ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಹಗಾರರಿಗೆ ನಿರ್ಬಂಧ ಬೇಡ: ಸಿದ್ಧಲಿಂಗಯ್ಯ

Last Updated 4 ಅಕ್ಟೋಬರ್ 2015, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಲೇಖಕನಿಗೆ ಇದನ್ನು ಬರೆಯಬಾರದು, ಇದನ್ನೇ ಬರೆಯಬೇಕು ಎಂದು ನಿರ್ಬಂಧ ಹಾಕುವುದರಿಂದ ಸಾಹಿತ್ಯ ದುರ್ಬಲವಾಗುತ್ತದೆ. ಆದ್ದರಿಂದ, ಉತ್ತಮ ಸಾಹಿತ್ಯ ರಚನೆಗೆ ಅಗತ್ಯವಾದ ಸ್ವಾತಂತ್ರ್ಯ ಕವಿ, ಸಾಹಿತಿಗಳಿಗೆ ಇರಬೇಕು’ ಎಂದು ಕವಿ ಸಿದ್ಧಲಿಂಗಯ್ಯ ಪ್ರತಿಪಾದಿಸಿದರು.

ಅಂಕಿತ ಪುಸ್ತಕ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬರಹಗಾರರ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ. ಅದರಿಂದಾಗಿ ಒಂದು ಮಿತಿಯೊಳಗೆ ರಚನೆಯಾಗುವ ಬರವಣಿಗೆ ಚಳವಳಿಯ ಮಟ್ಟಕ್ಕೆ ಹೋಗಿ ನಿಲ್ಲುತ್ತದೆ ವಿನಾ ಸಾಹಿತ್ಯವಾಗಿ ಉಳಿಯುವುದಿಲ್ಲ.  ಬರಹಗಾರರು ಕೂಡ ಯಾವುದೇ ಪೂರ್ವಗ್ರಹಗಳಿಗೆ ಕಟ್ಟುಬೀಳದೆ ಸ್ವತಂತ್ರವಾಗಿ ಸಾಹಿತ್ಯ ರಚನೆ ಮಾಡಬೇಕು’ ಎಂದು ಹೇಳಿದರು.

ನಿರ್ದೇಶಕ ಟಿ.ಎನ್.ಸೀತಾರಾಮ್‌ ಮಾತನಾಡಿ, ‘ಈಗಾಗಲೇ ಸಮಾಜ 2 ಗುಂಪು ಆಗಿರುವುದರಿಂದ ಸಾಮಾನ್ಯವಾಗಿ ಏನನ್ನಾದರೂ ಮಾತನಾಡಲು ಸಾಧ್ಯವಿಲ್ಲ ಎನ್ನುವ ಸ್ಥಿತಿಗೆ ನಾವು ತಲುಪಿದ್ದೇವೆ. ಒಂದೊಮ್ಮೆ, ಆಡಿದ ಮಾತು ಸ್ವಲ್ಪ ಏರುಪೇರಾದರೂ ಎರಡು ಕಡೆಗಳಿಂದ ವಿಷದ ಬಾಣಗಳು ತೂರಿಬರುತ್ತವೆ. ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೃಶ್ಯ ಮಾಧ್ಯಮಗಳ ಮೂಲಕ ನಿತ್ಯ ಮೂಡಿಬರುವ ಅಬ್ಬರದ ಧಾರಾವಾಹಿಗಳಿಂದ ಇವತ್ತು ನಾವು ಸೂಕ್ಷ್ಮತೆ ಕಳೆದುಕೊಂಡು ಸಾಹಿತ್ಯ, ಸಂಸ್ಕೃತಿಗೆ ಬಹಳ ಅಸೂಕ್ಷ್ಮರಾಗಿಬಿಟ್ಟಿದ್ದೇವೆ. ಈ ಸನ್ನಿವೇಶದಲ್ಲಿ ಅಸೂಕ್ಷ್ಮರಾದವರನ್ನು ಮತ್ತೆ ಸೂಕ್ಷ್ಮಕ್ಕೆ ಒಗ್ಗಿಸುವ ಕಷ್ಟದ ಕೆಲಸವನ್ನು ಜೋಗಿ ತಮ್ಮ ಬರವಣಿಗೆ ಮೂಲಕ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ವಿಮರ್ಶಕ ನಾ.ದಾಮೋದರ ಶೆಟ್ಟಿ ಮಾತನಾಡಿ, ‘ಹಾಸ್ಯವಾಗಿ ಮಾತನಾಡುವವರಿಗೆ ಚೆನ್ನಾಗಿ ಬರೆಯಲು ಬರುವುದಿಲ್ಲ. ಆದರೆ, ಮಾತು ಮತ್ತು ಬರವಣಿಗೆ ಎರಡು ಚೆನ್ನಾಗಿರುವ ವೈಶಿಷ್ಟ್ಯ ಡುಂಡಿರಾಜ್‌ ಅವರಲ್ಲಿದೆ. ಇದರಿಂದಾಗಿಯೇ ಅವರು ಜನಪ್ರಿಯ ಕವಿಯಾಗಿದ್ದಾರೆ’ ಎಂದು ಹೇಳಿದರು.

‘‘ಬೋಳಾಯ ತಸ್ಮೈ ನಮಃ’ ಕೃತಿಯಲ್ಲಿ ಅನೇಕ ಬಗೆಯ ಲಘುದಾಟಿಯಲ್ಲಿ ಕಾಣಿಸುವ ದೊಡ್ಡ ಪ್ರಮಾಣದ ಗುದ್ದುಕೊಡುವ ಶಕ್ತಿಯುಳ್ಳ ಸರಳ ರೀತಿವಿಭಿನ್ನವಾದ ಪ್ರಬಂಧಗಳಿವೆ’ ಎಂದರು.

ಬಿಡುಗಡೆಗೊಂಡ ಪುಸ್ತಕಗಳು
* ಪತ್ರಕರ್ತ ಜೋಗಿ ಅವರ ‘ವಿರಹದ ಸಂಕ್ಷಿಪ್ತ ಪದಕೋಶ’ (ಕಾದಂಬರಿ), ‘ಜಾನಕಿ ಕಾಲಂ’ (ಅಂಕಣ ಬರಹಗಳು).

* ಡುಂಡಿರಾಜ್‌ ಅವರ ‘ಬೋಳಾಯ ತಸ್ಮೈ ನಮಃ’ (ಲಘು ಲೇಖನಗಳು).
* ಪಾರ್ವತಿ ಜಿ. ಐತಾಳ್‌ ಅವರು ಅನುವಾದಿಸಿರುವ ‘ಮಲಯಾಳಂ ಮಿನಿ ಕಥೆಗಳು’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT