ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ನಿರ್ವಹಣೆ ಸಮಗ್ರ ನೀತಿ ಅಗತ್ಯ

Last Updated 15 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಜಗತ್ತಿನ ದೊಡ್ಡ ನಗರಗಳು ಭಯೋತ್ಪಾದನೆಗೆ ಗುರಿಯಾಗುವ ಅಪಾಯ ಎದುರಿಸುತ್ತಿರುವುದು ಮುಂದುವರಿದಿದೆ. 2008ರ ನವೆಂಬರ್‌ನಲ್ಲಿ  ಮುಂಬೈನ ಹಲವು ಸ್ಥಳಗಳಲ್ಲಿ ಏಕಕಾಲಕ್ಕೆ ನಡೆದ ದಾಳಿಯಲ್ಲಿ 164 ಜನರು ಸಾವಿಗೀಡಾಗಿದ್ದರು.

ಆ ದಾಳಿಯ ಭೀಕರತೆಯನ್ನು ನೆನಪಿಸುವ ರೀತಿಯಲ್ಲಿ ಪ್ರವಾಸಿಗರ ಸ್ವರ್ಗ ಹಾಗೂ ಜಗತ್ತಿನ ಫ್ಯಾಷನ್ ನಗರ ಎಂಬಂಥ ಖ್ಯಾತಿ ಹೊಂದಿರುವ ಪ್ಯಾರಿಸ್‌ನಲ್ಲಿ 6 ಸ್ಥಳಗಳಲ್ಲಿ ಭಯೋತ್ಪಾದನಾ ದಾಳಿ ನಡೆದು 129 ಜನರು ಸತ್ತಿರುವುದು ತಲ್ಲಣಗೊಳಿಸುವಂತಹದ್ದು. ಈ ದಾಳಿ ಉಳಿಸುವ ನೋವು ಆಳವಾದದ್ದು.

ಹಾಗೆಯೇ ಹಲವು ಪ್ರಶ್ನೆಗಳೂ ಕಾಡುತ್ತವೆ. ಭದ್ರತಾ ಲೋಪಗಳು ಹೇಗಾದವು? ಇದರ ರಾಜಕೀಯ ಪರಿಣಾಮಗಳೇನು? ಇತ್ಯಾದಿ. ಸೈದ್ಧಾಂತಿಕ ಉದ್ದೇಶದೊಂದಿಗೆ ವ್ಯವಸ್ಥಿತವಾದ ಪೂರ್ವ ಸಿದ್ಧತೆ ನಡೆಸಿ, ಗುರಿಯನ್ನು ನಿಖರವಾಗಿರಿಸಿಕೊಂಡು ನಡೆಸಲಾಗಿರುವ ದಾಳಿ ಇದು ಎಂಬುದು ದಾಳಿಯ ಸ್ವರೂಪವನ್ನು ಗಮನಿಸಿದರೆ ಗೋಚರಿಸುವ ಸತ್ಯ. ಹೆಚ್ಚು ಜನರು ಸೇರುವಂತಹ ಪ್ರದೇಶಗಳನ್ನೇ ಗುರಿಯಾಗಿರಿಸಿಕೊಳ್ಳಲಾಗಿದೆ.

ಅದೂ ಫುಟ್ಬಾಲ್ ಕ್ರೀಡಾಂಗಣದಲ್ಲಿ ಜರ್ಮನಿ ಮತ್ತು ಫ್ರಾನ್ಸ್ ನಡುವೆ ನಡೆಯುತ್ತಿದ್ದ ಪಂದ್ಯವನ್ನು  ಸ್ವತಃ ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಅವರು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿಯೇ, ಕ್ರೀಡಾಂಗಣದ ಹೊರಗಡೆ ಆತ್ಮಹತ್ಯಾ ದಾಳಿ ನಡೆದಿರುವುದನ್ನು ದೊಡ್ಡ ಸಂಕೇತವಾಗಿ ಪರಿಭಾವಿಸಬೇಕಾಗುತ್ತದೆ. 

ಫ್ರೆಂಚ್ ಸರ್ಕಾರದ ಮುಖ್ಯಸ್ಥನಿದ್ದಂತಹ ಸನಿಹದ ಜಾಗದಲ್ಲೇ ದಾಳಿ ನಡೆಸುವ ಸಾಮರ್ಥ್ಯವನ್ನು ಭಯೋತ್ಪಾದಕರು ಪ್ರದರ್ಶಿಸಿದ್ದಾರೆ. ಇದು ಬೀರಬಹುದಾದ ಮಾನಸಿಕ ಪರಿಣಾಮ, ರಾಷ್ಟ್ರದಾದ್ಯಂತ ಬಿತ್ತಬಲ್ಲ ಭೀತಿ ಹಾಗೂ ಮಾನವ ದುರಂತದ ಸ್ಮೃತಿ ಉಳಿಸಬಹುದಾದ ಗಾಯ ಆಳವಾದದ್ದು. ಈಗಾಗಲೇ ಈ ವರ್ಷದ ಆರಂಭದಲ್ಲೇ  ಜನವರಿ ತಿಂಗಳಲ್ಲಿ ಪ್ಯಾರಿಸ್‌ನಲ್ಲಿ  ಚಾರ್ಲಿ ಹೆಬ್ಡೊ ಪತ್ರಿಕೆಯ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಜಿಹಾದಿ ಗುಂಪುಗಳಿಂದ ಇಂತಹದೇ  ಇನ್ನೂ ಹೆಚ್ಚಿನ ಬೆದರಿಕೆಗಳ ಬಗ್ಗೆ  ಭದ್ರತಾ ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದರು.

 ಆದರೆ ವರ್ಷಾಂತ್ಯ ಸಮೀಪಿಸುತ್ತಿರುವಂತೆಯೇ ರಾಜಧಾನಿಯ ಹೃದಯ ಭಾಗದಲ್ಲಿ ಈ ಮಟ್ಟದ ದಾಳಿಗಳ ಸಾಧ್ಯತೆಯ ಕುರಿತಂತೆ ಊಹೆಯೂ ಇರಲಿಲ್ಲ. ಜೊತೆಗೆ ಇನ್ನೆರಡು ವಾರಗಳಲ್ಲಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ 100ಕ್ಕೂ ಹೆಚ್ಚು  ರಾಷ್ಟ್ರಗಳ ನಾಯಕರು ಪ್ಯಾರಿಸ್‌ನಲ್ಲಿ ನಡೆಯಲಿರುವ ಹವಾಮಾನ ಶೃಂಗಸಭೆಯಲ್ಲಿ ಸಮಾವೇಶ ಗೊಳ್ಳಲಿದ್ದಾರೆ. ಹಾಗೆಯೇ ಮುಂದಿನ ವರ್ಷ ಯುರೋಪಿಯನ್ ಫುಟ್ಬಾಲ್ ಚಾಂಪಿಯನ್‌ಷಿಪ್ ಪಂದ್ಯಗಳಿಗೆ ಫ್ರಾನ್ಸ್ ಆತಿಥ್ಯ ವಹಿಸಲಿದೆ.

ಇಂತಹ ಸಂದರ್ಭದಲ್ಲಿ ಭಯೋತ್ಪಾದನಾ ದಾಳಿಯಿಂದ ಧೃತಿಗೆಡದ ಫ್ರಾನ್ಸ್ ಒಗ್ಗಟ್ಟನ್ನು ಪ್ರದರ್ಶಿಸಿರುವ ರೀತಿ ನಾಳಿನ ದಿನಗಳಿಗೆ ಭರವಸೆದಾಯಕ. ಭಯೋತ್ಪಾದನಾ ದಾಳಿಗೆ ತತ್ತರಿಸಿಯೂ ಮುಂಬೈ ನಗರ ಮತ್ತೆ ಎದ್ದು ನಿಂತಂತೆ ಪ್ಯಾರಿಸ್ ನಗರದಲ್ಲೂ ಜೀವನೋತ್ಸಾಹ ಮತ್ತೊಮ್ಮೆ ಪುಟಿದೇಳಲಿದೆ ಎಂಬುದರಲ್ಲಿ ಸಂಶಯವಿಲ್ಲ.

ಪ್ಯಾರಿಸ್ ಮೇಲೆ ನಡೆದ ದಾಳಿಗೆ ಇಸ್ಲಾಮಿಕ್ ಸ್ಟೇಟ್  (ಐಎಸ್) ಉಗ್ರರು  ಹೊಣೆ ಹೊತ್ತುಕೊಂಡಿದ್ದಾರೆ.  ವಿಪರ್ಯಾಸದ ಸಂಗತಿ ಎಂದರೆ, ಯುರೋಪಿಯನ್ ರಾಷ್ಟ್ರಗಳ ಪೈಕಿ ಫ್ರಾನ್ಸ್‌ನಿಂದಲೇ ಐಎಸ್ ಉಗ್ರ  ಸಂಘಟನೆಗೆ ನೂರಾರು ಮಂದಿ ನೇಮಕಗೊಳ್ಳುತ್ತಿದ್ದಾರೆ.  ಫ್ರೆಂಚ್ ಮೂಲದ  ಅನೇಕ ಸುಶಿಕ್ಷಿತರು ಸಿರಿಯಾಗೆ ಪಯಣಿಸಿದ್ದಾರೆ. ತೀವ್ರಗಾಮಿತನ ಎಂಬುದು ಒಂದು ಪಂಥದ ರೀತಿ ಆನ್ ಲೈನ್ ಮೂಲಕ  ತೀವ್ರವಾಗಿ ಹರಡುತ್ತಿದೆ ಎಂಬುದು ಆತಂಕಕಾರಿ. ಇದಕ್ಕೆ ಕಾರಣವಾಗಿರಬಹುದಾದ ಸಾಮಾಜಿಕ, ಆರ್ಥಿಕ ಸಂದರ್ಭಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಫ್ರಾನ್ಸ್‌ನಲ್ಲಿ ಬಹುಸಂಸ್ಕೃತಿಯ ಸತ್ವ ನಲುಗತೊಡಗಿದಂತೆ ಅನೇಕ ಯುವಜನರು ತೀವ್ರಗಾಮಿತನದ ಸೆಳೆತಕ್ಕೆ ಸಿಲುಕುತ್ತಿದ್ದಾರೆ. 

ಯುವಜನರಲ್ಲಿನ ನಿರುದ್ಯೋಗ ಹಾಗೂ ಅರಬ್, ಆಫ್ರಿಕನ್ನರ ವಿರುದ್ಧದ ಜನಾಂಗೀಯ ತಾರತಮ್ಯಗಳು ಅಸಹನೆಯನ್ನು  ಹೆಚ್ಚಿಸುತ್ತಿವೆ. ಜೊತೆಗೆ ಕಳೆದ ಅನೇಕ ವರ್ಷಗಳಿಂದ ಜಿಹಾದಿ ಭಯೋತ್ಪಾದನೆಗೆ ಪ್ರತಿರೋಧ ತೋರುತ್ತಿರುವ ಮಿಲಿಟರಿ ಶಕ್ತಿಯಾಗಿದೆ ಫ್ರಾನ್ಸ್. 2013ರಿಂದ ಪಶ್ಚಿಮ ಆಫ್ರಿಕಾದ ಸಾಹೇಲ್ ಪ್ರದೇಶದಲ್ಲಿ ಇಸ್ಲಾಮಿಕ್ ಉಗ್ರರ ವಿರುದ್ಧ  ಅದು ಕಾರ್ಯಾಚರಣೆ ನಡೆಸುತ್ತಿದೆ. ನಂತರ 2014ರಲ್ಲಿ ಇರಾಕ್‌ನಲ್ಲಿ  ಐಎಸ್ ವಿರೋಧಿ  ಮಿಲಿಟರಿ ಕಾರ್ಯಾಚರಣೆ ನಡೆಸಿದ ಮೊದಲ ಯುರೋಪಿಯನ್ ರಾಷ್ಟ್ರ ಫ್ರಾನ್ಸ್. ಹಾಗೆಯೇ ಈ ವರ್ಷ ಸಿರಿಯಾದಲ್ಲಿ ವೈಮಾನಿಕ ದಾಳಿ ನಡೆಸಿದ ಏಕೈಕ ಯುರೋಪಿಯನ್ ರಾಷ್ಟ್ರ ಫ್ರಾನ್ಸ್.

ಸಿರಿಯಾದಲ್ಲಿ  ಐಎಸ್ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸುತ್ತಿರುವಂತೆಯೇ ಸಿರಿಯಾದ ಬಷರ್ ಅಲ್-ಅಸಾದ್ ಸರ್ಕಾರದ ವಿರುದ್ಧದ ಬಂಡಾಯ ಬಣಗಳಿಗೆ ಬೆಂಬಲ ನೀಡಿದ ರಾಷ್ಟ್ರಗಳ ಪೈಕಿ ಫ್ರಾನ್ಸ್ ಮುಂಚೂಣಿಯಲ್ಲಿತ್ತು. ಇಲ್ಲಿ ರಾಜಕೀಯವಾಗಿ ಸಮಸ್ಯೆ ಇತ್ಯರ್ಥಪಡಿಸಲು ಆಸಕ್ತಿ ತೋರುವುದಕ್ಕಿಂತ ಅನುಸರಿಸಲಾದ ಇಂತಹ ನಡೆಗಳ ಬಗೆಗೂ ಫ್ರಾನ್ಸ್‌ಗೆ ಆತ್ಮಾವಲೋಕನ ಅಗತ್ಯ. ಫ್ರಾನ್ಸ್‌ನ ನೆಲದಲ್ಲೇ ಭಯೋತ್ಪಾದಕತೆ ಬೆಳೆಯುತ್ತಿರುವುದನ್ನು ಕಡೆಗಣಿಸಲಾಗದು. ಇದರ ನಿರ್ವಹಣೆಗೆ ಸಮಗ್ರ ನೀತಿಯನ್ನು  ಅಳವಡಿಸಿಕೊಳ್ಳುವುದು ಸದ್ಯದ ಆದ್ಯತೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT