋಗುವ ದೃಶ್ಯವನ್ನು ಕಲ್ಪಿಸಿಕೊಳ್ಳಲೂ ಸಿದ್ಧ ವಿಲ್ಲದಿದ್ದ ಕಾಲಘಟ್ಟ ಅದು. ಕುಪಿತ ಸವರ್ಣೀಯರು ಆ ಶಾಲಾ ವಠಾರದಲ್ಲಿ ಹೊಲಸು ಸುರಿದು, ಕಲ್ಲೆಸೆದು, ಶಾಲೆಗೆ ಬಂದ ಬಾಲಕರನ್ನು ಮುಳ್ಳುಕೋಲುಗಳಿಂದ ಹೊಡೆದು ಹಿಂಸಿಸಿದರು. ಆ ಮೂಲಕ ರಂಗರಾಯರ ಕೆಲಸಗಳಿಗೆ ಅಡ್ಡಿಯುಂಟು ಮಾಡಿದರು.

ದಲಿತರು ಶಿಕ್ಷಣ ಪಡೆಯುವುದನ್ನು ತಪ್ಪಿಸಲು ಸವರ್ಣೀಯ ಮನಸುಗಳು ನಡೆಸಿದ ಎಲ್ಲಾ ಬಗೆಯ ಯತ್ನಗಳ ಹೊರತಾಗಿಯೂ ರಂಗರಾಯರು ಧೃತಿ ಗೆಡಲಿಲ್ಲ. ದಲಿತೋದ್ಧಾರದ ಕಾರ್ಯಕ್ಕೆ ತುಡಿಯುತ್ತಿದ್ದ ರಂಗರಾಯರು ಇನ್ನಷ್ಟು ಗಟ್ಟಿಯಾದರು. ಮಕ್ಕಳ ಮೇಲೆ ನಡೆಯುತ್ತಿದ್ದ ಹಲ್ಲೆ,  ಹಿಂಸೆಗಳಿಂದ ಹೆದರಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಲು ಹೆತ್ತವರು ನಿರಾಕರಿಸಿದಾಗ ಅವರ ಮನಃಪರಿವರ್ತನೆ ಮಾಡಿ ಶಾಲೆಯ ಕಡೆಗೆ ಸೆಳೆದರು. ಪಂಚಮ ಶಾಲೆಗಳ ನಿರ್ವಹಣೆಗಾಗಿ ಡಿಪ್ರೆಸ್ಡ್ ಕ್ಲಾಸಸ್ ಮಿಷನ್ (ಡಿಸಿಎಂ) ಎಂಬ ಸಂಸ್ಥೆ ಆರಂಭಿಸಿ, ತಮ್ಮ ಸುಧಾರಣಾ ಕಾರ್ಯಗಳಿಗೆ ಸಾಂಸ್ಥಿಕ ರೂಪ ನೀಡಿದರು.

ದಲಿತೋದ್ಧಾರದ ಕಾರ್ಯಗಳ ಪರಿಣಾಮವಾಗಿ ರಂಗರಾಯರು ತಮ್ಮ ಸಾರಸ್ವತ ಬ್ರಾಹ್ಮಣ ಸಮುದಾಯ ದಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾಯಿತು. ಅವರಿಗೆ ಬಂಧುಗಳ ಮನೆ, ದೇವಾಲಯ ಪ್ರವೇಶ ನಿರಾಕರಿಸ ಲಾಯಿತು. ವ್ಯಕಿಗತ ಬದುಕಿನ ಎಲ್ಲಾ ಸುಖಗಳನ್ನು ತ್ಯಾಗ ಮಾಡಿದ ರಂಗರಾಯರು ಶೋಷಿತರ ಸ್ವಾಭಿಮಾನದ ಬದುಕಿಗೆ ದಾರಿದೀಪವಾದರು.

ದೇಶದಲ್ಲಿ ರಾಜಕೀಯ ಮೀಸಲಾತಿಯ ಪರಿಕಲ್ಪನೆ ಹುಟ್ಟಿಯೇ ಇರದಿದ್ದ ಕಾಲದಲ್ಲಿ ಮಂಗಳೂರಿನ ಜಿಲ್ಲಾ ಬೋರ್ಡ್ ಹಾಗೂ ಪುರಸಭೆಯಂತಹ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ದಲಿತರೂ ಸದಸ್ಯರಾಗುವಂತೆ ಮಾಡಿದರು. ‘ನನ್ನ ಶಾಲೆಯಲ್ಲಿ ಕಲಿತ ದಲಿತ ಸಮುದಾಯದ  ಮಕ್ಕಳು ವಿದ್ಯಾವಂತರಾಗಿ, ದೊಡ್ಡವರಾಗಿ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ರಸ್ತೆಯಲ್ಲಿ ಏಳುವ ದೂಳು ನನ್ನ ತಲೆಗೆ ತಾಗಬೇಕು. ಹಾಗಾದರೆ ನನ್ನ ಜನ್ಮ ಸಾರ್ಥಕವಾಗುತ್ತದೆ’ ಎನ್ನುವುದು ರಂಗರಾಯರ ಕನಸಾಗಿತ್ತು.

ಪ್ರತಿಭೆಯೆಂಬುದು ಎಲ್ಲರಲ್ಲೂ ಇದೆ. ಕೆಲವರಲ್ಲಿ ಅದು ಸುಪ್ತವಾಗಿ ಇರುತ್ತದೆ. ಅಂಥವರಿಗೆ ತುಸು ಉತ್ತೇಜನ ನೀಡುವ ಮೂಲಕ ಪ್ರತಿಭೆ ಹೊರಬರಲು ಸಹಾಯ ಮಾಡಬೇಕು. ಆ ಪ್ರತಿಭೆ ಸಮಾಜದ ಒಳಿತಿಗೆ ಬಳಕೆಯಾಗಬೇಕು. ಆಗ ಸಮಾಜ ಮತ್ತು ಮೀಸಲಾತಿ ಪಡೆದ ಸಮುದಾಯದ ಏಳ್ಗೆ ಸಾಧ್ಯ ಎಂಬುದು ರಂಗರಾಯರ ನಂಬಿಕೆಯಾಗಿತ್ತು ಎಂದು ನನ್ನ ಮನಸ್ಸಿಗೆ ತೀವ್ರವಾಗಿ ಅನಿಸಲಾರಂಭಿಸಿತು. ಅಂದರೆ, ಮೀಸಲಾತಿ ಕೂಡ ರಾಷ್ಟ್ರ ನಿರ್ಮಾಣಕ್ಕೆ ಪೂರಕ ಅಲ್ಲವೇ ಎಂದು ನನ್ನ ಬುದ್ಧಿಯನ್ನು ಮನಸ್ಸು ತೀವ್ರವಾಗಿ ಪ್ರಶ್ನಿಸಲು ಆರಂಭಿಸಿತು.

ರಂಗರಾಯರು ಮಾಡಿದ್ದು ನಿಶ್ಚಿತವಾಗಿಯೂ ಒಂದು ದೊಡ್ಡ ಕ್ರಾಂತಿ. ಅವರಿಗೆ ಯಾರ ಬಗ್ಗೆಯೂ ದ್ವೇಷ ಭಾವನೆ ಇರಲಿಲ್ಲ. ಶುದ್ಧ ಪ್ರೀತಿಯೇ ಅವರ ಕಾರ್ಯ ಸಾಧನವಾಗಿತ್ತು. ಉದ್ಯೋಗದಲ್ಲಿ ಮೀಸಲಾತಿ ಎಂಬುದು ನೂರು ಮೀಟರ್‌ ಓಟದ ಸ್ಪರ್ಧೆಯಲ್ಲಿ ಸಮಾಜದ ಹಿಂದುಳಿದ ವರ್ಗಗಳ ಯುವಕರೂ ಬಂದು ಸೇರಿಕೊಳ್ಳಲಿ, ಅವರ ದೈಹಿಕ ಸಾಮರ್ಥ್ಯವೂ ನಿಕಷಕ್ಕೆ ಒಳಪಡಲಿ ಎಂದಷ್ಟೇ ಅರ್ಥ. ರಂಗರಾಯರಂಥ ಚೇತನಗಳು ಬಾರದೆ ಇದ್ದಿದ್ದರೆ, ಪ್ರತಿಭೆಯನ್ನು ಸಮಾಜದ ಒಳಿತಿಗೆ ಸಮರ್ಪಿಸುವ ಅವಕಾಶ ಈ ವರ್ಗಗಳಿಗೆ ದೊರೆಯುತ್ತಿತ್ತೋ, ಇಲ್ಲವೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT