ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಬೀಜಗಳು...

Last Updated 31 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಹೊಸಗನ್ನಡದ ಸಾಂಸ್ಕೃತಿಕ ಧಾರೆಗಳಲ್ಲಿ ‘ಮೇಷ್ಟ್ರು ಪರಂಪರೆ’ ಪ್ರಮುಖವಾದುದು. ಬಿಎಂಶ್ರೀ, ಎ.ಆರ್. ಕೃಷ್ಣಶಾಸ್ತ್ರಿ, ಟಿ.ಎಸ್. ವೆಂಕಣ್ಣಯ್ಯ, ತೀ.ನಂ. ಶ್ರೀಕಂಠಯ್ಯ, ಕುವೆಂಪು, ಜಿ.ಪಿ. ರಾಜರತ್ನಂ  ಅವರಂಥ ಘಟಾನುಘಟಿಗಳು ಈ ಪರಂಪರೆಗೆ ಘನತೆ ತಂದುಕೊಟ್ಟವರು. ಕಾಲೇಜು ಮತ್ತು ವಿಶ್ವವಿದ್ಯಾಲಯ ವಲಯಗಳಲ್ಲಿ ರೂಪುಗೊಂಡಿದ್ದ ಈ ಮೇಷ್ಟ್ರು ಪರಂಪರೆ ಈಗ ಸವಕಳಿಯಾದ ಒಂದು ಮಾದರಿ. ಆದರೆ, ಈಚಿನ ದಿನಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲಿ ಕೆಲವು ಶಿಕ್ಷಕರು ಮಕ್ಕಳನ್ನು ಸಾಂಸ್ಕೃತಿಕವಾಗಿ ಸಶಕ್ತಗೊಳಿಸುವ ಚಟುವಟಿಕೆಗಳಲ್ಲಿ ಅಂತರ್ಜಲದಂತೆ ಕ್ರಿಯಾಶೀಲರಾಗಿದ್ದಾರೆ. ಮೇಷ್ಟ್ರು ಪರಂಪರೆಯ ಹೊಸ ಚಿಗುರಿನಂತೆ ಕಾಣಿಸುವ ಹೊಸ ತಲೆಮಾರಿನ ಶಿಕ್ಷಕರ ಕ್ರಿಯಾಶೀಲತೆಯನ್ನು ಗುರ್ತಿಸುವ ಪ್ರಯತ್ನ ಇಲ್ಲಿದೆ.

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ ಎನ್ನುವ ಮಾತು ಕನ್ನಡದ ಮೇಷ್ಟ್ರು ಪರಂಪರೆಗೂ ಅನ್ವಯಿಸುವಂತಹದು. ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಈ ಮಹನೀಯರನ್ನು ನೆನಪಿಸಿಕೊಂಡರೆ ಅದು ಹೊಸಗನ್ನಡ ಸಂಸ್ಕೃತಿಯ ಅವಲೋಕನವೇ ಆಗಿಬಿಡುತ್ತದೆ. ಅದೇಕಾಲಕ್ಕೆ ಈ ಅವಲೋಕನ ಕಳೆದ ಕಾಲವೊಂದನ್ನು ಚಪ್ಪರಿಸುವ ಹಳಹಳಿಕೆಯೂ ಆಗುತ್ತದೆ. ಕನ್ನಡದ ಪ್ರಜ್ಞೆಯನ್ನು ರೂಪಿಸುತ್ತಿದ್ದ ತಾಣಗಳಲ್ಲೀಗ ರಾಜಕೀಯದ ನಸು ಘಾಟು. ಹಾಗಾಗಿ, ಮೇಷ್ಟ್ರ ಪರಂಪರೆಯ ವೇದಿಕೆಗಳಾದ ಕಾಲೇಜು – ವಿಶ್ವವಿದ್ಯಾಲಯಗಳ ಆವರಣ ಪ್ರಸ್ತುತ ಕೊಂಚ ಮಂಕಾಗಿದೆ. ಭಾರತದ ಶಿಕ್ಷಣ ಮತ್ತು ಸಂಶೋಧನೆಗಳ ಗುಣಮಟ್ಟ ಪಾತಾಳಕ್ಕಿಳಿದಿದೆ ಎಂದು  ಪ್ರಧಾನ ಮಂತ್ರಿಗಳ ಶೈಕ್ಷಣಿಕ ಸಲಹೆಗಾರರೂ, ಜ್ಞಾನ ಆಯೋಗದ ಅಧ್ಯಕ್ಷರೂ ಆದ ಸಂಪರ್ಕ ಕ್ರಾಂತಿಯ ಹರಿಕಾರ ಖ್ಯಾತಿಯ ಸ್ಯಾಮ್ ಪಿತ್ರೊಡಾ ಅವರು ಹೇಳಿದ್ದು ಮಾಧ್ಯಮಗಳಲ್ಲಿ ದಪ್ಪಕ್ಷರದ ಸುದ್ದಿಯಾಗಿ ವರದಿಯಾಗಿದೆ. ಆದರೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿಷಯಕ್ಕೆ ಬಂದರೆ ಅಷ್ಟೇನೂ ನಿರಾಶಾದಾಯಕವಾಗಿ ಮಾತನಾಡಬೇಕಿಲ್ಲ. ಮೇಷ್ಟ್ರ ಪರಂಪರೆಯ ನಂದನದ ತುಣುಕೊಂದು ಇದೀಗ ಬೇರುಹಂತಕ್ಕೆ ಬಂದು ಬಿದ್ದಂತಿದೆ. ರಾಜ್ಯದ ವಿವಿಧ ಭಾಗಗಳಲ್ಲಿನ ಕೆಲವು ಶಿಕ್ಷಕರು ಮಕ್ಕಳ ಮನಸ್ಸನ್ನು ಸಾಂಸ್ಕೃತಿಕವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ನಾವು ವಿದ್ಯಾರ್ಥಿಗಳಾಗಿದ್ದಾಗಿನ ಶೈಕ್ಷಣಿಕ ವಾತಾವರಣಕ್ಕೂ ಈಗಿನದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಶಿಕ್ಷಣಪ್ರೇಮಿ ದಾನಿಗಳು ನೀಡುತ್ತಿದ್ದ ಸಣ್ಣಪುಟ್ಟ ದೇಣಿಗೆಗಳೇ ಪ್ರಮುಖ ಆರ್ಥಿಕ ಸಂಪನ್ಮೂಲಗಳಾಗಿದ್ದ ಆ ಕಾಲದಲ್ಲಿ ನಮ್ಮ ಮೇಷ್ಟ್ರುಗಳಿಗಿರುತ್ತಿದ್ದ ಔದ್ಯೋಗಿಕ ತರಬೇತಿ ಮತ್ತು ಶೈಕ್ಷಣಿಕ ವಿದ್ಯಾರ್ಹತೆಗಳ ಹಿನ್ನೆಲೆಯೂ ಅಷ್ಟಕ್ಕಷ್ಟೇ ಎಂಬಂತಿತ್ತು. ಆದರೆ ಬೋಧನಾವೃತ್ತಿಯನ್ನು ಒಂದು ಧರ್ಮವಾಗಿ ಸ್ವೀಕರಿಸಿ ಪರಿಪಾಲಿಸಿದ ಆಗಿನ ಶಿಕ್ಷಕರು, ಇಂದಿಗೂ ಆದರ್ಶವಾಗಿ ಉಳಿದಿದ್ದಾರೆ. ಈಗ ಶಿಕ್ಷಣ ಕ್ಷೇತ್ರಕ್ಕೆ -ಹೊರಗಿನ ಯಾರಿಗೂ ಕೈಯೊಡ್ಡುವ ಅಗತ್ಯವೇ ಇಲ್ಲದಂತೆ- ಸಾಕಷ್ಟು ಅನುದಾನ ಹರಿದುಬರುತ್ತಿದೆ. ಶಿಕ್ಷಕರ ವಿದ್ಯಾರ್ಹತೆ, ಆರ್ಥಿಕ ಸ್ಥಿತಿ ಮತ್ತು ಔದ್ಯೋಗಿಕ ತರಬೇತಿಗಳೂ ಹೆಚ್ಚಾಗಿವೆ. ಇವುಗಳಿಗನುಗುಣವಾಗಿ ಬೋಧನೆಯೊಂದಿಗೆ ಹೆಚ್ಚುವರಿ ಜವಾಬ್ದಾರಿಗಳೂ ಹೆಗಲೇರಿವೆ. ತನ್ನ ಕಾಲದ ವಿದ್ಯಾರ್ಥಿಗಳ ಪಾಲಿಗೆ ಈಗಿನ ಶಿಕ್ಷಕ ಆದರ್ಶವಾಗಿ ರೂಪುಗೊಳ್ಳಬೇಕಾದರೆ ಹಲವು ಪ್ರತಿಕೂಲಗಳನ್ನು ಮೀರುವ ಶಕ್ತಿ ಮತ್ತು ಇಚ್ಛಾಶಕ್ತಿಗಳನ್ನು ಪ್ರದರ್ಶಿಸಬೇಕಾಗಿದೆ. ಇದ್ಯಾವುದೂ ಒಂದು ವಿಷಯವೇ ಅಲ್ಲ ಎಂಬಂತೆ  ಮುಂಬರುವ ಬೆಳಕಿನ ಬೆಳಸಿಗಾಗಿ ಹಂಬಲಿಸುತ್ತ ಹಗಲಿರುಳು ಶ್ರಮಿಸುತ್ತಿರುವ ಕನಸುಗಾರ ಶಿಕ್ಷಕರ ಸಂಖ್ಯೆ ಕಡಿಮೆಯೇನಿಲ್ಲ.

ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಶಿಕ್ಷಣದ ಅನುಭವಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಅವನ ಜೀವನಧೋರಣೆಗಳನ್ನು ರೂಪಿಸುವಷ್ಟು ಪ್ರಭಾವಶಾಲಿಯಾಗಿರುತ್ತವೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿರುವ ಸಂಗತಿಯಾಗಿದೆ. ಸಾಹಿತ್ಯಕ್ಕಾಗಿ ನೊಬೆಲ್ ಪುರಸ್ಕಾರ ಪಡೆದ ಆಲ್ಬರ್ಟ್ ಕಾಮೂನ ಪ್ರಶಸ್ತಿ ಸ್ವೀಕಾರ ಭಾಷಣವು ಅರ್ಪಣೆಗೊಂಡಿರುವುದು ಅವನ ಪ್ರಾಥಮಿಕ ಶಾಲಾ ಶಿಕ್ಷಕರಾದ ಟೇಲರ್ ಎಂಬುವವರಿಗೆ! ಬಾಬಾಸಾಹೇಬ್‌ರ ಹೆಸರಿನಲ್ಲಿರುವ ‘ಅಂಬೇಡ್ಕರ್ ಪದ ಕೂಡ ಅವರ ಪ್ರಾಥಮಿಕ ಶಾಲಾ ಶಿಕ್ಷಕರ ಮೇಲಿನ ಗೌರವದ ಸಂಕೇತವೇ ತಾನೆ! ಮಕ್ಕಳ ಪಾಲಿನ ಹೀರೋ ಆದ ಶಿಕ್ಷಕರು ಏನು ಮಾಡಿದರೂ ಅದು ಆ ಮಕ್ಕಳ ಪಾಲಿಗೆ ಅನುಕರಣೀಯವೇ. ಹಾಗಾಗಿ ಸಮಾಜವು ಶಿಕ್ಷಕರು ಹೀಗ್ಹೀಗೆ ಇದ್ದರೆ ಚೆಂದ ಎಂದು ಅಪೇಕ್ಷಿಸುತ್ತದೆ. ಹಾಗಾಗಿ ಈ ಹಂತದಲ್ಲಿ ಒದಗಿ ಬರುವ ಶಿಕ್ಷಕರು ಕ್ರಿಯಾಶೀಲರಾಗಿದ್ದರೆ, ಜೀವಪರರಾಗಿದ್ದರೆ ಅದರ ಪರಿಣಾಮ ಮುಂದಿನ ತಲೆಮಾರಿನಲ್ಲಿ ಕಾಣಿಸಿಕೊಳ್ಳುತ್ತದೆ.

ಆದರ್ಶಪ್ರಾಯರಾಗಿ ಮನೆಮಾತಾಗಿರುವ ಶಿಕ್ಷಕರ ಬಗ್ಗೆ ಮಾತಾಡುವಾಗ ಕೋಲಾರ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಸ. ರಘುನಾಥ ಅವರು ನೆನಪಾಗುತ್ತಾರೆ. ಸ್ವತಃ ಲೇಖಕರೂ ಮತ್ತು ಅನುವಾದಕರೂ ಆಗಿರುವ ರಘುನಾಥ ಮೇಷ್ಟ್ರು ತಮ್ಮ ಮಕ್ಕಳಲ್ಲಿ ಬರಿಯ ಸಾಹಿತ್ಯಪ್ರೀತಿಯನ್ನಷ್ಟೇ ಅಲ್ಲ, ಜೀವಪರತೆಯನ್ನೂ ತುಂಬುತ್ತಿರುವ ಬಗೆ ಅನನ್ಯವಾಗಿದೆ. ಅವರು ಪೋಷಿಸಿದ ಮಕ್ಕಳ ಸಂಖ್ಯೆ ಚಿಕ್ಕದೇನಲ್ಲ. ಸಾವಿನ ದವಡೆಯಿಂದ ಪಾರು ಮಾಡಿ ಬೆಳೆಸುತ್ತಿರುವ ಪ್ರಾಣಿ-ಪಕ್ಷಿಗಳಿಗಂತೂ ಲೆಕ್ಕವಿಲ್ಲ. ಅವರ ಶಾಲೆಯೊಂದು ಸಣ್ಣ ಪ್ರಾಣಿ ಸಂಗ್ರಹಾಲಯವಾಗಿದೆ. ಅವರು ಮನುಷ್ಯ ಮತ್ತು ಸಕಲ ಜೀವಜಾಲದ ನಡುವಣ ಸಾವಯವ ಸಂಬಂಧದ ಮಹತ್ವವನ್ನು ಅನೌಪಚಾರಿಕವಾಗಿ ಕಲಿಸಿಕೊಡುತ್ತಿರುವ ಈ ಬಗೆ ಅನನ್ಯವಾದುದಾಗಿದೆ.
 

ಕಿಂದರಜೋಗಿಗಳು...
ಗುಲ್ಬರ್ಗಾ ಜಿಲ್ಲೆ ಸೇಡಂ ತಾಲೂಕಿನ ಜಾಕನಪಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಾಟಕದ ಮೇಷ್ಟ್ರಾಗಿರುವ ಅಶೋಕ ತೋಟ್ನಳ್ಳಿ ತಮ್ಮ ಶಾಲೆಯನ್ನೊಂದು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಿದ್ದಾರೆ. ನಟನೆಯೂ ಸೇರಿದಂತೆ ರಂಗಭೂಮಿಯ ಎಲ್ಲ ಶಾಖೆಗಳ ಕಲಿಕಾಕೇಂದ್ರವಾಗಿ ತಮ್ಮ ಶಾಲೆಯನ್ನವರು ರೂಪಿಸಿರುವ ಬಗೆಯು, ಈಗ ಅವರ ಶಾಲೆಯ ಪರಿಧಿಯನ್ನೂ ದಾಟಿ ಆ ಹಳ್ಳಿಯ ಪ್ರತಿ ಮನೆಯನ್ನೂ ತಲುಪಿದೆ. ಹಾಗಾಗಿ ಅವರೀಗ ಗ್ರಾಮಸ್ಥರಲ್ಲೂ ಹವ್ಯಾಸಿ ರಂಗಭೂಮಿಯ ಕನಸುಗಳನ್ನು ಬಿತ್ತುತ್ತಿದ್ದಾರೆ. ಜಾಕನಪಳ್ಳಿಯ ಕಿಂದರಜೋಗಿಯಾಗಿ ಅವರು ಬಿತ್ತಿರುವ ಬೀಜಗಳು ಮುಂದೆ ಹೆಮ್ಮರವಾಗಿ ಫಲ ಕೊಡದಿರಲು ಸಾಧ್ಯವೇ ಇಲ್ಲ. ಏಕೆಂದರೆ ಒಳ್ಳೆಯ ಕೆಲಸಗಳಿಗೆ ಪ್ರಚಾರ ನಿಧಾನವಾಗಿ ಸಿಗುತ್ತದೆ. ಅದರ ಪ್ರಕ್ರಿಯೆಯೂ ನಿಧಾನವೇ ಆಗಿರುತ್ತದೆ. ಆದರೆ ಫಲಿತಾಂಶ ಮಾತ್ರ ಪರಿಣಾಮಕಾರಿಯಾಗಿರುತ್ತದೆ ಮತ್ತು ಶಾಶ್ವತ ಸ್ವರೂಪದ್ದಾಗಿರುತ್ತದೆ.

ಕವಿ ಮತ್ತು ನಾಟಕ ಮೇಷ್ಟ್ರು ಸಂತೋಷ್ ಗುಡ್ಡಿಯಂಗಡಿ ಅವರನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ಕುಂದಾಪುರ ಮೂಲದ ಸಂತೋಷ್‌ ನೀನಾಸಂ ಪದವೀಧರರು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಮ್ಮರಗಾಲದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾಗ ಅವರು ರೂಪಿಸಿದ ‘ಹೆಮ್ಮರ’ ಪತ್ರಿಕೆ ಮಕ್ಕಳ ಪ್ರತಿಭಾ ವಿಕಸನ ಮತ್ತು ಅನಾವರಣಕ್ಕೆ ವೇದಿಕೆಯಾಗಿತ್ತು. ‘ಹೆಮ್ಮರ’ದ ಪ್ರೇರಣೆಯಿಂದ, ಅಶೋಕ ತೆಕ್ಕಟ್ಟೆ ಎನ್ನುವ ಶಿಕ್ಷಕರು ಕುಂದಾಪುರ ಸಮೀಪದ ಹೆಸಕತ್ತೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಿಂಗಳಿಗೊಬ್ಬ ದಾನಿಯನ್ನು ಹಿಡಿದು ‘ಇಂಚರ’ ಪತ್ರಿಕೆ ರೂಪಿಸುತ್ತಿದ್ದಾರೆ. ಸಂತೋಷ್‌ ಅವರೇ ಹೇಳುವಂತೆ, ಹೀಗೆ ಒಬ್ಬರಿಂದ ಒಬ್ಬರು ಪ್ರೇರಿತರಾಗಿ ಈಗ ಉಡುಪಿ ಜಿಲ್ಲೆಯಲ್ಲಿ ಶಾಲಾಮಟ್ಟದ ೨೬ ಪತ್ರಿಕೆಗಳು ಪ್ರಕಟಗೊಳ್ಳುತ್ತಿವೆ. ಸದ್ಯ ನಂಜನಗೂಡಿನ ಹೆಗ್ಗಡಹಳ್ಳಿ ಪ್ರೌಢಶಾಲೆಗೆ ವರ್ಗವಾಗಿರುವ ಸಂತೋಷ್, ಅಲ್ಲಿಂದ ‘ಅಳ್ಳಿಮರ’ ಎಂಬ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಮಕ್ಕಳು ತಮ್ಮ ತೊದಲುನುಡಿಗಳೆಲ್ಲ ಪ್ರಕಟವಾಗುವ ಭರವಸೆಯಲ್ಲಿ ಉತ್ಸಾಹದಿಂದ ಬರೆಯತೊಡಗಿದ್ದಾರೆ. ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿದ್ದ ಇವರು ಎಲ್ಲೋ ಹೋಗಿ ಬೀಳಬಹುದಾಗಿದ್ದನ್ನು ತಪ್ಪಿಸಿ ಹೆಮ್ಮರಗಾಲದಲ್ಲಿ ಉಳಿಸಿದ್ದು ಅವರ ಕ್ಷೇತ್ರ ಶಿಕ್ಷಣಾಧಿಕಾರಿಗಳು. ಒಳ್ಳೆಯ ಕೆಲಸ ಮಾಡುವ ಶಿಕ್ಷಕರಿದ್ದರೆ ಅದಕ್ಕೆ ತಕ್ಕನಾಗಿ ಅವರನ್ನು ಕಾಪಾಡಲು ಒಳ್ಳೆ ಅಧಿಕಾರಿಗಳೂ ಒದಗಿ ಬರುತ್ತಾರೆಂಬುದಕ್ಕೆ ಸಂತೋಷ್ ಪ್ರಕರಣವೊಂದು ನಿದರ್ಶನ.

ಶಿಡ್ಲಘಟ್ಟ ತಾಲ್ಲೂಕು ಕನ್ನಮಂಗಲದ ಪ್ರಾಥಮಿಕ ಶಾಲೆಯ ಮಕ್ಕಳ ಅದೃಷ್ಟ ಕೂಡ ದೊಡ್ಡದು. ಕಲಾಧರ್ ಎನ್ನುವ ಮೇಷ್ಟ್ರು ಕಳೆದ ಮೂರು ವರ್ಷಗಳಿಂದ ‘ಶಾಮಂತಿ’ ಎನ್ನುವ ವಾರ್ಷಿಕ ಪುಸ್ತಕ ರೂಪಿಸುತ್ತಿದ್ದಾರೆ. ಈ ಪುಸ್ತಕದ ತುಂಬಾ ಮಕ್ಕಳ ಬರಹಗಳ ಘಮಘಮ. ‘ಶಾಮಂತಿ’ಯ ಘಮ ನಾಡಿನ ಅನೇಕ ಪ್ರಜ್ಞಾವಂತರ ಗಮನ ಸೆಳೆದಿದೆ.

ಮಾಸ್ತರರಂತೆ ಮಕ್ಕಳು!
ಬಿಜಾಪುರ ಮೂಲದ ರಾಜು ಎಂಬ ಮೇಷ್ಟ್ರ ಬಗೆಗಿನ ಲೇಖನವೊಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿತ್ತು. ಮಳೆಗಾಲದ ದಿನಗಳಲ್ಲಿ ಲೋಕದ ಸಂಪರ್ಕ ಕಡಿದುಕೊಂಡು ದ್ವೀಪವಾಗುತ್ತಿದ್ದ ಹಳ್ಳಿಯಲ್ಲಿ ರಾಜು ಅವರ ಕೆಲಸ. ಹರಿವ ತೊರೆಗೆ ಅಡ್ಡವಾಗಿ ತೂಗುಸೇತುವೆಯೊಂದನ್ನು ನಿರ್ಮಿಸಲು ಕಾರಣವಾಗುವ ಮೂಲಕ ಹಳ್ಳಿಯ ಸಮಸ್ಯೆಗೆ ಶಾಶ್ವತವಾದ ಮಾರ್ಗವನ್ನು ರಾಜು ಕಲ್ಪಿಸಿಕೊಟ್ಟಿದ್ದರು ರಾಜು ಮೇಷ್ಟ್ರು. ಅವರ ಗರಡಿಯಲ್ಲಿ ಪಳಗಿದ ಮಕ್ಕಳು ಮುಂದೆ ಅದಿನ್ನೆಂಥ ಸಮಾಜೋಪಯೋಗಿ ಕೆಲಸಗಳಿಗೆ ಕೈ ಹಾಕುತ್ತಾರೋ? ನೂಲಿನಂತೆ ಸೀರೆ; ಮಾಸ್ತರರಂತೆ ಮಕ್ಕಳು!

ಹುಬ್ಬಳ್ಳಿಯ ಹಮಾಲರ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಮು ಪಿಎಚ್‌.ಡಿ ಪದವೀಧರರು. ತಮ್ಮ ಶಾಲೆಯ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಕಲಿಸುತ್ತ ಅದೇ ಶಾಲೆಗೆ ಮತ್ತು ವೃತ್ತಿಗೆ ತಮ್ಮನ್ನು ಅರ್ಪಿಸಿಕೊಂಡವರು. ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮುಚ್ಚಳಗುಡ್ಡ ಕ್ಯಾಂಪಿನ ನಾಗಪ್ಪ ಮಾಸ್ತರ್ ಸಂತಸದಾಯಕ ಕಲಿಕೆಗೆ ಅನುವಾಗುವಂತೆ ತಮ್ಮ ಶಾಲೆಯನ್ನೊಂದು ಬೋಧನೋಪಕರಣಗಳ ಭಂಡಾರವಾಗಿ ರೂಪಿಸಿದ್ದಾರೆ. ಬೆಲ್ಲಕ್ಕೆ ಇರುವೆ ಮುತ್ತುವಂತೆ ಮಕ್ಕಳು ಅವರನ್ನು ಸುತ್ತುವರಿದುಕೊಂಡೇ ಇರುವುದನ್ನು ನೋಡುವುದೇ ಒಂದು ಚೆಂದ. ಅದೇ ತಾಲ್ಲೂಕಿನ ಬಸಾಪುರದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ರವೀಶ್‌ರು ತಮ್ಮ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಪ್ರಯೋಗಶೀಲತೆಯನ್ನು ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಕಳೆದ ವರ್ಷ ಅವರ ವಿದ್ಯಾರ್ಥಿ ತಯಾರಿಸಿದ ವಿಜ್ಞಾನದ ಮಾದರಿಯು, ‘ಇನ್ಸ್ಪೈರ್ ಅವಾರ್ಡ್‌’ನ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸಿದ ಏಕಮಾತ್ರ ಮಾದರಿಯಾಗಿತ್ತು. ಲಿಫ್ಟ್ ಕೆಳಗಿಳಿದಾಗ ಹೊರಬರುವ ಕಂಪ್ರೆಸ್ಸ್‌ಡ್ ಏರ್ ಬಳಸಿ ಟರ್ಬೈನ್ ತಿರುಗಿಸಿ, ಇಡೀ ಅಪಾರ್ಟ್‌ಮೆಂಟಿನ ಶಕ್ತಿ ಅಗತ್ಯಗಳನ್ನು ಪೂರೈಸಬಹುದೆಂಬುದು ಆ ವಿದ್ಯಾರ್ಥಿಯ ಸಂಶೋಧನೆಯಾಗಿತ್ತು. ಈ ಸಲ ಮತ್ತೊಬ್ಬ ವಿದ್ಯಾರ್ಥಿ ಬಹೂಪಯೋಗಿ ಸೌರಸಾಧನ ತಯಾರಿಸಿ ಈಗಾಗಲೇ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಚಾಮರಾಜನಗರದಲ್ಲಿ ಕೆ. ವೆಂಕಟರಾಜುರ ಗರಡಿಯಲ್ಲಿ ಪಳಗಿರುವ ನಾಟಕದ ಮೇಷ್ಟ್ರು ಬಿ.ಎಸ್. ವಿನಯ್ ತಮ್ಮ ಶಾಲೆಯಲ್ಲೂ ರಂಗಚಟುವಟಿಕೆಗಳನ್ನೂ ರೂಪಿಸುತ್ತಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಡಿಯಾಲ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಸೂರ್ಯಕಾಂತ ನಂದೂರು ಮೂಲತಃ ಗುಲ್ಬರ್ಗಾ ಜಿಲ್ಲೆಯವರು. ಅವರು ತಮ್ಮ ಶಾಲೆಯಲ್ಲಿ ಮಕ್ಕಳ ಕಲಾಕೃತಿಗಳಿಗಾಗಿ ‘ಕಲಾಕ್ಷಿತಿ’ ಎಂಬ ಆರ್ಟ್ ಗ್ಯಾಲರಿಯನ್ನೇ ಸ್ಥಾಪಿಸಿದ್ದಾರೆ. ಅಷ್ಟೇ ಅಲ್ಲದೆ ಅಕ್ಕಪಕ್ಕದ ಶಾಲೆಗಳಿಗೆ ಹೋಗಿ ಅಲ್ಲಿನ ಮಕ್ಕಳಲ್ಲಿ ಕಲಾಪ್ರೀತಿ ಬೆಳೆಸುವ ಉದ್ದೇಶದಿಂದ ತಮ್ಮ ಹಾಗೂ ತಮ್ಮ ಮಕ್ಕಳ ಪೇಂಟಿಂಗ್‌ಗಳ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದಾರೆ. ಟಿ. ನರಸಿಪುರ ಹತ್ತಿರದ ಶಾಲೆಯ ಗಣಿತ ಶಿಕ್ಷಕರೊಬ್ಬರು ತಮ್ಮ ಶಾಲೆಯ ಮಕ್ಕಳನ್ನು ಖೋ-ಖೋ ಆಟದಲ್ಲಿ ಅದ್ಯಾವ ಪರಿ ತರಬೇತುಗೊಳಿಸಿದ್ದಾರೆಂದರೆ ಈಗಾಗಲೇ ಹಲವಾರು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಆ ಮಕ್ಕಳು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ರಾಯಚೂರಿನ ಉರ್ದು ಶಾಲೆಯೊಂದರಲ್ಲಿ ಕನ್ನಡ ಕಲಿಸುವ ಸೈಯದ್ ಗೌಸ್ ಮೋಹಿಯುದ್ದೀನ್ ಪೀರ್‌ಜಾದೆಯವರು, ಮನೆಭಾಷೆ ಮತ್ತು ಶಿಕ್ಷಣ ಮಾಧ್ಯಮ ಉರ್ದು ಆಗಿರುವ ಮಕ್ಕಳು ಸುಲಭವಾಗಿ ಕನ್ನಡ ಕಲಿಯಲು ಅನುವಾಗುವಂತೆ ನೂರಾರು ಹೊಸಬಗೆಯ ಆಟಗಳನ್ನೂ ಆಟಿಕೆಗಳನ್ನೂ ತಯಾರಿಸಿದ್ದಾರೆ. ತಮ್ಮ ಪವಾಡ ಬಯಲು ಕಾರ್ಯಕ್ರಮಗಳ ಮೂಲಕ ನಾಡಿನಲ್ಲಿ ಮೂಢನಂಬಿಕೆ ವಿರೋಧಿ ಚಳುವಳಿಗೆ ಕಸುವು ತುಂಬಿದ ಹುಲಿಕಲ್ ನಟರಾಜುರವರು ಕೂಡ ವೃತ್ತಿಯಿಂದ ಶಿಕ್ಷಕರೇ.

ಬೆಳಕಿನ ಕೊಯಿಲು
ಗುಲ್ಬರ್ಗಾ ಜಿಲ್ಲೆಯ ಚಿತಾಪುರ ತಾಲೂಕಿನ ರಾವೂರಿನ ಪ್ರೌಢಶಾಲೆಯಲ್ಲಿ ನಾನು ಸೇವೆಯಲ್ಲಿದ್ದಾಗ ನಮ್ಮ ಶಾಲೆಗೆ ಕನ್ನಡದ ಪ್ರಮುಖ ಲೇಖಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಾ. ಅಮರೇಶ ನುಗಡೋಣಿ, ಮಲ್ಲಿಕಾರ್ಜುನ ಹುಲಗಬಾಳಿ ಮತ್ತು ಶಂಕರಗೌಡ ಬೆಟ್ಟದೂರು ಮುಂತಾದವರು ಬಂದು ಹೋದರು. ಆ ವರ್ಷ ಮೂಡ್ನಾಕೂಡು ಅವರ ‘ನಾನೊಂದು ಮರವಾಗಿದ್ದರೆ’ ಪದ್ಯ, ನುಗಡೋಣಿಯವರ ‘ಬಸವಯ್ಯ ಮತ್ತು ಜೇನುಗೂಡು’ ಪಾಠ ಎಂಟನೇ ತರಗತಿಗೆ ಪಠ್ಯಕ್ಕಿದ್ದವು. ಲೇಖಕರ ನಿರಂತರ ಮುಖಾಮುಖಿಯು ತಂದುಕೊಟ್ಟ ಆತ್ಮವಿಶ್ವಾಸದ ಪರಿಣಾಮವಾಗಿ ಜಗದೀಶ್ ನಿಡಲ್ ಎಂಬ ವಿದ್ಯಾರ್ಥಿ ಕವಿತೆ ಬರೆಯಲು ಶುರುಮಾಡಿದನಷ್ಟೇ ಅಲ್ಲ, ಅವು ಮುಂದೆ ಮಯೂರ ಮಾಸಿಕದಲ್ಲಿ ಪ್ರಕಟವೂ ಆದವು. ಲೇಖಕರೊಂದಿಗಿನ ಮುಖಾಮುಖಿಯ ಪರಿಣಾಮವೇ ಹೀಗಿರುವಾಗ ಸ್ವತಃ ಲೇಖಕರನ್ನೇ ಶಿಕ್ಷಕರನ್ನಾಗಿ ಪಡೆದ ಮಕ್ಕಳು ಹೇಗೆ ತಯಾರಾಗಬೇಡ?

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಕುಂ. ವೀರಭದ್ರಪ್ಪ ಅವರು ಕೂಡ ಆಂಧ್ರಾ ಗಡಿಯ ಗೂಳ್ಯಂ, ಹಿರೇಹಾಳುನಂಥ ಹಳ್ಳಿಗಳಲ್ಲಿ ದಶಕಗಳ ಕಾಲ ಮೇಷ್ಟರಾಗಿ ಸೇವೆ ಸಲ್ಲಿಸಿ, ಕನ್ನಡದ ಮನಸುಗಳನ್ನು ಕಟ್ಟಿ ಬೆಳೆಸಿದವರು. ಅವರ ವಿದ್ಯಾರ್ಥಿಗಳಲ್ಲಿ ಹಲವರು ಇಂದು ಪತ್ರಕರ್ತರಾಗಿ, ಲೇಖಕರಾಗಿ, ಅಧಿಕಾರಿಗಳಾಗಿ ಹೆಸರು ಮಾಡಿದ್ದಾರೆ. ಈಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಭಾಜನರಾಗಿರುವ ವೀರಣ್ಣ ಮಡಿವಾಳರ ಮತ್ತು ಆರೀಫ್ ರಾಜಾ ಕೂಡ ಕ್ರಮವಾಗಿ ಚಿಕ್ಕೋಡಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸದ್ಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಯಲ್ಲಿದ್ದಾರೆ. ದಾವಣಗೆರೆಯ ಕವಿ ಕೈದಾಳು ಕೃಷ್ಣಮೂರ್ತಿ, ಬಳ್ಳಾರಿಯ ಅಭಿನವ ಶ್ರೀಕೃಷ್ಣ ಖ್ಯಾತಿಯ ನಟ ಚಿದಾನಂದಪ್ಪ ಗವಾಯಿ, ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಚಿತ್ರ ಕಲಾವಿದ ಪ್ರಭಾಕರ್ ಮಂಕಲ್, ಅಕಾಡೆಮಿ ಸದಸ್ಯರಾಗಿದ್ದ ಎಚ್.ಎಚ್.ಮ್ಯಾದಾರ್, ಛಾಯಾಗ್ರಾಹಕರಾದ ಕೋಲಾರದ ಎಂ.ಜೆ. ರಾಜೀವಗೌಡ, ಚಿತ್ರದುರ್ಗದ ನಾದನೂಪುರ ಖ್ಯಾತಿಯ ಬಹುಮುಖ ಕಲಾಕೋವಿದ ಕಿಕ್ಕೇರಿ ವೀರನಾರಾಯಣ... ಎಷ್ಟೊಂದು ಜನ ಎಷ್ಟೊಂದು ಬಗೆಯಲ್ಲಿ ವಿದ್ಯಾರ್ಥಿಗಳನ್ನು ತಮ್ಮ ತೆಕ್ಕೆಯಲ್ಲಿ ತೆಗೆದುಕೊಳ್ಳುತಿದ್ದಾರೆ. ಹಿಂದಿಯಲ್ಲೊಂದು ಮಾತಿದೆ-– ‘ಭಗವಾನ್ ಕಿ ಘರ್ ಮೆ ದೇರ್ ಹೈ; ಮಗರ್ ಅಂಧೇರ್ ನಹಿ’ ಅಂತ. ನಿಜ ತಡ ಆಗಬಹುದು; ಆದರೆ ಕತ್ತಲೆಯೇ ಶಾಶ್ವತವಾಗಿರಲಾರದು.

ರಂಗಾಸಕ್ತಿ, ಸಂಗೀತಪ್ರೇಮ, ಸಾಹಿತ್ಯ ರುಚಿ, ಸಾಮಾಜಿಕ ಕಾಳಜಿ, ವೈಜ್ಞಾನಿಕ ಮನೋಭಾವ, ಕ್ರೀಡಾಸಕ್ತಿ, ಪ್ರಾಣಿದಯೆಗಳನ್ನು ತಮ್ಮ ಬೋಧೆ ಮತ್ತು ನಡೆನುಡಿಗಳ ಮೂಲಕ ಮಕ್ಕಳಲ್ಲಿ ಬಿತ್ತುತ್ತಿರುವ ಶಿಕ್ಷಕರ ಸಂಖ್ಯೆ ಕಡಿಮೆಯಿದ್ದರೂ ಆಶಾದಾಯಕವಾಗಿದೆ. ದೇವನೂರ ಮಹಾದೇವ ಅವರ ಮಾತಿನಂತೆ ‘ಭೂಮಿಗೆ ಬಿದ್ದ ಬೀಜ; ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು’ ಎಂಬ ನಂಬಿಕೆಯಲ್ಲಿ ಕೆಲಸ ಮಾಡುತ್ತಿರುವ ಇಂಥ ಇನ್ನೂ ಸಾಕಷ್ಟು ಜನರು ನಾಡಿನಾದ್ಯಂತ ಇದ್ದಾರೆ. ಇಂಥ ಬೆಳಕಿನ ಬೀಜಗಳ ಸಂತತಿ ಸಾವಿರವಾದಾಗ ಭರವಸೆಯ ಬೆಳಸು ಬರದೇ ಇರಲು ಸಾಧ್ಯವೇ ಇಲ್ಲ. ನಾಳಿನ ನಾಗರಿಕರಾಗಲಿರುವ ಇಂದಿನ ವಿದ್ಯಾರ್ಥಿಗಳ ಎದೆಹೊಲದಲ್ಲಿ ತಮ್ಮ ಕನಸುಗಳನ್ನು ಊರುತ್ತಿರುವ ಇವರೊಂದಿಗೆ ಪಾಲಕರೂ ಕೈ ಜೋಡಿಸಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೂ ಇಂಥ ಕನಸುಗಾರ ಶಿಕ್ಷಕರು ಸಿಗಲು ಸಾಧ್ಯವಾಗುತ್ತದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT