ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಿಗೆ ಬಿದ್ದು ಸಿಕ್ಕಬಿದ್ದ ಕಳ್ಳರು

ಬ್ಯಾಂಕ್‌ನಲ್ಲಿ ಕಳವಿಗೆ ವಿಫಲ ಯತ್ನ; ಮೂವರ ಬಂಧನ
Last Updated 12 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಅಮದಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ ಶಾಖೆಗೆ ನುಗ್ಗಿ ಕಳವು ಮಾಡಲು ಯತ್ನಿಸಿದ ಐವರು ಆರೋಪಿಗಳ ಪೈಕಿ ಮೂವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ತಮಿಳುನಾಡು ಮೂಲದ ಮಣಿಕಂಠ, ರಾಜಶೇಖರ್‌ ಹಾಗೂ ಸಂಪತ್‌ ಬಂಧಿತ ಆರೋಪಿಗಳು. ಜೊತೆಯಲ್ಲಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ. ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಅಸ್ವಸ್ಥಗೊಂಡಿರುವ ಮೂವರು ಆರೋಪಿಗಳನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಸಾರ್ವಜನಿಕರಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಈ ಮೂವರೂ ಬಾವಿಗೆ  ಬಿದ್ದಿದ್ದಾರೆ. ನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ರಕ್ಷಿಸಿದರು. ಆರೋಪಿಗಳ ವಿಚಾರಣೆ ನಡೆದಿದೆ. ಅವರು ಅಂತರರಾಜ್ಯ ದರೋಡೆಕೋರರೇ ಎಂಬುದು ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ’ ಎಂದು ಡಿವೈಎಸ್ಪಿ ಪ್ರಮೋದ್‌ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬ್ಯಾಂಕ್​ನಲ್ಲಿ ಸುಮಾರು ₹ 2 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾ ಭರಣ ಹಾಗೂ ನಗದು ಸೇಫ್‌ಲಾ ಕರ್‌ನಲ್ಲಿ ಇತ್ತು. ಸ್ಥಳೀಯರ ಸಮಯ ಪ್ರಜ್ಞೆಯಿಂದ ಕಳ್ಳರ ಸಂಚು ವಿಫಲ ವಾಗಿದೆ’ ಎಂದು ಬ್ಯಾಂಕ್‌ ಶಾಖೆಯ ವ್ಯವಸ್ಥಾಪಕಿ ಶಿಲ್ಪಾ ತಿಳಿಸಿದರು.

ಘಟನೆ ವಿವರ: ರಾಷ್ಟ್ರೀಯ ಹೆದ್ದಾರಿ–17 ಬದಿಯಲ್ಲೇ ಇರುವ ಬ್ಯಾಂಕಿನ ಶಾಖೆಯಲ್ಲಿ ಕಳವು ಮಾಡಲು  ಭಾನುವಾರ ರಾತ್ರಿ 12 ಗಂಟೆ ಸಮಯದಲ್ಲಿ ಐವರ ತಂಡ ಯತ್ನಿಸಿದೆ. ಕಿಟಕಿಯನ್ನು ಮೀಟಿ ಬ್ಯಾಂಕ್‌ ಒಳ ನುಗ್ಗಿದ ಕಳ್ಳರು ಮೊದಲು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ನಾಶಪಡಿಸಿದ್ದಾರೆ.

ಬಳಿಕ ಒಳಗಿನ ರೋಲಿಂಗ್‌ ಷಟರ್‌ ಅನ್ನು ಮೇಲೆತ್ತಿ ಸೇಫ್‌ಲಾಕರ್ ಒಡೆಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅಕ್ಕಪಕ್ಕದ ನಿವಾಸಿಗಳಿಗೆ ಶಬ್ದ ಕೇಳಿ ಒಟ್ಟಾಗಿ ಬ್ಯಾಂಕಿನತ್ತ ಧಾವಿಸಿಸುತ್ತಿದ್ದಂತೆ ಕಳ್ಳರು ಅಲ್ಲಿಂದ ಕಾಲ್ಕಿತ್ತರು.

ಸಾರ್ವಜನಿಕರು ಅವರನ್ನು ಬೆನ್ನಟ್ಟಿದಾಗ ತಪ್ಪಿಸಿಕೊಳ್ಳುವ ಭರದಲ್ಲಿ ಮೂವರು ಸಮೀಪದ ಮನೆಯೊಂದರ ಆವರಣದಲ್ಲಿದ್ದ ಸುಮಾರು 20 ಅಡಿ ಆಳದ ತೆರೆದ ಬಾವಿಗೆ ಬಿದ್ದರು. ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಆ ಸಂದರ್ಭದಲ್ಲಿ ಆಕ್ರೋಶಗೊಂಡಿದ್ದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಅವರು ಅಸ್ವಸ್ಥಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT