ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಡಿ ಯಶಸ್ಸಿನ ಪಾಠ

Last Updated 19 ಮೇ 2014, 19:30 IST
ಅಕ್ಷರ ಗಾತ್ರ

ಹದಿನೈದು ವರ್ಷಗಳ ಕಾಲ ಒಂದು ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತ ನಡೆಸಿಕೊಂಡು ಬರುವುದು ಕಷ್ಟವೇ. ಅದರಲ್ಲೂ ಒಬ್ಬನೇ ನಾಯಕ ಮುಖ್ಯ­ಮಂತ್ರಿ­ಯಾಗಿ ಇರುವುದು ಇನ್ನೂ ಕಷ್ಟ. ಇವತ್ತಿನ ಪಕ್ಷ ರಾಜಕೀಯದ ಪರಿಸ್ಥಿತಿ­ಯಲ್ಲಿ ಆಡಳಿತ ವಿರೋಧಿ ಅಲೆ ಏಳುವುದಕ್ಕೆ ಹೆಚ್ಚು ಹೊತ್ತೇನೂ ಹಿಡಿಯುವುದಿಲ್ಲ. ಆದರೆ ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಇದಕ್ಕೊಂದು ಅಪವಾದ.

ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶವೇ ಬಿಜೆಪಿಯ ನರೇಂದ್ರ ಮೋದಿ ಅಲೆಯಲ್ಲಿ ತೇಲಿಹೋದರೆ, ಒಡಿಶಾದಲ್ಲಿ  ಪಟ್ನಾ­ಯಕ್‌ ಮಾತ್ರ ಬಂಡೆಗಲ್ಲಿನಂತೆ ಅಚಲವಾಗಿ ನಿಂತಿದ್ದಾರೆ. ಲೋಕಸಭೆ ಮಾತ್ರ­ವಲ್ಲ, ಜತೆಗೇ ನಡೆದ ವಿಧಾನಸಭಾ ಚುನಾವಣೆಯಲ್ಲೂ ಅತ್ಯಧಿಕ  ಶಾಸ­ಕರನ್ನು ಗೆಲ್ಲಿಸಿ ಸತತ ನಾಲ್ಕನೇ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿದಿ­ದ್ದಾರೆ.

ನವೀನ್‌ ಪಟ್ನಾಯಕ್‌ರ ಬಿಜು ಜನತಾ ದಳ  ಅಸೆಂಬ್ಲಿ ಚುನಾವಣೆ­ಯಲ್ಲಿ ಶೇಕಡ 43.4ರಷ್ಟು ಮತ ಗಳಿಸಿದ್ದರೆ, ಎದುರಾಳಿ ಕಾಂಗ್ರೆಸ್‌ ಶೇ 25.7ರಷ್ಟು ಮತ್ತು ಬಿಜೆಪಿ ಶೇ 21.5ರಷ್ಟು ಮತಗಳನ್ನಷ್ಟೇ ಗಳಿಸಿವೆ. ಅಲ್ಲಿ ಕಾಂಗ್ರೆಸ್ಸಿನ ಸಾಧನೆ ಸಾರ್ವಕಾಲಿಕ ಕಳಪೆ. ನರೇಂದ್ರ ಮೋದಿ ಭಾರೀ ಪ್ರಚಾರ ಸಭೆಗಳನ್ನು ನಡೆಸಿದರೂ, ಬಿಜೆಪಿ ಗಳಿಸಿದ್ದು ಒಂದೇ ಒಂದು ಲೋಕಸಭಾ ಸ್ಥಾನ. 21ರಲ್ಲಿ ಇಪ್ಪತ್ತನ್ನು ಬಾಚಿಕೊಂಡ ನವೀನ್‌ ಪಟ್ನಾಯಕ್‌, ಕಾಂಗ್ರೆಸ್ಸಿನ ಶೂನ್ಯಸಂಪಾದನೆಗೆ ಕಾರಣರಾಗಿದ್ದಾರೆ.

ಪಟ್ನಾಯಕ್‌ ಅವರು 2009ರಲ್ಲೇ ಬಿಜೆಪಿ ನೇತೃತ್ವದ ಎನ್‌ಡಿಎ ಜತೆಗಿನ ಮೈತ್ರಿಯನ್ನು ಮುರಿದುಕೊಂಡಿದ್ದರು. ಸ್ವಂತ ಬಲದ ಮೇಲೆ ಚುನಾವಣೆ ಗೆಲ್ಲುವ ಭರವಸೆಯನ್ನು ಕ್ರಮೇಣ ರೂಢಿಸಿಕೊಂಡರು. ಅಭಿವೃದ್ಧಿ ಮಾಡೆಲ್‌ ಕುರಿತು ಯಾವ ಅಬ್ಬರದ ಪ್ರಚಾರವನ್ನು ಮಾಡದೆ, ತಣ್ಣಗೆ ಕುಳಿತು ರಾಜ್ಯಕ್ಕೆ  ದಕ್ಷ ಆಡಳಿತ ನೀಡಿದರು.

ಎಲ್ಲ ಜಾತಿ- ಧರ್ಮಗಳ ಜನರನ್ನೂ ಒಳಗೊಂಡ, ಅಭಿವೃದ್ಧಿ ಆಧಾರಿತ ಆಡಳಿತ ಜನರಿಗೂ ಹಿಡಿಸಿತು. ರಾಜ್ಯದ ಜನಸಂಖ್ಯೆ­ಯಲ್ಲಿ ನಾಲ್ಕನೇ ಒಂದರಷ್ಟಿರುವ ಆದಿವಾಸಿಗಳ ಅಭಿವೃದ್ಧಿಗೆ ಕೈಗೊಂಡ ಕ್ರಮಗಳು, ಜಾತ್ಯತೀತ ಧೋರಣೆ, ಮಹಿಳೆಯರ ಸಬಲೀಕರಣಕ್ಕೆ ನೀಡಿದ ಆದ್ಯತೆ ಮತ್ತು ಮುಖ್ಯವಾಗಿ ಪಾರದರ್ಶಕ ಆಡಳಿತ- ಚುನಾವಣೆಯ ಗೆಲುವಿನಲ್ಲಿ ನವೀನ್‌ ಪಟ್ನಾಯಕ್‌ರ ಕೈಹಿಡಿದಿವೆ.

ಹಾಗೆಂದೇ 147 ಸದಸ್ಯ­ಬಲದ ವಿಧಾನಸಭೆಯಲ್ಲಿ ಬಿಜೆಡಿಗೆ 117 ಶಾಸಕರ ದೊಡ್ಡ ಪಡೆಯನ್ನು ಹೊಂದಲು ಸಾಧ್ಯವಾಯಿತು. ಮುಖ್ಯಮಂತ್ರಿಗೆ ವಿರೋಧವೇ ಇರಲಿಲ್ಲ ಎಂದಲ್ಲ. ಪಕ್ಷದೊಳಗೇ ಬಂಡಾಯ ಎದ್ದ ಮುಖಂಡ ಪ್ಯಾರೀಮೋಹನ್‌ ಮೊಹಾಪಾತ್ರರನ್ನು 2012ರಲ್ಲೇ ಉಚ್ಚಾಟಿಸಲಾಯಿತು.

ಹಾಗೆಯೇ ಕಳೆದ ವರ್ಷದ ಕೊನೆಯಲ್ಲಿ ಅಪ್ಪಳಿಸಿದ ಫೈಲಿನ್‌ ಚಂಡಮಾರುತದಿಂದ ರಾಜ್ಯ­ವನ್ನು ರಕ್ಷಿಸಲು ಕೈಗೊಂಡ ಮುಂಜಾಗ್ರತಾ ಕ್ರಮಗಳೂ ನವೀನ್‌ ಪಟ್ನಾಯಕ್‌ರ ಆಡಳಿತ ಶೈಲಿಗೆ ಕೈಗನ್ನಡಿ ಹಿಡಿಯಿತು. ಆದಿವಾಸಿ ಪ್ರದೇಶ­ಗಳಲ್ಲಿ ಕೋಮು ಸಂಘರ್ಷ, ಮಾವೊವಾದಿಗಳ ಹಾವಳಿ, ಗಣಿಗಾರಿಕೆ ತಾಪತ್ರಯಗಳು ಈಗಲೂ ಇದ್ದರೂ  ಈ ಸಮಸ್ಯೆಗಳನ್ನು ಜಾಣ್ಮೆಯಿಂದ ಎದುರಿಸುವ ಸಾಮರ್ಥ್ಯವನ್ನು ಪಟ್ನಾಯಕ್‌ ಪ್ರದರ್ಶಿಸಿದ್ದಾರೆ.

ಹಾಗೆಂದೇ ಬಿಜೆಡಿ ಲೋಕಸಭೆಯಲ್ಲಿ ಐದನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೋದಿ ಅಲೆಯಲ್ಲಿ ಕೊಚ್ಚಿಹೋದ ಪ್ರಾದೇಶಿಕ ಪಕ್ಷಗಳು ನವೀನ್‌ ಪಟ್ನಾಯಕ್‌ರ ಯಶಸ್ಸಿನಿಂದ ಕಲಿಯಬೇಕಾದ ಪಾಠಗಳು ಸಾಕಷ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT