ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಮೈತ್ರಿಗೆ ‌ಕಾಂಗ್ರೆಸ್‌ ಹೈಕಮಾಂಡ್‌ ಹಸಿರು ನಿಶಾನೆ

Last Updated 29 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಗದ್ದುಗೆಗೆ ಏರಲು ಜೆಡಿಎಸ್‌ ಜತೆಗೆ ಸಖ್ಯ ಬೆಳೆಸುವ ಪ್ರಸ್ತಾವಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಶನಿವಾರ ರಾತ್ರಿ ಹಸಿರು ನಿಶಾನೆ ತೋರಿದೆ.

ಕಾಂಗ್ರೆಸ್‌ ರಾಜ್ಯದ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ ಅವರು ರಾಜ್ಯದ ಹಿರಿಯ ಮುಖಂಡರಿಗೆ ಕರೆ ಮಾಡಿ ಮೈತ್ರಿ  ಪ್ರಯತ್ನಕ್ಕೆ ವೇಗ ನೀಡುವಂತೆ ಸೂಚಿಸಿದರು. ನಗರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲೇಬೇಕು ಎಂಬ ನಿಲುವು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಮೇಯರ್‌ ಚುನಾವಣೆ ಮುಗಿಯುವ ತನಕ ಕಾಂಗ್ರೆಸ್‌ನ 76 ಕಾರ್ಪೊರೇಟರ್‌ಗಳು  ನಗರ ಬಿಟ್ಟು ಕದಲದಂತೆ ಕೆಪಿಸಿಸಿ ನಿರ್ದೇಶನ ನೀಡಿದೆ.

ಶನಿವಾರ ಬೆಳಿಗ್ಗೆಯಿಂದಲೇ ಕಾಂಗ್ರೆಸ್‌  ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದವು. ಮುಖ್ಯಮಂತ್ರಿ ಆಪ್ತರು ದಿನವಿಡೀ ರಣತಂತ್ರ ರೂಪಿಸುವುದರಲ್ಲಿ ನಿರತರಾಗಿದ್ದರು. ಪಕ್ಷದ ಮುಖಂಡರ ನಡುವೆ ಹಲವು ಸುತ್ತಿನ ಮಾತುಕತೆಗಳು  ನಡೆದವು. ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಪ್ರಯತ್ನದಲ್ಲಿ ಅವರು ಮಗ್ನರಾಗಿದ್ದರು.

ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬೈರತಿ ಬಸವರಾಜ್‌, ಮುನಿರತ್ನ ಹಾಗೂ ಎಸ್‌.ಟಿ. ಸೋಮಶೇಖರ್‌ ಅವರು ಕಾಂಗ್ರೆಸ್‌ ಪಾಳಯದಲ್ಲಿ ತಂತ್ರ ರೂಪಿಸುವುದರಲ್ಲಿ ಮಂಚೂಣಿಯಲ್ಲಿದ್ದಾರೆ.

ಜೆಡಿಎಸ್‌ ಜತೆಗಿನ ಮೈತ್ರಿಗೆ ಆರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಒಲವು ತೋರಲಿಲ್ಲ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ತರಬೇತಿಯ ನಡುವೆ ಮುಖ್ಯಮಂತ್ರಿ ಅವರು ಪರಮೇಶ್ವರ್‌ ಅವರ ಮನವೊಲಿಸಿದರು ಎಂದು ಮೂಲಗಳು ತಿಳಿಸಿವೆ.
ತರಬೇತಿಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅವರು, ‘ಮೈತ್ರಿ ಪ್ರಸ್ತಾಪ ಬಂದಿಲ್ಲ’ ಎಂದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪರಮೇಶ್ವರ ಮಾತನಾಡಿ, ‘ಮೈತ್ರಿ ಬಗ್ಗೆ ನನಗೇನೂ ಗೊತ್ತಿಲ್ಲ. ಮಾಧ್ಯಮಗಳಿಂದ ಈ ವಿಷಯ ಗೊತ್ತಾಯಿತು. ಹೈಕಮಾಂಡ್‌ ತೀರ್ಮಾನವೇ ಅಂತಿಮ’ ಎಂದು ಸ್ಪಷ್ಟಪಡಿಸಿದರು.

‘ಕೆಲವು ಶಾಸಕರು ಮೈತ್ರಿ ಪ್ರಯತ್ನದಲ್ಲಿ ತೊಡಗಿರುವ ವಿಷಯ ಗಮನಕ್ಕೆ ಬಂದಿದೆ. ಕೆಪಿಸಿಸಿ ಗಮನಕ್ಕೆ ತಾರದೆ ಏಕೆ ಮುಂದಡಿ ಇಟ್ಟಿದ್ದೀರಿ ಎಂದು ಅವರನ್ನು ಪ್ರಶ್ನಿಸಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು. ‘ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷಕ್ಕೆ 76 ಸ್ಥಾನಗಳು ಸಿಕ್ಕಿವೆ. ನಮ್ಮ ಸ್ಥಾನ ಏನೆಂಬುದು ಗೊತ್ತಿದೆ’ ಎಂದು ಮಾರ್ಮಿಕವಾಗಿ ನುಡಿದರು.

ಕೇರಳದಲ್ಲಿ ಠಿಕಾಣಿ: ರಹಸ್ಯ ಸ್ಥಳದಲ್ಲಿರುವ ಐವರು ಪಕ್ಷೇತರರು ಕೇರಳದ ಅಲೆಪ್ಪಿಯ ಗೆಸ್ಟ್‌ ಹೌಸ್‌ನಲ್ಲಿರುವ ಸಂಗತಿ ಶನಿವಾರ ಬಹಿರಂಗಗೊಂಡಿದೆ. ಶಾಸಕರಾದ ಬೈರತಿ ಬಸವರಾಜು ಹಾಗೂ ಮುನಿರತ್ನ ಅವರ ಜತೆಗೆ ತೆಗೆದುಕೊಂಡಿರುವ ಛಾಯಾಚಿತ್ರ ಮಾಧ್ಯಮಗಳಿಗೆ ಲಭ್ಯವಾಗಿದೆ.

ಈ ನಡುವೆ, ರಾಜಧಾನಿಯಿಂದ ಪ್ರವಾಸ ಹೊರಟಿರುವ ಜೆಡಿಎಸ್ ಸದಸ್ಯರು ಕೂಡಾ ಅದೇ ಗೆಸ್ಟ್‌ ಹೌಸ್‌ನಲ್ಲಿ ತಂಗಲಿದ್ದಾರೆ ಎಂದು ಗೊತ್ತಾಗಿದೆ.

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್‌ ಶಾಸಕ ಗೋಪಾಲಯ್ಯ, ‘ದಳದ14 ಸದಸ್ಯರನ್ನು ಬೇರೆ  ಪಕ್ಷದವರು ಸೆಳೆಯುವ ಸಾಧ್ಯತೆ ಇದೆ. ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಪ್ರವಾಸಕ್ಕೆ ಹೋಗುತ್ತಿದ್ದೇವೆ’ ಎಂದು ಸ್‍ಪಷ್ಟಪಡಿಸಿದರು.

‘ಬಿಜೆಪಿ ಕಚೇರಿಗೆ ಅಲೆದಾಡಿದ್ದೆ’
‘ಪಾಲಿಕೆ ಸದಸ್ಯನಾಗಿ ಆಯ್ಕೆಯಾದ ಬಳಿಕ ಬಿಜೆಪಿ ಸೇರಲು ಉತ್ಸುಕನಾಗಿದ್ದೆ. ಅದಕ್ಕಾಗಿ ಬಿಜೆಪಿ ಕಚೇರಿಗೆ ಹಲವು ಸಲ ಅಲೆದಾಡಿದ್ದೇನೆ. ಆದರೆ, ಅಲ್ಲಿ ಕೇಳುವವರೇ ಇರಲಿಲ್ಲ’ ಎಂದು ಕೊನೇನ ಅಗ್ರಹಾರ ವಾರ್ಡ್‌ನ ಪಕ್ಷೇತರ ಸದಸ್ಯ ಚಂದ್ರಪ್ಪ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಕೇರಳದಿಂದಲೇ ಮಾಧ್ಯಮದ ಜತೆಗೆ ಮಾತನಾಡಿದ ಅವರು, ‘ಶಾಸಕರೊಬ್ಬರು ಹೀಯಾಳಿಸಿದರು. ಬಿಜೆಪಿ ಮುಖಂಡರು ಹಸಿ ಸುಳ್ಳು ಹೇಳುತ್ತಿದ್ದಾರೆ. ಈಗ ನಮ್ಮ ಹೆಸರಿಗೆ ಕಳಂಕ ತರುವ ಯತ್ನ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಂಪಾಪುರ ಅಗ್ರಹಾರ ವಾರ್ಡ್‌ ಸದಸ್ಯೆ ಗಾಯತ್ರಿ ಅವರ ಪತಿ ಮಾತನಾಡಿ, ‘ವಾರ್ಡ್‌ನ ಜನರಿಗೋಸ್ಕರ ಕಾಂಗ್ರೆಸ್‌ ಸೇರಲು ನಿರ್ಧರಿಸಲಾಗಿದೆ. ಇದರಲ್ಲಿ ಯಾವುದೇ ಕುತಂತ್ರ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT