ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಎದುರಿಸಿದ ದೇಸಿ ಬಂಗಾರ!

Last Updated 21 ಮಾರ್ಚ್ 2016, 19:48 IST
ಅಕ್ಷರ ಗಾತ್ರ

ರಾಯಚೂರು, ಬಳ್ಳಾರಿ, ಹಾವೇರಿ ಪ್ರದೇಶದಲ್ಲಿ ಈಗ ಗರ ಬಡಿದಂಥ ಸ್ಥಿತಿ. ಗುಲಾಬಿ ಕಾಯಿಕೊರಕ ಹಾಗೂ ರಸಹೀರುವ ಕೀಟ ಬಾಧೆಗೆ ಸಿಲುಕಿ, ಬಿಟಿ ಹತ್ತಿ ಸಂಪೂರ್ಣ ನಾಶವಾಗಿದೆ. ಹತ್ತಿ ಗಿಡಗಳು ಪೊರಕೆ ಕಡ್ಡಿಗಳಂತೆ ಪೇಲವವಾಗಿ ನಿಂತಿವೆ; ಥೇಟ್ ರೈತರ ಮುಖದಂತೆ... ಬಣ್ಣಬಣ್ಣದ ಕನಸುಗಳನ್ನು ಬಿತ್ತಿದ್ದ ಬಿಟಿ ಹತ್ತಿಯ ಅಸಲಿ ಬಣ್ಣ ಬಯಲಾಗಿದೆ.

ಆ ದಿಕ್ಕಿಗೆ ವಿರುದ್ಧವಾಗಿ ನಡೆದ ಕಾಟ್ರಹಳ್ಳಿ ಕಲ್ಲಪ್ಪ, ದೇಸಿ ಹತ್ತಿ ಯಶೋಗಾಥೆಯ ಹೀರೊ! ಬರೀ ಬಿಟಿ ಹತ್ತಿ, ಮೆಕ್ಕೆಜೋಳವನ್ನು ನೆಚ್ಚಿಕೊಂಡು ವಾಣಿಜ್ಯ ಕೃಷಿಯ ಬೆನ್ನು ಹತ್ತಿದವರೆಲ್ಲ ಕೈಸುಟ್ಟುಕೊಂಡು ಪರಿತಪಿಸುತ್ತಿರುವಾಗ, ಕಲ್ಲಪ್ಪ ದೇಸಿ ತಳಿಯ ಫಲ ಸವಿಯುತ್ತಿದ್ದಾರೆ. ಕೊಳವೆ ಬಾವಿ ಕೊರೆಸಿ, ರಾಸಾಯನಿಕ ನಂಬಿ, ಹೈಬ್ರಿಡ್ ಬೆಳೆ ಬೆಳೆಯುವುದು ಸಾಧನೆಯೇನಲ್ಲ. ಆದರೆ ಮಳೆಯಾಶ್ರಯದಲ್ಲಿ ಬಹುಬೆಳೆ ಪದ್ಧತಿ ಅಳವಡಿಸಿಕೊಂಡು ಕಲ್ಲಪ್ಪ ಪಡೆದ ಯಶಸ್ಸು ರೈತರಿಗೆ ಮಾದರಿಯಾಗಬಲ್ಲದು. ಬರಕ್ಕೇ ಸವಾಲು!

‘ಮಳೆಯಿಲ್ಲ. ಹಾಗೆಂದು ಬರ ಕೂಡ ಇಲ್ಲ’ ಎನ್ನುವ ಕಲ್ಲಪ್ಪ ಅವರ ಮಾತುಗಳಲ್ಲಿ ಕೃಷಿ ಯಶಸ್ಸಿನ ದಾರಿಯಿದೆ. ಬಳ್ಳಾರಿ ಜಿಲ್ಲೆ ಹಡಗಲಿ ತಾಲ್ಲೂಕಿನ ಉತ್ತಂಗಿ ಗ್ರಾಮದ ಈ ರೈತ, ಕೇವಲ ಮಳೆಯನ್ನು ನಂಬಿ ತೆಗೆಯುತ್ತಿರುವ ಬೆಳೆಗಳನ್ನು ಒಮ್ಮೆ ಗಮನಿಸಿ: ನವಣೆ, ದೇಸಿ ಹತ್ತಿ, ಕಡಲೆ, ಧನಿಯಾ (ಕೊತ್ತಂಬರಿ), ಹೆಸರು, ತೊಗರಿ, ತರಕಾರಿಗಳಾದ ಪುಂಡಿ, ಹೀರೇಕಾಯಿ, ಹುಳಿಚಿಕ್ಕಿ, ಚವಳಿ, ತುಪ್ಪದ ಹೀರೆ ಇತ್ಯಾದಿ. ಸುತ್ತಲಿನ ರೈತರೆಲ್ಲ ಬಿಟಿ ಹತ್ತಿ ಬೆಳೆದು ಸೋತು ನಿಟ್ಟುಸಿರು ಬಿಡುತ್ತಿದ್ದರೆ, ಕಲ್ಲಪ್ಪ ಅವರ ಮೊಗದಲ್ಲಿ ಬಹುಬೆಳೆ ಯಶಸ್ಸಿನ ನಗು ಕಾಣುತ್ತದೆ.

ಒಟ್ಟು 16 ಎಕರೆಯಲ್ಲಿ ತಲಾ ಎಂಟು ಎಕರೆ ಕಪ್ಪು ಹಾಗೂ ಕೆಂಪು ಜಮೀನು ಇವರದು. ಕಪ್ಪುಮಣ್ಣಿನಲ್ಲಿ ಧನಿಯಾ–ದೇಸಿ ಹತ್ತಿ– ಕಡಲೆ ಬೆಳೆ ಸಂಯೋಜಿಸಿದ್ದಾರೆ. ಅವರ ಕೃಷಿ ವಿಧಾನ ಸರಳ. ಆಗಸ್ಟ್ ಮಧ್ಯಭಾಗದಲ್ಲಿ ಧನಿಯಾವನ್ನು ಮೂರು ಸಾಲುಗಳಲ್ಲಿ ಬಿತ್ತನೆ ಮಾಡುತ್ತಾರೆ. ಬಳಿಕ ಒಂದು ಸಾಲು ಖಾಲಿ ಬಿಟ್ಟು, ಮತ್ತೆ ಧನಿಯಾ ಬಿತ್ತುತ್ತಾರೆ.

ಅಕ್ಟೋಬರ್ ಮೊದಲ ವಾರದ ಹೊತ್ತಿಗೆ ಖಾಲಿ ಸಾಲಿನಲ್ಲಿ ಹತ್ತಿ ಬಿತ್ತುತ್ತಾರೆ. ಅ ಸಮಯದಲ್ಲಿ ಧನಿಯಾ ಬೀಜ ಬಲಿಯುವ ಹಂತದಲ್ಲಿ ಇರುತ್ತದೆ. ನವೆಂಬರ್ ತಿಂಗಳಲ್ಲಿ ಅದನ್ನು ಕಟಾವು ಮಾಡಿ, ಆ ಜಾಗದಲ್ಲಿ ಹಿಂಗಾರು ಬೆಳೆಯಾಗಿ ಕಡಲೆ ಬಿತ್ತುತ್ತಾರೆ. ಹಿಂಗಾರು ಹಂಗಾಮಿನ ಬೆಳೆಯಾಗಿ ಕಡಲೆ ಹಾಗೂ ಹತ್ತಿ ಉಳಿಯುತ್ತದೆ.

‘ನಮ್ದು ಖರ್ಚಿಲ್ಲದ ಬೇಸಾಯ’ ಎನ್ನುವ ಕಲ್ಲಪ್ಪ, ಪದೇ ಪದೇ ಗೊಬ್ಬರ ಸುರಿಯುವ ಗೋಜನ್ನು ಅಂಟಿಸಿಕೊಂಡಿಲ್ಲ. ಎಕರೆಗೆ ಒಂದರಂತೆ ಮೂರು ಟ್ರ್ಯಾಕ್ಟರ್ ಗೊಬ್ಬರವನ್ನು ಮೊದಲ ಮೂರು ಎಕರೆಗೆ ಹಾಕುತ್ತಾರೆ. ಮುಂದಿನ ವರ್ಷ ಮತ್ತೆ ಬೇರೆ ಮೂರು ಎಕರೆಗೆ ಅಷ್ಟೇ ಗೊಬ್ಬರವನ್ನು ಸುರಿಯುತ್ತಾರೆ. ಉಳಿದಂತೆ ಸಸ್ಯ ಬೆಳವಣಿಗೆ ಹಂತದಲ್ಲಿ ಇದ್ದಾಗ, ಎಕರೆಗೆ ಒಂದು ಕ್ವಿಂಟಲ್ ಘನ ಜೀವಾಮೃತ ಕೊಡುತ್ತಾರೆ.

ಇಷ್ಟು ಬಿಟ್ಟರೆ ಮತ್ತೇನೂ ಒಳಸುರಿಗಳಿಲ್ಲ. ಬೆಳೆಗೆ ಕೀಟಗಳ ಕಾಟವಿಲ್ಲ; ರೋಗಗಳ ಬಾಧೆಯಿಲ್ಲ. ಎಂಟು ಎಕರೆ ಕಪ್ಪು ಮಣ್ಣಿನಲ್ಲಿ ಪಡೆದ ಇಳುವರಿ ಲೆಕ್ಕವನ್ನು ಅವರು ಕೊಡುವುದು ಹೀಗೆ: ಆರು ಕ್ವಿಂಟಲ್ ಧನಿಯಾ ₹ 78 ಸಾವಿರ; ಐದು ಕ್ವಿಂಟಲ್ ಕಡಲೆ ₹ 27 ಸಾವಿರ; 16ರಿಂದ 18 ಕ್ವಿಂಟಲ್ ದೇಸಿ ಹತ್ತಿಯಿಂದ ₹ 72 ಸಾವಿರ. ಹೆಚ್ಚೂಕಡಿಮೆ ಒಂದೂ

ಮುಕ್ಕಾಲು ಲಕ್ಷ ಆದಾಯ; ಎಕರೆಗೆ ಬರೋಬ್ಬರಿ ₹ 22 ಸಾವಿರ ಗಳಿಕೆ! ಸರ್ಕಾರದ ಸಬ್ಸಿಡಿಯ ಹಂಗಿಲ್ಲದೇ, ಮಳೆರಾಯನ ಮೇಲೆ ಮುನಿಸು ತೋರದೇ ದೇಸಿ ಬಂಗಾರ ನಂಬಿದ ಕಲ್ಲಪ್ಪನ ಮೊಗದಲ್ಲಿ ಸಂತಸ ಮೂಡದೇ ಇನ್ನೇನು?

ಮಣ್ಣು ಹೊನ್ನು
ಕಲ್ಲಪ್ಪ ಅವರ ಬೆಳೆ ಸಂಯೋಜನೆಯಲ್ಲಿ ಅಡಗಿರುವ ಜಾಣತನ ಏನೆಂದರೆ, ಮಣ್ಣಿನ ವಿವಿಧ ಪದರುಗಳಲ್ಲಿನ ಪೋಷಕಾಂಶ ಹಾಗೂ ತೇವಾಂಶದ ಸಮರ್ಥ ಬಳಕೆ. ಮಣ್ಣಿನ ಮೇಲ್ಪದರಿನಲ್ಲಿರುವ ಪೋಷಕಾಂಶ– ತೇವಾಂಶವನ್ನು ಕೊತ್ತಂಬರಿ ಹಾಗೂ ಕಡಲೆ ಬೆಳೆಗಳು ಬಳಸಿಕೊಂಡರೆ, ಅದಕ್ಕಿಂತ ಕೆಳಗಿನ ಪದರದಲ್ಲಿ ಲಭ್ಯವಿರುವ ಶಕ್ತಿಯನ್ನು ಹತ್ತಿ ಗಿಡಗಳು ಬಳಸಿಕೊಳ್ಳುತ್ತವೆ. ಒಂದಕ್ಕೊಂದು ಬೆಳೆ ಸ್ಪರ್ಧೆಯೊಡ್ಡಿಕೊಳ್ಳದೇ ಬೆಳೆಯುತ್ತವೆ. ಕಡಲೆಯು ಸಾರಜನಕ ಸ್ಥಿರೀಕರಣ (ನೈಟ್ರೋಜೆನ್ ಫಿಕ್ಸಿಂಗ್) ಮಾಡುವುದರಿಂದ ಹತ್ತಿ ಚೆನ್ನಾಗಿ ಬೆಳೆಯಲು ನೆರವಾಗುತ್ತದೆ.

ಅಕ್ಕಡಿ ಹಾಗೂ ಮಿಶ್ರ ಬೆಳೆ ಪದ್ಧತಿಯಲ್ಲಿ ಬೆಳೆಯುತ್ತಿದ್ದ ದೇಸಿ ಹತ್ತಿ ಕೃಷಿಗೆ ತಿಲಾಂಜಲಿ ನೀಡಿ ಏಕಬೆಳೆ ಪದ್ಧತಿಯ ಬಿಟಿ ಹತ್ತಿ ಪದ್ಧತಿಗೆ ಪರಿವರ್ತನೆಯಾಗಿದ್ದೇ ಈಗಿನ ಸಂಕಷ್ಟಕ್ಕೆ ಕಾರಣ. ಈ ವರ್ಷವಂತೂ ಗುಲಾಬಿ ಕಾಯಿಕೊರಕದಿಂದಾಗಿ ಬಿಟಿ ಹತ್ತಿ ಸಂಪೂರ್ಣ ನಾಶವಾಗಿದೆ. ಸಾಲ ಮಾಡಿ, ಕೊಳವೆ ಬಾವಿ ಕೊರೆಸಿ, ದುಬಾರಿ ಬೀಜ, ಗೊಬ್ಬರ ಖರೀದಿಸಿ ಹತ್ತಿ ಬೆಳೆದಿದ್ದ ರೈತರು ಹತಾಶರಾಗಿದ್ದಾರೆ. ಬಹುತೇಕ ಕಡೆ ಕಾಯಿ ಒಡೆದೇ ಇಲ್ಲ. ಬೆಳೆದಿರುವ ಕಾಯಿಯಲ್ಲಿನ ಹತ್ತಿ ಗುಣಮಟ್ಟ ತೀರಾ ಕಡಿಮೆ.

ಹೀಗಾಗಿ ಖರೀದಿದಾರರೂ ಅತ್ತ ಸುಳಿಯುತ್ತಿಲ್ಲ. ಬೆಳೆ ನಷ್ಟಕ್ಕೆ ಪರಿಹಾರವನ್ನು ಸರ್ಕಾರ ಕೊಡಬೇಕೋ? ಬೀಜ ಕಂಪೆನಿಗಳು ನೀಡಬೇಕೋ? ರೈತರ ಹೋರಾಟ ಇನ್ನೂ ಜಾರಿಯಲ್ಲಿದೆ! ಸುಸ್ಥಿರ ಹಾದಿಯಲ್ಲಿ ನಡೆಯುತ್ತಿರುವ ಕಲ್ಲಪ್ಪ ಅವರಿಗೆ ಈ ವಿಧಾನದಲ್ಲಿ ಆರು ವರ್ಷಗಳ ಅನುಭವವಿದೆ. ‘ಸ್ನೆಡ್ಸ್’ ಸ್ವಯಂಸೇವಾ ಸಂಸ್ಥೆಯ ಅನಿತಾ ಎಂಬುವವರ ಮಾರ್ಗದರ್ಶನದಲ್ಲಿ ಅವರು ಈ ವಿಧಾನದತ್ತ ಹೆಜ್ಜೆ ಹಾಕಿದರು.

ಮುಂದಿನ ದಿನಗಳಲ್ಲಿ ‘ಸಹಜ ಸಮೃದ್ಧ’ ಸಾವಯವ ಕೃಷಿಕರ ಬಳಗದ ಜತೆ ಸೇರಿ ದೇಸಿ ಬೀಜ ಸಂರಕ್ಷಣೆಯನ್ನೂ ಕೈಗೊಂಡರು. ಅದರ ಹಿನ್ನೆಲೆಯಲ್ಲಿ ಅವರು ಜಯಧರ, ಪಂಢರಾಪುರ ಮೊದಲಾದ ದೇಸಿ ಹತ್ತಿ ಬೇಸಾಯ ಶುರು ಮಾಡಿದರು.  ಕಲ್ಲಪ್ಪ ಅವರ ಕೃಷಿಗೆ ಮಡದಿ ಸುಮಂಗಲಾ ಕೈಜೋಡಿಸುತ್ತಾರೆ. ಮನೆಯಲ್ಲೇ ಬೇಳೆ, ಹಿಟ್ಟು ಮೌಲ್ಯವರ್ಧನೆ ಮಾಡುವ ಕೆಲಸ ಇವರದು. ಅಪರೂಪದ ಕಪ್ಪು ನವಣೆ ಸಂಗ್ರಹ ಇವರಲ್ಲಿದೆ. ಬೆಳೆಯುವುದಷ್ಟೇ ಅಲ್ಲ; ಮಾರುಕಟ್ಟೆಯ ತಂತ್ರವೂ ಈ ದಂಪತಿಗೆ ಸಿದ್ಧಿಸಿದೆ.

ಸಾವಯವ ಮೇಳಗಳಲ್ಲಿ ಅವರು ತಮ್ಮ ಉತ್ಪನ್ನ ಮಾರುತ್ತಾರೆ. ಸಿರಿಧಾನ್ಯಗಳನ್ನು ಬೆಂಗಳೂರಿನ ‘ಸಹಜ ಆರ್ಗಾನಿಕ್ಸ್‌’ಗೆ ಪೂರೈಸುತ್ತಾರೆ. ಇವರು ಬೆಳೆಯುವ ದೇಸಿ ಹತ್ತಿಯನ್ನು ಖರೀದಿಸುವ ಚೆನ್ನೈನ ‘ತುಲಾ’ ದೇಸಿ ಹತ್ತಿ ಮಾರುಕಟ್ಟೆ ಕಂಪೆನಿ, ಅದನ್ನು ಬಟ್ಟೆಯಾಗಿಸುತ್ತಿದೆ.

‘ನಮ್ಮ ನೆಲಕ್ಕೆ ಈಗ ಬರುವ ಮಳೆ ಸಾಕು. ಆದರೆ ನಮ್ಮ ಜವಾರಿ ಬೆಳೆ ಮರೆತಿದ್ದಕ್ಕೆ ಇಷ್ಟೆಲ್ಲ ತೊಂದರೆ ಆಗಿದೆ. ನಾವಂತೂ ಕೊಳವೆ ಬಾವಿ ಇಲ್ಲದೆಯೇ ಕಡಿಮೆ ಖರ್ಚಿನಲ್ಲಿ ಬೆಳೆ ತೆಗೆಯುತ್ತಿದ್ದೇವೆ. ನಮಗೆ ಕೊಟ್ಟಿದ್ದನ್ನು ಭೂಮಿತಾಯಿ ಬೇರೆಯವರಿಗೆ ಯಾಕೆ ಕೊಡುವುದಿಲ್ಲ ಹೇಳಿ?’ ಎನ್ನುವ ಕಲ್ಲಪ್ಪನ ಮಾತು, ರೈತರಿಗೆ ಕೇಳಿಸೀತೆ? ಕಲ್ಲಪ್ಪ ಅವರ ಸಂಪರ್ಕ ಸಂಖ್ಯೆ: 9739191437.

ದೇಸಿ ಹತ್ತಿಗೆ ಸಾಕಷ್ಟು ಬೇಡಿಕೆಯಿದೆ. ಆದರೆ ಅದನ್ನು ಬಳಸಿಕೊಳ್ಳುವಲ್ಲಿ ಮಾತ್ರ ಯಾರಿಗೂ ಉತ್ಸಾಹವಿಲ್ಲ. ಅದರಲ್ಲೂ ವೈದ್ಯಕೀಯ ಉದ್ದೇಶಗಳಿಗೆ ಬಳಸುವ ‘ಸರ್ಜಿಕಲ್ ಕಾಟನ್’ಗೆ ಭಾರತದ ದೇಸಿ ಹತ್ತಿ ಹೇಳಿ ಮಾಡಿಸಿದಂಥದು.

ಕಪ್ಪುಮಣ್ಣಿನ ಗುಣಲಕ್ಷಣ ಹೀಗಿದೆ! ಹೊಲದ ತುಂಬೆಲ್ಲ ಒಂದೆರಡು ಅಡಿ ಆಳದ ಬಿರುಕು ಸಾಮಾನ್ಯ. ಸಸ್ಯದ ಬೇರುಗಳು ಆಳಕ್ಕೆ ಇಳಿದು, ತೇವಾಂಶ– ಪೋಷಕಾಂಶ ಹೀರಲು ಸುಲಭವಾಗುತ್ತದೆ.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಹತ್ತಿ ತಳಿ ವಿಜ್ಞಾನಿ ಡಾ. ಜಯಪ್ರಕಾಶ ನಿಡಗುಂದಿ ಅವರಿಗೆ ದೇಸಿ ಹತ್ತಿ ತಳಿ ಮೇಲೆ ಬಲು ವಿಶ್ವಾಸ. `ಮಳೆಯಾಶ್ರಯದಲ್ಲಿ ದೇಸಿ ಹತ್ತಿಯಂಥ ಗಡಸು ತಳಿಗಳೇ ಕೃಷಿಗೆ ಸೂಕ್ತ. ಆಳವಾಗಿ ಬೇರು ಬಿಡುವ ದೇಸಿ ಹತ್ತಿ ಗಿಡಗಳು ಕೀಟ- ರೋಗ ನಿರೋಧಕ ಸಾಮರ್ಥ್ಯ ಪಡೆದಿವೆ. ಕನಿಷ್ಠ 6 ರಿಂದ 8 ಕ್ವಿಂಟಲ್ ಇಳುವರಿ ಕೊಡುತ್ತದೆ’ ಎನ್ನುತ್ತಾರೆ ಡಾ. ನಿಡಗುಂದಿ. ಕೃಷಿ ವಿವಿ ಸಂಗ್ರಹದಲ್ಲಿದ್ದ 60 ದೇಸಿ ಹತ್ತಿ ತಳಿ ಬೆಳೆಸಿ, ಮೌಲ್ಯಮಾಪನ ಮಾಡಿ ರೈತರಿಗೆ ಸಿಗುವಂತೆ ಮಾಡಿದ್ದಾರೆ.

ಅಂದ ಹಾಗೆ, ರೈತರೇ ಬೀಜೋತ್ಪಾದನೆ ಮಾಡಿಕೊಳ್ಳಬಹುದಾದ RAHS14, 751, 752 ಎಂಬ ದೇಸಿ ಹತ್ತಿಯ ಸುಧಾರಿತ ತಳಿಗಳನ್ನು ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ. ಈ ಬಾರಿಯ ಹಂಗಾಮಿನಲ್ಲಿ ಕಲ್ಲಪ್ಪ ಅವರಿಗೆ RAHS751 ತಳಿ ಕೊಡಲಾಗಿದ್ದು, ಅವರು ಅದನ್ನು ಯಶಸ್ವಿಯಾಗಿ ಬೆಳೆದಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT