ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧನ ಜೀವಿತಾವಧಿ: ಹೊಸ ಪುರಾತತ್ವ ಸಾಕ್ಷ್ಯ

Last Updated 26 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ನೇಪಾಳ­ದಲ್ಲಿರುವ ಮಹಾಜ್ಞಾನಿ ಬುದ್ಧನ ಜನ್ಮಸ್ಥಳದಲ್ಲಿ ಅತಿ ಪುರಾತನ ಬೌದ್ಧ ದೇವಾಲಯ­ವನ್ನು ಪುರಾತತ್ವ ತಜ್ಞರು ಪತ್ತೆ ಹಚ್ಚಿ­ದ್ದಾರೆ. ಈ ಬೆಳವಣಿಗೆಯು ಅಹಿಂಸೆ ಪ್ರತಿಪಾದಕನ ಜೀವಿತಾವಧಿ ಬಗ್ಗೆ ಹೊಸ ಹೊಳಹು ನೀಡಿದೆ.

ಹೊಸ ಅಂದಾಜಿನ ಪ್ರಕಾರ, ಗೌತಮ ಬುದ್ಧನು  ಕ್ರಿಸ್ತ ಪೂರ್ವ ಆರನೇ ಶತಮಾನದಲ್ಲಿ ಜೀವಿಸಿದ್ದ. ಅಂದರೆ, ಈ ಮೊದಲು ಊಹಿಸಿದ್ದಕ್ಕಿಂತಲೂ ಎರಡು ಶತಮಾನ ಮೊದಲೇ ಬುದ್ಧ ಜೀವಿಸಿದ್ದ ಎಂದು ತಜ್ಞರು ಪ್ರತಿಪಾದಿಸಿದ್ದಾರೆ.

ಬುದ್ಧನ ಜನ್ಮಸ್ಥಳ ಎಂದು ಗುರುತಿಸ­ಲಾ­ಗಿರುವ,  ಲುಂಬಿನಿ­ಯಲ್ಲಿರುವ ಮಾಯಾ ದೇವಿ ದೇವಾಲಯ­ದಲ್ಲಿ ಉತ್ಖನನ ನಡೆಸಿದ ಸಂದರ್ಭ­ದಲ್ಲಿ ಮರದಿಂದ ನಿರ್ಮಿಸಲಾಗಿರುವ ದೇಗುಲದ ಅವಶೇಷಗಳು ಪತ್ತೆಯಾಗಿವೆ.

ಪತ್ತೆಯಾಗಿರುವ ಮರದ ರಚನೆಯು ಕ್ರಿ.ಪೂ. ಆರನೇ ಶತಮಾನಕ್ಕೆ ಸೇರಿದ್ದು ಎಂದು ತಜ್ಞರು ಹೇಳಿದ್ದಾರೆ.

ಬುದ್ಧನ ಜೀವಿತಾವಧಿ ಬಗ್ಗೆ ಇನ್ನೂ ಜಿಜ್ಞಾಸೆ ಇದೆ. ಹೆಚ್ಚಿನ ಇತಿಹಾಸ ತಜ್ಞರು ಬುದ್ಧ ಕ್ರಿ.ಪೂ ನಾಲ್ಕನೇ ಶತಮಾನದಲ್ಲಿ ಜೀವಿಸಿದ್ದ ಎಂದು ವಾದಿಸುತ್ತಾ ಬಂದಿದ್ದಾರೆ. ಹಾಗಾಗಿ ಈಗ ಪತ್ತೆಯಾಗಿರುವ ಪುರಾತನ ದೇವಾಲಯವು ಬುದ್ಧ ಕ್ರಿ.ಪೂ. ಆರನೇ ಶತಮಾನದಲ್ಲಿಯೇ ಶಾಂತಿಯ ಸಂದೇಶ ಸಾರಿದ್ದ ಎಂಬ ವಾದವನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ.

‘ಬುದ್ಧನ ಜೀವನಕ್ಕೆ ಸಂಬಂಧಿಸಿದಂತೆ ದೊರೆತಿರುವ ಮೊದಲ ಪುರಾತತ್ವ ವಸ್ತು ಇದು’ ಎಂದು ಉತ್ಖನನ ತಂಡದ ಮುಖ್ಯಸ್ಥರಾಗಿರುವ ಬ್ರಿಟನ್‌ನ ಡುರ್‌ಹ್ಯಾಮ್‌ ವಿಶ್ವ­ವಿದ್ಯಾಲಯದ ರಾಬಿನ್‌ ಕನಿಂಗ್‌­ಹ್ಯಾಮ್‌ ಹೇಳಿದ್ದಾರೆ.

ಮರದ ದೇವಾಲಯದ ಮಧ್ಯದಲ್ಲಿ  ಖಾಲಿ ಜಾಗ ಇದ್ದು, ಇದು ಬುದ್ಧನ ಜನ್ಮ ವೃತ್ತಾಂತಕ್ಕೆ  (ಲುಂಬಿನಿ ಉದ್ಯಾನದಲ್ಲಿ ರಾಣಿ ಮಾಯಾ ದೇವಿ ಮರದ ಗೆಲ್ಲನ್ನು ಹಿಡಿದುಕೊಂಡು ಬುದ್ಧನಿಗೆ ಜನ್ಮ ನೀಡಿದ್ದರು ಎಂಬ ವಾದಕ್ಕೆ) ಹೊಂದಿ­ಕೊಳ್ಳುವಂತೆ ಇದೆ. ಇದಕ್ಕೆ ಪೂರಕವೆಂಬಂತೆ  ದೇವಾಲಯದ ಮಧ್ಯದಲ್ಲಿ ಮರ­ ಇದ್ದ ಬಗ್ಗೆಯೂ ಕುರುಹುಗಳು ಲಭ್ಯವಾಗಿವೆ. ಆ ಸ್ಥಳದಲ್ಲಿ ಪುರಾತನ ಮರ­ವೊಂದರ ಬೇರುಗಳ ಇರುವಿಕೆಯನ್ನು ತಜ್ಞರು ದೃಢಪಡಿಸಿ­ದ್ದಾರೆ.

ಬುದ್ಧನ ಜೀವನಕ್ಕೆ ಸಂಬಂಧಿಸಿದಂತೆ ಇದುವರೆಗೆ ಲುಂಬಿನಿಯಲ್ಲಿ ಪತ್ತೆ­ಯಾಗಿರುವ ಪುರಾತನ ವಸ್ತುಗಳು ಕ್ರಿ.ಪೂ. ಮೂರನೇ ಶತಮಾನದ (ಈಗಿನ ಆಫ್ಘಾನಿಸ್ತಾನ­ದಿಂದ ಬಾಂಗ್ಲಾ­ದೇಶದವರೆಗೆ ಬೌದ್ಧ ಧರ್ಮವನ್ನು ಪ್ರಸಾರ ಮಾಡಿದ ಅಶೋಕ ಚಕ್ರವರ್ತಿ  ಆಡಳಿತದ ಅವಧಿ) ನಂತರದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT