ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಗಾರುಡಿಗ

Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಎಂಬತ್ತೆರಡು ವರ್ಷದ ತುಂಬು ಜೀವನದಲ್ಲಿ, ಎಪ್ಪತ್ತು ವರ್ಷಗಳಿಗೂ ಅಧಿಕ ಕಾಲ ರಂಗದ ಮೇಲೆ ಕಾಲ ಕಳೆದವರು ವಿ. ರಾಮಮೂರ್ತಿ. ಕನ್ನಡಿಗರಿಂದ ‘ಅಂತರರಾಷ್ಟ್ರೀಯ ಬೆಳಕು ತಜ್ಞ’ ಎಂಬ ಅಭಿಮಾನದ ಬಣ್ಣನೆಗೆ ಒಳಗಾಗಿರುವ ಅವರು ಬೆಳಕುತಜ್ಞ ಮಾತ್ರವಲ್ಲ, ನಿರ್ದೇಶಕ, ರಾಗ ಸಂಯೋಜಕ, ಮೂಕಾಭಿನಯ ಪಟು, ಧ್ವನಿತಜ್ಜರೂ ಹೌದು.

ರಂಗಸಜ್ಜಿಕೆ, ಪ್ರಸಾಧನದಲ್ಲೂ ಎತ್ತಿದ ಕೈ. ಆದರೆ, ಈ ಎಲ್ಲ ಬಹುರೂಪಿ ಪ್ರತಿಭೆ ಒಂದು ತೂಕವಾದರೆ; ಬೆಳಕಿನ ವಿನ್ಯಾಸದ ಅವರ ಕ್ರಿಯಾಶೀಲತೆ ಮತ್ತೊಂದು ತೂಕ. ಹಾಗಾಗಿಯೇ ಅವರಿಗೆ ‘ಅಂತರರಾಷ್ಟ್ರೀಯ ಬೆಳಕು ತಜ್ಞ’ ವಿಶೇಷಣ ಸರಿಯಾಗಿ ಒಪ್ಪುತ್ತದೆ.

ದೇಶದ ಐವತ್ತಕ್ಕೂ ಹೆಚ್ಚು ರಂಗಮಂದಿರಗಳಿಗೆ ಬೆಳಕು – ಧ್ವನಿ ವ್ಯವಸ್ಥೆ ರೂಪಿಸಿದ ವಾಸ್ತುಶಿಲ್ಪಿ ಅವರು. ‘ರವೀಂದ್ರ ಕಲಾಕ್ಷೇತ್ರ’ ಸೇರಿದಂತೆ ಬೆಂಗಳೂರಿನ ಇಪ್ಪತ್ತಕ್ಕೂ ಹೆಚ್ಚು ರಂಗಮಂದಿರಗಳ ಬೆಳಕಿನ ನಿರ್ಮಾತೃ ಅವರು. ಪ್ರಾಯೋಗಿಕ ಅಲ್ಲ ಎಂಬ ಕಾರಣಕ್ಕೆ ಕೆಲವು ಕಲಾಕ್ಷೇತ್ರಗಳಲ್ಲಿ ಅವರ ಒಂದೆರಡು ಸಲಹೆಗಳನ್ನು ಕೈಬಿಟ್ಟಿರಬಹುದಾದರೂ – ಮೂಲಪುರುಷನಂತೆ ನಿಂತು ಬೆಳಕನ್ನು ಸರಿಯಾಗಿ ಹರಿಸಿದ ಭಗೀರಥ ಅವರು.

ಬೆಂಗಳೂರಿನಲ್ಲಿ ಸಂಸ್ಕೃತ ಹಾಗೂ ತೆಲುಗು ಪ್ರೊಫೆಸರ್ ಆಗಿದ್ದ ವೆಲ್ಲಾಲೂರು ವೆಂಕಟಾದ್ರಿ ಶರ್ಮ ಹಾಗೂ ವಿ. ಪದ್ಮಾವತಮ್ಮ ದಂಪತಿಯ ಏಳು ಜನ ಮಕ್ಕಳಲ್ಲಿ ನಾಲ್ಕನೆಯವರಾಗಿ 1935ರಲ್ಲಿ ಜನಿಸಿದ ರಾಮಮೂರ್ತಿ, ನಿರಂತರ ನಾಟಕಗಳನ್ನು ‘ನೋಡುವ’ ಪರಿಸರದಲ್ಲಿ ಬೆಳೆದರು. ಪ್ರೊ. ಎಂ.ಎಸ್. ನಾಗರಾಜ್, ಬಿ. ರೇವಣ್ಣ, ಎಸ್. ಶ್ರೀನಿವಾಸರಾವ್, ಪ್ರೊ. ಪಾರ್ಥಸಾರಥಿ ಹಾಗೂ ಎ. ರಾಮರಾವ್ ಅವರ ನಾಟಕದ ಗುರುಗಳು. ‘ಗುಬ್ಬಿ ಕಂಪನಿ ಥಿಯೇಟರ್‌’ನಲ್ಲಿ ನಿರಂತರ ನಾಟಕ ಪ್ರದರ್ಶನ ಇರುತ್ತಿದ್ದವು.

ಜತೆಗೆ ಶೇಷಾದ್ರಿಪುರದ ಆರ್ಯ ಈಡಿಗ ಸಂಘದ ಹಾಸ್ಟೆಲಿನಲ್ಲಿ ಕಲಾನಿಕೇತನದ ನಾಟಕಗಳು ಆಗಾಗ ಜರುಗುತ್ತಿದ್ದವು. ಒಂದನ್ನೂ ತಪ್ಪಿಸಿಕೊಳ್ಳದೆ ನೋಡುತ್ತಿದ್ದರು. ಅವರ ರಂಗದ ಸೃಜನಶೀಲತೆಗೆ ಇಂಬು ದೊರೆಯಲು ಈ ನೋಡುವಿಕೆಯೇ ಕಾರಣವಾಯಿತು. ಈ ಮಧ್ಯೆ 1956ರಲ್ಲಿ ಐಟಿಐ ನೌಕರರಾಗಿ ನೇಮಕವಾಗಿದ್ದು, ಅಷ್ಟೇ ಬೇಗ ಕೆಲಸ ತೊರೆದು ಮತ್ತೆ ನಾಟಕಕ್ಕೆ ಸಮರ್ಪಿಸಿಕೊಂಡದ್ದು ಅವರ ಅದುವರೆಗಿನ ಬೆಳವಣಿಗೆಯಲ್ಲಿ ತೀರಾ ಸಹಜ ಕ್ರಿಯೆಯಾಗಿಬಿಟ್ಟಿತು.

ಗೆಳೆಯರೊಂದಿಗೆ 1957ರಲ್ಲಿ ‘ಲಲಿತ ಕಲಾನಿಕೇತನ’ ಸ್ಥಾಪಿಸಿ ನಟರಾಗಿ, ನೇಪಥ್ಯ ಕಲಾವಿದರಾಗಿ ತಮ್ಮನ್ನು ತೊಡಗಿಸಿಕೊಂಡರು. ‘ಯುನೆಸ್ಕೊ’ದ ಅಂಗವಾದ ದೆಹಲಿಯ ‘ಭಾರತೀಯ ನಾಟ್ಯಸಂಘ’ ಘಟಕವು ಬೆಂಗಳೂರಿನಲ್ಲಿ ಸ್ಥಾಪಿಸಿದ ‘ಮೈಸೂರು ಸ್ಟೇಟ್ ನಾಟ್ಯಸಂಘ ಥಿಯೇಟರ್’ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡ ರಾಮಮೂರ್ತಿ, ಅದರ ಅಧ್ಯಕ್ಷರಾದ ಶ್ರೀರಂಗ ಹಾಗೂ ಕಾರ್ಯದರ್ಶಿ ವಿಮಲಾ ರಂಗಾಚಾರ್ ಅವರನ್ನು ಮನಸಾರೆ ನೆನಪಿಸಿಕೊಳ್ಳುತ್ತಾರೆ.

ಬೆಂಗಳೂರಿಗೆ ಶ್ರೀರಂಗರ ಆಗಮನ ನಾಟಕದಲ್ಲಿ ಸಾಮಾಜಿಕತೆ ಜತೆಗೆ ತಾಂತ್ರಿಕ ಬೆಳವಣಿಗೆಗೂ ಕಾರಣವಾಯಿತು ಎನ್ನುತ್ತಾರೆ. ಇಂಗ್ಲಿಷ್ ನಾಟಕಗಳನ್ನಾಡುವ ‘ಬೆಂಗಳೂರು ಲಿಟಲ್ ಥಿಯೇಟರ್’ (ಬಿಎಲ್‌ಟಿ) ಸ್ಥಾಪಕ ಸದಸ್ಯರ ಪೈಕಿ ರಾಮಮೂರ್ತಿಯೂ ಒಬ್ಬರು.

ರಾಮಮೂರ್ತಿ ಅವರ ಸಾಧನೆಯ ಕರಾರುವಕ್ಕಾದ ಚಿತ್ರಣ ಕಟ್ಟಿಕೊಟ್ಟಿರುವ ಡಾ. ಎಚ್.ಎ. ಪಾರ್ಶ್ವನಾಥ್ ಅವರು– ‘‘ಅವರ ಅನ್ವೇಷಣಾ ಪ್ರವೃತ್ತಿ, ಅಭಿನಯಾಸಕ್ತಿ ಹಾಗೂ ತಾಂತ್ರಿಕ ಪರಿಣತಿ ಬಗೆಗಿನ ಅತೀವ ಒಲವಿನಿಂದಾಗಿ ತಮ್ಮ ಬದುಕಿನ ವಿಚಕ್ಷಣಾ ಹಾದಿಯ ಆರಂಭಿಕ ಹಂತದಲ್ಲಿಯೇ ಶ್ರೀ ರಾಮಮೂರ್ತಿಯವರು ರಂಗಭೂಮಿಯನ್ನೇ ತಮ್ಮ ಜೀವಿತಾವಧಿಯ ಸಂಪೂರ್ಣ ಸೇವಾವೃತ್ತಿಯನ್ನಾಗಿ ಕೈಗೊಂಡು ಮುನ್ನಡೆಲು ಉದ್ದೇಶಿಸಿ ಮುಂದಾದರು’’ ಎಂದು ವ್ಯಾಖ್ಯಾನಿಸಿದ್ದಾರೆ.

ಆನೆ ನಡೆದದ್ದೇ ದಾರಿ ಎಂಬಂತೆ ರಾಮಮೂರ್ತಿ ದೇಶ – ವಿದೇಶಗಳನ್ನು ಸುತ್ತಿದರು. ರಂಗಮಂದಿರಕ್ಕೆ ಬೆಳಕಿನ ಅಂದ ತಂದರು.1961ರಲ್ಲಿ ದೆಹಲಿಯ ‘ರಾಷ್ಟ್ರೀಯ ನಾಟಕ ಶಾಲೆ’ ಸೇರಿ ಎರಡು ವರ್ಷ ಡಿಪ್ಲೊಮಾ, ಒಂದು ವರ್ಷ ಬೆಳಕಿನ ವಿನ್ಯಾಸದಲ್ಲಿ ವಿಶೇಷ ತರಬೇತಿ ಪಡೆದ ನಂತರ ದೆಹಲಿಯ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ನಾಟಕಶಾಲೆಯ ಪ್ರಾಂಶುಪಾಲ ಇಬ್ರಾಹಿಂ ಅಲ್ಕಾಜಿ ಅವರು ವಿದ್ಯಾರ್ಥಿ ವೇತನದ ಸೌಲಭ್ಯ ನೀಡಿ, ಹವಾಯ್ ವಿಶ್ವವಿದ್ಯಾಲಯದ ರಂಗತಾಂತ್ರಿಕ ತರಬೇತಿ ಶಿಬಿರಕ್ಕೆ ರಾಮಮೂರ್ತಿಯವರನ್ನು ಕಳಿಸಿಕೊಟ್ಟರು. ತರಬೇತಿ ನಂತರ ಅಮೆರಿಕ ಹಾಗೂ ಯುರೋಪ್ ಖಂಡದ ಹತ್ತು ದೇಶಗಳಲ್ಲಿ ಸುತ್ತಿ ಅಲ್ಲಿನ ರಂಗತಂಡಗಳ ನೇಪಥ್ಯ ಕಲಾವಿದನಾಗಿ ಭಾಗವಹಿಸುವ ಅವಕಾಶ ಅವರಿಗೆ ದೊರೆಯಿತು.

ಡಾ. ಎವೆಲಿನ್ ಮ್ಯಾಕ್ವೀನ್ ಅವರಂತಹ ಹೆಸರಾಂತ ನಟರೊಂದಿಗೆ ‘ಟ್ವೆಲ್ತ್‌ನೈಟ್’, ‘ಗುಡ್ ವುಮನ್ ಆಫ್ ಸೆಜುವಾನ್’ ಮುಂತಾದ ನಾಟಕಗಳಲ್ಲಿ ನಟಿಸಿದರು. 1972ರಲ್ಲಿ ಭಾರತಕ್ಕೆ ವಾಪಸಾದ ಮೂರ್ತಿ, ಅದೇ ವರ್ಷ ಬೆಂಗಳೂರಿಗೆ ಆಗಮಿಸಿ ಇಲ್ಲಿನ ಹವ್ಯಾಸಿ ನಾಟಕಗಳ ತಾಂತ್ರಿಕ ಉನ್ನತಿಗೆ ಸಮರ್ಪಿಸಿಕೊಂಡರು.

ಬೆಂಗಳೂರಿನ ಹವ್ಯಾಸಿ ತಂಡಗಳಲ್ಲಿ ಅದಾಗಲೇ ಬೆಳಕಿನ ವಿನ್ಯಾಸದ ಮೂಲಕ ಪ್ರದರ್ಶನದ ಪರಿಣಾಮ ಹೆಚ್ಚಿಸುವ ಪ್ರಯೋಗಗಳು ನಡೆದಿದ್ದವು. ರಾಮಮೂರ್ತಿ ವೈಜ್ಞಾನಿಕ ವಿಧಾನದಿಂದ ಅದನ್ನು ಗಟ್ಟಿಗೊಳಿಸಿದರು.

ಬಿ.ವಿ.ಕಾರಂತರು ದೆಹಲಿಯಲ್ಲಿ ‘ದಿಶಾಂತರ್’ ತಂಡ ಕಟ್ಟಿ, ಕಾರ್ನಾಡರ ‘ಹಯವದನ’ ನಾಟಕ ಪ್ರದರ್ಶಿಸಿದಾಗ ರಾಮಮೂರ್ತಿ ಅವರು ಬೆಳಕಿನ ವಿನ್ಯಾಸ ಮಾಡಿದ್ದು ಒಂದು ಆರಂಭ. ನಂತರ ಅಲ್ಲಿನ ಹಲವು ನಾಟಕಗಳಲ್ಲಿ ಧ್ವನಿವ್ಯವಸ್ಥೆ, ಬೆಳಕಿನ ವಿನ್ಯಾಸ, ರಂಗಸಜ್ಜಿಕೆ ನಿರ್ವಹಿಸಿದರು.

1972ರ ಫೆಬ್ರುವರಿ 11, 12 ಮತ್ತು 13ರಂದು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಜರುಗಿದ ‘ಬಯಲು ರಂಗೋತ್ಸವ’ ಕನ್ನಡ ಹವ್ಯಾಸಿ ರಂಗಭೂಮಿಯ ಚರಿತ್ರೆಯಲ್ಲಿ ಒಂದು ಮೈಲುಗಲ್ಲು ಎಂದೇ ಪ್ರತೀತಿ ಪಡೆದಿದೆ. ಆ ಉತ್ಸವದಲ್ಲಿ ಪ್ರದರ್ಶನ ಕಂಡ ‘ಜೋಕುಮಾರಸ್ವಾಮಿ’, ‘ಸಂಕ್ರಾಂತಿ’, ‘ಈಡಿಪಸ್’ ನಾಟಕಕ್ಕೆ ರಾಮಮೂರ್ತಿ ಮಾಡಿದ ಬೆಳಕಿನ ವಿನ್ಯಾಸವೂ ಒಂದು ಮೈಲುಗಲ್ಲು.

‘ಬೆಳಕು ರಂಗ ಪ್ರದರ್ಶನದ ಹೃದಯ, ಪ್ರದರ್ಶಕ ಕಲೆಯ ಬಹುಮುಖ್ಯ ಅಂಶ. ಬೆಳಕು ವಿಜ್ಞಾನವೂ ಹೌದು, ಕಲೆಯೂ ಹೌದು’ ಎಂದು ನುಡಿದಂತೆ ನಡೆದ ರಾಮಮೂರ್ತಿ ಮುಂದಿನ ಮೂರು ದಶಕದ ಬೆಂಗಳೂರಿನ ಬಹುಮುಖ್ಯ ನಾಟಕಗಳ ಬೆಳಕು ವಿನ್ಯಾಸ ಮಾಡಿದರು.

ವೃತ್ತಿರಂಗಭೂಮಿಯ ಝಗಝಗಿಸುವ ಬೆಳಕು ಮುಂದಿನ ದಿನಗಳಲ್ಲಿ ಅರ್ಥಪೂರ್ಣ ಬೆಳಕಾಗಿ ನಾಟಕಗಳನ್ನು ಬೆಳಗಿತು. ‘ಅಭಿನಯದಲ್ಲಿ ವಿಜ್ಞಾನವಿದೆ, ವಿಜ್ಞಾನದಲ್ಲಿ ಅಭಿನಯವಿದೆ’ ಎನ್ನುವ ರಾಮಮೂರ್ತಿ, ಬೆಳಕಿನ ಮೂಲಕ ನಾಟಕಕ್ಕೆ ಹೊಸ ಆಯಾಮವನ್ನೇ ನೀಡಿದರು. ರಾಮಮೂರ್ತಿಯವರಿಗೆ ಬೆಂಗಳೂರು ಕಾರ್ಯಕ್ಷೇತ್ರವಾಗಿತ್ತು ನಿಜ, ಜತೆಗೆ ದೇಶದ ವಿವಿಧೆಡೆ ಸಂಚರಿಸಿ ರಂಗಮಂದಿರದ ವಿನ್ಯಾಸ ರೂಪಿಸಿಕೊಟ್ಟು ಬಂದರು.

ರಂಗದ ಒಳಗೆ ಮತ್ತು ಆಚೆ ರಾಮಮೂರ್ತಿ ಅವರೊಂದಿಗೆ ಸುದೀರ್ಘ ಕಾಲ ಒಡನಾಡಿದ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಅವರು ಹೇಳುವಂತೆ: ‘‘ವಿಶ್ವಮಾನವ ಪರಿಕಲ್ಪನೆಯನ್ನು ಕುವೆಂಪು ಅವರು ಸಾಹಿತ್ಯದಲ್ಲಿ ಒಡಮೂಡಿಸಿದಂತೆ, ವಿಶ್ವರಂಗಕರ್ಮಿ ಕಲ್ಪನೆಯನ್ನು ಕನ್ನಡಿಗರಿಗಲ್ಲದೆ, ಭಾರತೀಯರೆಲ್ಲರೂ ಪರಿಭಾವಿಸಬೇಕಾದ ರಂಗಪರಿಕ್ರಮಣ ರಾಮಮೂರ್ತಿಯವರ ಸಾಧನೆಯ ಹಾದಿಯಲ್ಲಿದೆ.

ಬಿ.ವಿ. ಕಾರಂತರು ಶೈಲೀಕೃತ ಶೈಲಿ ಕಟ್ಟಿ ಆಧುನಿಕ ರಂಗಭೂಮಿಯ ಮುಂಚೂಣಿಯಲ್ಲಿದ್ದರೆ; ರಾಮಮೂರ್ತಿ ಅಂದಿನ ರೀತಿಯ ನಿರ್ದೇಶಕರು ಹಾಗೂ ಅದೇ ಶಿಸ್ತಿನವರು ಎಂದೇ ತಿಳಿಯಬಹುದಾದರೂ– ಬೆಳಕು ರಂಗವಿನ್ಯಾಸವನ್ನು ಕಾರಂತರಷ್ಟೇ ಸಮಸಮವಾಗಿ ದೇಶದಾದ್ಯಂತ ನಿರ್ವಹಿಸಿ ಅದ್ವೀತಿಯರಾಗಿ ಬಾಳಿದವರು’’.

ಎಪ್ಪತ್ತು ಎಂಬತ್ತರ ದಶಕದ ಮಹಾತ್ವಾಕಾಂಕ್ಷೆಯ ನಾಟಕಗಳಿಗೆ ಬೆಳಕಿನ ವಿನ್ಯಾಸ ಮಾಡಿದ್ದರ ಜತೆಗೆ ವಿಭಿನ್ನ ರೂಪದ ನಾಟಕಗಳ ಸರ್ವಾಂತರ್ಯಾಮಿಯಾಗಿ ರಂಗದ ಹಿಂದಿನ ಬಹುತೇಕ ಕೆಲಸಗಳನ್ನು ರಾಮಮೂರ್ತಿ ನಿರ್ವಹಿಸಿದ್ದಾರೆ.

ಉದಾಹರಣೆಗೆ ಅಶೋಕ ಬಾದರದಿನ್ನಿ ನಿರ್ದೇಶನದ ‘ಸೋಮರಾರಾಯ ಭೀಮರಾಯ ದಪ್ಪಿನಾಟ’, ಶ್ರೀನಿವಾಸಪ್ರಭು ಅವರ ‘ಗುಳ್ಳೇನರಿ’, ‘ಮಂಡೂಕರಾಜ್ಯ’, ‘ಖದೀಮನ ಡೈರಿ’ ನಾಟಕಗಳಿಗೆ ಬೆಳಕು, ಸಂಗೀತ ನೀಡುವ ರಾಮಮೂರ್ತಿ; ಸಿಜಿಕೆ ನಿರ್ದೇಶನದ ‘ಮಹಾಚೈತ್ರ’ ನಾಟಕದ ಧ್ವನಿ ಸಂಯೋಜನೆಯನ್ನು ಮತ್ತೊಬ್ಬ ಹೆಸರಾಂತ ನಿರ್ದೇಶಕ ಆರ್. ನಾಗೇಶ್ ಅವರೊಂದಿಗೆ ಮಾಡಿದ್ದಾರೆ (ಸಂಗೀತ: ರಾಜೀವ ತಾರಾನಾಥ). ಕಳೆದ ದಶಕದಲ್ಲಿ ಪ್ರಯೋಗರಂಗಕ್ಕೆ ‘ಸಿರಿಪುರಂದರ’ ನಿರ್ದೇಶಿಸಿದ ಅವರು, ‘ತುಮಕೂರು ನಾಟಕಮನೆ’ಗೆ ‘ಜೋಡಿದಾರರು’ ನಿರ್ದೇಶಿಸಿದ್ದಾರೆ.

ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಕೇರಳ, ರಾಜಸ್ತಾನದ ಅಕಾಡೆಮಿಗಳು ಹಾಗೂ ಏಷ್ಯಾ ಖಂಡದ ಹಲವು ದೇಶಗಳಲ್ಲಿ ರಂಗಶಿಬಿರಗಳನ್ನು ನಡೆಸಿಕೊಟ್ಟು ಕನ್ನಡದ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ ರಾಮಮೂರ್ತಿ ಅವರಿಗೆ, ಸಿಗಬೇಕಾದಷ್ಟು ಮನ್ನಣೆ ಸಿಗಲಿಲ್ಲವೆ? ಸಾಹಿತ್ಯ – ಸಂಗೀತಕ್ಕೆ ಸಿಗುವ ಮನ್ನಣೆ ಜಾನಪದಕ್ಕೆ, ರಂಗಭೂಮಿಗೆ ಇಲ್ಲವೆ? ಹಾಗೊಂದು ಪ್ರಶ್ನೆ ಉದ್ಭವಿಸಿದರೆ ಅದು ಸಹಜ.

ಹವ್ಯಾಸಿ ರಂಗಭೂಮಿಯ ಏಳ್ಗೆಗೆ ಶ್ರಮಿಸಿದ ಕಲಾವಿದರಿಗಾಗಿ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಥಾಪಿಸಿರುವ ಬಿ.ವಿ. ಕಾರಂತ ಹೆಸರಿನ ಅತ್ಯುನ್ನತ ಪ್ರಶಸ್ತಿ (ವೃತ್ತಿರಂಗದ ಹೆಸರಾಂತರಿಗೆ ಗುಬ್ಬಿ ವೀರಣ್ಣ ಹೆಸರಿನ ಪ್ರಶಸ್ತಿಯನ್ನು ಕಳೆದ 22 ವರ್ಷಗಳಿಂದ ನೀಡಲಾಗುತ್ತಿದೆ) ಮೊದಲ ವರ್ಷವೇ ರಾಮಮೂರ್ತಿಯವರಿಗೆ ಸಂದಿರುವುದು ಉಚಿತವಾಗಿದೆ. ಅಷ್ಟರಮಟ್ಟಿಗಾದರೂ ಸಮಾಧಾನ ಪಟ್ಟುಕೊಳ್ಳಬೇಕಿದೆ.

ಬ್ರಹ್ಮಚಾರಿ ರಾಮಮೂರ್ತಿ ಹಟವಾದಿ. ತಾನು ಹೇಳಿದ್ದೇ ನಡೆಯಬೇಕು ಎನ್ನುವ ಪರಿಯಲ್ಲಿ ಅವರು ಮಾತನಾಡುತ್ತಿದ್ದರೆ, ಇವರೊಂದಿಗೆ ಏಗುವುದು ಹೇಗಪ್ಪಾ ಎಂದು ಒಂದು ಕ್ಷಣ ಎನಿಸುತ್ತದೆ. ಆದರೆ ಅವರ ರಂಗಭೂಮಿಯ ಬದ್ಧತೆ ಹಿರಿಯರಿಗಿಂತ ಹೆಚ್ಚಾಗಿ ಯುವಕರೊಂದಿಗೆ ಬೆರೆಯುವಂತೆ ಮಾಡಿದೆ. ಅವರ ಹೆಸರಿನಲ್ಲಿ ಒಂದು ರಂಗಮಂದಿರ ನಿರ್ಮಾಣವಾಗಿದೆ.

ಅದನ್ನು ನಿರ್ಮಿಸಿದವರು ಅವರ ಮೊಮ್ಮಕ್ಕಳ ವಯಸ್ಸಿನ ಮೆಳೇಹಳ್ಳಿ ಉಮೇಶ ಅವರು. ತಮ್ಮೂರು ತುಮಕೂರು ಬಳಿಯ ಮೆಳೇಹಳ್ಳಿಯಲ್ಲಿ ರಂಗಕರ್ಮಿಗಳಾದ ದೇವರಾಜ್, ಮಹಾಲಿಂಗು, ಚನ್ನಬಸಯ್ಯ ಗುಬ್ಬಿ, ನಾಯರಿ ಅವರ ನೆರವಿನೊಂದಿಗೆ ಈ ರಂಗಮಂದಿರ ಎದ್ದಿದೆ. ಪ್ರತಿತಿಂಗಳ ಮೊದಲ ಶನಿವಾರ ಇಲ್ಲಿ ನಾಟಕ ಪ್ರದರ್ಶನ ಕಡ್ಡಾಯ. ಉಳಿದಂತೆಯೂ ಇಲ್ಲಿ ನಾಟಕ ಇದ್ದೇ ಇರುತ್ತವೆ. ಅಂತರರಾಷ್ಟ್ರೀಯ ಖ್ಯಾತಿ ಎಂದು ಸದಾ ಕರೆಸಿಕೊಳ್ಳುವ ವ್ಯಕ್ತಿಗೆ ಹಳ್ಳಿಯೊಂದರಲ್ಲಿ ಸಂದ ಈ ಗೌರವ ಸರಿಯಾಗಿಯೇ ಇದೆ ಮತ್ತು ಅದೊಂದು ರೂಪಕದಂತೆ ಮಾದರಿಯಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT