ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ರಿಗೆ ಆಡಿಶನ್ ಮಾಡಿಸಿದೆ!

Last Updated 27 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ದ್ಯಾವ್ರೆ’ ಚಿತ್ರದ ಮೂಲಕ ಪ್ರಯೋಗಶೀಲ ಸಿನಿಮಾ ಆಯಾಮದಲ್ಲಿ ಭರವಸೆ ಮೂಡಿಸಿದವರು ಗಡ್ಡ ವಿಜಿ. ಸದ್ಯ ‘ಪ್ಲಸ್‌’ (+) ಎಂದು ಮತ್ತೊಂದು ಗಳಿಕೆಯ ಲೆಕ್ಕಾಚಾರಕ್ಕೆ ಒಡ್ಡಿಕೊಂಡಿದ್ದಾರೆ. ಅಂದಹಾಗೆ ಇದು ಅವರ ಎರಡನೇ ಚಿತ್ರ. ‘ದ್ಯಾವ್ರೆ’ಯನ್ನು ನೆನಪು ಮಾಡಿಕೊಳ್ಳುತ್ತಲೇ ಯೋಗರಾಜ ಭಟ್ಟರ ಗರಡಿಯಲ್ಲಿ ಸಿನಿಮಾ ಗಣಿತ ಕಲಿತ ಅನುಭವ ಮತ್ತು ಭಟ್ಟರೊಂದಿಗಿನ ರಸಕ್ಷಣಗಳನ್ನು ವಿಜಿ ಮೊಗೆದು ಕೊಟ್ಟಿದ್ದಾರೆ.  

*ಗಡ್ಡ ಬಿಟ್ಟಿದ್ದಕ್ಕೆ ‘ಗಡ್ಡ’ವಿಜಿ ಹೆಸರಾ?
ಶಾಲೆಗೆ ಹೋಗುವಾಗಲೇ ಗಡ್ಡ ಬಂದಿತ್ತು ನನಗೆ! ಚಿತ್ರರಂಗದಲ್ಲಿ ವಿಜಿ ಹೆಸರಿನವರು ಇದ್ದರು. ನಿರ್ದೇಶಕ ಸೂರಿ ಶೂಟಿಂಗ್ ವೇಳೆ ಕರೆಯಲು ಸುಲಭವಾಗಲಿ ಎಂದು ನನ್ನ ಹೆಸರಿಗೆ ‘ಗಡ್ಡ’ ಸೇರಿಸಿದ್ರು. ದಿನ, ತಿಂಗಳಲ್ಲ ವರುಷಗಳೇ ಆಗಿವೆ ಗಡ್ಡ ಬೋಳಿಸಿ. ನನ್ನಾಕೆಗೂ ಗಡ್ಡ ಇಷ್ಟ. ಅದೇ ನನ್ನ ಟ್ರೇಡ್ ಮಾರ್ಕ್‌. 

*ಓ ‘ಗಡ್ಡ ಎಳೆದವರಿಗೆ ಮಿಠಾಯಿ’. ನಿಮ್ಮಾಕೆಗೆ ಸಿಕ್ಕಿತಾ ಮಿಠಾಯಿ?
ಖಂಡಿತಾ. ಮದುವೆಗೂ ಮುನ್ನವೇ ಹೇಳಿದ್ದೆ ಎಂದಿಗೂ ಶೇವಿಂಗ್ ಮಾಡು ಅಂತ ಮಾತ್ರ ಹೇಳಬೇಡ– ಕೇಳಬೇಡ ಎಂದು. ನನ್ನ ಗಡ್ಡ ನೋಡಿ ಮಗು ಹತ್ತಿರ ಬರುತ್ತಾ ಎನಿಸಿತ್ತು. ನನ್ನ ಮಗಳು ನನ್ನ ಪ್ರೀತಿಸಿದಷ್ಟೇ ನನ್ನ ಗಡ್ಡವನ್ನೂ ಪ್ರೀತಿ ಮಾಡುತ್ತಾಳೆ. ಗಲ್ಲಾ ಸವರಿ.

*ಮೊದಲ ಪ್ರಯತ್ನದಲ್ಲಿ ಜೈಲಿನೊಳಗಿನಿಂದಲೇ; ದ್ಯಾವ್ರೆ...ದ್ಯಾವ್ರೆ...ಎಂದು ಕೂಗಿದ್ರಿ. ದೇವರ ಮೇಲೆ ಇಷ್ಟೊಂದು ಭಕ್ತಿ–ಮೊರೆ ಏಕೆ?
ಅದು ದೇವರ ಮೇಲಿನ ಪ್ರೀತಿ ಅಲ್ಲ; ಆರ್ತನಾದ, ವೇದನೆ, ನೋವು. ಚಿತ್ರರಂಗದಲ್ಲಿ ಇರುವುದರ ಸಂಕಟ. ಅದೂ ಕನ್ನಡ ಚಿತ್ರರಂಗದಲ್ಲಿ! ನಾನು ಸಿನಿಮಾ ಮಾಡುವೆ ಎಂದು ಗಾಂಧಿನಗರದ ಕೆಲವರಿಗೆ ತಿಳಿದ ತಕ್ಷಣ ನನ್ನ ಜೈಲು ಸೇರಿಸುವ ಪ್ರಯತ್ನ ಮಾಡಿದರು. ಅದಕ್ಕೂ ಮೊದಲೇ ನಾನೇ ಜೈಲು ಒಳಗೆ ಸೇರಿ ಬಿಟ್ಟೆ! ಸಿನಿಮಾ ಮುಗಿಸಿಕೊಂಡು ಹೊರಗೆ ಬಂದೆ.

*ಸಿನಿಮಾ ವ್ಯಾಕರಣ ಹೇಳಿಕೊಟ್ಟ ಗುರು ಭಟ್ಟರಿಗೆ ಮುಖ್ಯ ಪಾತ್ರ ಕೊಟ್ಟು ಗುರುಭಕ್ತಿ ತೋರಿಸಿದಿರಿ, ಭೇಷ್? 
ಅಯ್ಯೋ, ಗುರುಭಕ್ತಿ, ಪ್ರೀತಿ ಏನೂ ಇಲ್ಲ. ತುಂಬಾ ದ್ವೇಷವೇ ಇತ್ತು ಬಿಡಿ. ನನ್ನ ದ್ವೇಷವನ್ನೆಲ್ಲ ಬೇರೆ ರೀತಿ ಹೇಳಿದ್ದೆ ಅವರಿಗೆ. ಕೇಳಿಸಿಕೊಳ್ಳಲಿಲ್ಲ ಅಸಾಮಿ. ಅವರಿಗೆ ನಟರ ಕಷ್ಟ ಗೊತ್ತಿಲ್ಲ. ನಟರಿಗೆ ಛತ್ರಿ ಹಿಡಿಯುವುದು ಆರಾಮಾಗಿರಲಿ ಅಂತ ಅಲ್ಲ, ಸ್ಕಿನ್‌ ಹಾಳಾಗುತ್ತೆ ಎಂದು. ಅವರ ಆರೋಗ್ಯ ಕಾಳಜಿ ಮುಖ್ಯ ಅಲ್ಲವೇ ನಮಗೆ! ಭಟ್ಟರಿಗೆ ಇದೆಲ್ಲ ಗೊತ್ತಿಲ್ಲ. ಪ್ರಾಕ್ಟಿಕಲ್‌ ಆಗಿ ನಟನೆಯ ಕಷ್ಟಗಳು ಗೊತ್ತಾಗಲಿ ಎಂದು ಪಾತ್ರ ಕೊಟ್ಟೆ. ‘ದ್ಯಾವ್ರೆ’ ಸಿನಿಮಾದಲ್ಲಿ ಅವರು ಎದುರಿಸಿದ್ದು ಆಡಿಶನ್ ಅಷ್ಟೇ. ಪಾತ್ರ ಕೊಡಲಿಲ್ಲ. ಲೊಕೇಶನ್‌ನಲ್ಲಿ ಆಡಿಶನ್ ಮಾಡಿದರು! ಸಿನಿಮಾ ಯಾವಾಗ ಬರುತ್ತೆ ಅಂದರು. ಅಷ್ಟರಲ್ಲಾಗಲೇ ಬಿಡುಗಡೆಯಾಗಿಯೇ ಆಗಿತ್ತು!

*ಆಡಿಶನ್‌ನಲ್ಲಿ ಕಿರಿಕ್ ಮಾಡಿದ್ರಾ? 
ಸದ್ಯಕ್ಕೆ ಯಾವುದಕ್ಕೂ ಮೂಗು, ತಲೆ ತೂರಿಸುವ ಕೆಲಸ ಮಾಡಲಿಲ್ಲ. ಈ ವ್ಯಕ್ತಿ ಮಾನಸಿಕ ಅಸ್ವಸ್ಥ ಅಂತ ಅವರಿಗೆ ಗೊತ್ತಿತ್ತು! ಸುಮ್ಮನೆ ಇದ್ದು ಬಿಟ್ಟರು. ‘ಒಪ್ಪಿಕೊಂಡಿದ್ದೇನೆ ಏನಾದ್ರೂ ಮಾಡಿಕೋ; ಹೆಂಗಾದ್ರೂ ಮಾಡಿಕೋ’ ಅಂದರು.

*ನೀವು ಚೆಂದವಾಗಿ ಕವಿತೆ ಬರೆಯುತ್ತೀರಂತೆ?
ಬಾಲ್ಯದಿಂದಲೂ ಕವಿತೆ ಗೀಚುವ ಹುಚ್ಚು. ತೋಚಿದ್ದೆಲ್ಲ ಗೀಚುತ್ತಿದ್ದೆ. ಭಟ್ಟರಿಗೆ ತೋರಿಸಿದ್ದಕ್ಕೆಲ್ಲ ಶಬ್ಬಾಸ್ ಶಬ್ಬಾಸ್ ಅನ್ನುತ್ತಿದ್ದರು. ಅದೇನು ಇವನ ಕಾಟ ತಡೆಯುವುದಕ್ಕೆ ಆಗಲ್ಲ ಎನ್ನುವ ಕಾರಣಕ್ಕೋ ಮತ್ತೆ ಇನ್ನಾವ ಕಾರಣಕ್ಕೆ ಮೆಚ್ಚುತ್ತಿದ್ದರೋ. ಗುಂಡು ಹಾಕುವಾಗ ಟಿಶ್ಯು ಪೇಪರ್ ಮೇಲೆಲ್ಲ ಕವಿತೆ ಬರೆದು ಬರೆದು ಅವರಿಗೆ ಕೊಡುತ್ತಿದ್ದೆ.

 *‘ದ್ಯಾವ್ರೆ’ ನಂತರ ಗುಂಡು ಹಾಕೋದು ಬಿಟ್ರಂತೆ?
ಹೌದು. ಚಿತ್ರರಂಗಕ್ಕೆ ಬಂದ ಜತೆ ಜತೆಯಲ್ಲಿಯೇ ಎಣ್ಣೆ ಹೊಡೆಯುವ ಅಭ್ಯಾಸವೂ ಬಂದಿತು. ನಡುವೆ ಪ್ರೇಮ ವೈಫಲ್ಯವೂ ಸೇರಿದ ನಂತರ ಹೆಚ್ಚಾಯಿತು. ಒಂದು ರೀತಿ ‘ಇಂತಿ ನಿನ್ನ ಪ್ರೀತಿಯ’ ಚಿತ್ರದ ರೀತಿ ನನ್ನ ಲವ್‌ ಸ್ಟೋರಿ.  

*ಲವ್ವು ಒನ್‌ ವೇ ನಾ; ಟೂ ವೇ ನಾ?
ವಿರುದ್ಧ ಧ್ರುವ. ಇನ್ನೇನು ಆ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕುತ್ತೆ ಎನ್ನುವ ವೇಳೆಗೆ ವಿಲನ್‌ ಆಗಿ ಅವರಪ್ಪ ತೆರೆಗೆ ಬಂದರು. ಪ್ರೇಮ ಪ್ರಸಂಗ ಅಂತ್ಯವಾಯಿತು. ಆ ನಂತರ ಮದುವೆ. ಮೊದಲೇ ಪ್ರಪೋಸ್ ಮಾಡಿದ್ದರೆ ಸರಿ ಇತ್ತು. ಆದರೆ ಅತಿಯಾದ ಆತ್ಮವಿಶ್ವಾಸ, ನನಗೇನು ಹುಡುಗಿ ಬೀಳ್ತಾಳೆ ಎಂದು. ದಂತಭಗ್ನ ಆದಾಗಲೇ ಅಲ್ಲವೇ ಗೊತ್ತಾಗೋದು ನಮ್ಮ ಕಥೆ.

*ಒಬ್ಳನ್ನೆ ಲವ್ ಮಾಡಿ ಚೆನ್ನಾಗಿರಿ.. ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ... ಭಟ್ಟರ ಈ ಮಾತನ್ನು ಶಿಷ್ಯನಾಗಿ ಏಕೆ ಪಾಲಿಸಲಿಲ್ಲ?
ಬಿಡಿ, ಸುಮ್ಮನೆ ಭಟ್ಟರ ಬಗ್ಗೆ ಕೆಲವೊಂದು ಸತ್ಯಗಳನ್ನೆಲ್ಲ ಏಕೆ ಹೇಳೋಣ! ನಮ್ಮ ಜೀವನದ ಕಥೆಗಳನ್ನು ಕದ್ದು, ಕದ್ದು ಅದಕ್ಕೆ ಸ್ವಲ್ಪ ಚೆಂದದ ಸಾಹಿತ್ಯ ಬರೆದರು. ಅವರ ಶಿಷ್ಯಕೋಟಿ ಅಪಾರವಿದೆ. ಸರ್ವರಿಂದ ಸರ್ವಜ್ಞ ಎನ್ನುವಂತೆ ಎಲ್ಲರ ಬದುಕನ್ನು ನೋಡಿ ಅಲ್ಲಿಂದ ಕೆಲವನ್ನು ತೆಗೆದುಕೊಂಡಿದ್ದಾರೆ. ನನ್ನ ಬದುಕಿನ ಕೆಲವು ಘಟನೆಗಳನ್ನು ಕದ್ದಿದ್ದಾರೆ. ಅದಕ್ಕೆ ನಾನು ರಾಯಲ್ಟಿನೂ ಕೇಳಿದ್ದೆ. ಅಂತಿಮ ಒಪ್ಪಂದವಾಗಿ ನನ್ನ ಚಿತ್ರದಲ್ಲಿ ಸಂಭಾವನೆ ಇಲ್ಲದೆ ನಟಿಸಿದರು.   

*ನಿಮ್ಮಂಥ ನಿರ್ದೇಶಕರು ‘ಪ್ರಯೋಗಶೀಲ’ ಪದವನ್ನು ಹೆಚ್ಚು ಚಾಲ್ತಿಗೆ ತರುತ್ತಿದ್ದೀರಿ?
ಪ್ರಯೋಗ ಶೀಲವಲ್ಲ, ಶೀಲದ ಮೇಲೆ ಪ್ರಯೋಗ! ಈ ರೀತಿಯ ಚಿತ್ರಗಳಿಂದ ನನ್ನ ಶೀಲವನ್ನು ನಾನೇ ಪಣಕ್ಕೆ ಒಡ್ಡಿಕೊಳ್ಳುವ ಸವಾಲು. ನಾನು ಯಾರನ್ನೂ ಪಣಕ್ಕೆ ಒಡ್ಡುವುದಿಲ್ಲ. ಪ್ರಯೋಗ ಮಾಡಿ ಶೀಲ ಕಳೆದುಕೊಂಡರೂ ನಾನೇ ಕಳೆದುಕೊಳ್ಳುವೆ. 

*ನಿಮ್ಮ ಮಡದಿಗೆ ನಿಮ್ಮ ಲವ್‌ಸ್ಟೋರಿ ತಿಳಿದಿದೆಯಾ?
ಗೊತ್ತು. ಅಪಶ್ರುತಿ ಏನು ಆಗಲಿಲ್ಲ. ಪ್ರೇಯಸಿಗೆ ಬರೆದ ಕವಿತೆಗಳಲ್ಲಿನ ಹೆಸರುಗಳನ್ನು ಅಳಿಸಿ; ಕೆಲವು ಸಾಲುಗಳನ್ನು ತಿದ್ದಿ ಅವಳಿಗೆ ಕೊಟ್ಟೆ. ನನಗೆ ಬರೆದ ಕವಿತೆಗಳು ಅಂದುಕೊಂಡಿದ್ದಳು. ಮದುವೆ ಆದ ನಂತರ ಈ ಕವಿತೆಗಳನ್ನು ನಿನಗೆ ಕೊಟ್ಟಿದ್ದು ಕರೆಕ್ಷನ್ ಮಾಡುವುದಕ್ಕೆ ಎಂದೆ. ಕವಿತೆಗಳನ್ನು ನೋಡಿ ಪ್ರಭಾವಗೊಂಡಿದ್ದ ಆಕೆ ‘ಅಷ್ಟು ಪ್ರೀತಿ ಮಾಡುತ್ತೀರ ಒಂದು ಹುಡುಗಿಯನ್ನ. ನಿಮಗೂ ಪ್ರೀತಿ ಮಾಡುವುದಕ್ಕೆ ಬರುತ್ತೆ’ ಅಂದಳು.

*ಈಗ ಪ್ಲಸ್‌ (+) ಅಂತ ಹೊರಟಿದ್ದೀರಿ; ಮುಂದೆ –, *, = ಏನು ಬರಬಹುದು? 
ಹಿಂದಿನ ಬದುಕನ್ನು ಮೈನೆಸ್‌ನಲ್ಲಿ ಕಳೆದಾಗಿದೆ. ಈಗ +, ಮುಂದೆ ಇದನ್ನೇ ಗುಣಿಸಿಕೊಂಡು ಹೋಗುವುದು. ತಲೆ ಮೇಲೆ ಹೊಡೆದು ಹೇಳುವಂಥದ್ದನ್ನು ನಗುತ್ತಾ ನಗುತ್ತಾ ‘ಪ್ಲಸ್‌’ನಲ್ಲಿ ಹೇಳುತ್ತೀನಿ.

*‘ದ್ಯಾವ್ರೆ’ ಸಿನಿಮಾದಲ್ಲಿ ಕಳ್ಳರ ಗುಂಪು ಕಟ್ಟಿದ್ದೀರಿ; ಮುಂದೆ?
ಹುಚ್ಚರ ಗುಂಪು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT