ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಲುಗಾರ್ತಿಯರ ಎದುರು ಚಿನ್ನದ ಗುರಿ...

Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಆರಂಭಿಕ ಸುತ್ತುಗಳಲ್ಲಿಯೇ ಮುಗ್ಗರಿಸಿದ್ದ ಭಾರತದ ಬಿಲ್ಲುಗಾರ್ತಿಯರು ಈಗ ಹೊಸ ಸವಾಲಿಗೆ ಸಜ್ಜಾಗಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ತಂಡ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಗುರಿ ಇಡಲು ಕಾಯುತ್ತಿದ್ದಾರೆ. ಇದರಲ್ಲಿ ಯಶಸ್ಸು ಕಾಣುವರೇ? ಈ ಕುರಿತು ಪ್ರಮೋದ ಜಿ.ಕೆ. ವಿಶ್ಲೇಷಿಸಿದ್ದಾರೆ.

‘ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಸಣ್ಣ ಎಡವಟ್ಟಾದರೂ ನಿರಾಸೆ ಕಾಣಬೇಕಾ ಗುತ್ತದೆ. ಆದ್ದರಿಂದ ನಾವು ತಂಡ ವಿಭಾಗಕ್ಕೆ ಒತ್ತು ನೀಡುತ್ತಿದ್ದೇವೆ. ಇದೇ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ..’

ಕೆಂಗೇರಿಯ ಬಳಿ ಇರುವ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ  ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ, ಬೊಂಬ್ಯಾಲ ದೇವಿ ಮತ್ತು ಲಕ್ಷ್ಮಿರಾಣಿ ಮಾಜ್ಹಿ ಅಭ್ಯಾಸ ನಡೆಸುತ್ತಿದ್ದರು. ಅವರನ್ನೇ ದಿಟ್ಟಿಸಿ ಭಾರತ ಮಹಿಳಾ ತಂಡದ ಕೋಚ್‌್ ಪೂರ್ಣಿಮಾ ಮಹತೊ ಈ ಮೇಲಿನ ಮಾತುಗಳನ್ನು ಹೇಳುತ್ತಿದ್ದರು.

ರಿಯೊ ಒಲಿಂಪಿಕ್ಸ್‌ ಆರಂಭವಾಗಲು ಒಂದು ತಿಂಗಳಷ್ಟೇ ಬಾಕಿಯಿದೆ. ಅರ್ಹತೆ ಪಡೆದಿರುವ ಕ್ರೀಡಾಪಟುಗಳು ಪದಕದ ಬೇಟೆಗೆ ಸಜ್ಜಾಗುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ ಗೆಲ್ಲುವ ಗುರಿ ಹೊಂದಿರುವ ಭಾರತದ ಬಿಲ್ಲುಗಾರ್ತಿಯರು ಚಿನ್ನದತ್ತ ಬಾಣ ಬಿಡಲು ಕಾಯುತ್ತಿದ್ದಾರೆ. ಆದರೆ, ಮುಖ್ಯ ಗಮನವಿರುವುದು ತಂಡ ವಿಭಾಗದತ್ತ ಮಾತ್ರ.

ಹಿಂದಿನ ಅಂತರರಾಷ್ಟ್ರೀಯ ಆರ್ಚರಿ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತ ವೈಯಕ್ತಿಕ ವಿಭಾಗಕ್ಕಿಂತ ತಂಡ ವಿಭಾಗದಲ್ಲಿಯೇ ಹೆಚ್ಚು ಪದಕಗಳನ್ನು ಜಯಿಸಿದೆ. 2011 ಮತ್ತು 2015ರ ವಿಶ್ವ ಚಾಂಪಿ ಯನ್‌ಷಿಪ್‌ಗಳಲ್ಲಿ ಭಾರತ ಮಹಿಳಾ ತಂಡ ಬೆಳ್ಳಿ ಜಯಿಸಿತ್ತು.

2010ರ ನವದೆಹಲಿ ಕಾಮನ್‌ ವೆಲ್ತ್‌ ಕ್ರೀಡಾಕೂಟದ ರಿಕರ್ವ್‌ ವಿಭಾಗದಲ್ಲಿಯೂ ಬೆಳ್ಳಿ ಗೆದ್ದುಕೊಂಡಿತ್ತು. ಅದೇ ವರ್ಷ ಚೀನಾದ ಗುವಾಂಗ್ ಜೌನಲ್ಲಿ ಜರುಗಿದ ಏಷ್ಯನ್‌ ಕೂಟದಲ್ಲಿ ಕಂಚು ಪಡೆದಿತ್ತು. ತಂಡ ವಿಭಾಗ ದಲ್ಲಿ ಭಾರತ ಉತ್ತಮ ಸಾಧನೆ ಮಾಡಿರುವ ಕಾರಣ ರಿಯೊ ದಲ್ಲಿಯೂ ತಂಡ ವಿಭಾಗಕ್ಕೆ ಒತ್ತು ನೀಡಲು ಮುಂದಾಗಿದೆ.

2012ರಲ್ಲಿ ವಿಶ್ವ ರ್‍ಯಾಂಕ್‌ನಲ್ಲಿ ಅಗ್ರಸ್ಥಾನ ಹೊಂದಿದ್ದ ದೀಪಿಕಾ, ಮಣಿಪುರದ ಬೊಂಬ್ಯಾಲ ದೇವಿ ಮತ್ತು ಲಕ್ಷ್ಮಿರಾಣಿ ಅವರು ಈ ಬಾರಿಯೊ ಒಲಿಂಪಿಕ್ಸ್‌ನ ಭಾರತ ಮಹಿಳಾ ತಂಡದ ಸದಸ್ಯರು.

ಮೂವರೂ ಬಿಲ್ಲುಗಾರ್ತಿಯರ ನಡುವೆ ಚೆನ್ನಾಗಿ ಹೊಂದಾಣಿಕೆಯಿದೆ. ಒಬ್ಬರು ವಿಫಲ ರಾದರೆ ಮತ್ತೊಬ್ಬರು ಉತ್ತಮ ನಿರ್ವಹಣೆ ತೋರುವ ಸಾಮರ್ಥ್ಯ ಹೊಂದಿದ್ದಾರೆ. ಕೋಚ್‌ ಪೂರ್ಣಿಮಾ ಮಹತೊ ಕೂಡ ಇದೇ ಮಾತುಗಳನ್ನು ಹೇಳಿದ್ದಾರೆ.

‘ಬೊಂಬ್ಯಾಲ ದೇವಿ ಮೊದಲ ಶೂಟರ್‌, ಲಕ್ಷ್ಮಿರಾಣಿ ಎರಡನೇ ಶೂಟರ್ ಆಗಿದ್ದು ಮೂರನೇ ಮತ್ತು ಕೊನೆಯ ಶೂಟರ್‌ ಆಗಿ ದೀಪಿಕಾ ಕಣಕ್ಕಳಿಯಲಿದ್ದಾರೆ. ಇದರಿಂದ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ ವಾಗುತ್ತದೆ.

ಹೋದ ವರ್ಷ ಕೋಪನ್‌ ಹೇಗನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ತಂಡದಲ್ಲಿದ್ದ ಇಬ್ಬರು (ದೀಪಿಕಾ ಮತ್ತು ಲಕ್ಷ್ಮಿರಾಣಿ) ಆಟಗಾರ್ತಿಯರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಇದರಿಂದ ಹೊಂದಾಣಿಕೆಯೂ ಸುಲಭವಾಗುತ್ತದೆ’ ಎಂದು ಪೂರ್ಣಿಮಾ ಹೇಳುತ್ತಾರೆ.

ಹೆಚ್ಚಿದ ಪೈಪೋಟಿ
ಒಲಿಂಪಿಕ್ಸ್‌ನ ಆರ್ಚರಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಸ್ಪರ್ಧಿಗಳ ಸಂಖ್ಯೆ ಪ್ರತಿಬಾರಿಯೂ ಹೆಚ್ಚಾಗುತ್ತಿದೆ.
ಒಲಿಂಪಿಕ್ಸ್‌ನಲ್ಲಿ ಆರ್ಚರಿ ಸೇರ್ಪಡೆಯಾಗಿದ್ದು 1900ರಲ್ಲಿ. ಆದರೆ ಭಾರತ ಆರ್ಚರಿ ತಂಡ 1988ರ ಸೋಲ್‌ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿತ್ತು.

ಲಿಂಬಾ ರಾಮ್‌, ಶ್ಯಾಮ್‌ ಲಾಲ್ ಮತ್ತು ಸಂಜೀವ್‌ ಸಿಂಗ್ ಮೊದಲ ಬಾರಿಗೆ ವಿಶ್ವದ ಶ್ರೇಷ್ಠ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ನಾಲ್ವರು ಆರ್ಚರಿ ಪಟುಗಳು ಪಾಲ್ಗೊಂಡಿದ್ದರು.

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಆರು ಜನ ದೇಶವನ್ನು ಪ್ರತಿನಿಧಿಸಿದ್ದರು. ಪುರುಷರ ವಿಭಾಗದಲ್ಲಿ ಜಯಂತ್‌ ತಾಲ್ಲೂಕದಾರ್‌, ರಾಹುಲ್ ಬ್ಯಾನರ್ಜಿ ಮತ್ತು ತರುಣದೀಪ್ ರಾಯ್‌ ಕಣಕ್ಕಿಳಿದಿದ್ದರು. ಮಹಿಳಾ ವಿಭಾಗದಲ್ಲಿ ದೀಪಿಕಾ, ಬೊಂಬ್ಯಾಲ ದೇವಿ ಮತ್ತು ಚಕ್ರವೊಲೊ ಸೊರೊ ಇದ್ದರು.

ಆದರೆ ಭಾರತಕ್ಕೆ ಆರ್ಚರಿಯಲ್ಲಿ ಇದುವರೆಗೂ ಒಲಿಂಪಿಕ್ಸ್‌ನಲ್ಲಿ ಒಂದೂ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ದಕ್ಷಿಣ ಕೊರಿಯಾ, ಅಮೆರಿಕ, ಇಟಲಿ, ಚೀನಾ, ಸೋವಿಯತ್‌ ಯೂನಿಯನ್‌, ಫಿನ್‌ಲ್ಯಾಂಡ್‌, ಉಕ್ರೇನ್‌, ಆಸ್ಟ್ರೇಲಿಯಾ,

ಫ್ರಾನ್ಸ್‌ ಮತ್ತು ಜಪಾನ್ ಸ್ಪರ್ಧಿಗಳ ನಿಖರ ಗುರಿಗೆ ಸಾಟಿಯಾಗಲು ಆಗಿಲ್ಲ. ಆದ್ದರಿಂದ ಭಾರತ ರಿಯೊ ಒಲಿಂಪಿಕ್ಸ್‌ನಲ್ಲಿ ತಂಡ ವಿಭಾಗದಲ್ಲಿ ಬಲಿಷ್ಠವಾಗುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ.

ಅನುಭವಿ  ಬಿಲ್ಲುಗಾರ್ತಿ
ಹಿಂದಿನ ಎರಡು ಒಲಿಂಪಿಕ್ಸ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಬೊಂಬ್ಯಾಲ ದೇವಿ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ.

2008ರ ಒಲಿಂಪಿಕ್ಸ್‌ನಲ್ಲಿ ಅದೃಷ್ಟದ ಮೂಲಕ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. ರ್‍ಯಾಂಕಿಂಗ್‌ ಸುತ್ತಿನಲ್ಲಿ ಗೆಲುವು ಪಡೆದಿದ್ದ ಬೊಂಬ್ಯಾಲ ದೇವಿ 16ರ ಘಟ್ಟದ ಹೋರಾಟದಲ್ಲಿ ಬೈ ಪಡೆದಿದ್ದರು. ಆದರೆ ಎಂಟರ ಘಟ್ಟದ ಹೋರಾಟದಲ್ಲಿ ಚೀನಾದ ಆಟಗಾರ್ತಿಯ ವಿರುದ್ಧ ಸೋತಿದ್ದರು.

2012ರ ಒಲಿಂಪಿಕ್ಸ್‌ನಲ್ಲಿ ಎರಡನೇ ಸುತ್ತಿನಲ್ಲಿಯೇ ಬೊಂಬ್ಯಾಲ ದೇವಿ ಸೋತಿ ದ್ದರು. ಆ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಐದಾ ರೋಮನ್‌ ವಿರುದ್ಧ ಮಣಿದಿದ್ದರು. ತಂಡ ವಿಭಾಗದಲ್ಲಿ ಆರಂಭಿಕ ಸುತ್ತಿನಲ್ಲಿಯೇ ಡೆನ್ಮಾರ್ಕ್‌ ವಿರುದ್ಧ ಭಾರತ ನಿರಾಸೆ ಕಂಡಿತ್ತು. ಆ ತಂಡದಲ್ಲಿ ಬೊಂಬ್ಯಾಲ ದೇವಿ ಇದ್ದರು.

ಕ್ರೀಡಾಕುಟುಂಬದ ಕುಡಿ
ಭಾರತೀಯ ರೈಲ್ವೇಯಲ್ಲಿ ಉದ್ಯೋಗಿಯಾಗಿರುವ ಲಕ್ಷ್ಮಿರಾಣಿ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಈ ಆಟಗಾರ್ತಿ ಆರ್ಚರಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಕುಟುಂಬದ ವಾತಾವರಣವೇ ಸ್ಫೂರ್ತಿ. ಇವರ ತಂದೆ ಜಾರ್ಖಂಡ್‌ ತಂಡದ ಹ್ಯಾಂಡ್‌ಬಾಲ್ ಕೋಚ್‌. ತಾಯಿ ಆರ್ಚರಿ ಕೋಚ್‌. ಹೀಗೆ ಕ್ರೀಡಾಮಯ ವಾತಾವರಣವೇ ಅವರಿಗೆ ಸ್ಫೂರ್ತಿಯಾಗಿದೆ.

‘ಮನೆಯಲ್ಲಿ ಕ್ರೀಡಾ ವಾತವರಣವಿದೆ. ಇದರಿಂದ ನಾನೂ ಕ್ರೀಡಾ ಪಟುವಾಗಲು ಸಾಧ್ಯವಾಯಿತು. ಸಹೋದರಿ ಕೂಡ ಆರ್ಚರಿ ಕ್ರೀಡೆಯಲ್ಲಿ ತೊಡಗಿಕೊಂಡಿದ್ದಾಳೆ.

ಹೋದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಈ ಕ್ರೀಡೆಯಲ್ಲಿಯೂ ಸಾಧನೆ ಮಾಡಿ ಗುರುತಿಸಿ ಕೊಳ್ಳಬಹುದು ಎನ್ನುವ ವಿಶ್ವಾಸ ಮೂಡಿದೆ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳ ಬೇಕೆನ್ನುವ ಆಸೆ ಈಗ ಈಡೇರುತ್ತಿದೆ. ಇದರ ಎಲ್ಲಾ ಶ್ರೇಯ ಅಪ್ಪನಿಗೆ ಸಲ್ಲಬೇಕು’ ಎಂದು ಲಕ್ಷ್ಮಿರಾಣಿ ಹೇಳುತ್ತಾರೆ.

ಭಾರಿ ಸವಾಲು
ವಿಶ್ವಕಪ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟದ ವೈಯಕ್ತಿಕ ಸ್ಪರ್ಧೆಯಲ್ಲಿ ನಾಲ್ಕು ಪದಕಗಳನ್ನು ಗೆದ್ದಿರುವ ದೀಪಿಕಾ ಕುಮಾರಿ ಭಾರತದ ಭರವಸೆ ಎನಿಸಿದ್ದಾರೆ.

ಈಗ ವಿಶ್ವ ರ್‍ಯಾಂಕ್‌ನಲ್ಲಿ ಐದನೇ ಸ್ಥಾನ ಹೊಂದಿರುವ ದೀಪಿಕಾ ಟಾಟಾ ಆರ್ಚರಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. 2011, 2012 ಮತ್ತು 2013ರ ವಿಶ್ವಕಪ್‌ನ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. 2010ರ ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದರು.

ಲಂಡನ್‌ ಒಲಿಂಪಿಕ್ಸ್ ಆರಂಭವಾಗುವ ಕೆಲ ತಿಂಗಳುಗಳ ಮೊದಲು ದೀಪಿಕಾ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು. ಆದರೆ, ಅವರು ಒಲಿಂಪಿಕ್ಸ್‌ನಲ್ಲಿ ಮೊದಲ ಸುತ್ತಿನಲ್ಲಿ (ರ್‍ಯಾಂಕಿಂಗ್‌ ರೌಂಡ್‌) ಮುಗ್ಗರಿಸಿದ್ದರು.

ಬೊಂಬ್ಯಾಲ ದೇವಿ 32ರ ಘಟ್ಟ ತಲುಪಿದ್ದರೆ, ಚಕ್ರವೊರು ಕೂಡ ಆರಂಭಿಕ ಸುತ್ತಿನಲ್ಲಿಯೇ ನಿರಾಸೆ ಅನುಭವಿಸಿದ್ದರು. ತಂಡ ವಿಭಾಗದಲ್ಲಿ ಭಾರತ ಪ್ರೀ ಕ್ವಾರ್ಟರ್ ಫೈನಲ್‌ ಪ್ರವೇಶಿಸಿತ್ತು ಆದ್ದರಿಂದ ಈ ಬಾರಿಯ ಒಲಿಂಪಿಕ್ಸ್‌ ಭಾರಿ ಸವಾಲು ಎನಿಸಿದೆ.

ಬೆಂಗಳೂರಿನ ವಾತಾವರಣ ನೆರವು..
ಉದ್ಯಾನನಗರಿಯಲ್ಲಿ ಆಗಾಗ್ಗೆ ಮಳೆ ಬೀಳುತ್ತಿರುವ ಕಾರಣ ಇಲ್ಲಿನ ವಾತಾ ವರಣ ತಂಪಾಗಿದೆ. ಇದು ಭಾರತದ ಬಿಲ್ಲುಗಾರ್ತಿಯರಿಗೆ ವರದಾನವಾಗಿ ಪರಿಣಮಿಸಿದೆ.

‘ಲಂಡನ್ ಒಲಿಂಪಿಕ್ಸ್‌ನಲ್ಲಿ ವಾತಾ ವರಣದ್ದೇ ನಮಗೆ ದೊಡ್ಡ ಸಮಸ್ಯೆಯಾ ಯಿತು. ಆದ್ದರಿಂದ ಆರಂಭಿಕ ಸುತ್ತು ಗಳಲ್ಲಿ ನಿರಾಸೆ ಕಂಡೆವು. ಆರ್ಚರಿ ಸ್ಪರ್ಧೆ ಗಳು ನಡೆದ ಲಾರ್ಡ್ಸ್‌ ಕ್ರಿಕೆಟ್‌ ಮೈದಾ ನದ ವಾತಾವರಣ ತುಂಬಾ ತಂಪಾಗಿತ್ತು. ಆದರೆ ನಾವು ಹಿಂದೆ ಕೋಲ್ಕತ್ತದಲ್ಲಿ ಅಭ್ಯಾಸ ನಡೆಸಿದ್ದೆವು.

ಕೋಲ್ಕತ್ತದಲ್ಲಿ ಸಾಕಷ್ಟು ಬಿಸಿಲಿತ್ತು. ಹೀಗೆ ಒಂದ ಕ್ಕೊಂದು ತದ್ವಿರುದ್ಧ ವಾತಾವರಣ ಕೂಡ  ಸ್ಪರ್ಧಿಗಳ ಮೇಲೆ ಪರಿಣಾಮ ಬೀರಿತು’ ಎಂದು ರಾಷ್ಟ್ರೀಯ ತಂಡದ ಕೋಚ್‌ ಧರ್ಮೇಂದ್ರ ತಿವಾರಿ ಹೇಳಿದರು.

ಈ ಬಾರಿಯ ಶಿಬಿರವನ್ನು ಬೆಂಗ ಳೂರಿನಲ್ಲಿ ಆಯೋಜಿಸಿದ್ದಕ್ಕೆ ತಿವಾರಿ ಸಂತೋಷ ವ್ಯಕ್ತಪಡಿಸಿದ್ದಾರೆ. ‘ವಾತಾವರಣ ಕೂಡ ಸ್ಪರ್ಧಿಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದಕ್ಕೆ ಬೆಂಗಳೂರಿನ ವಾತಾವರಣ ಅನುಕೂಲ ವಾಗಿದೆ. ತಂಪಾಗಿರುವುದರಿಂದ ಹೆಚ್ಚು ಹೊತ್ತು ಅಭ್ಯಾಸ ನಡೆಸಲು ಸಾಧ್ಯವಾಗು ತ್ತದೆ’ ಎಂದೂ ಅವರು ಅನಿಸಿಕೆ ವ್ಯಕ್ತಪಡಿದ್ದಾರೆ.

ಬೆಳವಣಿಗೆಯ ಹಾದಿಯಲ್ಲಿ
‘ಭಾರತದ ಆರ್ಚರಿ ಸ್ಪರ್ಧಿಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಆರಂಭಿಸಿ 18 ವರ್ಷಗಳು ಕಳೆದಿವೆ. ಈ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ನಮ್ಮ ಸ್ಪರ್ಧಿಗಳ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ. ಭಾರತದ ಲ್ಲಿಯೂ ಆರ್ಚರಿ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದು ತಿವಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT