ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ: ಐದು ದಿಕ್ಕು, ಒಂದು ಧ್ವನಿ

ವಿಮರ್ಶೆ
Last Updated 21 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಇತ್ತೀಚೆಗೆ ಪ್ರಕಟಗೊಂಡ ಕ.ವೆಂ. ರಾಜಗೋಪಾಲ ಅವರ ‘ಕಲ್ಯಾಣದ ಕೊನೆಯ ದಿನಗಳು’ ಕೃತಿಯವರೆಗೆ ಕಲ್ಯಾಣದಲ್ಲಿ ನಡೆಯಿತೆನ್ನಲಾದ ಕ್ರಾಂತಿಯನ್ನು ಕುರಿತು ಹಲವು ಕಾದಂಬರಿಗಳು ಮತ್ತು ನಾಟಕಗಳು ರಚಿತವಾಗಿವೆ. ಕಲ್ಯಾಣಕ್ರಾಂತಿಯನ್ನು ಕುರಿತ ನಾಟಕಗಳ ಪೈಕಿ ಪ್ಯಾಟಿಮಠ, ಮಹದೇವಯ್ಯ ಟಿ.ಆರ್., ಏಣಗಿ ಬಾಳಪ್ಪ, ಮಲ್ಲನಗೌಡ ಪಾಟೀಲ, ಬೆಳ್ಳಾವೆ ನರಹರಿ ಶಾಸ್ತ್ರಿ ಅವರುಗಳು ನಾಟಕಗಳನ್ನು ಬರೆದಿದ್ದಾರೆ.

ಬಳೂರ ಅವರ ‘ಬಸವೇಶ್ವರ’ ಮತ್ತು ಅ.ನ.ಕೃ. ಅವರ ‘ಜಗಜ್ಯೋತಿ ಬಸವೇಶ್ವರ’ ನಾಟಕಗಳನ್ನು ಹೊರತುಪಡಿಸಿ, 1973ರಿಂದ 2011ರ ನಡುವೆ ರಚಿತವಾಗಿ ವಿದ್ವಾಂಸರ ಮತ್ತು ವಿಮರ್ಶಕರ ಮೆಚ್ಚುಗೆ ಮತ್ತು ಟೀಕೆಗಳಿಗೆ ಗುರಿಯಾದ ಐದು ನಾಟಕಗಳ ಪರಾಮರ್ಶೆಗೆ ಈ ‘ಬಸವಣ್ಣ: ಪುನರ್ಲೇಖ’ದಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ.

ಸೃಜನಶೀಲ ಬರಹಗಾರರಿಗೆ ಹೇಗೋ ಹಾಗೆ ಇತಿಹಾಸಕಾರರಿಗೂ ಬಸವಣ್ಣ ಪ್ರಿಯವಾದ ಪಾತ್ರ. ಸಮಕಾಲೀನ ಶಾಸನಗಳಲ್ಲಿ ಬಸವಣ್ಣನ ಹೆಸರಿಲ್ಲ ಎಂಬ ಕಾರಣಕ್ಕೆ ಅದು ಐತಿಹಾಸಿಕ ಪಾತ್ರವಲ್ಲ ಎಂಬ ಆಕ್ಷೇಪಗಳು ಈಗ ಇಲ್ಲ. ಅವರ ನಂತರದ ಎರಡನೆಯ ತಲೆಮಾರಿನ ಹಾಲಬಸವಿದೇವನ ಅರ್ಜುನವಾಡ ಶಾಸನದಲ್ಲಿ ‘ಸಂಗನ ಬಸವನ’ ಉಲ್ಲೇಖವಿದೆ.

ನಂತರದ ಹನ್ನೊಂದಕ್ಕೂ ಹೆಚ್ಚು ಶಾಸನಗಳಲ್ಲಿ ಬಸವಣ್ಣನವರ ಹೆಸರು ಉಲ್ಲೇಖಗೊಂಡಿದೆ. ಅರ್ಜುನವಾಡದ ಶಾಸನ ದೊರೆಯುವುದಕ್ಕೂ ಮೊದಲೇ ಬಸವಣ್ಣನವರನ್ನು ಶೂನ್ಯಸಂಪಾದನೆ, ಅವರ ವಚನಗಳು ಮತ್ತು ಅವರನ್ನು ಕುರಿತು ರಚಿತವಾದ ಹಲವು ಸಾಹಿತ್ಯಕೃತಿಗಳ ಮೂಲಕ ಐತಿಹಾಸಿಕ ವ್ಯಕ್ತಿ ಎಂದು ಒಪ್ಪಿಕೊಳ್ಳಲಾಗಿತ್ತು. ಕೆಳದಿಯ ಬಸವರಾಜನ (ಶಿವತತ್ತ್ವ ರತ್ನಾಕರ) ಕಾಲಕ್ಕೆ ಬಸವಣ್ಣನವರು ನಂದಿಯ ಅವತಾರವಾಗಿ ವರ್ಣಿತರಾಗಿದ್ದರು.

ಕಾಲದಿಂದ ಕಾಲಕ್ಕೆ ಬಸವಣ್ಣನವರನ್ನು ಬೇರೆಬೇರೆ ದೃಷ್ಟಿಗಳಿಂದ ಕಾಣುವ ನಿರಂತರ ಪ್ರಯತ್ನ ನಡೆದಿದೆ. 1889ರಿಂದಲೂ ಬಸವಣ್ಣನವರನ್ನು ಕುರಿತಂತೆ ಲೇಖನಗಳು ಮತ್ತು ಕೃತಿಗಳು ಪ್ರಕಟವಾಗುತ್ತಲೇ ಇವೆ. ಇಷ್ಟಾದರೂ ಬಸವಣ್ಣನವರನ್ನು ಕುರಿತು ಬರೆಯಲು ಇನ್ನೂ ಅವಕಾಶಗಳಿವೆ. ಒಂದು ಅರ್ಥದಲ್ಲಿ ಬಸವಣ್ಣನವರ ವಿಷಯ ಸಂಶೋಧಕರಿಗೆ, ವಿಮರ್ಶಕರಿಗೆ ಮತ್ತು ಸೃಜನಶೀಲ ಬರಹಗಾರರಿಗೆ ಅಕ್ಷಯಪಾತ್ರೆ ಇದ್ದಂತೆ. ಇಡೀ ಕರ್ನಾಟಕದ ಕಾಯಕ ಸಂಸ್ಕೃತಿಯನ್ನು ಪ್ರತಿನಿಧಿಸಬಲ್ಲ ಏಕೈಕ ವ್ಯಕ್ತಿ ಎಂದರೆ ಬಸವಣ್ಣ. ಬಸವಣ್ಣನವರ ಸಾಮಾಜಿಕ ಕಳಕಳಿ ಎಂದೆಂದಿಗೂ ಪ್ರಸ್ತುತ.

ಆದ್ದರಿಂದ ಅವರು ಭೂತದಲ್ಲಿ ಮಾತ್ರವಲ್ಲದೆ ವರ್ತಮಾನದಲ್ಲೂ ಪ್ರಸ್ತುತರು. ಇವರನ್ನು ಕುರಿತು ರಚಿತವಾಗಿರುವ ಅನೇಕ ನಾಟಕಗಳ ನಿರಂತರ ಪ್ರದರ್ಶನಗಳೂ ಆಗುತ್ತಿರುತ್ತವೆ. ಮೊದಲ ಘಟ್ಟದಲ್ಲಿ ರಚಿತವಾಗಿರುವ ನಾಟಕಗಳು ವೃತ್ತಿರಂಗಭೂಮಿಯ ಪ್ರದರ್ಶನಕ್ಕೆ ಸೀಮಿತಗೊಂಡಂತೆ ಕಾಣುತ್ತವೆ. ನಂತರದ ಕಾಲಘಟ್ಟದಲ್ಲಿ ಹವ್ಯಾಸಿರಂಗಭೂಮಿಯನ್ನು ಗಮನದಲ್ಲಿಟ್ಟುಕೊಂಡು, ವೈಚಾರಿಕ ಅಂಶಗಳನ್ನೂ ಒಳಗೊಂಡಂತೆ ರಚಿತವಾದ ನಾಟಕಗಳು ಕೇವಲ ಪ್ರದರ್ಶನಕ್ಕಷ್ಟೇ ಅಲ್ಲದೆ, ಓದುಗ/ಪ್ರೇಕ್ಷಕರನ್ನು ಚಿಂತನೆಯ ಹಂತಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿವೆ.

ಕರ್ನಾಟಕದ ಇತಿಹಾಸದಲ್ಲಿ ಕಲ್ಯಾಣದ ಚಾಲುಕ್ಯರ ಕಾಲದ ಕೊನೆಯ ದಿನಗಳು ಮತ್ತು ಕಲ್ಯಾಣದ ಕ್ರಾಂತಿ ಎರಡೂ ಇಂದಿಗೂ ಚರ್ಚೆಗೆ ಅವಕಾಶಗಳನ್ನು ಉಳಿಸಿಕೊಂಡಿವೆ. ಕೆಲವು ಇತಿಹಾಸಕಾರರಿಗೆ ಕಲ್ಯಾಣದ ಕ್ರಾಂತಿಯು ಐತಿಹಾಸಿಕ ಘಟನೆಯೇ ಅಲ್ಲವೆಂಬ ಅಭಿಪ್ರಾಯಗಳಿವೆ ಎಂಬ ಆಕ್ಷೇಪಣೆಗಳಿವೆ. ಇದರಿಂದ ಸೃಜನಶೀಲ ಬರಹಗಾರರ ಅಭಿವ್ಯಕ್ತಿಗೆ ಯಾವ ಧಕ್ಕೆಯೂ ಆಗಿಲ್ಲ. ಇತಿಹಾಸ ಬೇರೆ ಮತ್ತು ಸೃಜನಾತ್ಮಕ ಸಾಹಿತ್ಯ ಬೇರೆ ಎನ್ನುವ ಅರಿವು ಬಹುತೇಕ ಅಕ್ಷರ ಬಲ್ಲ ಎಲ್ಲರಲ್ಲಿಯೂ ಇದೆ.

ಇತಿಹಾಸವು ಎಲ್ಲರನ್ನೂ ಆಕರ್ಷಿಸುವುದಿಲ್ಲ ಎಂದು ಇತಿಹಾಸಕಾರರಿಗೆ ತಿಳಿದಿದೆ. ಸೃಜನಾತ್ಮಕ ಸಾಹಿತ್ಯವು ಎಲ್ಲರನ್ನೂ ಆಕರ್ಷಿಸುತ್ತದೆ ಮತ್ತು ಸೃಜನಾತ್ಮಕವಾದ ಎಲ್ಲ ಕೃತಿಗಳೂ ವಿಮರ್ಶೆಗೆ ಒಳಪಡುವುದಿಲ್ಲ. ಕೆಲವು ಕೃತಿಗಳು ಅದನ್ನು ರಚಿಸಿದವರ ಪ್ರತಿಭೆ, ಸಾಮರ್ಥ್ಯ ಹಾಗೂ ಕೃತಿಗಳ ವೈಶಿಷ್ಟ್ಯಗಳ ಕಾರಣದಿಂದ ವಿಮರ್ಶಕರ ಗಮನ ಸೆಳೆಯುತ್ತವೆ. ಪಿ. ಲಂಕೇಶರ ‘ಸಂಕ್ರಾಂತಿ’ (1973), ಎಚ್.ಎಸ್.ಶಿವಪ್ರಕಾಶರ ‘ಮಹಾಚೈತ್ರ’ (1986), ಗಿರೀಶ ಕಾರ್ನಾಡರ ‘ತಲೆದಂಡ’(1990), ಎಂ.ಎಂ. ಕಲಬುರ್ಗಿ ಅವರ ‘ಕೆಟ್ಟೀತು ಕಲ್ಯಾಣ’(1995) ಮತ್ತು ಚಂದ್ರಶೇಖರ ಕಂಬಾರರ ‘ಶಿವರಾತ್ರಿ(2011) ನಾಟಕಗಳು ಇಲ್ಲಿ ಪರಾಮರ್ಶೆಗೊಂಡಿವೆ.

ಪ್ರಮುಖವಾಗಿ ಸಂಶೋಧಕರಾದ ಎಂ.ಎಂ. ಕಲಬುರ್ಗಿ ಅವರನ್ನು ಹೊರತುಪಡಿಸಿದರೆ ಉಳಿದ ಎಲ್ಲ ನಾಟಕಕಾರರೂ ಕನ್ನಡ ರಂಗಭೂಮಿಗೆ ವಿಶೇಷ ಕೊಡುಗೆಗಳನ್ನು ಕೊಟ್ಟಿದ್ದಾರೆ. ಲಂಕೇಶ್ ಮತ್ತು ಶಿವಪ್ರಕಾಶ್ ಇಂಗ್ಲಿಷ್ ಭಾಷಾ ಬೋಧಕರು. ಗಿರೀಶ ಕಾರ್ನಾಡ್ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ತೊಡಗಿಕೊಂಡವರು. ಚಂದ್ರಶೇಖರ ಕಂಬಾರರು ಜಾನಪದ ಮತ್ತು ರಂಗಭೂಮಿಯಲ್ಲಿ ತೊಡಗಿಕೊಂಡವರು.

ಇವರೆಲ್ಲರೂ ತಮ್ಮತಮ್ಮ ಕ್ಷೇತ್ರಗಳಲ್ಲಿ ಅಭಿವ್ಯಕ್ತಿಯ ಹೊಸಹೊಸ ಆಯಾಮಗಳಿಗೆ ಎಡೆಮಾಡಿಕೊಂಡವರು. ಗಿರೀಶ ಕಾರ್ನಾಡ್, ಲಂಕೇಶ್ ಮತ್ತು ಶಿವಪ್ರಕಾಶ ಸಮಕಾಲೀನ ಬದುಕನ್ನು ಇತಿಹಾಸದ ಜೊತೆಗೆ ಸಮೀಕರಿಸುವ ಪ್ರಯತ್ನ ಮಾಡಿದರೆ, ಚಂದ್ರಶೇಖರ ಕಂಬಾರ ಮತ್ತು ಕಲಬುರ್ಗಿ ಅವರು ಕ್ರಮವಾಗಿ ಇತಿಹಾಸವನ್ನು ಜಾನಪದ ಮತ್ತು ಐತಿಹಾಸಿಕ ಆಕರಗಳ ಮೂಲಕ ಕಟ್ಟಿಕೊಟ್ಟವರು. 

ಕಲ್ಯಾಣದ ಕ್ರಾಂತಿ ಮತ್ತು ಬಿಜ್ಜಳನ ಸಾವು ಮಾತ್ರವಲ್ಲದೆ ಬಸವಣ್ಣನವರ ಕೊನೆಯ ಕಾಲದ ಬಗೆಗೂ ಇದು ಸರಿ ಎನ್ನುವ ಸರ್ವಸಮ್ಮತ ಅಭಿಪ್ರಾಯ ಇನ್ನೂ ದಕ್ಕಿಲ್ಲ. ಇತಿಹಾಸವು ವಿಷಯದ ಸತ್ಯವನ್ನು ತಿಳಿಸಿದರೆ, ಸಾಹಿತ್ಯವು ಅದನ್ನು ಆಕರ್ಷಕ ಮಾಡುತ್ತದೆ. ಕ್ರಿ.ಶ. 12ನೆಯ ಶತಮಾನದಲ್ಲಿ ಕಾಯಕಕ್ಕೆ ಗೌರವ ತಂದುಕೊಟ್ಟ ಬಸವಣ್ಣನವರನ್ನು ಕುರಿತಾದ ಇತಿಹಾಸ ಮತ್ತು ಯಾವುದೇ ಪ್ರಕಾರದ ಸಾಹಿತ್ಯವು ಆ ಕಾಲದ ಸಮಾಜೋ–ಆರ್ಥಿಕ ಅಧ್ಯಯನದ ದರ್ಶನ ಫಲಶ್ರುತಿಯಾಗಿರಬೇಕು ಎಂಬುದು ನಿರೀಕ್ಷೆ. ಬಿಜ್ಜಳ ಅರಮನೆಯ ಪ್ರತಿನಿಧಿ ಮತ್ತು ಬಸವಣ್ಣ ಮಹಾಮನೆಯ ಪ್ರತಿನಿಧಿ. ಒಂದು ಅಧಿಕಾರ ಕೇಂದ್ರ; ಮತ್ತೊಂದು ಚಿಂತನೆಯ ಕೇಂದ್ರ. ಇವುಗಳ ನಡುವಿನ ಸಂಘರ್ಷ ಎಂದೆಂದಿಗೂ ಇರುವಂತಹದು. ಅಂದಂದಿನ ರಾಜಕೀಯವು ಅಂದಂದಿನ ಸಮಾಜದ ಮೇಲೆ ಪ್ರಬಾವ ಬೀರುತ್ತದೆ.

ಇತಿಹಾಸವನ್ನು ಕಟ್ಟಿಕೊಡಲು ಐತಿಹಾಸಿಕ ಆಕರಗಳಂತೆ ಜಾನಪದ ಆಕರಗಳನ್ನೂ ಬಳಸಿಕೊಳ್ಳಬಹುದು. ಆದರೆ ಆಗ ತರ್ಕ ಮತ್ತು ವಿವೇಚನೆಗಳ ಪಾತ್ರ ಬಹಳ ಮುಖ್ಯ. ‘ಸಂಕ್ರಾಂತಿ’ ನಾಟಕವು ಇತಿಹಾಸದ ಪುಟಗಳನ್ನು ಸಮಕಾಲೀನ ಪರಿಸ್ಥಿತಿಯ ಮೂಲಕ ಅರ್ಥೈಸುವ ಪ್ರಯತ್ನ ಮಾಡಿದರೆ, ಸೂಳೆಯೂ ಸೇರಿದಂತೆ ಹಲವು ವೃತ್ತಿನಿರತರು ಮತ್ತು ದೇವಾಲಯಗಳ ಮೂಲಕ ಸಾಮಾಜಿಕ ಪಿಡುಗಾಗಿದ್ದ ತೆರಿಗೆಗಳನ್ನು ತೆರಬೇಕಾದ ಸಾಮಾನ್ಯರ ಬದುಕನ್ನು ಕಷ್ಟಕ್ಕೀಡುಮಾಡಿದ್ದ ವಿಚಾರಗಳ ಜೊತೆಗೆ ವೈದಿಕ ಮತ್ತು ಅವೈದಿಕ ಸಂಸ್ಕೃತಿಗಳ ನಡುವಿನ ಘರ್ಷಣೆಯನ್ನು ಮಹಾಚೈತ್ರ ತೆರೆದಿಡುತ್ತದೆ. ಇತಿಹಾಸದ ಪುಟಗಳನ್ನು ವರ್ತಮಾನದ ಜೊತೆಗೆ ಸಮೀಕರಿಸಿ ನೋಡುವ ಪ್ರಯತ್ನ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

ಲಂಕೇಶ್ ‘ಸಂಕ್ರಾಂತಿ’ ನಾಟಕದಲ್ಲಿ ಇಂತಹ ಪ್ರಯತ್ನ ಮಾಡಿರುವುದನ್ನು ಈ ಕೃತಿ ಆಸಕ್ತರಿಗೆ ಮನವರಿಕೆ ಮಾಡಿಕೊಡುತ್ತದೆ. ಬಸವ, ಬಿಜ್ಜಳ ಇಬ್ಬರನ್ನು ಮರೆತರೆ ಈ ನಾಟಕದ ವಸ್ತು ಸಾರ್ವತ್ರಿಕ ಮತ್ತು ಸಾರ್ವಕಾಲಿಕವಾಗುತ್ತದೆ. ಸಂಬಾಷಣೆಯಲ್ಲಿನ ಹಾಸ್ಯ ಸ್ವರೂಪದ ವ್ಯಂಗ್ಯ ಇಡೀ ನಾಟಕವನ್ನು ನಡೆಸುತ್ತದೆ. ಆದರ್ಶ ಮತ್ತು ವಾಸ್ತವಗಳ ನಡುವಿನ ಕಂದರವನ್ನು ನಾಟಕದಲ್ಲಿ ಅನಾವರಣಗೊಳಿಸಲಾಗಿದೆ.

ಇತಿಹಾಸ ಮತ್ತು ಪುರಾಣಗಳು ಪರಸ್ಪರ ಪೂರಕವಾಗಿ ನೀಲಾಂಬಿಕೆಗೆ ಪ್ರಾಧಾನ್ಯ ನೀಡಿ, ಮಹಾಮನೆ ಕಟ್ಟುವ ಬಸವಣ್ಣನ ಕನಸನ್ನು ವೃತ್ತನಿರತ ಗಾಯಕರು ಮತ್ತು ಕಾಯಕ ಜೀವಿಗಳ ನೆರವಿನೊಂದಿಗೆ ತೆರೆದು ತೋರುತ್ತಲೇ ವೈದಿಕ ಮತ್ತು ಅವೈದಿಕ ಪರಂಪರೆಗಳ ನಡುವಿನ ವೈರುಧ್ಯಗಳು ಹೊಸ ಬದುಕಿಗೆ ಅವಕಾಶ ಮಾಡಿಕೊಡದ ಪರಿಸ್ಥಿತಿಯನ್ನು ‘ಮಹಾಚೈತ್ರ’ದ ಮೂಲಕ ನಾಟಕಕಾರ ಶಿವಪ್ರಕಾಶ್ ವಿಶ್ಲೇಷಿಸಿದ್ದಾರೆ.

ಸಮಾಜದಲ್ಲಿ ಸಮಾನತೆಯನ್ನು ತರಬಯಸುವ ಬಸವಣ್ಣ ಶೋಷಣೆಯನ್ನು ಪ್ರತಿಭಟಿಸಿ, ಕಾಯಕ ಜೀವಿಗಳಿಗೆ ಧ್ವನಿಯಾದದ್ದು ಇತಿಹಾಸ. ಎಲ್ಲಾ ರಂಗಸಾಧ್ಯತೆಗಳನ್ನು ಬಳಸಿಕೊಂಡು, ವೇಷ ಮತ್ತು ಪಗರಣಗಳ ಮೂಲಕ ಸಮಕಾಲೀನ ಪ್ರಜ್ಞೆಯನ್ನು ದಾಖಲಿಸುವ ಗಿರೀಶ ಕಾರ್ನಾಡರ ‘ತಲೆದಂಡ’ ಕ್ರಾಂತಿಯ ನಂತರ ಉಳಿಯುವ ಸಮಸ್ಯೆಗಳನ್ನು ತೆರೆದಿಡುತ್ತದೆ.  ಶಾಸನಗಳ ಮೂಲಕ ತಿಳಿದ ಇತಿಹಾಸವನ್ನು ಒರೆಗಲ್ಲಿಗೆ ಹಚ್ಚಿ, ಅಗ್ರಹಾರ ಮತ್ತು ದೇವಾಲಯ ಸಂಸ್ಕೃತಿಗಳು ಕಾಯಕ ಸಂಸ್ಕೃತಿಯನ್ನು ಶೋಷಿಸುವುದನ್ನು ವಿವರಿಸುತ್ತಲೇ ಕಲ್ಯಾಣದಲ್ಲಿ ಆದ ಅವಾಂತರಗಳನ್ನು ವಾಸ್ತವಿಕ ನೆಲೆಯಲ್ಲಿ ಪರಿಶೀಲಿಸುವ ಕಲಬುರ್ಗಿಯವರ ‘ಕೆಟ್ಟೀತು ಕಲ್ಯಾಣ’ ಇತಿಹಾಸದ ಪರಿಶೀಲನೆಯಾಗಿದೆ.

ಹರಳಯ್ಯ ಮತ್ತು ಮಧುವರಸರನ್ನು ಎಳೆಹೂಟೆಗೆ ಕಟ್ಟಿ ಕಲ್ಯಾಣದ ಬೀದಿಗಳಲ್ಲಿ ಎಳೆದಾಡಿ, ಶೂಲಕ್ಕೇರಿಸಿದ ರಾತ್ರಿಯ ಮರುದಿನವಾದ ಶಿವರಾತ್ರಿಯಂದು ನಡೆದ ಘಟನೆಗಳನ್ನು ಕಂಬಾರರು, ತಮ್ಮ ವಿಶಿಷ್ಟವಾದ ಜಾನಪದ ಶೈಲಿಯಲ್ಲಿ ನಾಟಕರೂಪಕ್ಕೆ ಅಳವಡಿಸಿದ್ದಾರೆ. ಇವೆಲ್ಲವೂ ಕಂಬಾರರ ಸ್ಥಾಯಿನೆಲೆಯಾದ ಶಿವಾಪುರದಲ್ಲಿ ನಡೆಯುವ ಘಟನೆಗಳು. ಈ ಎಲ್ಲ ಕೃತಿಗಳೂ ವಿದ್ಯಾರ್ಥಿಗಳಿಗೆ ಪಠ್ಯವಾಗಿ ದೊರೆತದ್ದು ಮಹತ್ವದ ವಿಚಾರ. ಒಂದೇ ಐತಿಹಾಸಿಕ ಘಟನೆಗೆ ಸಂಬಂಧಿಸಿದಂತಿರುವ ಐದು ಸೃಜನಶೀಲ ನಾಟಕಗಳ ಮೂಲಕ ಕಲ್ಯಾಣದ ಕ್ರಾಂತಿಯ ವಿಚಾರಗಳನ್ನು ಅರ್ಥೈಸುವ ಪ್ರಯತ್ನವಾದ ಐದೂ ನಾಟಕಗಳನ್ನು ವಿದ್ಯಾರ್ಥಿಗಳಿಗೆ ವಿಮರ್ಶಾತ್ಮಕವಾಗಿ ತಿಳಿಸುವ ಪ್ರಯತ್ನವಾದ ‘ಬಸವಣ್ಣ-ಪುನರ್ಲೇಖ’ವು ಸ್ವಾಗತಾರ್ಹ ಕೃತಿ.
*
ಬಸವಣ್ಣ: ಪುನರ್ಲೇಖ
ಲೇ: ಡಾ. ಕರೀಗೌಡ ಬೀಚನಹಳ್ಳಿ
ಪು: 228
ರೂ.180
ಪ್ರ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಡಾ. ಎಚ್.ಎಸ್. ಗೋಪಾಲ ರಾವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT