ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕಾಣುವ ಸಾಹಸದಲ್ಲಿ ಜೀವ ಕಳೆದುಕೊಳ್ಳುವವರು

ವಿದೇಶ ವಿದ್ಯಮಾನ
Last Updated 26 ಏಪ್ರಿಲ್ 2015, 20:13 IST
ಅಕ್ಷರ ಗಾತ್ರ

‘ಬಂಧಮುಕ್ತನಾಗು, ಇಲ್ಲವೇ ಪ್ರಯತ್ನಿಸಿ ಸಾಯಿ’- ಇದು ಲಿಬಿಯಾದ ಟ್ರಿಪೋಲಿಯಲ್ಲಿರುವ ವಲಸಿಗರ ಬಂಧನ ಕೇಂದ್ರದ ಗೋಡೆಯ ಮೇಲಿರುವ ಬರಹ. ದೇಶ ತ್ಯಜಿಸಿ ಓಡಿಹೋಗುವವರನ್ನು ಹಿಡಿದಿಡಲೆಂದೇ ಲಿಬಿಯಾದಲ್ಲಿ 20ಕ್ಕೂ ಅಧಿಕ ‘ಕಾರಾಗೃಹ’ಗಳಿವೆ. ಕೆಲವರು ಸಮುದ್ರ ತೀರ ತಲುಪುವ ಮೊದಲೇ ಬಂಧನಕ್ಕೊಳಗಾಗುತ್ತಾರೆ. ಇನ್ನು ಕೆಲವರು ನೌಕಾಪಡೆಗಳಿಗೆ ಸೆರೆಸಿಕ್ಕುತ್ತಾರೆ. ಭದ್ರತಾ ಪಡೆಗಳ ಕಣ್ಣುತಪ್ಪಿಸಿ ಮುಂದೆ ಸಾಗಿದವರು ಮತ್ತೆ ಭೂಮಿ ಕಾಣುತ್ತಾರೆ ಎನ್ನುವಂತಿಲ್ಲ. ಸಮುದ್ರದಲ್ಲಿಯೇ ಅವರ ಜೀವವೂ, ದೇಹವೂ ಕಳೆದುಹೋಗುತ್ತದೆ.

ಏಪ್ರಿಲ್ 17ರಂದು ಮೆಡಿಟರೇನಿಯನ್ ಸಮುದ್ರದಲ್ಲಿ ನಡೆದ ದೋಣಿ ದುರಂತದಲ್ಲಿ ಸುಮಾರು 700 ವಲಸಿಗರು ಜಲಸಮಾಧಿಯಾದ ಘಟನೆ ಜಗತ್ತನ್ನು ತಲ್ಲಣಗೊಳಿಸಿತು. ಆದರೆ ಆ ಪ್ರದೇಶದ ಜನರಿಗೆ ಇಂಥ ಘಟನೆ ಹೊಸತಲ್ಲ. 400 ರಿಂದ 500 ಜನರು ಕೂರಬಹುದಾದ ಸಾಮಾನ್ಯ ದೋಣಿಯಲ್ಲಿ ಅದರ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಮಂದಿಯನ್ನು ತುಂಬಿಕೊಂಡು ಸಮುದ್ರ ದಾಟುವ ಸಾಹಸಕ್ಕೆ ಮುಂದಾದರೆ ಏನಾಗುತ್ತದೆ? ದೋಣಿಯಲ್ಲಿ ಕುಳಿತವರಿಗೂ ಎದುರಾಗಬಹುದಾದ ಅಪಾಯದ ಅರಿವಿತ್ತು.

ಹೀಗೆ ನೂರಾರು ಜನರನ್ನು ಕಿಕ್ಕಿರಿದು ತುಂಬಿಕೊಂಡ ದೋಣಿಗಳು ಮುಳುಗಿ ಮೃತದೇಹಗಳೂ ಸಿಗದಂತೆ ಜಗತ್ತಿನಿಂದ ದೂರಾದ ಹತ್ತಾರು ಭೀಕರ ಘಟನೆಗಳ ಇತಿಹಾಸ ಕಣ್ಣೆದುರಿಗೇ ಇದೆ. ಹೀಗಿದ್ದೂ ಅವರು ಮತ್ತೆ ಮತ್ತೆ ಈ ಸಾಹಸಕ್ಕೆ ಕೈಹಾಕುತ್ತಾರೆ, ಜೀವ ಕಳೆದುಕೊಳ್ಳುತ್ತಲೇ ಇರುತ್ತಾರೆ. ಹಾಗೆಯೇ ಜೀವ ಉಳಿಸಿಕೊಂಡ ಮಂದಿ ಐರೋಪ್ಯ ದೇಶಗಳತ್ತ ನುಗ್ಗುತ್ತಿದ್ದಾರೆ. ಈ ವಲಸಿಗರ ನುಸುಳುವಿಕೆಯು ಐರೋಪ್ಯ ದೇಶಗಳ ಒಕ್ಕೂಟಕ್ಕೆ ಹಲವು ದಶಕಗಳಿಂದಲೂ ಬಗೆಹರಿಯದ ತಲೆನೋವಾಗಿಯೇ ಉಳಿದಿದೆ.

ಆಫ್ರಿಕಾ, ಮಧ್ಯಪ್ರಾಚ್ಯದಿಂದ ಗುಳೆ: ಬಡತನ, ನಿರುದ್ಯೋಗ, ಕಾಯಿಲೆ, ಮಾದಕವಸ್ತುಗಳ ಜಾಲ, ಕೆಟ್ಟ ಆಡಳಿತ, ಆಹಾರದ ಕೊರತೆ- ಹೀಗೆ ಆಫ್ರಿಕಾದ ಹೆಚ್ಚಿನ ದೇಶಗಳಲ್ಲಿ ಹತ್ತಾರು ಸಮಸ್ಯೆಗಳು ತಾಂಡವವಾಡುತ್ತಿವೆ. ಮಧ್ಯಪ್ರಾಚ್ಯದ ದೇಶಗಳ ಜನರ ಬವಣೆಯೂ ಇದಕ್ಕಿಂತ ಭಿನ್ನವಲ್ಲ. ಈಗ ರಾಜಕೀಯ ಸಂಘರ್ಷ, ಭಯೋತ್ಪಾದನೆಗಳೂ ಇಲ್ಲಿನ ಜನರನ್ನು ಕಂಗೆಡಿಸುತ್ತಿವೆ. ತಮ್ಮ ದೇಶದಲ್ಲಿದ್ದು ಕಷ್ಟದ ನಡುವೆ ನರಳಿ ಸಾಯುವ ಬದಲು, ಬೇರೊಂದು ದೇಶದಲ್ಲಿ ಒಳ್ಳೆಯ ಬದುಕು ಕಂಡುಕೊಳ್ಳಬಹುದು ಎಂಬುದು ಈ ಭಾಗದ ಜನರ ಬಯಕೆ.

ಈ ಬಯಕೆ ಎಷ್ಟು ಅಪಾಯಕಾರಿ ಎಂದರೆ, ತಮ್ಮ ಜೀವವನ್ನು ಒತ್ತೆಯಿಡಲೂ ಹಿಂಜರಿಯುವುದಿಲ್ಲ. ಹೀಗಾಗಿಯೇ ಗುಂಪುಕಟ್ಟಿಕೊಂಡು ಸತ್ವಪರೀಕ್ಷೆಗೆ ಸಮುದ್ರಕ್ಕಿಳಿಯುತ್ತಾರೆ. ಈ ಹೋರಾಟಮಯ ಪಯಣದಲ್ಲಿ ಮತ್ತೆ ನೆಲ ಕಂಡರೆ ಅದು ಅವರ ಅದೃಷ್ಟ. ಈ ವಲಸಿಗರ ಗುರಿ ಐರೋಪ್ಯ ರಾಷ್ಟ್ರಗಳು. ಕೆಲವರು ಅದನ್ನು ಸೇರುವ ಮೊದಲೇ ಉಸಿರು ಕಳೆದುಕೊಳ್ಳುತ್ತಾರೆ. ಕನಿಷ್ಠ ಕೂಲಿಕೆಲಸವನ್ನಾದರೂ ಗಿಟ್ಟಿಸಿಕೊಳ್ಳಬಹುದು ಎಂಬ ಆಶಯವೂ ಅವರಲ್ಲಿರುತ್ತದೆ. ಉತ್ತರ ಆಫ್ರಿಕಾ, ಉಪ ಸಹರನ್ ಆಫ್ರಿಕಾದಿಂದ ಹೆಚ್ಚಿನವರು ವಲಸೆ ಹೋಗುತ್ತಾರೆ.

ಸಿರಿಯಾ, ಲಿಬಿಯಾ, ಮಾಲಿ, ನೈಜೀರಿಯಾ, ಸೋಮಾಲಿಯಾ, ಪ್ಯಾಲಿಸ್ಟೀನ್, ಎರಿಟ್ರಿಯಾ, ಗಾಂಬಿಯಾಗಳಿಂದ ಪ್ರತಿ ವರ್ಷ ಸಾವಿರಾರು ಜನ ವಲಸೆ ಹೋಗುತ್ತಾರೆ. ಇದಕ್ಕೆ ಆಯ್ದುಕೊಳ್ಳುವುದು ಮೆಡಿಟರೇನಿಯನ್ ಸಮುದ್ರ ಮಾರ್ಗವನ್ನು.

ಸಾವಿನ ಕೂಪ: ಕಳೆದ ಜನವರಿಯಿಂದ ಈ ಸಾಹಸದಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಲೆಕ್ಕಕ್ಕೆ ಸಿಕ್ಕ ಜೀವಕಳೆದುಕೊಂಡವರ ಸಂಖ್ಯೆ 3,072. ಅದಕ್ಕೇ ಮೆಡಿಟರೇನಿಯನ್ ಈಗ ‘ಸಾವಿನ ಕೂಪ’ ಎಂಬ ಕೆಟ್ಟ ಹೆಸರನ್ನು ಪಡೆದುಕೊಂಡಿದೆ. ಅದೆಷ್ಟು ಲಕ್ಷ ಮಂದಿಯ ದೇಹ ಮೆಡಿಟರೇನಿಯನ್ ಒಡಲಲ್ಲಿ ಸಿಲುಕಿದೆಯೋ ಲೆಕ್ಕವಿಲ್ಲ. ಈ ಏಪ್ರಿಲ್‌ನಲ್ಲಿಯೇ ಒಟ್ಟು ಐದು ದೋಣಿ ದುರಂತಗಳು ಸಂಭವಿಸಿವೆ. ಇದರಲ್ಲಿ ಸತ್ತವರ ಸಂಖ್ಯೆ 1,200ಕ್ಕೂ ಹೆಚ್ಚು. ಸಮುದ್ರದ ಕೇಂದ್ರ ಭಾಗದ ಮೂಲಕ ಯುರೋಪ್‌ಗೆ ಬೇಗನೆ ತಲುಪಬಹುದು. ಆದರೆ 2014ರಲ್ಲಿ ಮೃತಪಟ್ಟ 3,279 ಜನರ ಪೈಕಿ 2,447  ಮಂದಿ ಈ ಮಾರ್ಗದಲ್ಲಿ ಜೀವ ಕಳೆದುಕೊಂಡಿದ್ದರೆ, ಈ ವರ್ಷ ಈಗಾಗಲೇ 1,710 ಮಂದಿ ಪ್ರಾಣ ತೆತ್ತಿದ್ದಾರೆ.

ಐರೋಪ್ಯ ದೇಶಗಳ ಸಂಕಟ: ವಲಸಿಗರ ಅಂತರರಾಷ್ಟ್ರೀಯ ಸಂಸ್ಥೆಯ ಮಾಹಿತಿ ಪ್ರಕಾರ ಐರೋಪ್ಯ ದೇಶಗಳಲ್ಲಿ ನೆಲೆಸಿರುವ ಆಫ್ರಿಕಾ ವಲಸಿಗರ ಸಂಖ್ಯೆ ಸರಿಸುಮಾರು 4.6 ದಶಲಕ್ಷ. ಆದರೆ ವಲಸೆ ನೀತಿ ಸಂಸ್ಥೆ ಪ್ರಕಾರ ಇದು ಎಪ್ಪತ್ತು ಲಕ್ಷವನ್ನೂ ಮೀರಿದೆ. 2014ರಲ್ಲಿ 60,000 ಮಂದಿ ಯುರೋಪ್‌ ದೇಶಗಳ ತೀರ ಪ್ರವೇಶಿಸಿದ್ದರೆ, 2015ರಲ್ಲಿ ಈವರೆಗೆ 1.30 ಲಕ್ಷ ವಲಸಿಗರು ಕಾಲಿರಿಸಿದ್ದಾರೆ ಎನ್ನಲಾಗುತ್ತಿದೆ. ಹೀಗೆ ದಾಳಿಯಿಡುವ ಅಕ್ರಮ ವಲಸಿಗರನ್ನು ತಡೆಯುವುದು ಸುಲಭವಲ್ಲ. ಆರಂಭದ ದಿನಗಳಲ್ಲಿ ವಲಸಿಗರು ಈ ದೇಶಗಳಿಗೆ ಹೆಚ್ಚು ಲಾಭದಾಯಕವಾಗಿ ಕಂಡಿದ್ದರು.

ಏಕೆಂದರೆ ವಲಸಿಗರ ಮೂಲಕ ಕಡಿಮೆ ವೇತನಕ್ಕೆ ದುಡಿಯುವ ಕೆಲಸಗಾರರು ದೊರೆತಿದ್ದರು. ಈಗ ಪರಿಸ್ಥಿತಿ ತದ್ವಿರುದ್ಧ. ಇಟಲಿ, ಸ್ಪೇನ್‌, ಫ್ರಾನ್ಸ್‌, ಜರ್ಮನಿ ಮುಂತಾದ ದೇಶಗಳು ವಲಸೆ ನೀತಿಯನ್ನು ಕಠಿಣಗೊಳಿಸಿವೆ. ಇದಕ್ಕೆ ಅಪರಾಧ ಕೃತ್ಯಗಳಲ್ಲಿ ವಲಸಿಗರು ಹೆಚ್ಚಾಗಿ ಭಾಗಿಯಾಗುತ್ತಿರುವುದು. ಮಾದಕವಸ್ತು, ಮಾನವ ಕಳ್ಳಸಾಗಣೆಯಂತಹ ಕೃತ್ಯಗಳಲ್ಲಿ ವಲಸಿಗರ ಪಾಲು ಹಿರಿದು. ಇದು ಐರೋಪ್ಯ ದೇಶಗಳಲ್ಲಿ ದೊಡ್ಡ ಜಾಲವಾಗಿಯೂ ಬೆಳೆದಿದೆ. ಅವರನ್ನು ಪತ್ತೆಹಚ್ಚುವುದೂ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸತತವಾಗಿ ದೋಣಿ ದುರಂತಗಳು ಸಂಭವಿಸಿರುವುದರಿಂದ ಗುರುವಾರ ಯುರೋಪಿಯನ್ ಒಕ್ಕೂಟ ತನ್ನ 28 ಸದಸ್ಯ ದೇಶಗಳೊಂದಿಗೆ ತುರ್ತು ಸಮಾಲೋಚನಾ ಸಭೆ ನಡೆಸಿದೆ. ಮೆಡಿಟರೇನಿಯನ್ ತೀರದಲ್ಲಿ ಗಸ್ತು ಕಾವಲು ಪಡೆಯನ್ನು ಬಲಪಡಿಸಲು ಒಕ್ಕೂಟ ತೀರ್ಮಾನಿಸಿದೆ. ಅದಕ್ಕಾಗಿ ಹೆಚ್ಚು ಹಣ ವ್ಯಯಿಸಿ ಸೌಲಭ್ಯಗಳನ್ನು ನೀಡಲು ತೀರ್ಮಾನಿಸಲಾಗಿದೆ. ಯುರೋಪ್‌ನಲ್ಲಿ ನಿರಾಶ್ರಿತರಿಗೆ ಕೇವಲ 5 ಸಾವಿರ ಪುನರ್ವಸತಿ ಸ್ಥಳಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಹಾಗೆಯೇ ಮಾನವೀಯತೆ ದೃಷ್ಟಿಯಿಂದ ವಲಸಿಗರ ರಕ್ಷಣೆಗೆ ಧಾವಿಸಬೇಕೆಂಬ ಒತ್ತಾಯಗಳನ್ನು ಒಕ್ಕೂಟ ತಿರಸ್ಕರಿಸಿದೆ.

ತನ್ನ ಕರಾವಳಿ ತೀರದಿಂದ ಕಾವಲು ಪಡೆಗಳು 30 ಮೈಲು ದೂರದವರೆಗೆ ಮಾತ್ರ ಗಸ್ತು ತಿರುಗಲಿವೆ. ಆದರೆ ವಲಸಿಗರ ಜೀವ ರಕ್ಷಣೆ ನಮ್ಮ ಆದ್ಯತೆಯಾಗಲಾರದು ಎಂದು ಒಕ್ಕೂಟ ಸ್ಪಷ್ಟಪಡಿಸಿದೆ. ವಿಶ್ವಸಂಸ್ಥೆಯಾಗಲೀ, ಯುರೋಪಿಯನ್ ಒಕ್ಕೂಟವಾಗಲೀ ಅಕ್ರಮ ವಲಸಿಗರ ಪುನರ್‌ವಸತಿ ಸಂಬಂಧ ಸೂಕ್ತ ನೀತಿಯನ್ನು ನಿರ್ಧರಿಸುವಲ್ಲಿ ಇದುವರೆಗೂ ಸಫಲವಾಗಿಲ್ಲ. ಅತ್ತ ಮಾನವೀಯ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಒತ್ತಡವಾದರೆ, ಇತ್ತ ಸ್ಥಳಾವಕಾಶ, ಅಪರಾಧ ಚಟುವಟಿಕೆ ಹಾಗೂ ನಾಗರಿಕರ ವಿರೋಧದ ನಡುವೆಯೂ ಅವರಿಗೆ ಆಶ್ರಯ ನೀಡಬೇಕಾದ ಇಕ್ಕಟ್ಟಿನ ಸ್ಥಿತಿ ಈ ದೇಶಗಳದ್ದು.

ವಲಸೆ ಹೋಗುವವರನ್ನು ತಡೆಯಲು ಆಫ್ರಿಕಾದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತರುತ್ತಿದ್ದರೂ ಪ್ರಯೋಜನವಾಗಿಲ್ಲ. ಏಕೆಂದರೆ ಈ ದೇಶಗಳು ಆಂತರಿಕ ರಾಜಕೀಯ ಅಸ್ಥಿರತೆಯ ಸಂಘರ್ಷದಲ್ಲಿ ತೊಡಗಿವೆ. ವಲಸೆಗೆ ತೆರಳುವವರನ್ನು ಬಂಧಿಸುವ ಕಾರ್ಯದ ಹೊರತು ಬೇರಾವ ಪ್ರಮುಖ ನೀತಿಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗಿಲ್ಲ. ಹೀಗಾಗಿ ಇದು ಕಗ್ಗಂಟಾಗಿಯೇ ಉಳಿದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT