ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಗಳ್ಳರ ದಾಹಕ್ಕೆ ಬಲಿಯಾದ ಕೆರೆಗಳು

Last Updated 19 ಏಪ್ರಿಲ್ 2014, 20:11 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರಹಳ್ಳಿಯಲ್ಲಿರುವ ಚಿಕ್ಕ ಕಲ್ಲ­ಸಂದ್ರದ ಆ ‘ಆಟದ ಮೈದಾನ’ದಲ್ಲಿ ನಿತ್ಯ ಬ್ಯಾಟು–ಚೆಂಡು ಹಿಡಿದು ಬರುವ ಮಕ್ಕಳಿಗೆ ಮೊದಲು ಅಲ್ಲೊಂದು ಕೆರೆ ಇತ್ತು ಎಂಬುದೇ ತಿಳಿದಿಲ್ಲ. ಕೆರೆ ಅಂಗಳ ಮಕ್ಕಳ ಆಟಕ್ಕಾಗಿ ಮಾತ್ರ ಬಳಕೆ ಆಗುತ್ತಿಲ್ಲ. ಅಲ್ಲೊಂದಿಷ್ಟು ಗುಜರಿ ಅಂಗಡಿಗಳೂ ಎದ್ದಿವೆ. ಕಟ್ಟಡ ಸಾಮಗ್ರಿಗಳ ಮಾರಾಟದ ತಾಣವಾಗಿಯೂ ಆ ಜಾಗ ಬಳಕೆ ಆಗುತ್ತಿದೆ.

ಜಲಮೂಲಗಳ ಮೇಲೆ ಕಣ್ಣು ಹಾಕಿದ ‘ತಿಮಿಂಗಿಲ’­ಗಳಿಗೆ ಬಲಿಯಾದ ಕೆರೆಯೊಂದರ ಕಥೆ ಇದು. ಅಂದ­ಹಾಗೆ ಚಿಕ್ಕ ಕಲ್ಲಸಂದ್ರ ಕೆರೆಗೆ ಮಾತ್ರ ಒದಗಿದ ದುರ್ಗತಿ ಇದಲ್ಲ. ಲೆಕ್ಕವಿಲ್ಲದಷ್ಟು ಕೆರೆಗಳು, ರಾಜ­ಕಾಲು­ವೆಗಳು, ಗುಡ್ಡಗಳು, ಅರಣ್ಯ ಪ್ರದೇಶಗಳು, ಆಟದ ಮೈದಾನ­ಗಳು, ಉದ್ಯಾನಗಳನ್ನು ಭೂಗಳ್ಳರು ತಮ್ಮ ದಾಹ ತಣಿಸಿಕೊಳ್ಳಲು ಆಪೋಶನ ತೆಗೆದು­ಕೊಂಡಿದ್ದಾರೆ.

ಗ್ರಾಮದ ದಾಖಲೆಗಳು ಚಿಕ್ಕ ಕಲ್ಲಸಂದ್ರದ ಕೆರೆ 13 ಎಕರೆ 20 ಗುಂಟೆಗಳಿಗೆ ವಿಸ್ತರಿಸಿತ್ತು ಎಂದು ಹೇಳು­ತ್ತವೆ. ಆದರೆ, ಆ ಜಾಗ ಈಗ ಬಂಜರು ಭೂಮಿ. ನೆಲಮಟ್ಟದಿಂದ ಎರಡು ಅಡಿಯಷ್ಟು ಎತ್ತರವಾಗಿದೆ. ಅಲ್ಲೊಂದು ಕೆರೆ ಇತ್ತು ಎನ್ನುವುದನ್ನೇ ನಂಬುವುದು ಕಷ್ಟವಾಗಿದೆ. ಅಲ್ಲಿದ್ದ ಕೆರೆಯಲ್ಲಿ ಈಜಾಡಿದ ಹಿರಿಯರು ಈಗಲೂ ಸಾಕ್ಷ್ಯ ಹೇಳಲು ಇದ್ದಾರೆ.

‘ನಾನು ಈಜುವುದನ್ನು ಕಲಿತದ್ದೇ ಈ ಕೆರೆಯಲ್ಲಿ. ಪಕ್ಷಿ ಸಂಕುಲವೂ ಇಲ್ಲಿ ಹೆಚ್ಚಾಗಿತ್ತು. ಮೀನುಗಳು ಸಹ ಹೇರಳವಾಗಿದ್ದವು. ಗೌಡನಪಾಳ್ಯ ಕೆರೆಗೂ ಇಲ್ಲಿಂದ ನೈಸರ್ಗಿಕ ಸಂಪರ್ಕ ಕಾಲುವೆಯಿತ್ತು’ ಎಂದು ಮುನಿಯಪ್ಪ ನೆನಪು ಮಾಡಿಕೊಳ್ಳುತ್ತಾರೆ.

‘ಈಗ ಕೆರಯೂ ಇಲ್ಲ. ಕಾಲುವೆಯೂ ಇಲ್ಲ. ಎಲ್ಲವೂ ಮಾಯವಾಗಿದೆ. ಕಳೆದ 15 ವರ್ಷಗಳಲ್ಲಿ ನನ್ನ ಕಣ್ಣ ಮುಂದೆಯೇ ನಡೆದ ವಿದ್ಯಮಾನ ಇದು’ ಎಂದು ಅವರು ಹೇಳುತ್ತಾರೆ.ಪದ್ಮನಾಭನಗರದ (ಉತ್ತರಹಳ್ಳಿ ಇದೇ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ) ಶಾಸಕ ಆರ್‌. ಅಶೋಕ ಅವರ ಪ್ರಕಾರ, ಜಾಗದ ಸಂಬಂಧದ ವಿವಾದವೇ ಕೆರೆ ಅಭಿ­ವೃದ್ಧಿಗೆ ಹಿನ್ನಡೆ. ಈ ಸಂಗತಿಯನ್ನು ಅವರು ಮತ್ತೆ ಮತ್ತೆ ಹೇಳುತ್ತಲೇ ಇದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಜಾಲತಾಣವನ್ನು ನೋಡಿ­ದಾಗ ಕೆರೆ ಪಾತ್ರದಲ್ಲಿಯೇ ಹಲವು ವಸತಿ ಹಾಗೂ ವಾಣಿಜ್ಯ ಕಟ್ಟಡಗಳನ್ನು ತೋರಿಸುತ್ತಿದೆ.

ಕೆರೆ ಸಂರಕ್ಷಣೆ ಜವಾಬ್ದಾರಿ ಹೊತ್ತ ಬೃಹತ್‌ ಬೆಂಗ­ಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)

ಮಾತ್ರ ಅತಿ­ಕ್ರಮಣ ತಡೆಯಲಾಗದೆ ಕೈಚೆಲ್ಲಿದೆ. ‘ಕೆರೆ ಅಭಿವೃದ್ಧಿಗೆ ಯಾರೂ ಅವಕಾಶ ಮಾಡಿಕೊಡುತ್ತಿಲ್ಲ. ಈಗಾಗಲೇ ಕೆಲವು ಮನೆಗಳು ಅಲ್ಲಿ ನಿರ್ಮಾಣವಾಗಿದ್ದು, ಬರುವ ವರ್ಷಗಳಲ್ಲಿ ಇನ್ನಷ್ಟು ಮನೆಗಳು ನಿರ್ಮಾಣ ಆಗುವು­ದ­ರಲ್ಲಿ ಸಂಶಯವಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಚಿಕ್ಕ ಕಲ್ಲಸಂದ್ರದಿಂದ ದೂರದಲ್ಲಿ ಕೆ.ಆರ್‌.ಪುರ ಮತ್ತು ಮಂಡೂರು ನಡುವೆ ರಾಂಪುರ ಕೆರೆ ಇದೆ. ವೈಟ್‌­ಫೀಲ್ಡ್‌ ಹತ್ತಿರದ ಈ ಕೆರೆ 100 ಎಕರೆಗೆ ವ್ಯಾಪಿಸಿದೆ. ಕೆರೆ ಪಾತ್ರ ಕಿರಿದಾಗುತ್ತಿರುವ ವೇಗ ಕಂಡರೆ ಇನ್ನು ಕೆಲವೇ ತಿಂಗಳಲ್ಲಿ ಈ ಭಾಗದಲ್ಲಿ ಹೊಸ ‘ಲೇಕ್‌ವ್ಯೂ ಅಪಾರ್ಟ್‌ಮೆಂಟ್‌’ಗಳು ತಲೆ ಎತ್ತುವು­ದರಲ್ಲಿ ಸಂಶಯವಿಲ್ಲ. ಇತ್ತ ಕಟ್ಟಡಗಳು ಮೇಲೆತ್ತಿದಂತೆ ಅತ್ತ ಕೆರೆ ಕಣ್ಮುಚ್ಚುತ್ತಾ ಹೋಗುತ್ತದೆ.

ನಗರದ ಘನತ್ಯಾಜ್ಯವನ್ನು ಮಂಡೂರಿಗೆ ಸಾಗಿಸುವ ಮಾರ್ಗದಲ್ಲೇ ಇದೆ ಈ ಕೆರೆ. ಕೆಲವು ಲಾರಿಗಳು ಕಟ್ಟಡ ತ್ಯಾಜ್ಯವನ್ನು ಇಲ್ಲಿಯೇ ಸುರಿದ ಬಗೆಗೆ ಪತ್ರಿಕಾ ವರದಿ­ಗಳು ಬಂದಿದ್ದವು. ರಾಜ್ಯ ಹೈಕೋರ್ಟ್‌ ಈ ಸಂಬಂಧ ಮಾಹಿತಿ ಕೇಳಿತ್ತು. ಕೆರೆಗೆ ತ್ಯಾಜ್ಯ ಸುರಿಯದಂತೆ ಆದೇಶ ನೀಡಿತ್ತು. ಹೈಕೋರ್ಟ್‌ನ ಆದೇಶಕ್ಕೂ ಭೂಗಳ್ಳರು ಕೆರೆಗೆ ಮಣ್ಣು ಸುರಿಯುವುದನ್ನು ತಪ್ಪಿಸಲು ಆಗಿಲ್ಲ.

‘ನಿತ್ಯ ನೂರಾರು ಲಾರಿಗಳು ಈ ಕೆರೆಗೆ ಕಟ್ಟಡ ತ್ಯಾಜ್ಯ ತಂದು ಸುರಿಯುತ್ತಿವೆ’ ಎಂದು ಹೆಸರು ಹೇಳ­ಲಿಚ್ಛಿಸದ ಸ್ಥಳೀಯ ನಿವಾಸಿಯೊಬ್ಬರು ಹೇಳುತ್ತಾರೆ. ಭೂಗಳ್ಳರಿಂದ ಕೆರೆಗಳ ರಕ್ಷಣೆ ಮಾಡದಂತೆ ಅಧಿ­ಕಾರಿಗಳ ಕೈಕಟ್ಟಲಾಗಿದೆ ಎಂಬ ದೂರುಗಳೂ ವ್ಯಾಪಕ­ವಾಗಿವೆ. ‘ಇಬ್ಬಲೂರು ಕೆರೆ ಅತಿಕ್ರಮಣ ತೆರವು­ಗೊಳಿ­ಸಲು ಮುಂದಾದಾಗ ಮೇಲಿನವರಿಂದ ದೂರವಾಣಿ ಕರೆ ಬಂದು ವಾಪಸು ಬರಬೇಕಾಯಿತು’ ಎಂದು ಅಧಿಕಾರಿಯೊಬ್ಬರು ವಿವರಿಸುತ್ತಾರೆ.

ಈ ಪ್ರಕರಣದ ಮೇಲೆ ಸಾಮಾಜಿಕ ಚಳವಳಿಗಾರ ಎಸ್‌.ಆರ್‌. ಹಿರೇಮಠ ಕೆಲವು ವಾರಗಳ ಹಿಂದಷ್ಟೇ ಇನ್ನಷ್ಟು ಬೆಳಕು ಚೆಲ್ಲಿದ್ದಾರೆ. ‘ಅತಿಕ್ರಮಣ ತೆರವು­ಗೊ­ಳಿಸದಂತೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ್ದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌’ ಎಂದು ಅವರು ಹೇಳಿದ್ದಾರೆ. ಒಂದೊಮ್ಮೆ ಸಾವಿರ ಕೆರೆಗಳ ತಾಣ ಎನಿಸಿದ್ದ ಬೆಂಗಳೂರಿನಲ್ಲಿ ಈಗ ಸಾವಿರ ಅಡಿಯಷ್ಟು ಆಳಕ್ಕೆ ಭೂಮಿ ಕೊರೆದರೂ ನೀರು ಸಿಗುತ್ತಿಲ್ಲ.

ಸದ್ಯ ಬೆಂಗಳೂರಿನಲ್ಲಿ 104 ಕೆರೆಗಳಿವೆ. ಬಿಬಿಎಂಪಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಇಲಾಖೆ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮದ ಸುಪರ್ದಿಯಲ್ಲಿ ಅವುಗಳಿವೆ. ಈ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಕೆರೆಗಳೆಲ್ಲ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕೆ.ಆರ್‌.ಪುರದಲ್ಲಿ ಹೆಚ್ಚಿನ ಸಂಖ್ಯೆ ಕೆರೆಗಳಿದ್ದವು. ಕಾಣೆಯಾದ ಕೆರೆಗಳ ಸಂಖ್ಯೆಯಲ್ಲೂ ಮುಂದಿರುವ ಈ ಭಾಗದಲ್ಲಿ ಅಂತರ್ಜಲ ಪಾತಾಳ ಕಂಡಿದೆ.

ಬಹುತೇಕ ಕೆರೆಗಳು ಕೊಳಚೆ ನೀರಿನ ಸಂಗ್ರಹಾಗಾ­ರವಾಗಿ ಮಾರ್ಪಟ್ಟಿವೆ. ನೈಸರ್ಗಿಕವಾದ ಮಳೆನೀರಿನ ಕಾಲುವೆಗಳು ಚರಂಡಿಯಾಗಿವೆ. ಈ ಚರಂಡಿಗಳು ನೇರವಾಗಿ ವೃಷಭಾವತಿ ಮತ್ತು ಅರ್ಕಾವತಿಗೆ ಸಂಪರ್ಕ ಹೊಂದಿದ್ದು, ಅದೇ ಮಲಿನ ನೀರು ಮುಂದೆ ಕಾವೇರಿಯನ್ನು ಸೇರುತ್ತಿದೆ. ಅದಕ್ಕೇ ಕಾವೇರಿ ‘ದಕ್ಷಿಣದ ಗಂಗೆ’ ಆಗಿದ್ದಾಳೆ!

ಎರಡು ದಶಕದಲ್ಲಿ ಕಣ್ಮರೆಯಾದ ಜಲಮೂಲ
ಬೆಂಗಳೂರು
: ‘ನಗರದ ಜಲಮೂಲಗಳ ಆಕಾರ, ಅವುಗಳು ರಚನೆಯಾದ ವಿಧವನ್ನು ನಾವು ಕಳೆದ 20 ವರ್ಷಗಳಿಂದ ಅಧ್ಯಯನ ಮಾಡುತ್ತಿದ್ದೇವೆ. ಪ್ರತಿ­ಯೊಂದು ವಿವರವನ್ನೂ ನಕ್ಷೆಯಲ್ಲಿ ದಾಖಲಿಸುತ್ತಿ­ದ್ದೇವೆ. ಕಳೆದ 2 ದಶಕಗಳಲ್ಲಿ ಜಲಮೂಲಗಳು ಭರದಿಂದ ಕಾಣೆಯಾಗಿದ್ದು ಎದ್ದು ಕಾಣುತ್ತಿದೆ’
–ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಪ್ರೊ. ರಾಮಚಂದ್ರ ಹೇಳುವ ಮಾತುಗಳಿವು. ಅವರ ತಂಡದ ಸಂಶೋಧನೆ ಪ್ರಕಾರ, ಬೆಂಗಳೂರಿನ ಪರಿಸರ ವ್ಯವಸ್ಥೆಯಲ್ಲಿದ್ದ ಸುಮಾರು 300 ಕೆರೆಗಳು ಹಾಗೂ ಜಲಮೂಲಗಳು ಕಾಣೆಯಾಗಿವೆ.

‘ಸದ್ಯ ನಗರದಲ್ಲಿ 93 ಕೆರೆಗಳಿದ್ದು, ಮಳೆ­ಗಾಲ­ದಲ್ಲಿ ಮಾತ್ರ ಜೀವ ತಳೆಯುವ ಜಲಮೂಲಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಅವುಗಳ ಸಂಖ್ಯೆ 190ಕ್ಕೆ ಹೆಚ್ಚುತ್ತದೆ’ ಎನ್ನುತ್ತಾರೆ ಅವರು.

‘ಕೆರೆಗಳಿಗೂ ನೀರನ್ನು ಹೊಂದಿದ ಹಸಿ ಪ್ರದೇಶ­ಗಳಿಗೂ ವ್ಯತ್ಯಾಸವಿದೆ. ಕೆರೆ ನೈಜ ಜಲಮೂಲವಾದರೆ ಅದರ ಸುತ್ತಲಿನ ತಗ್ಗಾದ ಪ್ರದೇಶ ನೀರನ್ನು ಒಡಲಲ್ಲಿ ಹೊಂದಿದ ಹಸಿ ತಾಣ. ಇಂತಹ ಪ್ರದೇಶದಲ್ಲಿ ಸಾಮಾನ್ಯವಾಗಿ ಹುಲ್ಲು ಬೆಳೆದಿರುತ್ತದೆ’ ಎಂದು ಅವರು ವಿವರಿಸುತ್ತಾರೆ.

‘1970–80ರ ದಶಕದಲ್ಲಿ ಎತ್ತ ನೋಡಿ­­ದರೂ ಹಸಿರೇ ಕಾಣುತ್ತಿತ್ತು. ಈಗ ನಗರದ ಚಿತ್ರಣವೇ ಬದಲಾಗಿದೆ’ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
ಕೆರೆಗಳು ಕಣ್ಮರೆಯಾಗಲು ಏನು ಕಾರಣ? ಈ ಪ್ರಶ್ನೆಯನ್ನು ಪರಿಸರಶಾಸ್ತ್ರಜ್ಞರ ಮುಂದಿಟ್ಟರೆ ಅವರ ವಿಶ್ಲೇಷಣೆ ಹೀಗೆ ಸಾಗುತ್ತದೆ: ‘ಭರದಿಂದ ಸಾಗಿರುವ ನಗರೀಕರಣವೇ ಕೆರೆಗಳ ಕಣ್ಮರೆಗೆ ಬಹುಮುಖ್ಯ ಕಾರಣ. ಕೆರೆಗಳಲ್ಲೇ ಹಲವು ಗಗನಚುಂಬಿ ಕಟ್ಟಡ­ಗಳು ನಿರ್ಮಾಣವಾಗಿವೆ. ಕೆರೆ ಸುತ್ತಲಿನ ಹಸಿ ಪ್ರದೇಶ­ವನ್ನು ಅತಿಕ್ರಮಿಸಲಾಗಿದ್ದು, ಕೆರೆಗಳ ಕತ್ತು ಹಿಸುಕಿದಂತಾಗಿದೆ!’

‘ಕೆರೆ ಸುತ್ತಲಿನ ಹಸಿ ಪ್ರದೇಶಗಳನ್ನು ಸರ್ಕಾರದ ಭ್ರಷ್ಟ ವ್ಯವಸ್ಥೆ ಡಿನೋಟಿಫೈ ಮಾಡುವ ಮೂಲಕ ಬಿಲ್ಡರ್‌ಗಳಿಗೆ ಮಾರುತ್ತದೆ. ಕೆರೆಗಳನ್ನು ಉಳಿಸಬೇ­ಕಾದರೆ ಇಂತಹ ಕಬಂಧಬಾಹುಗಳನ್ನು ಕತ್ತರಿಸಿ ಹಾಕ­ಬೇಕು’ ಎನ್ನುತ್ತಾರೆ ಅವರು.‘ಕೆರೆಗಳಿಗೆ ನಿಯಮಿತವಾಗಿ ಭೇಟಿ ಕೊಟ್ಟು ಅದರ ಪಾತ್ರಕ್ಕೆ ಯಾವುದೇ ಕುಂದು ಬಂದಿಲ್ಲ ಎಂಬುದನ್ನು ಯಾವ ಅಧಿಕಾರಿಯೂ ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ’ ಎಂದು ಮತ್ತೊಬ್ಬ ಸಂಶೋಧಕರು ಹೇಳುತ್ತಾರೆ.

‘ಕೆರೆಗಳ ಅಭಿವೃದ್ಧಿಗಾಗಿಯೇ ಪ್ರಾಧಿಕಾರ ಇದೆ. ಆದರೆ, ಭೂಗಳ್ಳರಿಂದ ಕೆರೆ ಪಾತ್ರವನ್ನು ಸಂರಕ್ಷಿಸಲು ಅದು ಎಷ್ಟರ ಮಟ್ಟಿಗೆ ಕಾರ್ಯಪ್ರವೃತ್ತವಾಗಿದೆ’ ಎಂಬ ಪ್ರಶ್ನೆಯನ್ನು ಅವರು ಹಾಕುತ್ತಾರೆ. ‘ಭೂಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುವಷ್ಟು ಈ ಪ್ರಾಧಿಕಾರ ಸಶಕ್ತವಾಗಿದೆಯೇ’ ಎಂದೂ ಕೇಳುತ್ತಾರೆ.
ಬೆಂಗಳೂರಿನ ಹಲವು ಭಾಗಗಳಲ್ಲಿ ಅಂತರ್ಜಲ ಬರಿ­ದಾಗಿದೆ ಎಂಬ ಆತಂಕಕಾರಿ ಸಂಗತಿಯೂ ಸಂಶೋ­­ಧ­ನೆಯಿಂದ ತಿಳಿದುಬಂದಿದೆ. ನಗರದ ಎಲ್ಲ ಭಾಗಗಳಿಗೆ ಕಾವೇರಿ ನೀರು ಸಿಗದಿರುವ ಕಾರಣ ಹಲವು ಪ್ರದೇಶಗಳು ಈಗಲೂ ಕೊಳವೆಬಾವಿಗಳ ನೀರನ್ನೇ ಆಶ್ರಯಿಸಿವೆ. ಇಂತಹ ಸನ್ನಿವೇಶದಲ್ಲಿ ಅಂತ­ರ್ಜಲ ಭರದಿಂದ ಖಾಲಿ ಆಗುತ್ತಿರುವುದು ಕಳವಳ ತಂದಿದೆ.

‘ನೀರಿನ ಬಳಕೆ ಕಾನೂನು ಜಾರಿಗೊಳಿಸುವ ಮೂಲಕ ಜಲ ಮರುಪೂರಣಕ್ಕೆ ಮುಂದಾಗುವುದು ಅತ್ಯಗತ್ಯವಾಗಿದೆ’ ಎಂದು ಐಐಎಸ್‌ಸಿ ಸಂಶೋಧಕರು ಹೇಳುತ್ತಾರೆ. ‘ಕಾವೇರಿಯೊಂದೇ ಈ ಭಾಗದ ಜಲಮೂಲವಾದ ಕಾರಣ ಅದರ ಮೇಲೆ ಅಧಿಕ ಹೊರೆಬಿದ್ದಿದೆ. ಅಷ್ಟು ಪ್ರಮಾಣದ ನೀರನ್ನು ಮುಂದಿನ ದಿನಗಳಲ್ಲಿ ಈ ನದಿ ಒಂದರಿಂದಲೇ ಪಡೆಯುವುದು ಅಸಾಧ್ಯ’ ಎಂದು ವಿವರಿಸುತ್ತಾರೆ.

ಅಂತರ್ಜಲವನ್ನು ಹೆಚ್ಚಿಸಲು ತಿಪ್ಪಗೊಂಡನಹಳ್ಳಿ ಜಲಾಶಯದಂತಹ ಜಲಮೂಲಗಳನ್ನು ಸಂರಕ್ಷಿಸು­ವುದು ಅತ್ಯಗತ್ಯ ಎನ್ನುವುದು ಅವರ ಸಲಹೆಯಾಗಿದೆ. ಜಲಾಶಯದ ದಂಡೆ ಮೇಲಿರುವ ಡಜನ್‌ಗಟ್ಟಲೆ ಕಾರ್ಖಾನೆಗಳನ್ನು ಬಂದ್‌ ಮಾಡಬೇಕಿದೆ. ರಾಸಾಯನಿಕ ಪದಾರ್ಥಗಳು ಜಲಾಶಯದ ಪಾತ್ರ ಸೇರದಂತೆ ತಡೆಗಟ್ಟಬೇಕಿದೆ ಎಂಬ ಸಂಗತಿಗಳ ಕಡೆಗೆ ಅವರು ಬೊಟ್ಟು ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT