ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹೂಪಯೋಗಿ ಲೋಳೆಸರ

ಅಕ್ಷರ ಗಾತ್ರ

ಲೋಳೆಸರ, ಅಲೋವೇರ, ಕತ್ಲಿಗಿಡ ಎಂದೆಲ್ಲಾ ಕರೆಸಿಕೊಳ್ಳುವ ಇದು ಒಂದು ಪ್ರಸಿದ್ಧ ಔಷಧೀಯ ಸಸ್ಯ.  ಎಲೆಗಳು ಲೋಳೆಯನ್ನು ಹೊಂದಿರುವುದರಿಂದ "ಲೋಳೆಸರ" ಎಂದು ಕರೆಯುವ ಈ ಸಸ್ಯ ಲಿಲಿಯೇಸಿ ಕುಟುಂಬಕ್ಕೆ ಸೇರಿದೆ.  ಇದರ ವೈಜ್ಞಾನಿಕ ಹೆಸರು ಅಲೋವೇರ.  ಇದರ ಮೂಲಸ್ಥಾನ ಆಫ಼್ರಿಕಾ ಖಂಡ.

ಲೋಳೆಸರ ಸಸ್ಯವು ದಪ್ಪವಾಗಿದ್ದು ಹೆಚ್ಚು ನೀರಿನ ಅಂಶವನ್ನು ಹೊಂದಿರುವುದರಿಂದ ಬೆಳೆಯಲು ಹೆಚ್ಚು ನೀರನ್ನು ಕೇಳುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಬೆಳೆಯಬಹುದಾದ ಸಸ್ಯವಾಗಿದ್ದು ಹೆಚ್ಚು ಕವಲುಗಳಾಗಿ ಬೆಳೆಯುತ್ತದೆ ಮತ್ತು ಸಸ್ಯದ ಬೇರುಗಳು ಆಳವಾಗಿ ಹೋಗುವುದಿಲ್ಲ. 

ವಿವಿಧ ಹವಾಗುಣಗಳಲ್ಲಿ ಬೆಳೆಯಬಹುದಾದರೂ ಒಣ ಹವಾಗುಣ ಅಂದರೆ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಉತ್ತಮ ಬೆಳವಣಿಗೆ ಮತ್ತು ಇಳುವರಿಯನ್ನು ಪಡೆಯಬಹುದು. ಹೆಚ್ಚು ಮಳೆ ಬರುವ ಪ್ರದೇಶ ಸೂಕ್ತವಲ್ಲ. ಮರಳು ಮಿಶ್ರಿತ ಮಣ್ಣು ಬೆಳೆಗೆ ಉತ್ತಮವಾದುದು. ಎಲೆಯ ಅಂಚಿನಲ್ಲಿ ಮುಳ್ಳುಗಳಿದ್ದು ಕಿತ್ತಳೆ ಬಣ್ಣದ ಹೂವುಗಳು ಬಿಡುತ್ತವೆ. 

ಗಟ್ಟಿ ಸಸ್ಯವಾದುದರಿಂದ ಮತ್ತು ಕಹಿ ಗುಣವನ್ನು ಹೊಂದಿರುವುದರಿಂದ ಕೀಟಗಳ ಹಾವಳಿ ಕಡಿಮೆ ಎಂದೇ ಹೇಳಬಹುದು.  ಲೋಳೆಸರವನ್ನು ಬಹಳ ಹಿಂದಿನಿಂದಲೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಇದರಿಂದ ಸಾಬೂನು, ಕ್ರೀಮ್ ತಯಾರಿಸುತ್ತಾರೆ.

ಲೋಳೆಸರದ ಉಪಯೋಗಗಳು   
*ಅಕಸ್ಮಾತ್ತಾಗಿ ಸುಟ್ಟಗಾಯಗಳಾದರೆ ತಕ್ಷಣ ರಸವನ್ನು ಹಚ್ಚುವುದರಿಂದ ತಣ್ಣಗಾಗುತ್ತದೆ ಮತ್ತು ಬೊಬ್ಬೆಗಳು ಬರುವುದಿಲ್ಲ.
*ಲೋಳೆಯನ್ನು ತಲೆಗೆ ಹಚ್ಚಿಕೊಂಡು ಅರ್ಧ ಗಂಟೆಯ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ ಮತ್ತು ತಲೆಯ ಹೊಟ್ಟು ಕೂಡ ಕಡಿಮೆಯಾಗುತ್ತದೆ.

*ತಿರುಳನ್ನು ಸೇವಿಸಿದರೆ ಮೂಲವ್ಯಾಧಿ, ಜಠರದ ಹುಣ್ಣು ಗುಣವಾಗುತ್ತದೆ.
*ಎಲೆಗಳನ್ನು ಒಣಗಿಸಿ ಚೂರ್ಣ ತಯಾರಿಸಿಕೊಂಡು ಅದಕ್ಕೆ ಕೋಳಿಮೊಟ್ಟೆಯ ಬಿಳಿಭಾಗವನ್ನು ಸೇರಿಸಿ ಕೂದಲಿಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಸ್ನಾನಮಾಡುವುದರಿಂದ ಕೂದಲು ಮೃದುವಾಗುತ್ತದೆ ಮತ್ತು ಹೊಳಪು ಬರುತ್ತದೆ.

*ತಿರುಳನ್ನು ಹಣೆಗೆ ಹಚ್ಚಿಕೊಂಡು ಒಂದು ಬಟ್ಟೆ ಕಟ್ಟಿಕೊಂಡು ಅರ್ಧಗಂಟೆ ವಿಶ್ರಾಂತಿ ತೆಗೆದುಕೊಂಡರೆ ತಲೆನೋವು ಗುಣವಾಗುತ್ತದೆ.
*ಎಲೆಯಚೂರ್ಣ ಒಂದು ಚಮಚ, ತ್ರಿಫಲಾಚೂರ್ಣ ಮತ್ತು ಬಿಸಿನೀರು ಸೇರಿಕೊಂಡು ಕುಡಿಯುವುದರಿಂದ ಮಲವಿಸರ್ಜನೆ ಸರಿಯಾಗುತ್ತದೆ.
*ಲೋಳೆಸರದ ರಸವನ್ನು ಶೇವಿಂಗ್ ಕ್ರೀಮಾಗಿ  ಬಳಸುವುದರಿಂದ ಚರ್ಮ ಮೃದುವಾಗುತ್ತದೆ.
*ಚರ್ಮರೋಗಕ್ಕೆ ಉತ್ತಮ ಔಷಧ.

*ಬೆಡ್ ಸೋರ್ ಅಂದರೆ ಮಲಗಿ ಮಲಗಿ ಅಲ್ಲಲ್ಲಿ ಗಾಯಗಳಾಗಿ ಚರ್ಮ ಕಿತ್ತುಹೋಗುತ್ತದೆ. ಆ ಸಮಯದಲ್ಲಿ ತಿರುಳಿನ ರಸವನ್ನು ಹಚ್ಚಿದರೆ ಒಣಗುತ್ತದೆ.
*ಶರೀರದಲ್ಲಿ ಊತವಿದ್ದ ಭಾಗಗಳಿಗೆ ರಸವನ್ನು ಹಚ್ಚುವುದರಿಂದ ಕ್ರಮೇಣ ಊತ ಕಮ್ಮಿಯಾಗುತ್ತದೆ.
*ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಭಂಗು ಹೋಗುತ್ತದೆ.

*ಲೋಳೆರಸವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
*ರಸದಲ್ಲಿ ಮೆಂತ್ಯವನ್ನು ಎರಡು ದಿನ ನೆನೆಸಿ ನಂತರ ಮೊಳಕೆ ಬರಿಸಿ ಒಣಗಿಸಿ ಪುಡಿ ಮಾಡಿ ಕೊಬ್ಬರಿ ಎಣ್ಣೆಗೆ ಹಾಕಿಡಿ. ಪ್ರತಿನಿತ್ಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ನೆತ್ತಿ ತಂಪಾಗುತ್ತದೆ ಮತ್ತು ಕೂದಲು ಮೃದುವಾಗಿ, ಕಪ್ಪಾಗಿ ಸೊಂಪಾಗಿ ಬೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT